ಸೋಮವಾರ, ನವೆಂಬರ್ 18, 2019
28 °C
ಮಧ್ಯ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ವೈಖರಿ

ಇತಿಹಾಸ ಹೇಳುವ ಚಿತ್ರಗಳು

Published:
Updated:
ಇತಿಹಾಸ ಹೇಳುವ ಚಿತ್ರಗಳು

ದಾವಣಗೆರೆ: ಜನನಾಯಕನ ಬರುವಿಕೆಗೆ ಕುತೂಹಲ. ಕಾಸು ಖರ್ಚಿಲ್ಲದೇ ಸೇರುತ್ತಿದ್ದ ಜನಸಾಗರ. ನಿರಾತಂಕ ವಾತಾವರಣ, ಗಂಟೆಗಟ್ಟಲೆ ತಾಳ್ಮೆಯಿಂದ ಕಾಯುತ್ತಿದ್ದ ಜನತೆ...ಇದು ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ 1952ರಿಂದ 1999ರವರೆಗಿನ ಚುನಾವಣಾ ಪ್ರಚಾರದ ವೈಖರಿ.ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಚ್.ಬಿ. ಮಂಜುನಾಥ್ ಅವರ ಸಂಗ್ರಹದಲ್ಲಿರುವ ಅಪರೂಪದ ಚಿತ್ರಗಳು ಇತಿಹಾಸದ ಕಥೆ ಹೇಳುತ್ತವೆ.ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ರಾಜೀವ ಗಾಂಧಿ, ಹಾಗೂ ಐ.ಕೆ. ಗುಜ್ರಾಲ್‌ವರೆಗೆ ಅನೇಕರು ದಾವಣಗೆರೆಗೆ ಬಂದು ಬೇರೆ ಬೇರೆ (ಲೋಕಸಭೆ ಮತ್ತು ವಿಧಾನಸಭೆ) ಚುನಾವಣಾ ರಂಗಸ್ಥಳದಲ್ಲಿ ತಮ್ಮ ಅಭ್ಯರ್ಥಿಗಳ ಬೆನ್ನು ತಟ್ಟಿದ್ದರು.ಪ್ರೊ. ಎಸ್.ಎಚ್. ಪಟೇಲ್, ಯಜಮಾನ್ ಮೋತಿ ವೀರಣ್ಣ, ನಾಗಮ್ಮ ಕೇಶವಮೂರ್ತಿ, ವೈ. ನಾಗಪ್ಪ ಪರ ಈ ಹಿರಿಯ ಮುತ್ಸದ್ದಿಗಳು ಪ್ರಚಾರ ನಡೆಸಿದ್ದರು.ಹೈಸ್ಕೂಲ್ ಮೈದಾನದ ವೇದಿಕೆ: ಹಿರಿಯ ಚಿಂತಕ ಪ್ರೊ.ಎಸ್.ಎಚ್. ಪಟೇಲ್ ನೆನಪಿಸುವಂತೆ, 1978ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಮೊರಾರ್ಜಿ ದೇಸಾಯಿ ಅವರು ಕೆ. ಮಲ್ಲಪ್ಪ ಪರ ಪ್ರಚಾರಕ್ಕೆ ಬಂದಿದ್ದರು.ಇದೇ ವೇಳೆ ಸಿಪಿಐನಿಂದ ಸ್ಪರ್ಧಿಸಿದ್ದ ಪಂಪಾಪತಿ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿ ತನ್ನ ಅಭ್ಯರ್ಥಿ ನಿಲ್ಲಿಸಲಿಲ್ಲ. ಬೇತೂರು ವೃತ್ತದಲ್ಲಿ (ಅರಳಿಮರ  ಸರ್ಕಲ್) ಇಂದಿರಾಗಾಂಧಿ ಪಂಪಾಪತಿ ಅವರ ಪರ ಮತ ಯಾಚಿಸಿದ್ದರು. ಪಂಪಾಪತಿ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.ಕಲ್ಲು, ಚಪ್ಪಲಿ ತೂರಾಟ: ಈ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಇಂದಿರಾಗಾಂಧಿ ಅವರು ಜನತಾ ಪಕ್ಷದ ಕಾರ್ಯಕರ್ತರ ವಿರೋಧ ಎದುರಿಸಬೇಕಾಯಿತು. ಪಿ.ಬಿ. ರಸ್ತೆಯ ಈಗಿನ ಅಭಿನವ ರೇಣುಕ ಮಂದಿರದ ಮುಂಭಾಗದಲ್ಲಿ ಕಲ್ಲು, ಚಪ್ಪಲಿ ತೂರಾಟ ನಡೆಯಿತು. ಹಲವರ ಬಂಧನವೂ ನಡೆಯಿತು. ಇಂದಿರಾಗಾಂಧಿ ಅವರ ಮೂಗಿಗೆ ಸಣ್ಣ ಪ್ರಮಾಣದ ಗಾಯವಾಯಿತು ಎಂದು ಸ್ಮರಿಸುತ್ತಾರೆ ವಿಶ್ವ ಹಿಂದೂ ಪರಿಷತ್ ಮುಖಂಡ ಕೆ.ಬಿ. ಶಂಕರನಾರಾಯಣ.1984-85ರಲ್ಲಿ ರಾಜೀವಗಾಂಧಿ ಅವರು ಪ್ರಚಾರಕ್ಕಾಗಿ ಬಂದಿದ್ದರು. ಅಂದೂ ಸಹ ಹೈಸ್ಕೂಲ್ ಮೈದಾನ ವೇದಿಕೆಯಾಗಿತ್ತು. ರಾಂ ಆ್ಯಂಡ್ ಕೋ ವೃತ್ತ, ಶಿವಪ್ಪ ವೃತ್ತ, ಹೊಂಡದ ವೃತ್ತ ಮತ್ತು ಅರಳಿಮರ ವೃತ್ತದ ಬಳಿಯ ರುದ್ರಪ್ಪ ಆಸ್ಪತ್ರೆ ಕಟ್ಟಡದ ಮೇಲ್ಭಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. 1989ರಲ್ಲಿಯೂ ಅವರು ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. 1991 ಮೇ 11 ರಾಜೀವಗಾಂಧಿ ಅವರ ಕೊನೆಯ ಭೇಟಿಯಾಗಿತ್ತು. ಹೈಸ್ಕೂಲ್ ಮೈದಾನದಲ್ಲಿ ಅಂದು ಭಾಷಣ ಮಾಡಿದ್ದರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ಹತ್ಯೆಗೀಡಾದರು.1996ರಲ್ಲಿ ಜನತಾಪಕ್ಷದ ಪರ ಪ್ರಚಾರಕ್ಕೆ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ನಗರದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು.

1998ರಲ್ಲಿ ಪ್ರೊ.ಎಸ್.ಎಚ್. ಪಟೇಲ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜನತಾದಳದ ಅಭ್ಯರ್ಥಿ. ಅವರ ಪರ ಪ್ರಚಾರಕ್ಕೆ ಅಂದಿನ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ ನಗರಕ್ಕೆ ಬಂದಿದ್ದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅವರ ಸಾರ್ವಜನಿಕ ಸಭೆ ನಡೆಯಿತು.1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದ ಹರಪನಹಳ್ಳಿಯಲ್ಲಿ ಸೋನಿಯಾಗಾಂಧಿ, ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದರು.  ವಿಧಾನಸಭೆಗೆ ಪಿ.ಟಿ. ಪರಮೇಶ್ವರ ನಾಯ್ಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಹಾಗೂ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಅವರ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಗೆಲುವು ಸೋನಿಯಾಗೆ ಒಲಿಯಿತು. ಪಿ.ಟಿ. ಪರಮೇಶ್ವರ ನಾಯ್ಕ ಅವರೂ ಶಾಸಕರಾದರು.ಈ ಪ್ರಚಾರ ಸಭೆಯಲ್ಲಿ ಜಲಜಾ ನಾಯ್ಕ ಅವರು ಲಂಬಾಣಿ ಉಡುಗೆ ಧರಿಸಿ ಸೋನಿಯಾ ಅವರ ಭಾಷಣ ಅನುವಾದಿಸಿ ಗಮನ ಸೆಳೆದಿದ್ದರು. ನಿರಂತರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಹೈಕಮಾಂಡ್ ಕೃಪೆಗೆ ಪಾತ್ರರಾದ ಅವರು ಕೆಲವೇ ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯರಾದರು ಎನ್ನುತ್ತಾರೆ ಪಕ್ಷದ ಮುಖಂಡರು.2004ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಪಿ.ಟಿ. ಪರಮೇಶ್ವರ ನಾಯ್ಕ ಪುನರಾಯ್ಕೆಯಾದರು. ಬಳ್ಳಾರಿಯಲ್ಲಿ ಕರುಣಾಕರ ರೆಡ್ಡಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. 2008ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಬಳಿಕ ಚಿತ್ರಣವೇ ಬದಲಾಯಿತು.

ಪ್ರತಿಕ್ರಿಯಿಸಿ (+)