ಗುರುವಾರ , ಮೇ 6, 2021
26 °C

ಇದು ಜನದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೀಸೆಲ್ ಬೆಲೆ ನಿರ್ಣಯಿಸುವ ಅಧಿಕಾರವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ತೈಲ ಕಂಪೆನಿಗಳಿಗೆ ನೀಡುವುದಕ್ಕೆ ಯುಪಿಎ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕೆಲವು ದಿನಗಳ ಹಿಂದೆ ಸರ್ಕಾರದ ಪ್ರಮುಖ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಈ ಸುಳಿವನ್ನು ನೀಡಿದ್ದರು. ಈ ಬಗ್ಗೆ ಅಧ್ಯಯನಕ್ಕೆಂದು ರಚಿಸಲಾಗಿದ್ದ ಕಿರಿಟ್ ಪಾರಿಖ್ ನೇತೃತ್ವದ ಸಮಿತಿ ತೈಲ ಉತ್ಪನ್ನಗಳ ಬೆಲೆ ನಿಯಂತ್ರಣದ ಅಧಿಕಾರವನ್ನು ಸರ್ಕಾರದಿಂದ ಕಿತ್ತು ತೈಲ ಕಂಪೆನಿಗಳಿಗೆ ನೀಡಬೇಕೆಂದು ಎರಡು ವರ್ಷಗಳ ಹಿಂದೆಯೇ ಶಿಫಾರಸು ಮಾಡಿತ್ತು. ಅದರ ಪ್ರಕಾರವೇ ಪೆಟ್ರೋಲ್ ಬೆಲೆ ನಿಗದಿ ಅಧಿಕಾರವನ್ನು ಸರ್ಕಾರ ತೈಲ ಕಂಪೆನಿಗಳಿಗೆ ಬಿಟ್ಟುಕೊಟ್ಟಿತ್ತು, ಈಗ ಡೀಸೆಲ್ ಸರದಿ. ಹಣದುಬ್ಬರ ಅಂಕೆ ಮೀರಿ ಬೆಳೆಯುತ್ತಿರುವುದರಿಂದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇಕಡಾ 2.5ರಷ್ಟಿರುವ ಸಬ್ಸಿಡಿ ಮೊತ್ತವನ್ನು ಶೇಕಡಾ 2ಕ್ಕೆ ಇಳಿಸಬೇಕಾಗಿದೆ ಎನ್ನುವುದು ಸರ್ಕಾರದ ಸಮರ್ಥನೆ. ಆದರೆ ಸರ್ಕಾರದ ಈ ಕ್ರಮದಿಂದ ಹಣದುಬ್ಬರ ಕಡಿಮೆಯಾಗಬಹುದೇ? ಈಗಾಗಲೇ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿಹೋಗಿದ್ದಾರೆ. ಹಣದುಬ್ಬರ ಎಷ್ಟು ಕಡಿಮೆಯಾಗಲಿದೆಯೋ ಗೊತ್ತಿಲ್ಲ, ಆದರೆ ಡೀಸೆಲ್ ಬೆಲೆ ಏರಿಕೆ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಲಿರುವುದು ಖಂಡಿತ.

ಡೀಸೆಲ್ ಬೆಲೆ ಏರಿಕೆಯ ನೇರ ಪರಿಣಾಮ ಸರಕು ಸಾಗಾಣಿಕೆಯ ವೆಚ್ಚದ ಮೇಲೆ ಆಗಲಿದೆ. ಇದರಿಂದಾಗಿ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಾ ಹೋಗುತ್ತದೆ. ಜತೆಗೆ ಪ್ರಯಾಣದ ದರವೂ ಹೆಚ್ಚಾಗಲಿದೆ. ಅಂತಿಮವಾಗಿ ಈ ಎಲ್ಲ ಹೆಚ್ಚುವರಿ ವೆಚ್ಚವನ್ನು ಜನರೇ ಭರಿಸಬೇಕಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಸರ್ಕಾರದ ತಲೆಮೇಲಿನ ದೊಡ್ಡ ಹೊರೆಯಾಗಿರುವುದರಲ್ಲಿ ಅನುಮಾನ ಇಲ್ಲ. ಆದರೆ ಈ ಭಾರವನ್ನು ಇಳಿಸಲು ಸರ್ಕಾರ ಕಂಡುಕೊಂಡ ಮಾರ್ಗಗಳು ಮಾತ್ರ ಜನವಿರೋಧಿಯಾದುದು. ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಏರುತ್ತಾ ಹೋದಂತೆ ಡೀಸೆಲ್ ಬಳಕೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಡೀಸೆಲ್ ಬಳಕೆ ಈಗ ಲಾರಿ-ಬಸ್‌ಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ದರ ವ್ಯತ್ಯಾಸವನ್ನು ಬಳಸಿಕೊಂಡು ಅಟೊಮೊಬೈಲ್ ಕಂಪೆನಿಗಳು ಒಂದರ ಹಿಂದೆ ಒಂದರಂತೆ ಡೀಸೆಲ್ ಬಳಕೆಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ರೀತಿ ಸಬ್ಸಿಡಿಯ ದುರ್ಬಳಕೆಯಾಗುವುದನ್ನು ತಡೆಯಲು ಸರ್ಕಾರ ಮುಂದಾಗಬೇಕು. ಡೀಸೆಲ್ ಬಳಕೆಯ ಐಷಾರಮಿ ಕಾರುಗಳ ಉತ್ಪಾದನೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚಿನ ಪ್ರಮಾಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯದ್ದು. ಸುಧಾರಣಾ ಕ್ರಮಗಳಿಂದ ತೆರಿಗೆಯನ್ನು ಕಡಿಮೆಗೊಳಿಸುವ ಮೂಲಕ ಬೆಲೆಯನ್ನು ಇಳಿಸಲು ಸಾಧ್ಯವಿದೆ.  ತೈಲ ಕಂಪೆನಿಗಳ ನಷ್ಟಕ್ಕೆ ಇನ್ನೊಂದು ಪ್ರಮುಖ ಕಾರಣ ಅವುಗಳ ಅದಕ್ಷತೆ. ಕೇಂದ್ರ ಸರ್ಕಾರ ತನ್ನ  ವೈಫಲ್ಯಗಳನ್ನು ಮುಚ್ಚಿಟ್ಟು ನಷ್ಟದ ಹೊರೆಯನ್ನು ಸಾಮಾನ್ಯ ಜನರ ತಲೆಮೇಲೆ ಹೇರುವ ಸುಲಭದ ಮಾರ್ಗ ಹಿಡಿದಿರುವುದು ಜನದ್ರೋಹ ಅಲ್ಲದೆ ಮತ್ತೇನು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.