ಇದು ಕೊಲ್ಲಿ ಬಚ್ಚಲು ಡ್ಯಾಂ!

7

ಇದು ಕೊಲ್ಲಿ ಬಚ್ಚಲು ಡ್ಯಾಂ!

Published:
Updated:
ಇದು ಕೊಲ್ಲಿ ಬಚ್ಚಲು ಡ್ಯಾಂ!

ಜೋಗದ ಜಲಪಾತ ನೋಡಲು ಬರುವ ಪ್ರವಾಸಿಗರು ಲಿಂಗನಮಕ್ಕಿ ಅಣೆಕಟ್ಟೆಯನ್ನೂ ತಪ್ಪದೆ ವೀಕ್ಷಿಸುತ್ತಾರೆ. ಈ ಪ್ರದೇಶದಲ್ಲಿ ಜಲಪಾತ ಹಾಗೂ ಅಣೆಕಟ್ಟೆ ಬಿಟ್ಟರೆ ಬೇರೇನೂ ಇಲ್ಲ ಎಂಬ ಭಾವನೆ ಅನೇಕರಿಗೆ ಇದೆ. ಇದೇ ಪ್ರದೇಶದಲ್ಲಿ ಕೊಲ್ಲಿ ಬಚ್ಚಲು ಡ್ಯಾಂ ಎಂದು ಕರೆಯುವ ಪುಟ್ಟ ಅಣೆಕಟ್ಟೆ ಇದೆ. ಇದಕ್ಕೆ ಈ ಹೆಸರು ಬರಲು ಏನು ಕಾರಣ ಎನ್ನುವುದು ಗೊತ್ತಿಲ್ಲ.ಶಿವಮೊಗ್ಗದಿಂದ ಜೋಗ ಮಾರ್ಗದ ರಾಷ್ಟ್ರೀಯ  ಹೆದ್ದಾರಿ 206ರಲ್ಲಿ ಸುಮಾರು 40 ಕಿ.ಮೀ.ದೂರ ಸಾಗಿದರೆ ಗಿಳಾಲಗುಂಡಿ ಎಂಬ ಪುಟ್ಟ ಊರು ಸಿಗುತ್ತದೆ. ಅಲ್ಲಿಂದ ಬಲಕ್ಕೆ 2 ಕಿ,ಮೀ ದೂರ ಕ್ರಮಿಸಿ ಒಳಗೆ ಹೋದರೆ `ಕೊಲ್ಲಿ ಬಚ್ಚಲು~ ಅಣೆಕಟ್ಟೆ ಇದೆ. ಈ ಅಣೆಕಟ್ಟೆ ಹಾಗೂ ಸುತ್ತಲಿನ ಪರಿಸರ ಅತ್ಯಂತ ಆಕರ್ಷಕವಾಗಿದೆ. ಜೋಗ ನೋಡಲು ಬರುವ ಅನೇಕ ಪ್ರವಾಸಿಗರಿಗೆ ಈ ಅಣೆಕಟ್ಟೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.ಗಿಳಾಲಗುಂಡಿಯಿಂದ ಕಾಲು ನಡಿಗೆಯಲ್ಲಿ ಸಾಗಿದರೆ ಸುಮಾರು ಐವತ್ತು ಎಕರೆ ವಿಸ್ತೀರ್ಣದ ಅಮ್ಮನ ಕೆರೆ ಎಂಬ ಕೆರೆ ಸಿಗುತ್ತದೆ. ಅದರ ಬಲಕ್ಕೆ ಎತ್ತರದ ಗುಡ್ಡಗಳಿವೆ. ಅಲ್ಲಿ ಅನೇಕ ಬಗೆಯ ಪಕ್ಷಿ ಗಳಿವೆ. ಅಲ್ಲಿ ಔಷಧಿಯ ಸಸ್ಯಗಳ ದೊಡ್ಡ ಸಮೂಹವಿದೆ.ಸಣ್ಣ ನೀರಾವರಿ ಇಲಾಖೆ ರೂಪಿಸಿದ ಯೋಜನೆಯಡಿಯಲ್ಲಿ 2005ರಲ್ಲಿ ಪ್ರಾರಂಭಗೊಂಡ ಈ ಅಣೆಕಟ್ಟೆ ನಿರ್ಮಾಣ 2008ರಲ್ಲಿ ಮುಕ್ತಾಯವಾಗಿ ಸಾರ್ವಜನಿಕರ ವೀಕ್ಷಣೆಗೆ ತೆರವಾಯಿತು. ಒಂಬತ್ತು ಮೀಟರ್ ಎತ್ತರ  ಹಾಗೂ 62 ಮೀಟರ್ ಅಗಲದ ಈ ಅಣೆಕಟ್ಟೆ ಇದೆ.

 

ಅಣೆಕಟ್ಟೆ ತುಂಬಿದಾಗ ಎಂಟು ಮೀಟರ್ ಅಗಲದ ವಿಸ್ತಾರದಲ್ಲಿ ನೀರು ಉಕ್ಕಿ ಹೊರಹರಿಯುತ್ತದೆ. ಅದನ್ನು ನೋಡುವುದು ಒಂದು ಸುಂದರ ಅನುಭವ. ಸುಮಾರು ಮೂರು ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟೆ ಹಿನ್ನೀರ ಪ್ರದೇಶವೂ ಅತ್ಯಂತ ಸುಂದರ ತಾಣ.ಅಣೆಕಟ್ಟೆ ಪಕ್ಕದಲ್ಲೇ ಎತ್ತರದ ಗುಡ್ಡವಿದೆ. ಅಲ್ಲಿಗೆ ಹೋಗಿ ಅಲ್ಲಿಂದ ಅಣೆಕಟ್ಟೆಯನ್ನು ನೋಡುವುದು ಒಂದು ಸುಂದರ ಅನುಭವ. ಅಲ್ಲಿ ನಿಂತು ಸುತ್ತಲಿನ ಪ್ರದೇಶ ವೀಕ್ಷಿಸಲು ಅವಕಾಶವಿದೆ. ಅಣೆಕಟ್ಟೆ ಸನಿಹದಲ್ಲಿ ಒಂದು ಗುಹೆ ಇದೆ. ಅದಕ್ಕೆ ಹುಲಿರಾಯನ ಗುಹೆ ಎಂಬ ಹೆಸರಿದೆ.  ಈ ಗುಹೆಯಿಂದ 12 ಕಿ.ಮೀ.ದೂರದ ಚೋರಡಿಗೆ ದಾರಿ ಇದೆ. ಕೆಳದಿ ಅರಸರ ಕಾಲದಲ್ಲಿ ಇದು ಗುಪ್ತ ಮಾರ್ಗವಾಗಿತ್ತು ಎನ್ನಲಾಗಿದೆ. ಇಲ್ಲಿಂದ ಜೋಗ 50 ಕಿ.ಮೀ.ದೂರದಲ್ಲಿದೆ.ಜೋಗ ನೋಡಲು ಬರುವ ಪ್ರವಾಸಿಗರಿಗೆ ಸಮಯ ಇದ್ದರೆ ಈ ಕೊಲ್ಲಿ ಬಚ್ಚಲು ಅಣೆಕಟ್ಟೆಯನ್ನೂ ನೋಡಿ ಸಂತೋಷಪಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry