ಇದು ನನ್ನದೇ ಬಣ್ಣ ಬಂದು ನೋಡಿರಣ್ಣ

7

ಇದು ನನ್ನದೇ ಬಣ್ಣ ಬಂದು ನೋಡಿರಣ್ಣ

Published:
Updated:
ಇದು ನನ್ನದೇ ಬಣ್ಣ ಬಂದು ನೋಡಿರಣ್ಣ

ಏನಿದು ಬಣ್ಣಬಣ್ಣದ ಲೋಕ? ‘ಮತ್ತೇನಿಲ್ಲ, ಇದು ನನ್ನದೇ ಬದುಕಿನ ಕಥೆ. ಬಣ್ಣದಲೋಕದಲ್ಲಿ ಪಟ್ಟ ಪಡಿಪಾಟಲನ್ನೇ ತೆರೆಯ ಮೇಲೆ ತೋರಿಸುತ್ತಿದ್ದೇನೆ’ ಎಂದರು ನಿರ್ದೇಶಕ ರಾಮ್‌ಪ್ರಸಾದ್. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಬಣ್ಣದ ಲೋಕದ ಅನುಭವಗಳನ್ನು ಬೆಳ್ಳಿತೆರೆಗೆ ಇಳಿಸುವುದು ಅವರ ಪ್ರಮೇಯ ಇದ್ದಂತಿತ್ತು.ಅಂದಹಾಗೆ, ರಾಮ್‌ಪ್ರಸಾದ್ ಮಾತನಾಡುತ್ತಿದ್ದುದು ಚಿತ್ರದ ಸೀಡಿ ಬಿಡುಗಡೆ ಕಾರ್ಯಕ್ರಮದಲ್ಲಿ. ಹಾಡುಗಳ ಅನಾವರಣದ ಸಂಭ್ರಮದ ಸಂದರ್ಭದಲ್ಲಿನ ಅವರು ಮಾತುಗಳಲ್ಲಿ ವಿಷಾದವೇ ಎದ್ದುಕಾಣುವಂತಿತ್ತು.‘ಚಿತ್ರವೊಂದರ ಸಂಭಾಷಣೆಗೆ ಮನಸೋತು ತಮ್ಮ ತಂದೆ ಪ್ರಸಾದ್‌ಕುಮಾರ್ ಎಂದಿದ್ದ ಹೆಸರನ್ನು ರಾಮ್‌ಪ್ರಸಾದ್ ಎಂದು ಬದಲಿಸಿದರು. ಆಗ ಹುಟ್ಟಿಕೊಂಡಿದ್ದು ಸಿನಿಮಾದಲ್ಲಿ ಮಿಂಚುವ ಹಂಬಲ. ಶಾಲಾ ಕಾಲೇಜು ದಿನಗಳಿಂದಲೂ ನಾಟಕ, ನೃತ್ಯದಲ್ಲಿ ತೊಡಗಿಕೊಂಡಿದ್ದೆ.  ಸಿನಿಮಾದಲ್ಲಿ ಅವಕಾಶ ಕೇಳಿ ಗಾಂಧಿನಗರದಲ್ಲಿ ಬೀದಿಗಳನ್ನು ಅಳೆದೆ. ಆ ಎಲ್ಲ ಅನುಭವಗಳನ್ನು ಆಧರಿಸಿ ಚಿತ್ರಕಥೆ’ ಬರೆದಿದ್ದೇನೆ ಎಂದರು.‘ಚಿತ್ರ ಆರಂಭವಾಗಿ ಮೂರು ವರ್ಷವಾಗಿದೆ. ಇದೀಗ ಆಡಿಯೋ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗುತ್ತಿದೆ.  ನಮ್ಮ ಚಿತ್ರದಲ್ಲಿ ಪ್ರೀತಿಯೂ ಇದೆ’ ಎಂದರು. ‘ಚಿತ್ರರಂಗದಲ್ಲಿ ನನಗಾದ ಕೆಟ್ಟ ಅನುಭವಗಳಿಗೆ ಯಾರೂ ಹೊಣೆಯಲ್ಲ. ಆಸೆ ಜೊತೆಗೆ ಅರ್ಹತೆ ಇದ್ದರೆ ಗೆಲುವು ಸಿಗುತ್ತದೆ’ ಎನ್ನುವ ವೈರಾಗ್ಯದ ಮಾತೂ ನಿರ್ದೇಶಕರಿಂದ ಹೊರಬಿತ್ತು.ಅಂದಹಾಗೆ, ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಇಳಿದಿರುವ ಕೃಷ್ಣಪ್ಪ, ತಾವು ಇಷ್ಟುಪಟ್ಟು ಮಾಡಿದ ಸಿನಿಮಾ ಮೂರು ವರ್ಷ ಕೊಟ್ಟ ಕಷ್ಟವನ್ನು ಹೇಳಿಕೊಳ್ಳಲು ಮನಸ್ಸು ಮಾಡಲಿಲ್ಲ. ನಟನಾಗಬೇಕೆಂಬ ಕನಸು ನನಸಾಗುತ್ತಿರುವ ಖುಷಿಯನ್ನು ಕಣ್ತುಂಬಿಕೊಂಡು ಹೇಳಿಕೊಂಡ ಹರ್ಷ, ಚಿತ್ರದ ಹೆಸರೇ ಚೆಂದ ಎಂದು ಪುಳಕಗೊಂಡರು.ಹಿರಿಯ ಖಳ ನಟ ಕೀರ್ತಿ ತಮಗೆ ಅವಕಾಶಗಳು ಸಿಗದೇ ಇರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ‘ನಾನು ಯಾರ ಕಣ್ಣಿಗೂ ಬೀಳ್ತಿಲ್ಲ. ನನ್ನ ವೃತ್ತಿಗೆ ಸದ್ಯಕ್ಕೆ ಗ್ರಹಣ ಹಿಡಿದಿದೆ. ಯಾಕೀಗೆ ಆಗುತ್ತಿದೆಯೋ ಗೊತ್ತಿಲ್ಲ’ ಎಂದು ನೊಂದುಕೊಂಡು, ಈ ಚಿತ್ರದ ನಿರ್ದೇಶಕರ ಸಿದ್ಧತೆಯನ್ನು ಮೆಚ್ಚಿಕೊಂಡರು. ಮತ್ತೊಬ್ಬ ಖಳ ನಟ ಧರ್ಮ ತಮಗೆ ವಂಚಕ ನಟನ ಪಾತ್ರ ಸಿಕ್ಕಿರುವುದನ್ನು ಖಡಕ್ ದನಿಯಲ್ಲಿ ಹೇಳಿ ನಕ್ಕರು. ಸಂಗೀತ ನಿರ್ದೇಶಕ ಥಾಮಸ್ ತಮಿಳ್ಗನ್ನಡದಲ್ಲಿ ವಂದಿಸಿ ಕುಳಿತರು.ಒಂದೂವರೆ ದಶಕದ ನಂತರ ಸಿನಿಮಾಗೆ ಕ್ಯಾಮೆರಾ ಹಿಡಿದಿರುವ ಛಾಯಾಗ್ರಾಹಕ ಚಂದ್ರಶೇಖರ್ ಅನಿರೀಕ್ಷಿತವಾಗಿ ಸಿಕ್ಕ ಅವಕಾಶದ ಬಗ್ಗೆ ಅಚ್ಚರಿಪಟ್ಟರು. ಅವರ ಪ್ರಕಾರ ಅಶ್ಲೀಲತೆ ಇಲ್ಲ ಎಂಬುದೇ ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದ ಸಹ ನಿರ್ಮಾಪಕಿ ಮತ್ತು ನಾಯಕಿ ಮೇಘನಾ ಗೌಡ ಕೂಡ ಅನಿರೀಕ್ಷಿತವಾಗಿ ಒದಗಿದ ಅವಕಾಶವನ್ನು ಅಚ್ಚರಿಯಿಂದ ಅಂಗೀಕರಿಸಿದ್ದಾಗಿ ಹೇಳಿ ಕುಳಿತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry