ಸೋಮವಾರ, ಅಕ್ಟೋಬರ್ 21, 2019
24 °C

ಇದು ಅತಿಕ್ರಮಣ ತೆರವಿನ ಕಾಲ

Published:
Updated:

ಬಸವಕಲ್ಯಾಣ: `ಇದು ಅತಿಕ್ರಮಣ ತೆರವಿನ ಕಾಲ. ಮೊದಲು ಜಮೀನು ಮಂಜೂರು ಮಾಡಲು ಅರ್ಜಿಗಳು ಬರುತ್ತಿದ್ದವು. ಮಾಡುತ್ತಿದ್ದೆವು, ಆದರೆ ಈಗ ಹಾಗಲ್ಲ~ ಎಂದು ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾದ ಕೆ.ರತ್ನಪ್ರಭಾ ಅಭಿಪ್ರಾಯಪಟ್ಟರು.ಗುರುವಾರ ಇಲ್ಲಿಗೆ ಭೇಟಿ ಕೊಟ್ಟು ಅಭಿವೃದ್ಧಿ ಮಂಡಳಿಯಿಂದ ನಡೆಯುತ್ತಿರುವ ಇಲ್ಲಿನ ಶರಣ ಸ್ಮಾರಕಗಳ ಕಾಮಗಾರಿ ಹಾಗೂ ಇತರೆ ಕೆಲಸಗಳನ್ನು ಅವರು ಪರಿಶೀಲಿಸಿದರು. ಅಂಬಿಗರ ಚೌಡಯ್ಯನ ಗವಿ, ನುಲಿ ಚಂದಯ್ಯನ ಗವಿ, ಅಕ್ಕಮಹಾದೇವಿ ಗವಿ ಮತ್ತು ಕೋಟೆಯಲ್ಲಿನ ಕಾಮಗಾರಿ ವೀಕ್ಷಿಸಿದರು.

 

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣದ ಸಹಾಯಕ ಆಯುಕ್ತರು ನಿಯಮ ಬಾಹಿರವಾಗಿ ಮಾರಾಟ ಮಾಡಿದ ಮತ್ತು ಖರೀದಿಸಿದ ಜಮೀನನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ‌್ಯ. ಇಂಥ ಕೆಲಸಕ್ಕೆ ಮೇಲಾಧಿಕಾರಿಗಳು ಯಾವಾಗಲೂ ಸಹಕರಿಸುತ್ತಾರೆ ಎಂದರು.ತಾವು ಇಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾಗ ರಸ್ತೆಗಳು ಬಹಳಷ್ಟು ಇಕ್ಕಟ್ಟಾಗಿದ್ದವು. ವಿವಿಧ ಇಲಾಖೆಗಳ ಕಚೇರಿಗಳು ಸಹ ಅಷ್ಟೊಂದು ಸರಿಯಾಗಿ ಇರಲಿಲ್ಲ. ಆದರೆ ಈಚೆಗೆ ಎಲ್ಲ ರಸ್ತೆಗಳನ್ನು ಅಗಲಗೊಳಿಸಲಾಗಿದೆ.

 

ಮಿನಿ ವಿಧಾನ ಸೌಧದಂತಹ ಭವ್ಯ ಕಟ್ಟಡ ಕಟ್ಟಲಾಗಿದೆ. 12ನೇ ಶತಮಾನದ ಶರಣರ ಸ್ಮಾರಕಗಳ ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆದಿದೆ. ಈ ಸ್ಥಳ ಮುಂದೊಂದು ದಿನ ದೊಡ್ಡ ಪ್ರವಾಸಿ ಕೇಂದ್ರ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಇಲ್ಲಿನ ಸ್ಥಳಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ಅಗತ್ಯವಿದೆ ಎಂದು ಹೇಳಿದರು.ಶರಣ ಸ್ಮಾರಕಗಳ ಉದ್ಘಾಟನೆ ನಡೆಯಬೇಕಾಗಿದ್ದು ಅದರ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದರು. ಸಹಾಯಕ ಆಯುಕ್ತ ಎಚ್. ಪ್ರಸನ್ನಕುಮಾರ, ತಹಸೀಲ್ದಾರ ಜಗನ್ನಾಥರೆಡ್ಡಿ ಉಪಸ್ಥಿತರಿದ್ದರು.

Post Comments (+)