ಇದು ಕುಡಿಯುವ ನೀರಲ್ಲ,`ವಿಷದ ನೀರು'

7

ಇದು ಕುಡಿಯುವ ನೀರಲ್ಲ,`ವಿಷದ ನೀರು'

Published:
Updated:

ತುಮಕೂರು: ಜಿಲ್ಲೆಯಲ್ಲಿ ಜನತೆ ಕುಡಿಯುತ್ತಿರುವ ನೀರು ಎಷ್ಟು ಸುರಕ್ಷಿತ?. ಶುದ್ಧ ಕುಡಿಯುವ ನೀರು ಕೊಡುವಲ್ಲಿ ಜಿಲ್ಲೆ ಬಹಳ ಹಿಂದೆ ಬಿದ್ದಿದೆ. ಕಲುಷಿತ ಕುಡಿಯುವ ನೀರಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆದಿಲ್ಲ. ಹೀಗಾಗಿ ಶೇ 20ರಷ್ಟು ಜನರು ಪ್ರತಿದಿನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳಿಂದ ಕಲುಷಿತಗೊಂಡ ನೀರು ಸೇವಿಸುತ್ತಿದ್ದಾರೆ.



ತುಮಕೂರು ನಗರ ಸೇರಿದಂತೆ ತಾಲ್ಲೂಕು ಕೇಂದ್ರ ಹೊರತುಪಡಿಸಿದರೆ ಗ್ರಾಮಾಂತರ ಪ್ರದೇಶದ ಜನರು ಕಲುಷಿತ ನೀರಿನ ಮೊದಲ ಬಲಿಪಶುಗಳು. ಜಿಲ್ಲಾ ಪಂಚಾಯಿತಿ ಮಾಹಿತಿ ಪ್ರಕಾರ ಶೇ 20ರಷ್ಟು ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿವೆ.



ಈವರೆಗೆ ಫ್ಲೋರೈಡ್ ಎಂದರೆ ಪಾವಗಡ, ಶಿರಾ ಎಂಬಂತಾಗಿತ್ತು. ಆದರೆ ಜಿಲ್ಲೆಯಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದ್ದು, ಫ್ಲೋರೈಡ್ ವಿಷದ ಕಂಬಂಧಬಾಹು ಇಡೀ ಜಿಲ್ಲೆಯಾದ್ಯಂತ ವ್ಯಾಪಿಸತೊಡಗಿದೆ. ಆದರೂ ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ಹೆಚ್ಚಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸುವುದು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಜಿಲ್ಲೆಯ ಜನರ ಜೀವವನ್ನೇ ಕಸಿಯಲಿದೆ ಎಂಬ ಆತಂಕ ಎದುರಾಗಿದೆ.

ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಮಾತ್ರವಲ್ಲ, ಕಬ್ಬಿಣ ಅಂಶ, ನೈಟ್ರೈಟ್, ಪಿಎಚ್, ಗಡಸು ನೀರು, ಫ್ಲೋರೈಡ್ ಮಿಶ್ರಿತ ಕಲುಷಿತ ನೀರು, ಫ್ಲೋರೈಡ್ ರಹಿತ ಕಲುಷಿತ ನೀರು ಸೇರಿದ್ದು, ಇದೇ ನೀರನ್ನು ಗ್ರಾಮ ಪಂಚಾಯಿತಿಗಳು ಹಳ್ಳಿಗಳಲ್ಲಿ ಸರಬರಾಜು ಮಾಡುತ್ತಿವೆ. ಇಂಥ ನೀರು ಕುಡಿಯುತ್ತಿರುವ ಜನತೆ ನಿಧಾನವಾಗಿ ಹಲ ರೋಗ ಬರಮಾಡಿಕೊಳ್ಳುತ್ತಿದ್ದಾರೆ.



ಜಿಲ್ಲೆಯಲ್ಲಿ ಒಟ್ಟು 2668 ಗ್ರಾಮಗಳಿದ್ದು, 5312 ಜನವಸತಿ ಪ್ರದೇಶಗಳಿವೆ. ಸದ್ಯಕ್ಕೆ 9384 ನೀರಿನ ಮೂಲಗಳಿಂದ ನೀರು ಕೊಡಲಾಗುತ್ತಿದ್ದು, ಶೇ 20ರಷ್ಟು ಜಲಮೂಗಳು ಕಲುಷಿತಗೊಂಡಿವೆ.



ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಜಿಲ್ಲೆಯ ಎಲ್ಲ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಒಟ್ಟು 9348 ನೀರಿನ ಮೂಲಗಳಲ್ಲಿ 223 ಜಲ ಮೂಲಗಳು ಫ್ಲೋರೈಡ್, 78 ಮೂಲಗಳು ಕಬ್ಬಿಣದಂಶ, 65ರಲ್ಲಿ ನೇಟ್ರೈಟ್, 291ರಲ್ಲಿ ಉಪ್ಪು ನೀರು (ಮಿತಿ ಮೀರಿದ ಗಡಸು), 378 ಮೂಲಗಳಲ್ಲಿ ಫ್ಲೋರೈಡ್ ಮಿಶ್ರಣ (ಎಂಡಬ್ಲ್ಯುಎಫ್) ಹಾಗೂ 105ರಲ್ಲಿ ಫ್ಲೋರೈಡ್ ರಹಿತ ಕಲುಷಿತ ನೀರಿನ ಮೂಲಗಳಾಗಿವೆ. ಒಟ್ಟಾರೆ 1945 ಜಲ ಮೂಲ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂಬುದು ದೃಢಪಟ್ಟಿದೆ.



ಪಾವಗಡ ತಾಲ್ಲೂಕು ಅತಿ ಹೆಚ್ಚು ಫ್ಲೋರೈಡ್ ಪೀಡಿತವಾಗಿದೆ. ಮಧುಗಿರಿ, ಶಿರಾ ತಾಲ್ಲೂಕಿನ ಅತಿ ಹೆಚ್ಚು ಜಲ ಮೂಲಗಳು ಫ್ಲೋರೈಡ್ ಮಿಶ್ರಿತವಾಗಿದೆ. ಆದರೆ ಈವರೆಗೂ ಉಳಿದ ತಾಲ್ಲೂಕುಗಳು ಸುರಕ್ಷಿತ ಎಂದೇ ನಂಬಲಾಗಿತ್ತು. ಸಮೀಕ್ಷೆ ಪ್ರಕಾರ ಗುಬ್ಬಿ, ಕುಣಿಗಲ್, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರಿನಲ್ಲೂ ಫ್ಲೋರೈಡ್ ಅಂಶ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.



ಫ್ಲೋರೈಡ್ ಅಂಶ (1.5ರಷ್ಟು) ಇರುವ ನೀರು ಕುಡಿಯಬಹುದಾಗಿದೆ. ಆದರೆ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ 1.5ರಿಂದ 2.5ರ ವರೆಗೂ ಫ್ಲೋರೈಡ್ ಅಂಶ ಹೆಚ್ಚಿರುವುದು ಪತ್ತೆಯಾಗಿದೆ. ಈ ಗ್ರಾಮಗಳಲ್ಲಿ ನಿರಂತರವಾಗಿ ಈ ನೀರು ಕುಡಿದವರಿಗೆ ಮೂಳೆ ಸವೆತ, ಫ್ಲೋರೋಸಿಸ್, ಬೆನ್ನುಹುರಿ ಮೂಳೆ ಸವೆತ ಕಾಣಿಸಿಕೊಳ್ಳಲಿದೆ. ಸಣ್ಣ ವಯಸ್ಸಿನಲ್ಲೇ ಬೆನ್ನು ನೋವು, ಮಂಡಿನೋವು ಕಾಣಿಸಿಕೊಳ್ಳಲಿದೆ. ಚಿಕ್ಕವಯಸ್ಸಿಗೆ ನಿಶಕ್ತಿಯಾಗುತ್ತದೆ. ಈ ನೀರು ಯಾವುದೇ ಕಾರಣಕ್ಕೂ ಕುಡಿಯಲು ಯೋಗ್ಯವಾಗಿಲ್ಲ. ಶುದ್ಧೀಕರಿಸಿದ ಬಳಿಕ ಬಳಸಬಹುದಾಗಿದೆ.



ಗುಬ್ಬಿ ತಾಲ್ಲೂಕಿನ 27 ಹಾಗೂ ತಿಪಟೂರಿನ 23 ಕಡೆಗಳಲ್ಲಿ ಕುಡಿಯುವ ನೀರಿನಲ್ಲಿ ಅತಿ ಹೆಚ್ಚು ಕಬ್ಬಿಣದಾಂಶ ಸೇರಿಕೊಂಡಿದೆ. ಈ ನೀರು ಕುಡಿಯುವುದರಿಂದ `ಬ್ಲೂ ಬೇಬೀಸ್ ಸಿಂಡ್ರೋಮಾ' (ವಯಸ್ಸಾದರೂ ಮಕ್ಕಳಂತೆ ಕಾಣುವುದು) ಕಾಣಿಸಿಕೊಳ್ಳಲಿದೆ. ಇದೂ ಕೂಡ ಆತಂಕಕಾರಿಯಾಗಿದೆ.



ಜಿಲ್ಲೆಯ 65 ಕಡೆಗಳ ಕುಡಿಯುವ ನೀರು ಪೂರೈಕೆಯ ಕೊಳವೆ ಬಾವಿಗಳಲ್ಲಿ ನೈಟ್ರೈಡ್ ಅಂಶ ಪತ್ತೆಯಾಗಿದ್ದು, ಇದೂ ಆರೋಗ್ಯಕ್ಕೆ ಮಾರಕವಾಗಿದೆ. ನೀರಿನಲ್ಲಿ 45ಕ್ಕಿಂತ ಹೆಚ್ಚು ನೈಟ್ರೈಟ್ ಅಂಶವಿದ್ದರೆ ಕ್ಯಾನ್ಸರ್, ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಥೈರಾಡ್ ಸಮಸ್ಯೆಯಿಂದ ಬಂಜೆತನವೂ ಕಾಡಬಹುದು. ಅದರಲ್ಲೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರೂ ಈ ನೀರು ಕುಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ನೈಟ್ರೇಟ್ ಅಂಶ ಹೆಚ್ಚಿರುವ ಕಡೆ ನೀರು ಕಾಯಿಸಿ ಕುಡಿಯಬಾರದು. ಕಾಯಿಸಿದಷ್ಟು ನೈಟ್ರೇಟ್ ಅಂಶ ಹೆಚ್ಚುವುದರಿಂದ ಜನತೆ ಕಾಯಿಸಿ ಈ ನೀರು ಸೇವಿಸಬಾರದು. ಆದರೆ ಈ ಭಾಗಗಳಲ್ಲಿ ಜಾಗೃತಿಯೇ ಇಲ್ಲವಾಗಿದೆ. ಅತಿ ಹೆಚ್ಚು ಗಡಸು ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಗೆ ಕಾರಣವಾಗಲಿದೆ.



ಶೇ 80ರಷ್ಟು ರೋಗಳು ಕಲುಷಿತ ನೀರಿನ ಸೇವನೆಯೇ ಕಾರಣವಾಗಿದೆ. ಪರಿಸ್ಥಿತಿ ವಿಷಮಿಸುತ್ತಿದ್ದು, ತುರ್ತು ಕ್ರಮ ಅಗತ್ಯವಾಗಿದೆ.



`ನೈಟ್ರೈಟ್ ನೀರಿ'ನ ಪರಿಣಾಮ

ಶೇ 45ಕ್ಕಿಂತ ಹೆಚ್ಚಿನ ನೈಟ್ರೈಟ್ ಅಂಶ ಹೆಚ್ಚಿರುವ ನೀರು ಸೇವಿಸಿರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 14, ತಿಪಟೂರಿನಲ್ಲಿ 11, ತುರುವೇಕೆರೆಯಲ್ಲಿ 10, ತುಮಕೂರಿನಲ್ಲಿ 18 ಕಡೆಗಳಲ್ಲಿ ಶೇ 45ಕ್ಕಿಂತ ಹೆಚ್ಚು ಹಾಗೂ ಶೇ50ರಷ್ಟು ನೈಟ್ರೈಟ್ ಅಂಶ  ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 65 ಕಡೆಗಳಲ್ಲಿ ನೈಟ್ರೇಟ್ ಅಂಶ ಪತ್ತೆಯಾಗಿದೆ. 



ಈ ನೀರು ಸೇವನೆ ಕ್ಯಾನ್ಸರ್, ರಕ್ತಸಂಬಂಧಿ ರೋಗಗಳಿಗೆ ರಹದಾರಿ ಇದ್ದಂತೆ. ಕನಿಷ್ಠ ಪಕ್ಷ ಈ ಗ್ರಾಮಗಳಲ್ಲಿ ನೀರು ಪೂರೈಕೆ ಸಿಸ್ಟನ್‌ಗಳನ್ನಾದರೂ ಪ್ರತಿ ದಿನ ಸ್ವಚ್ಛಗೊಳಿಸಲೇಬೇಕು. ಕೊಳವೆಬಾವಿಯಿಂದ ಕನಿಷ್ಠ ಪಕ್ಷ ಅರ್ಧಗಂಟೆ ನೀರನ್ನಾದರೂ ಹೊರಗೆ ಚೆಲ್ಲಬೇಕು. ಆನಂತರ ಜನತೆಗೆ ಪೂರೈಕೆ ಮಾಡುವುದರಿಂದ ಸ್ವಲ್ಪ ಮಟ್ಟಿಗಾದರೂ ಇದನ್ನು ನಿಯಂತ್ರಿಸಬಹುದು.



ಕೃಷಿಯಲ್ಲಿ ಅತಿ ಹೆಚ್ಚು ರಾಸಾಯನಿಕ, ಕೀಟನಾಶಕಗಳ ಬಳಕೆ ಹಾಗೂ ಕೈಗಾರಿಕೆಗಳ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಅಂತರ್ಜಲದಲ್ಲಿ ನೈಟ್ರೈಟ್ ಸೇರಲು ಪ್ರಮುಖ ಕಾರಣ.



ಶೇ 2ರಷ್ಟು ಪ್ಲೋರೈಡ್ ಅಂಶ ಇರುವ ಅಪಾಯದ ಗ್ರಾಮಗಳು

1.ಚಿಕ್ಕನಾಯಕನಹಳ್ಳಿ ತಾಲ್ಲೂಕು

ಬೆಳವಾಡಿ, ಬಗ್ಗನಹಳ್ಳಿ ಹಟ್ಟಿ, ಸಾದರಹಳ್ಳಿ-ಕಂದಿಕೆರೆ, ಜೋಡಿಕಲ್ಲೇನಹಳ್ಳಿ, ಮಾದಿಹಳ್ಳಿ 

2. ಗುಬ್ಬಿ ತಾಲ್ಲೂಕು

ಹಾರನಹಳ್ಳಿ ಜನತಾ ಕಾಲೊನಿ, ಬೆಲವತ್ತ, ತೊಗರಿಘಟ್ಟ, ಬ್ಯಾಡಗೆರೆ, ಕಡಬಾ (8ಕಡೆ), ಗಂಗಸಂದ್ರ (3ಕಡೆ), ಹೊಸಪಾಳ್ಯ (2 ಕಡೆ), ಬಡೇನಹಳ್ಳಿ-ಮಾರಿಶೆಟ್ಟಿಹಳ್ಳಿ, ಮಲ್ಲೇಕಳ್ಳಹಳ್ಳಿ,  ಪೆದ್ದನಹಳ್ಳಿ ಗ್ರಾ.ಪಂ. ಪೂರ್ತಿ

3. ಕೊರಟಗೆರೆ ತಾಲ್ಲೂಕು

ಚಿಕ್ಕನಹಳ್ಳಿ, ಲಕ್ಕಮುತ್ತನಹಳ್ಳಿ, ಯಲಚಿಗೆರೆ

4.ಕುಣಿಗಲ್ ತಾಲ್ಲೂಕು

ಚಂದನಹಳ್ಳ (3 ಕಡೆ), ಯಡವಾಣಿ, ಕೀಲಾರ, ಉಂಗ್ರ

5. ಮಧುಗಿರಿ ತಾಲ್ಲೂಕು

ರಂಗನಹಳ್ಳಿ, ಕಾಟಗನಹಳ್ಳಿ, ಚಿನಕವಜ್ರ, ಮಾರಗಾನಹಟ್ಟಿ, ತುಂಡೋಟಿ, ಡಿ.ವಿ.ಹಳ್ಳಿ, ವಜ್ರದಹಳ್ಳ, ತಿಮ್ಮಾಪುರ ಗ್ರಾ.ಪಂ. ಪೂರ್ತಿ, ಹಳೆಹಟ್ಟಿ, ಮಂಜಿಲಗುಂಟೆ, ಗೊಲ್ಲರಹಟ್ಟಿ, ಶಂಭೋನಹಳ್ಳಿ, ಗಂಜಲಗುಂಟೆ ಪಂಚಾಯಿತಿ ಎಲ್ಲ

ಗ್ರಾಮಗಳು, ಹೊಸಕೆರೆ, ಬೊಮ್ಮತಿಮ್ಮನಹಳ್ಳಿ, ಭಕ್ತರಹಳ್ಳಿ, ಬಂಡಾರೆಹಳ್ಳಿ, ಮರುವೇಕೆರೆ ಗ್ರಾ.ಪಂ. ಪೂರ್ಣ ಹಳ್ಳಿಗಳು, ತವಕದ ಹಳ್ಳಿ, ಹನುಮಂತಪುರ, ತೋಟದಮಡಗು, ನಲ್ಲೇಕಾಮನಹಳ್ಳಿ

6. ಪಾವಗಡ ತಾಲ್ಲೂಕು (ಪಂ.ಪೂರ್ಣ)

ಕನ್ನಮೇಡಿ ಪಂಚಾಯಿತಿ, ವೀರ‌್ಲಗೊಂದಿ, ನಲ್ಲಿಗಾನಹಳ್ಳಿ, ರೊಪ್ಪ, ಬೈರಾಪುರ, ವೆಂಕಟಾಪುರ, ಬಿ.ಕೆ.ಹಳ್ಳಿ, ಅರಸೀಕೆರೆ, ಕೊಂಡಾಪುರ, ಸಿ.ಜೆ.ಪುರ, ಗುಜ್ಜನಡು, ಕೋಟಗುಡ್ಡ, ಮಂಗಳವಾಡ, ಬೂದಿಬೆಟ್ಟ, ಚಿಕ್ಕಹಳ್ಳ, ಮರಿದಾಸನಹಳ್ಳ, ಕೋಟಗಾನಹಳ್ಳಿ, ಹೊನ್ನಸಮುದ್ರ, ರಂಗಸಮುದ್ರ, ಸಾಸನಕುಂಟೆ, ಸಿದ್ದಾಪುರ, ವದನಕಲ್ಲು, ವೈ.ಎನ್.ಹೊಸಕೋಟೆ

7. ಶಿರಾ ತಾಲ್ಲೂಕು

ಬೇವಿನಹಳ್ಳ, ತಾಳಗೊಂಡ, ಬುಕ್ಕಾಪಟ್ಟಣ (ಗ್ರಾ.ಪಂ.ಪೂರಾ), ದೊಡ್ಡಅಗ್ರಹಾರ (ಗ್ರಾ.ಪಂ.ಪೂರಾ), ಗೋಪಾಲದೇವರಹಳ್ಳಿ, ಹಂದಿಕುಂಟೆ, ರಾಗಲಹಳ್ಳಿ, ಇನಾಂಗೊಲ್ಲಹಳ್ಳಿ, ಹೊನ್ನಗೊಂಡನಹಳ್ಳಿ(ಗ್ರಾ.ಪಂ.ಪೂರಾ), ಹೊಸೂರು (ಗ್ರಾ.ಪಂ.ಪೂರಾ), ಹುಯಿಲ್‌ದೊರೆ (ಗ್ರಾ.ಪಂ.ಪೂರಾ), ಹುಲಿಕುಂಟೆ (ಗ್ರಾ.ಪಂ.ಪೂರಾ), ಹುಣುಸೇಹಳ್ಳ (ಗ್ರಾ.ಪಂ.ಪೂರಾ), ಕಳ್ಳಂಬೆಳ್ಳ, ಕೊಟ್ಟ (ಗ್ರಾ.ಪಂ.ಪೂರಾ), ಮದಲೂರು (ಗ್ರಾ.ಪಂ.ಪೂರಾ), ಲಕ್ಷ್ಮೀಸಾಗರ, ನಾದೂರು (ಗ್ರಾ.ಪಂ.ಪೂರಾ), ಕನ್ನಸಂದ್ರ (ಗ್ರಾ.ಪಂ.ಪೂರಾ), ಸೀಬಿ (ಗ್ರಾ.ಪಂ.ಪೂರಾ), ತರೂರು (ಗ್ರಾ.ಪಂ.ಪೂರಾ), ತಾವರೆಕೆರೆ (ಗ್ರಾ.ಪಂ.ಪೂರಾ), ಎಲೆಯೂರು (ಗ್ರಾ.ಪಂ.ಪೂರಾ)

8. ತಿಪಟೂರು ತಾಲ್ಲೂಕು

ತಿಮ್ಮಲಾಪುರ (ಬಿಳಿಗಿರಿ ಗ್ರಾ.ಪಂ), ಮಲ್ಲೇದೇವನಹಳ್ಳಿ, ಚೊಮ್ಮೇನಹಳ್ಳೀ, ಹೊನ್ನವಳ್ಳಿ

9. ತುರುವೇಕೆರೆ ತಾಲ್ಲೂಕು

ಸಂಪಿಗೆ -ಅಕ್ಕಲಸಂದ್ರ

10. ತುಮಕೂರು ತಾಲ್ಲೂಕು

ಅಹೋಬಲ ಅಗ್ರಹಾರ, ಕೆಸ್ತೂರು, ಬಾಳಸಂದ್ರ, ಬೊಮ್ಮನಹಳ್ಳಿ



ಕ್ಯಾನ್ಸರ್ ಸಾಧ್ಯತೆ ಹಳ್ಳಿಗಳು..

1. ಚಿಕ್ಕನಾಯಕನಹಳ್ಳಿ

ಚುಂಗನಹಳ್ಳಿ, ಜೆ.ಸಿ.ಪುರ, ಕಂದಿಕೆರೆ

ಅಣೆಕಟ್ಟೆ, ಆಲದಕಟ್ಟೆ,    ಮುದ್ದೇನಹಳ್ಳಿ

ತಿಮ್ಮಲಾಪುರ

2. ತುಮಕೂರು ತಾಲ್ಲೂಕು

ಬುಗುಡನಹಳ್ಳಿ, ಗೂಳೂರು

ಬೇವಿನಮರದಹಳ್ಳಿ ದೇವಸ್ಥಾನ

ಹರಳೂರು, ಹೆತ್ತೇನಹಳ್ಳಿ

ಹೊಳಕಲ್ಲು, ಹೀರೆಹಳ್ಳಿ

ಹೊನ್ನುಡಿಕೆ, ಮಲ್ಲಸಂದ್ರ

ನಾಗವಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮಗಳು

3. ತಿಪಟೂರು

ಬಳುವನೇರಳು, ಗೊಲ್ಲರಹಟ್ಟಿ

ದಾಸನಕಟ್ಟೆ

4. ತುರುವೇಕೆರೆ ತಾಲ್ಲೂಕು

ಅಡವನಹಳ್ಳಿ, ಬಾಣಸಂದ್ರ

ಹುಲ್ಲೇಕೆರೆ, ಸಂಪಿಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry