ಇತಿಹಾಸ ಭಾರತೀಕರಣ ಆಗಬೇಕು: ಶೆಟ್ಟರ್

7

ಇತಿಹಾಸ ಭಾರತೀಕರಣ ಆಗಬೇಕು: ಶೆಟ್ಟರ್

Published:
Updated:

ತುಮಕೂರು: ಭಾರತದ ಇತಿಹಾಸ ಇಂದಿಗೂ ಸಂಪೂರ್ಣ ಭಾರತೀಕರಣಗೊಂಡಿಲ್ಲ ಎಂದು ಭಾರತ ಇತಿಹಾಸ ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ ಡಾ.ಎಸ್.ಶೆಟ್ಟರ್ ಇಲ್ಲಿ ಶುಕ್ರವಾರ ವಿಷಾದಿಸಿದರು.ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ನಡೆದ `18ನೇ ಶತಮಾನದಲ್ಲಿ ದಕ್ಷಿಣ ಭಾರತ~ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜಕೀಯ ಚರಿತ್ರೆಗೆ ಹೆಚ್ಚು ಒತ್ತು ಸಿಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಇತಿಹಾಸಕಟ್ಟಿಕೊಟ್ಟ ಬ್ರಿಟಿಷರು ರಾಜಕೀಯ ಚರಿತ್ರೆಗೆ ಹೆಚ್ಚು ಒತ್ತು ನೀಡಿದರು. ಭಾರತವನ್ನು ತಮ್ಮ ಅಧೀನ   ದಲ್ಲಿಟ್ಟುಕೊಳ್ಳಬೇಕೆನ್ನುವ ಉದ್ದೇಶಕ್ಕೆ ಈ ಕ್ರಿಯೆ ಪೂರಕವಾಗಿತ್ತು. ಸ್ವಾತಂತ್ರ್ಯಾ ನಂತರ ನಮ್ಮ ಇತಿಹಾಸ ನಾವೇ ಬರೆದುಕೊಳ್ಳಲು ಆರಂಭಿಸಿದರೂ, ಬ್ರಿಟಿಷರು ನಮ್ಮಲ್ಲಿ ಹುಟ್ಟುಹಾಕಿದ ಮನಸ್ಥಿತಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.ರಾಜಕೀಯ ಇತಿಹಾಸಕ್ಕೆ ಅಗತ್ಯಕ್ಕಿಂತ ಹೆಚ್ಚು ಒತ್ತು ಸಿಗುತ್ತಿರುವ ಬಗ್ಗೆ ನನ್ನ ತಕರಾರು ಇದೆಯೇ ಹೊರತು ರಾಜಕೀಯ ಇತಿಹಾಸ ಅಪ್ರಸ್ತುತ ಎನ್ನುವುದು ನನ್ನ ಭಾವವಲ್ಲ. ಸ್ವಾತಂತ್ರ್ಯ ಪೂರ್ವದ ಇತಿಹಾಸದಲ್ಲಿ ದಬ್ಬಾಳಿಕೆಯನ್ನು ಪ್ರಧಾನವಾಗಿ ಕಾಣಿಸಿಕೊಟ್ಟ ಇತಿಹಾಸಕಾರರು ಇದೀಗ ಸಮಕಾಲೀನ ರಾಜಕಾರಣದ ಹೊಲಸನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.`ನಮ್ಮ ಸಂಶೋಧನೆಗಳಲ್ಲಿ ಅಂತರ್‌ಶಿಸ್ತೀಯ ಅಧ್ಯಯನಕ್ಕೆ ಇನ್ನೂ ಆದ್ಯತೆ ದೊರೆಯಬೇಕಿದೆ. ಇತಿಹಾಸಜ್ಞರು ಕಲೆ, ಸಂಸ್ಕೃತಿ, ಸಾಹಿತ್ಯ, ವಾಣಿಜ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆಯ ಸೂಕ್ಷ್ಮ ಅಧ್ಯಯನದಿಂದ ರಾಜಕೀಯ ಇತಿಹಾಸದ ಹೊಳಹುಗಳು ಸಿಗುತ್ತವೆ. ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಅಂದಿನ ಜನಜೀವನದ ಮಾಹಿತಿ ದೊರೆಯುತ್ತದೆ~ ಎಂದು ಶೆಟ್ಟರ್ ಉದಾಹರಿಸಿದರು.ಇತಿಹಾಸ ಸಂಶೋಧಕರು ಆಧಾರಗಳು ತಮ್ಮ ತೊಡೆಯ ಮೇಲೆ ಬಂದು ಬೀಳಲಿ ಎಂದು ಆಶಿಸುವ ಬದಲು ಆಧಾರ ಹುಡುಕಲು ಶ್ರಮವಹಿಸಬೇಕು. ಸಾಹಿತ್ಯ ದೃಷ್ಟಿಯಿಂದ ಗೌಣವಾಗಿರುವ `ಚರಿತ್ರೆ~, `ಸ್ಥಳ ಪುರಾಣ~ ಇತಿಹಾಸದ ಹೊಸ ಆಕರಗಳಾಗಬಹುದು ಎಂದು ಅಭಿಪ್ರಾಯಪಟ್ಟರು.ಭಾರತ ಇತಿಹಾಸದಲ್ಲಿ 18ನೇ ಶತಮಾನ ಅತಿ ಮಹತ್ವದ ಘಟ್ಟ. ದೇಶಿ ರಾಜರು ತಮ್ಮ ಸ್ಥಾನ- ಪ್ರಭಾವ ಕಳೆದುಕೊಂಡು ಆ ಸ್ಥಾನವನ್ನು ವಿದೇಶಿ ವ್ಯಾಪಾರಿ ಸಂಸ್ಥೆಯೊಂದು ತುಂಬಿದ ವಿದ್ಯಮಾನ ಘಟಿಸಿದ ಸಂದರ್ಭ. ಒಂದೆಡೆ ಮರಾಠರು, ಇನ್ನೊಂದೆಡೆ ಮೊಘಲರು ರಾಜಕೀಯ ಇತಿಹಾಸದಿಂದ ಕಣ್ಮರೆಯಾದ ಬೆಳವಣಿಗೆಗಳು 18ನೇ ಶತಮಾನದಲ್ಲಿ ನಡೆದವು. ಆದರೆ 18ನೇ ಶತಮಾನದ ಇತಿಹಾಸದ ಕುರಿತು ಹೆಚ್ಚು ಆಧಾರಗಳು ಲಭ್ಯವಿಲ್ಲ ಎಂದು ಹೇಳಿದರು.ಬೆಂಗಳೂರು ವಿ.ವಿ ಇತಿಹಾಸ ಪ್ರಾಧ್ಯಾಪಕ ಡಾ.ಷಡಕ್ಷರಯ್ಯ ಮಾತನಾಡಿ, ಹಸ್ತಪ್ರತಿಗಳನ್ನು ಕಂಪ್ಯೂಟರಿಕರಣಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ಆದರೆ ಸ್ಕ್ಯಾನ್ ಮಾಡಿದ ಹಸ್ತಪ್ರತಿಗಳಿಗೆ ಫೈಲ್‌ನೇಮ್ ನೀಡುವಾಗ ಸೂಕ್ತ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.ಪ್ರಾಧ್ಯಾಪಕರಾದ ಡಾ.ಎಂ.ಎಸ್.ಶಿವಪ್ರಕಾಶ್, ಡಾ.ಡಿ.ಎನ್.ಯೋಗೀಶ್ವರಪ್ಪ, ಪ್ರಾಚಾರ್ಯ ಡಾ.ನಾಗಭೂಷಣ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry