ಇದು ನಮ್ಮೂರ ಮರ್ಯಾದೆ ಪ್ರಶ್ನೆ

7

ಇದು ನಮ್ಮೂರ ಮರ್ಯಾದೆ ಪ್ರಶ್ನೆ

Published:
Updated:
ಇದು ನಮ್ಮೂರ ಮರ್ಯಾದೆ ಪ್ರಶ್ನೆ

ಊರ ದೇವಸ್ಥಾನದ ಬ್ರಹ್ಮಕಲಶದ ಪೂರ್ವಭಾವಿ ಸಭೆ ಇರಬಹುದು, ಪ್ರೈಮರಿ ಶಾಲೆಯ ಅಭಿವೃದ್ಧಿ ಸಮಿತಿಯ ಮೀಟಿಂಗ್ ಇರಬಹುದು, ಆಚೆಮನೆಯ ಕಮಲಕ್ಕನ ಮಗಳ ನಿಶ್ಚಿತಾರ್ಥ ಇರಬಹುದು- ಇದು ನಮ್ಮೂರ ಮರ್ಯಾದೆ ಪ್ರಶ್ನೆ- ಎಂಬ ಮಾತನ್ನು ನಮ್ಮೂರ ಮಂದಿ ಆಗಾಗ ಹೇಳುತ್ತಲೇ ಇರುತ್ತಾರೆ. ಊರ ಮಂದಿಯ ಜಗಲಿ ಚರ್ಚೆಯಲ್ಲಿ ಇಂಥ ಮಾತು ಮಾಮೂಲಿ. ವ್ಯವಸ್ಥೆಯನ್ನು ನಿಯಂತ್ರಿಸಿ ಊರನ್ನು ಕಾಪಾಡುವ ನೈತಿಕ ವಾರಸುದಾರಿಕೆಯ ಇಂಥ ಹಿರಿಯರ ಮಾತುಗಳು ಅನೇಕ ಸಲ ಹೊಸ ತಲೆಮಾರಿನ ಯುವಕರನ್ನು, ಕ್ರಾಂತಿಕಾರಿಗಳನ್ನು ಕಟ್ಟಿ ಹಾಕುವುದಿದೆ. ನಲ್ವತ್ತು ವರ್ಷಗಳ ಹಿಂದೆ ಊರ ನಡುವೆ ರೈಲು ಮಾರ್ಗ ಹಾದುಹೋದಾಗಲೂ ತಿಮ್ಮೇಗೌಡ್ರು ಇದೇ ಮಾತನ್ನು ಹೇಳಿದರು. ಈಗ ದೇವರಮಾರು ಗದ್ದೆಯ ಮೇಲೆ ಏರ್‌ಟೆಲ್ ಟವರ್ ಆದಾಗಲೂ ಇಸ್ಮಾಯಿಲ್ ಬ್ಯಾರಿ ಇದನ್ನೇ ಹೇಳುತ್ತಿದ್ದಾರೆ. ಮೊನ್ನೆ ಮೊನ್ನೆ ರಫೀಕ್ ಮತ್ತು ಜಯಂತಿ ಒಂದೇ ಬೈಕಲ್ಲಿ ಹೋದಾಗಲೂ `ಮಾರ್ಯಾದೆಯ ಪ್ರಶ್ನೆ~.ಅಂದಹಾಗೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲೋ, ಮೈಸೂರಿನ ಕುವೆಂಪು ನಗರದಲ್ಲೋ ನಿಂತು, `ಇದು ನಮ್ಮ ನಗರದ ಮಾರ್ಯಾದೆ ಪ್ರಶ್ನೆ~ ಎನ್ನುವವರನ್ನು ನಾನು ಈವರೆಗೆ ನೋಡಿಲ್ಲ. ಬಹಳ ವರ್ಷಗಳಿಂದ ಹಳ್ಳಿಯಲ್ಲೇ ಕೃಷಿ ಮಾಡುತ್ತಾ ಬದುಕುವ ನಾನು ನಾಟೀಜನರ ವ್ಯವಸ್ಥೆಯೊಳಗಡೆ ದಿನಕ್ಕೊಂದು ಬಾರಿಯಾದರೂ ಈ ಮಾತನ್ನು ಕೇಳಿಯೇ ಕೇಳುತ್ತೇನೆ. ಭಾರತೀಯ ಗ್ರಾಮಗಳ ಮೌಲ್ಯ, ಜವಾಬ್ದಾರಿ, ಭವಿಷ್ಯ, ವರ್ತಮಾನ ಎಲ್ಲವೂ ಆಗಿ ಧ್ವನಿಸುವ ಈ ಮಾತು ಒಂದರ್ಥದಲ್ಲಿ ನಿರಂತರ ನಮ್ಮ ಅಕ್ಷರ ಸಂಸ್ಕೃತಿಗೆ ಸೆಡ್ಡು ಹೊಡೆಯುತ್ತಲೇ ಬಂದಿದೆ.`ಸೆಟ್ಟಿ ಕೆಟ್ಟು ಪಟ್ಟಣ ಸೇರಿದ~ ಎಂಬ ಗಾದೆಯ ಆಳಕ್ಕೆ ಹೋದರೆ ಹಳೆಯ ಗ್ರಾಮ-ಹಳ್ಳಿಯ ತೂಕ-ಮಾನ ಇನ್ನೂ ಹೆಚ್ಚುತ್ತದೆ. ಹಿಂದೆ ಹಳ್ಳಿ ಶಾಂತಿ, ಸಾಮರಸ್ಯದ ನೆಲೆಯಾಗಿತ್ತು. ಶಾಂತಿ, ಸಾಮರಸ್ಯ ಕೆಡಿಸುವ ಕೆಲಸವನ್ನು ಯಾರಾದರೂ ಮಾಡಿದರೆ ಅವರನ್ನು ಎತ್ತಿ ನಗರಕ್ಕೆ ಗಡಿಪಾರು ಮಾಡುತ್ತಿದ್ದರು. ಇದನ್ನೆಲ್ಲಾ ಪೊಲೀಸರು, ಲಾಯರು ಮಾಡುತ್ತಿರಲಿಲ್ಲ. ಅವರಿಗೆಲ್ಲಾ ಗ್ರಾಮಗಳಿಗೆ ಪ್ರವೇಶವೇ ಇರುತ್ತಿರಲಿಲ್ಲ. ಪಂಚಾಯತಿನ ಸರಪಂಚರೇ ಇದನ್ನೆಲ್ಲಾ ನಿಭಾಯಿಸುತ್ತಿದ್ದರು.ಹೊರಗಡೆಯಿಂದ ವ್ಯಾಪಾರಕ್ಕೆಂದು ಗ್ರಾಮದ ಒಳಗಡೆ ಬಂದ ಸೆಟ್ಟರು ಇಂಥ ಕೃತ್ಯಕ್ಕೆ ಇಳಿದು ನಗರದ ಶಿಕ್ಷೆ ಅನುಭವಿಸುತ್ತಿದ್ದರು. ಇದೇ ಸೆಟ್ಟರ ಜಾಗದಲ್ಲಿಂದು ಜಾಗತೀಕರಣವನ್ನು ಇಟ್ಟು ಯೋಚಿಸಬಹುದು. ಕುಗ್ರಾಮಗಳ ಗೂಡಂಗಡಿಗಳಲ್ಲೂ ಇಂದು ಚೀನಾ ದೇಶದ ಸಿಗರ್‌ಲೈಟು ಸಿಗುತ್ತದೆ. ಹಳ್ಳಿಯ ಮಿತಿಯನ್ನು ಮೀರಿದ ಈ ಸಾಧ್ಯತೆ ಇಂದು ಗ್ರಾಮಗಳ ಸುಖವನ್ನು ನಾಶಪಡಿಸಿ ನಗರದ ದುಃಖಗಳೊಂದಿಗೆ ಅವುಗಳನ್ನು ಸೇರಿಸಿಕೊಂಡಿದೆ.ಈ ಸಂದರ್ಭದಲ್ಲಿ ನನ್ನ ತೋಟದೊಳಗಿನ ಒಂದು ಪಾಲ-ಸಂಕನೇ ನನಗೊಂದು ರೂಪಕವಾಗಿ ಕಾಣಿಸುತ್ತದೆ. ನಾಲ್ಕಡಿ ಅಗಲದ ಆ ಕಣಿಯನ್ನು ದಾಟಲು ಹಾಕಿದ ಅಡಿಕೆಮರದ ಆ ಪುಟ್ಟ ಸಂಕನನ್ನು ನನ್ನ ಮಗಳು ಲೀಲಾಜಾಲವಾಗಿ ದಾಟುತ್ತಾಳೆ.ಮೊನ್ನೆ ಮುಂಬಯಿಂದ ಬಂದ ನನ್ನ ಸಂಬಂಧಿಕರ ಮಗಳನ್ನು ದಿನವಿಡೀ ಪ್ರಯತ್ನಿಸಿದರೂ ದಾಟಿಸಲು ಸಾಧ್ಯವಾಗಲೇ ಇಲ್ಲ. ನನ್ನ ಮಗಳು ನಿಮಿಷಾರ್ಧದಲ್ಲಿ ದಾಟಿ ಆ ಕಡೆ ನಿಂತು ಬಾ ಬಾ ಎಂದು ಕರೆಯುವುದು, ಇವಳು ಈ ಕಡೆ ನಿಂತು ಜಪ್ಪಯ್ಯ ಅಂದರೂ ದಾಟದಿರುವುದು; ಆ ಕಣಿಯ ಎರಡು ದಡಗಳು ಗ್ರಾಮದ ಸುಖ-ನಗರದ ಕಷ್ಟಗಳಾಗಿ ನನ್ನನ್ನು ಅಣಕಿಸುವಂತೆ ಕಾಣುತ್ತದೆ.ಮಂಗಳೂರು ಸಮೀಪ ಬೆಂಜನಪದವು ಎಂಬ ಒಂದು ಊರಿದೆ. ಮಲ್ಲಿಗೆ, ಅಡಿಕೆ, ಭತ್ತ ಬೇಸಾಯ-ಕೃಷಿ ಮಾಡುವ ಅನೇಕ ನೆಲಪರ ಹಿಂದೂ-ಕ್ರೈಸ್ತ ಕುಟುಂಬಗಳು ಅಲ್ಲಿವೆ. ಇತ್ತೀಚೆಗೆ ಅಲ್ಲೊಂದು ಇಂಜಿನಿಯರಿಂಗ್ ಕಾಲೇಜು ಕೂಡಾ ಆಗಿದೆ. ಅದೊಂದೇ ಕಾರಣವಲ್ಲ. ಮಂಗಳೂರು ಹಿಗ್ಗುತ್ತಾ ಬಂದ ಕಾರಣವೋ ಏನೋ ಬೆಂಜನಪದವು ಭೂಮಿಗೆ ಈಗ ಚಿನ್ನದ ರೇಟು ಬಂದಿದೆ. ಆ ಊರಿನ ಅನೇಕ ಯುವಕರು ಉತ್ತಮ ಉದ್ಯೋಗದಲ್ಲಿದ್ದು, ಬಹುಮಂದಿ ವಿದೇಶಗಳಲ್ಲೂ ಇದ್ದಾರೆ. ಹಿರಿಯರು ಅನೇಕ ಮಂದಿ ಊರಲ್ಲಿ ಉಳಿದಿದ್ದಾರೆ. ಈ ಊರಿನ ಹೃದಯಭಾಗಕ್ಕೆ ಇಳಿದರೆ ಕಣ್ಣಿಗೆ ರಾಚುವಂತಹ ಬೆಳವಣಿಗೆಯೊಂದು ಗೋಚರಿಸುತ್ತದೆ. ಅನೇಕ ಸಾಂಪ್ರದಾಯಸ್ಥ ಹಳೆಮನೆಗಳ ಒತ್ತಿಗೆ ಹೊಸ ಮನೆಗಳು ಎದ್ದಿರುವುದು. ಹಾಗಂತ ಇವರ‌್ಯಾರು ಹಳೆಮನೆಯನ್ನು ಕೆಡಹದೆ, ಬಾಡಿಗೆಗೂ ಕೊಡದೆ ಇರಲು ವಿಶೇಷ ಕಾರಣವೊಂದಿದೆ.

ಹಿರಿಯರು ಹಳೆಮನೆಯಲ್ಲೂ, ಕಿರಿಯರು ಅಂದರೆ ಯುವಕರು ಹೊಸಮನೆಯಲ್ಲೂ ಇದ್ದಾರೆ. ಜಪ್ಪಯ್ಯ ಅಂದ್ರು ಹಳೆಮನೆಯ ಹಳಬರು ಹೊಸಮನೆಗೆ ವಾಸ್ತವ್ಯಕ್ಕೆ ಬರುವುದಿಲ್ಲ. `ನಮ್ಮ ಸಮಸ್ಯೆ ಬಚ್ಚಲು ಮನೆಯದ್ದಲ್ಲ. ಮನಸ್ಸಿನದ್ದು. ಹೊಸ ತಲೆಮಾರಿನವರ ಜೀವನಕ್ರಮವೇ ಬೇರೆ. ಅವರು ಕಟ್ಟಿಸಿದ ಹೊಸ ಮನೆ ಅದಕ್ಕೆ ಪೂರಕವಾಗಿದೆ. ನಮಗೆ ಇಲ್ಲಿಯ ಸುಖ ಅಲ್ಲಿಲ್ಲ. ಅವರನ್ನು ನಾವು, ನಮ್ಮನ್ನು ಅವರು ಇಲ್ಲೇ ಬನ್ನಿ ಎಂದು ಹಠ ಮಾಡುವುದಿಲ್ಲ. ಮನೆ ಮಾತ್ರ ಬೇರೆ. ಮನಸ್ಸಿಗೆ ಪಾಲು ಆಗಿಲ್ಲ~ ಎನ್ನುತ್ತಾರೆ ಇಲ್ಲಿಯ ಹಿರಿಯರೊಬ್ಬರು. ಇದು ಕೇವಲ ಬೆಂಜನಪದವಿನ ಕಥೆಯಲ್ಲ.ಮಡಿಕೇರಿಯ ರಾಜಾಸೀಟಿನಲ್ಲಿರುವ ಕಲ್ಲು ಬೆಂಚುಗಳನ್ನೊಮ್ಮೆ ನೋಡಿ. ಪ್ರತಿದಿನ ಸಂಜೆ ಐದೂವರೆ ಗಂಟೆಗೆ ಸರಿಯಾಗಿ ಮರದಡಿಯ ಕಲ್ಲುಬೆಂಚುಗಳ ಮೇಲೆ ಕೂರುವ ಐದಾರು ಮಂದಿ ಮಾಜಿ ಯೋಧರು ಇದ್ದಾರೆ. ಚಳಿ, ಮಳೆ, ಸೆಕೆ ಏನೇ ಇರಲಿ ನಿಖರ ಸಮಯಕ್ಕೆ ಈ ಹಿರಿಮಂದಿ ಕಲ್ಲುಬೆಂಚಿನ ಮೇಲೆ ಕೂತು ಹರಟೆಗೆ ತೊಡಗುತ್ತಾರೆ. ತಲೆಗೆ ಟೊಪ್ಪಿ, ಕೋಟು ಬೂಟು- ಟಾಕುಟೀಕಾದ ವಸ್ತ್ರ, ನಿಯತಿನ ಮಾತು.ಮರದಡಿಯಲ್ಲಿ ಈ ಹಿರಿಯರ ಮಾತಿಗೊಮ್ಮೆ ಕಿವಿಕೊಡಿ. ಇವರ ಬಹುಪಾಲು ಮಾತು-ತಕರಾರು ಇರುವುದು ಯುವಕರ ಮೇಲೆಯೇ. ಯುವಕರ ಮೂಲಕವೇ ದೇಶದ ಮಾರ್ಯಾದೆ ಇದೆ ಎನ್ನುವ ಇವರೆಲ್ಲರೂ ಸೇನೆಯಲ್ಲಿ ದುಡಿದವರು. ವಯಸ್ಸಾಗಿ ಒಬ್ಬರು ತೀರಿಕೊಂಡರೆ ಗುಂಪಿಗೆ ಮತ್ತೊಬ್ಬ ಮಾಜಿ ಯೋಧರು ಸೇರಿಕೊಳ್ಳುತ್ತಾರೆ. ಮಾತು ಮಾತ್ರ ಹಾಳಾಗುತ್ತಿರುವ ಊರು ಗ್ರಾಮ ದೇಶದ ಬಗ್ಗೆ ಇಷ್ಟೂ ಮಂದಿ ಯೋಧರ ಬೇರಿರುವುದು ಅದ್ಯಾವುದೋ ಹಳ್ಳಿಯಲ್ಲಿ.ನಗರದಷ್ಟು ಹಳ್ಳಿಯಲ್ಲಿ ಜನನಿಬಿಡತೆಯಿಲ್ಲ. ಆದರೆ ವಾಸ್ತವ್ಯದ ಅಂತರ ಅಲ್ಲಿ ಭಾವನೆಯ ಅಂತರ ಆಗುವುದೇ ಇಲ್ಲ. ಊರ ನಡುವೆ ಒಂದು ಡೆಡ್‌ಬಾಡಿ ಬಿದ್ದರೆ ಸಾಕು ಕ್ಷಣಕ್ಕೆ ಸಾವಿರ ಜನ ಸೇರುತ್ತಾರೆ. ಸಾವಿರ ಕಥೆ ಹುಟ್ಟುತ್ತದೆ. ಇಂಥ ಕಥೆಯೊಳಗೆ ಸಂಬಂಧಗಳು ಪಾತ್ರ, ಸನ್ನಿವೇಶಗಳಾಗುತ್ತವೆ. ಹಳ್ಳಿಗಳಲ್ಲಿ ಮುಖ್ಯವಾಗಿ ಬಯಲುಸೀಮೆಯಲ್ಲಿ ಹಬ್ಬದ ನೆಪದಲ್ಲಿ ಒಂದು ಊರು ಇನ್ನೊಂದು ಊರಿಗೆ ಚಲಿಸುತ್ತದೆ.ಮೊನ್ನೆ ಮೊನ್ನೆಯವರೆಗೆ ನಮ್ಮೂರಲ್ಲಿ ಗದ್ದೆಯ ಬದುವಿನ ಮೇಲೆ ಬಿಳಿಬಟ್ಟೆ ಧರಿಸಿದವರು ಹಾದು ಹೋದರೆ ಸಾಕು, ನಮ್ಮ ಮನೆಯ ಜಗಲಿಯಲ್ಲಿ ಸಂಬಂಧದ ಸುಳಿವು ಹಿಡಿದು ಮಾತನಾಡುತ್ತಿದ್ದರು. ಕಮಲಕ್ಕನ ನಾಲ್ಕನೆಯ ಮಗಳ ಬಗ್ಗೆ ನುಣ್ಣಗೆ ಚರ್ಚೆ ನಡೆದು ಮುಗಿಯುತ್ತಿತ್ತು. ಹಳ್ಳಿಯಲ್ಲಿ ಇದೊಂದು ಬಗೆ ವಾರಸುದಾರಿಕೆ. ವರ್ಗ, ಜಾತಿ, ಮತ ಮರೆತ ನೈತಿಕ ವಾರಸುದಾರಿಕೆ. ಈ ನಂಟು ಮಹಾನಗರಗಳ     ಅಪಾರ್ಟ್‌ಮೆಂಟುಗಳಲ್ಲಿಲ್ಲ. ಅಲ್ಲಿ ಬರೀ ಒಂದಡಿ ಅಗಲದ ಗೋಡೆ ಇಕ್ಕೆಡೆಗಳಲ್ಲಿ ಮಾತಿಲ್ಲದೆ, ಕಥೆಯಿಲ್ಲದೆ ಹತ್ತಾರು ವರ್ಷ ಬದುಕುವ ಮನುಷ್ಯರು, ಮನಸ್ಸುಗಳಿವೆ.ಹಳ್ಳಿಮನೆಯಲ್ಲಿ ಅದೊಂದು ಮದುವೆ ಚಪ್ಪರ. ಮುಂಬಾಗಿಲಲ್ಲಿ ನಿಂತ ಆ ಹುಡುಗಿ ವರನ ತಂಗಿಯೇ ಇರಬೇಕು. ಲಂಗ ರವಿಕೆ ತೊಟ್ಟು ತಲೆ ತುಂಬಾ ಮಲ್ಲಿಗೆ ಮುಡಿದಿದ್ದಾಳೆ. ಕೈಯಲ್ಲಿ ಪನ್ನೀರದಾನಿ ಹಿಡಿದುಕೊಂಡು ಮದುವೆಗೆ ಬರುವವರ ಮೇಲೆಲ್ಲಾ ಸಿಂಪಡಿಸುತ್ತಿದ್ದಾಳೆ. ಅತ್ತಿಗೆಯೋ ಭಾವ-ಮೈದುನನೋ ಬಂದರೆ ಜಾಸ್ತಿ ನೀರು ಸಿಡಿಸಿ ಒದ್ದೆ ಮಾಡುತ್ತಾಳೆ. ಅವಳ ಸಂಭ್ರಮದ ಆ ಆಟದಲ್ಲಿ ಒಂದು ಬಗೆಯ ವಿಡಂಬನೆ, ಟೀಕೆ, ತಮಾಷೆ, ಪ್ರೀತಿ, ಸಲುಗೆ ಎಲ್ಲವೂ ಇದೆ. ಆದರೆ ಈಗ ಅದೇ ಜಾಗದಲ್ಲಿ ಒಂದು ಯಂತ್ರ ನಿಂತಿದೆ. ಅದು ಅತ್ತಿಗೆ-ಮೈದುನನನ್ನು ಬಿಡಿ, ಕಲ್ಯಾಣಮಂಟಪಕ್ಕೆ ಕತ್ತೆ ನಾಯಿ ನುಗ್ಗಿದರೂ ಪನ್ನೀರು ಸಿಂಚನ ಮಾಡುತ್ತಲೇ ಇರುತ್ತದೆ. ಅದಕ್ಕೂ ಅದನ್ನು ಅಲ್ಲಿ ನಿಲ್ಲಿಸಿದವರಿಗೂ ಭಾವನೆಗಳೇ ಇಲ್ಲ.ದೇಸೀ ಪ್ರೀತಿಯ ಇಂಥ ಆಲೋಚನೆಗಳನ್ನು ಗಾಂಧಿ ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ಒಂದು ಎತ್ತಿನಗಾಡಿಯ ಜಾಗದಲ್ಲಿ ಟಿಲ್ಲರ್‌ನಂಥ ಯಂತ್ರ ಬಂದು ನಿಂತಾಗ ಆಗುವ ಬದಲಾವಣೆ ಏನು ಎಂಬುದು. ಎತ್ತು, ಗಾಡಿ ಮತ್ತು ಹಳ್ಳಿ ರೈತನ ಸಂಬಂಧ ಯಾಂತ್ರಿಕವಾದುದ್ದಲ್ಲ. ಎತ್ತಿನ ವಯಸ್ಸು, ಶಕ್ತಿ, ವೇಗ, ಕ್ರಿಯಾಶೀಲತೆ ಎಲ್ಲದರ ಬಗ್ಗೆಯೂ ರೈತನಿಗೆ ಪರಿಜ್ಞಾನವಿರುತ್ತದೆ. ಹಾಗೆಯೇ ಅದಕ್ಕೆ ಕಾಯಿಲೆಯಾದಾಗ ಔಷಧಿ ಯಾವುದು ನೀಡಬೇಕೆಂಬ ಅರಿವು ಇರುತ್ತದೆ. ಗಾಡಿ ಹಾಳಾದಾಗ ಅದನ್ನು ಬಿಚ್ಚಿ ಹೇಗೆ ರಿಪೇರಿ ಮಾಡಬೇಕೆಂಬ ಎಲ್ಲಾ ಜ್ಞಾನ ಅವರಲ್ಲಿರುತ್ತದೆ. ಉಳುಮೆ ಮಾಡುವಾಗ ಗಾಡಿಗೆ ಭುಜ ಕೊಡುತ್ತದೆ. ಸಾರಯುಕ್ತ ಸೆಗಣಿ-ಗೊಬ್ಬರ ಕೊಡುತ್ತದೆ. ಹೊಗೆ ಉಗುಳುವುದಿಲ್ಲ. ಗಂಜಲ ಕೊಡುತ್ತದೆ.ಹುಲ್ಲಿನಲ್ಲಿರುವ ಪೈರನ್ನು ಬೇರೆ ಮಾಡುತ್ತದೆ. ಇಂಥ ಗಾಡಿಯ ಜಾಗದಲ್ಲಿ ಟಿಲ್ಲರ್ ಬಂದು ನಿಂತಾಗ ಅದನ್ನು ಮುಖಾಮುಖಿಯಾಗುವ ರೈತನಲ್ಲಿ ಅಜ್ಞಾನವೊಂದು ಕಾಡುತ್ತದೆ. ಅದು ಅವಧಿಗೆ ಕೈಮೀರಿದ ಅನುಭವವಾಗುತ್ತದೆ.ಗಾಂಧೀಜಿಯವರ ಗ್ರಾಮ-ರಾಮರಾಜ್ಯದ ಪರಿಕಲ್ಪನೆ ಹುಟ್ಟಿರುವುದೇ ಇಂಥ ಹಳ್ಳಿಗಳಲ್ಲಿ. ಗಾಂಧೀಜಿಯವರ ಪ್ರಕಾರ ಗ್ರಾಮಾಭಿವೃದ್ಧಿಯೆಂದರೆ ಈ ನೆಲದ ಸಂಪನ್ಮೂಲಗಳ ಹಿತಮಿತ ಬಳಕೆ. ಅಲ್ಲಿ ನೆಲವೂ ಉಳಿಯಬೇಕು, ಅಲ್ಲಿ ಬದುಕುವ ಜನರೂ ಉಳಿಯಬೇಕು ಎಂಬ ಕಲ್ಪನೆಯದು. ಹಳ್ಳಿಯಲ್ಲಿ ಹತ್ತು ಜನ ನೆರಳಿಗಾಗಿ ಕೂರುವ ಒಂದು ಅರಳಿಮರಕ್ಕೂ ಅದರದ್ದೇ ಆದ ಭಾಷೆ, ಸಂಸ್ಕೃತಿ ಇದೆ. ಆ ಮರದ ಕಟ್ಟೆ ಆ ಭಾಷೆ-ಸಂಸ್ಕೃತಿಯನ್ನು ತಲೆಯಿಂದ ತಲೆಗೆ ವರ್ಗಾಯಿಸುತ್ತದೆ. ಈ ಕಾರಣಕ್ಕಾಗಿಯೇ ಅಭಿವೃದ್ಧಿ, ಹೆದ್ದಾರಿ ಅಗಲೀಕರಣಕ್ಕಾಗಿ ಒಂದು ಮರ ಹೋದಾಗ, ಕಡಿದಾಗ ಅದರೊಂದಿಗೆ ಒಂದಷ್ಟು ದೇಸೀ ವಿಚಾರಗಳು ಮರೆಗೆ ಸರಿಯುತ್ತವೆ.ಸ್ಥಳೀಯ ಜ್ಞಾನ ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಉತ್ತರವಾಗುತ್ತದೆ. ಬಹುತ್ವ ಹಿನ್ನೆಲೆಯ ಭಾರತದ ಆಂತರ್ಯ ಅಡಗಿರುವುದೇ ಇಂಥ ಹಳ್ಳಿ ಸಂಸ್ಕೃತಿಯಲ್ಲಿ. ಜಾತಿ, ಮತ, ಧರ್ಮ, ಅಂಗ, ವಯಸ್ಸು ಎಲ್ಲವನ್ನೂ ಮೀರಿ ಮನುಷ್ಯ ಸಂಬಂಧವನ್ನು ಬೆಸೆಯುವ ಜೀವನ ವಿಜ್ಞಾನ ಗ್ರಾಮಗಳಲ್ಲಿದೆ. ಹಾಡು, ಆರಾಧನೆ, ಹಸೆ, ಕೋಲ, ಅಂಕ, ಆಯನಗಳಿವೆ. ಇವೆಲ್ಲವೂ ಇಂದು ಅಕ್ಷರ-ತಂತ್ರಜ್ಞಾನದೊಂದಿಗೆ ಏಗುತ್ತಿವೆ.ಮಾರ್ಯಾದೆಯಿಂದ ಗ್ರಾಮಗಳನ್ನು ಕಟ್ಟುವ, ಕಾಪಾಡುವ ದೇಸೀ ಆಯಾಮಗಳು ಪಲ್ಲಟಕ್ಕೆ ಒಳಗಾಗುತ್ತಿರುವುದು; ಗ್ರಾಮಗಳು ಖಾಲಿಯಾಗುತ್ತಿರುವುದು ಅಪಾಯವೇ ಸರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry