ಇದು ಪಂಚತಾರಾ ಬಂಗಲೆ!

7

ಇದು ಪಂಚತಾರಾ ಬಂಗಲೆ!

Published:
Updated:
ಇದು ಪಂಚತಾರಾ ಬಂಗಲೆ!

ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ಇದೇ ಮೊದಲ ಬಾರಿಗೆ ತಾರಾ ಹೋಟೆಲ್‌ಗೆ ಸರಿಸಮನಾದ ಬಂಗಲೆಯೊಂದು ಪತ್ತೆಯಾಗಿದೆ. ಬೆಂಗಳೂರು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಶ್ರೀರಾಮ್ ಅವರ ಈ ಮನೆಯಲ್ಲಿ ನೋಟು ಎಣಿಕೆ ಮತ್ತು ನಕಲಿ ನೋಟು ಪತ್ತೆ ಯಂತ್ರಗಳೂ ದೊರಕುವ ಮೂಲಕ ಲಂಚಾವತಾರಕ್ಕೆ ಪ್ರಬಲ ಸಾಕ್ಷ್ಯ ಒದಗಿಸಿವೆ.ಶ್ರೀರಾಮ್ ಅವರ ಬಸವೇಶ್ವರ ನಗರದ ಬಂಗಲೆ ಮೇಲೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರೇ ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದರು. ಏಕೆಂದರೆ, ಇದು ಈವರೆಗಿನ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಅತ್ಯಂತ ಐಷಾರಾಮಿ ಬಂಗಲೆ. ತಾರಾ ಹೋಟೆಲ್‌ಗೆ ಸರಿಸಮನಾದ ಎಲ್ಲ ಸೌಕರ್ಯಗಳೂ ಅಲ್ಲಿದ್ದವು. ಮನೆಯ ಇಂಚಿಂಚೂ ಅಧಿಕಾರಿಯ `ಸಿರಿತನ~ವನ್ನೇ ಸಾರಿ ಹೇಳುತ್ತಿತ್ತು.ಮೂಲತಃ ಕುಣಿಗಲ್‌ನವರಾದ ಶ್ರೀರಾಮ್ 1985ರಲ್ಲಿ ಜಲಮಂಡಳಿಯ ಎಂಜಿನಿಯರ್ ಆಗಿ ಸೇವೆಗೆ ಸೇರಿದ್ದರು. ಪೂರ್ಣ ಸೇವಾ ಅವಧಿಯಲ್ಲಿ ಅವರ ಅಧಿಕೃತ ಆದಾಯ 63.23 ಲಕ್ಷ ರೂಪಾಯಿ ಮಾತ್ರ. ಆದರೆ, ಬಸವೇಶ್ವರ ನಗರದ ಬಂಗಲೆ ಮತ್ತು ಅಲ್ಲಿನ ಸೌಲಭ್ಯಗಳ ಮೌಲ್ಯವೇ ರೂ 2 ಕೋಟಿಗೂ ಹೆಚ್ಚು!ಪ್ರಕರಣದ ತನಿಖೆಗೆ ಮಾರ್ಗದರ್ಶನ ನೀಡುತ್ತಿರುವ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಚ್. ಎಸ್.ಮಂಜುನಾಥ್ ಮತ್ತು ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ಕೆ.ರವಿಶಂಕರ್ ನೇತೃತ್ವದ ತಂಡ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಆರೋಪಿ ಅಧಿಕಾರಿಯ ಬಂಗಲೆ ಮೇಲೆ ದಾಳಿ ನಡೆಸಿತ್ತು. ಇಡೀ ಬಂಗಲೆಯನ್ನು ಪರಿಶೀಲಿಸಿ, ಮೊದಲ ದಿನದ ತನಿಖೆಯನ್ನು ಪೂರ್ಣಗೊಳಿಸುವಾಗ ಸಂಜೆ 7 ಗಂಟೆ ಸಮೀಪಿಸಿತ್ತು. ಈ ಅವಧಿಯಲ್ಲಿ ಮೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಶ್ರೀರಾಮ್ ಹೊಂದಿರುವ ಆಸ್ತಿಯ ಮೊತ್ತ ರೂ 5 ಕೋಟಿ ದಾಟುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಹಣ ಎಣಿಕೆಗೆ ಯಂತ್ರ: ಶ್ರೀರಾಮ್ ನಿವಾಸದಲ್ಲಿ ನೋಟು ಎಣಿಸುವ ಮತ್ತು ನಕಲಿ ನೋಟು ಪತ್ತೆಯ ಯಂತ್ರಗಳು ಪತ್ತೆಯಾಗಿವೆ. ದಾಳಿಯ ಸಂದರ್ಭದಲ್ಲಿ ಪತ್ತೆಯಾದ ನಾಲ್ಕು ಲಕ್ಷ ರೂಪಾಯಿ ನಗದನ್ನು ಎಣಿಸಲು ತನಿಖಾ ತಂಡ ಇದೇ ಯಂತ್ರವನ್ನು ಬಳಸಿಕೊಂಡಿದೆ. ನಿತ್ಯವೂ ಹಣ ಎಣಿಕೆಗೆ ಇದೇ ಯಂತ್ರಗಳನ್ನು ಬಳಸುತ್ತಿದ್ದ ಅವರು, ಯಂತ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಸನ್ನದ್ಧ ಸ್ಥಿತಿಯಲ್ಲೇ ಇಟ್ಟಿದ್ದರು.ಬಂಗಲೆಯ ಎರಡು ಭಾಗಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಎಂಜಿನಿಯರ್, ಮುಖ್ಯ ದ್ವಾರಕ್ಕೆ ಸೆನ್ಸರ್ ಕೀಲಿಯನ್ನು ಅಳವಡಿಸಿದ್ದರು. ಬಂಗಲೆಯ ಮೂರು ಮಹಡಿಗಳ ನಡುವೆ ಸಂಚರಿಸಲು ಮನೆಯ ಒಳಗೇ ಲಿಫ್ಟ್ ಕೂಡ ಇದೆ. ಇದೆಲ್ಲವನ್ನೂ ಕಂಡ ತನಿಖಾ ತಂಡ ಕ್ಷಣಕಾಲ ದಂಗಾಗಿತ್ತು.ತಾರಾ ಸೌಕರ್ಯ: ಈ ಬಂಗಲೆಯಲ್ಲಿ ಐದು ಮಲಗುವ ಕೋಣೆಗಳಿದ್ದು, ಎಲ್ಲದರಲ್ಲೂ ಪ್ರತ್ಯೇಕವಾಗಿ ಎಲ್‌ಇಡಿ ಟಿ.ವಿ ಅಳವಡಿಸಲಾಗಿತ್ತು. ಮಲಗುವ ಕೋಣೆಗಳಲ್ಲಿ ತಾರಾ ಹೋಟೆಲ್‌ಗೆ ಸರಿಸಮನಾದ ಸೌಲಭ್ಯಗಳಿದ್ದವು. ಮನೆಯೊಳಗೆ ಇರುವ ಸ್ನಾನಗೃಹಗಳನ್ನು ಕೂಡ ಪಾರದರ್ಶಕ ಗಾಜಿನಿಂದ ನಿರ್ಮಿಸಿದ್ದು, ಸೆನ್ಸರ್ ಆಧಾರಿತ ನೀರಿನ ಕೊಳಾಯಿಗಳನ್ನು ಅಳವಡಿಸಲಾಗಿದೆ.ಎರಡನೇ ಮಹಡಿಯಲ್ಲಿ ಮಿನಿ ಥಿಯೇಟರ್ ವ್ಯವಸ್ಥೆ ಇದೆ. ಪಕ್ಕದಲ್ಲೇ ಜಿಮ್ ಇದ್ದು, ಅತ್ಯಾಧುನಿಕ ವ್ಯಾಯಾಮ ಸಾಧನಗಳು ಅಲ್ಲಿದ್ದವು. ಮನೆಯೊಳಗಿನ ಕುರ್ಚಿ, ಸೋಫಾ, ಊಟದ ಟೇಬಲ್ ಎಲ್ಲವೂ ತಾರಾ ಹೋಟೆಲ್‌ನ ಪರಿಸರವನ್ನೇ ನೆನಪಿಸುವಂತಿದ್ದವು.ವಿದೇಶದಿಂದ ಆಮದು ಮಾಡಿಕೊಳ್ಳಲಾದ ಕಲಾಕೃತಿಗಳು, ಹಿತ್ತಾಳೆ, ಕಂಚು, ತಾಮ್ರ ಮತ್ತಿತರ ಲೋಹಗಳ ದುಬಾರಿ ಬೆಲೆಯ ವಸ್ತುಗಳನ್ನು ಬಳಸಿ ಗೋಡೆಗಳನ್ನು ಅಲಂಕರಿಸಲಾಗಿದೆ. ಮನೆಯೊಳಗೆ ನೆರಳು-ಬೆಳಕಿನ ವ್ಯವಸ್ಥೆ, ಗೋಡೆಗಳ ಅಲಂಕಾರ, ದುಬಾರಿ ಬೆಲೆಯ ವಿದ್ಯುತ್ ದೀಪಗಳು ಮತ್ತಿತರ ಒಳಾಂಗಣ ವಿನ್ಯಾಸಕ್ಕಾಗಿಯೇ 70 ಲಕ್ಷ ರೂಪಾಯಿ ವೆಚ್ಚ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.ಅಚ್ಚರಿಯ ವಿಷಯವೆಂದರೆ ಶ್ರೀರಾಮ್ ತಮ್ಮ ಪೂರ್ಣ ಸೇವಾವಧಿಯಲ್ಲಿ ಪಡೆದ ಅಧಿಕೃತ ಆದಾಯದ ಮೊತ್ತ ಕೇವಲ 63.24 ಲಕ್ಷ ರೂಪಾಯಿ.300ಕ್ಕೂ ಹೆಚ್ಚು ಸೀರೆ: ಮನೆಯ ಕಪಾಟುಗಳಲ್ಲಿ ಇಡಲಾಗಿದ್ದ 300ಕ್ಕೂ ಹೆಚ್ಚು ದುಬಾರಿ ಬೆಲೆಯ ಸೀರೆಗಳನ್ನೂ ತನಿಖಾ ತಂಡ ಪತ್ತೆಮಾಡಿದೆ. ಈ ಪೈಕಿ ಬಹುತೇಕ ಸೀರೆಗಳು ವಿದೇಶದಿಂದ ಆಮದು ಮಾಡಿಕೊಂಡಿರುವವು. ಕೋಣೆಯೊಂದರಲ್ಲಿ ದುಬಾರಿ ಬೆಲೆಯ 100ಕ್ಕೂ ಹೆಚ್ಚು ಬೊಂಬೆಗಳೂ ತನಿಖಾ ತಂಡಕ್ಕೆ ದೊರೆತಿವೆ.ಶ್ರೀರಾಮ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ದಾಳಿಯ ವೇಳೆ ಮೂವರೂ ಮನೆಯಲ್ಲಿ ಇರಲಿಲ್ಲ. ಆರೋಪಿ ಎಂಜಿನಿಯರ್ ಮಾತ್ರ ಇದ್ದರು. ಇಬ್ಬರು ಮನೆಗೆಲಸದ ಆಳುಗಳು ಕೂಡ ದಾಳಿಯ ಸಂದರ್ಭದಲ್ಲಿ ಅಲ್ಲಿಗೆ ದೌಡಾಯಿಸಿದ್ದರು.4 ಮನೆ; 8 ನಿವೇಶನ: ಬಸವೇಶ್ವರನಗರದ ಬಂಗಲೆಯೂ ಸೇರಿದಂತೆ ಶ್ರೀರಾಮ್ ನಾಲ್ಕು ಮನೆಗಳ ಒಡೆಯ. ಎರಡು ಮನೆಗಳು ಪಶ್ಚಿಮ ಕಾರ್ಡ್ ರಸ್ತೆಯಲ್ಲಿದ್ದರೆ, ಜಾರಕ್‌ಬಂಡೆ ಕಾವಲ್‌ನಲ್ಲಿ ಒಂದು ಮನೆಯಿದೆ. ವೈಟ್‌ಫೀಲ್ಡ್‌ನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಕೂಡ ಪತ್ತೆಯಾಗಿದೆ.ಎಂಟು ನಿವೇಶನಗಳು, ಕುಣಿಗಲ್‌ನಲ್ಲಿ 10 ಗುಂಟೆ ಕೃಷಿ ಭೂಮಿ, ಎರಡು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳೂ ಇವೆ.30 ಗ್ರಾಂ ತೂಕದ ಪ್ಲಾಟಿನಂ ಆಭರಣಗಳು, 186 ಗ್ರಾಂ ಚಿನ್ನ ಮತ್ತು 935 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಬ್ಯಾಂಕ್ ಖಾತೆಗಳಲ್ಲಿ 42 ಲಕ್ಷ ರೂಪಾಯಿ ಇಟ್ಟಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಲೋಕಾಯುಕ್ತ ತನಿಖಾ ತಂಡ ವಶಪಡಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry