ಇದು ಕುಣಿಗಲ್ ಪಟ್ಟಣದ ಅಳಲು

7

ಇದು ಕುಣಿಗಲ್ ಪಟ್ಟಣದ ಅಳಲು

Published:
Updated:

ಕುಣಿಗಲ್‌: ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಇಲ್ಲಿಯವರೆಗೆ ನಡೆಯದ ಹಿನ್ನೆಲೆಯಲ್ಲಿ, ಸಾರ್ವಜನಿಕರು ಮೂಲ ಸೌಕರ್ಯಗಳಿಗೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಕಳೆದ ಮಾರ್ಚ್‌ನಲ್ಲಿ ಪುರಸಭೆ ಚುನಾವಣೆ ನಡೆದರೂ, ಇಲ್ಲಿಯವರೆಗೆ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಇದು ಪುರಸಭೆ ಕಾರ್ಯ ವೈಖರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರೂ 7 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡು, ನೀರು ಶುದ್ಧೀಕರಣ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ, ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.ಶಿಕ್ಷಕರ ಭವನದ ಬಳಿ ಇರುವ, ಮೇಲ್‌ಸ್ತರದ ನೀರು ಸಂಗ್ರಹಾರದಿಂದ ಶುದ್ಧೀಕರಣಗೊಂಡ ಕುಡಿಯುವ ನೀರು ರಸ್ತೆಗೆ ಹರಿಯುತ್ತಿದೆ. ದೊಡ್ಡಪೇಟೆ, ಕೋಟೆ, ಕುವೆಂಪುನಗರ, ಗುಜ್ಜಾರಿ ಮೊಹಲ್ಲ ಪ್ರದೇಶದಲ್ಲಿ ಅಶುದ್ಧ ನೀರು ಸರಬರಾಜಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳಗಾಲಿ, ಜನ­ಪ್ರತಿನಿಧಿ­ಗಳಾಗಲಿ ಗಮನ ಹರಿಸುತ್ತಿಲ್ಲವೆಂದು ಪಟ್ಟಣದ ರತ್ನಮ್ಮ , ಶಿವಮ್ಮ, ತಿಮ್ಮಮ್ಮ ಆರೋಪಿದ್ದಾರೆ.ಈಚೆಗೆ ಬಿದ್ದ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಗುಂಡಿಬಿದ್ದಿರುವುದಲ್ಲದೆ ಚರಂಡಿಗೆ ನಿರ್ಮಿಸಲಾದ ಅಡ್ಡಸೇತುವೆಗಳು ಕುಸಿದು, ಪಾದಚಾರಿಗಳು ಸೇರಿದಂತೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆ ಬದಿಯಲ್ಲಿನ  ಬೀದಿ ದೀಪ ಅಳವಡಿಗಕೆಯಲ್ಲಿನ ತಾಂತ್ರಿಕ ದೋಷದಿಂದ ಮುಖ್ಯ ರಸ್ತೆಯಲ್ಲೆ ವಿದ್ಯುತ್‌ ಸಂಪರ್ಕದ ವೈರ್‌ ಬಾಯಿತೆರೆದು, ಹಲವು ಮಂದಿ ಈಗಾಗಲೇ ವಿದ್ಯುತ್‌ ಶಾಕ್‌ ಅನುಭವಿಸಿದ್ದಾರೆ.ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಹೌಸಿಂಗ್‌ ಬೋರ್ಡ್, ಬಿದನಗೆರೆ ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ಬೀದಿ ದೀಪ ವ್ಯವಸ್ಥೆ ಇಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ಹಿರಿಯ ನಾಗರಿಕರಾದ ನರಸಪ್ಪ, ಟೈಲರ್‌ ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಟ್ಟಣದ ನೈರ್ಮಲ್ಯ ಕಾಪಾಡಲು ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಹೀಗಾಗಿ ಕೊಳಚೆ ಪ್ರದೇಶವೆಂದು ಗುರುತಿಸಲಾದ ಕೋಟೆ, ಗುಜ್ಜಾರಿ ಮೊಹಲ್ಲ,  ಹೊಸ ಬಡಾವಣೆ,  ಸಿದ್ಧಾರ್ಥ ಕಾಲೊನಿಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಕಾಣಿಸಿಕೊಂಡಿದೆ. ರೋಗಬಾಧೆಯಿಂದ ಇಬ್ಬರು ಮೃತಪಟ್ಟು, ಹಲವರು ಆಸ್ಪತ್ರೆಗೆ ಸೇರಿದ್ದಾರೆ.ಪಟ್ಟಣದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಆದರೆ ಅವುಗಳ ನಿಯಂತ್ರಣಕ್ಕೆ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಳಚೆ ಪ್ರದೇಶದಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಫಾಗಿಂಗ್‌ ಯಂತ್ರಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ನೈರ್ಮಲ್ಯ ನಿರ್ವಹಣೆಗೆ ಬಳಸುವ ಬ್ಲೀಚಿಂಗ್‌ ಪೌಡರ್‌, ಫೆನಾಯಿಲ್‌ಗಳ ಬಳಕೆ ಮತ್ತು ಖರೀದಿ ಅನುಪಾತ ಅನುಮಾನಕ್ಕೆ ಕಾರಣವಾಗಿದೆ ಎಂದು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ದಾರೆ.

– ಟಿ.ಎಚ್.ಗುರುಚರಣ ಸಿಂಗ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry