ಶುಕ್ರವಾರ, ನವೆಂಬರ್ 22, 2019
20 °C

ಇದು `ಪರಾರಿ' ಕಾಲ

Published:
Updated:
ಇದು `ಪರಾರಿ' ಕಾಲ

`ಭವಿಷ್ಯತ್‌ಕಾಲ ವರ್ತಮಾನವಾಗಿದೆ...' ನಿರ್ಮಾಪಕ ಸುಮಿತ್ ಕೊಂಬ್ರಾರ ಅವರ ಮಾತು ಗೆರೆ ಕೊರೆದಷ್ಟೇ ನಿಖರವಾಗಿತ್ತು. `ಪರಾರಿ' ನಿರ್ಮಾಣಕ್ಕೆ ಅಂದುಕೊಂಡ ಅವಧಿಯೂ ಹೂಡಿದ ಹಣವೂ ಆಚೀಚೆ ಹೆಚ್ಚು ವಾಲಿರಲಿಲ್ಲ. ಅದಕ್ಕೆ ಕಾರಣ ನಿರ್ದೇಶಕ ಕೆ.ಎಂ. ಚೈತನ್ಯರ ಪರಿಪಕ್ವತೆಯಂತೆ. ಕತೆ ದೃಶ್ಯವಾದ ಪರಿಯೂ ಊಹಿಸಿದಂತೆಯೇ ಬಂದಿದೆಯಂತೆ.16ರಿಂದ 28ರವರೆಗಿನ ವಯೋಮಾನದವರನ್ನೇ ಗುರಿಯಾಗಿರಿಸಿಕೊಂಡು ತಯಾರಿಸಿದ ಚಿತ್ರ ಇದು. ಆ ವಯೋವರ್ಗದವರ ಕುರಿತ ನಿರ್ಮಾಪಕರ ಸಂಶೋಧನೆಯೂ ಆಸಕ್ತಿದಾಯಕವಾಗಿದೆ: ರಾಜ್ಯದಲ್ಲಿ ಸುಮಾರು 22 ವಿಶ್ವವಿದ್ಯಾಲಯಗಳಿವೆ. ನಾಲ್ಕು ಸಾವಿರ ಕಾಲೇಜುಗಳಿವೆ. ಪಿಯು ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳು ಅಂದಾಜು 35 ಲಕ್ಷದಷ್ಟಿರಬಹುದು. ಬೆಂಗಳೂರು ಒಂದರಲ್ಲೇ ಸಾವಿರ ಕಾಲೇಜುಗಳಿದ್ದು ಸುಮಾರು 6.5 ಲಕ್ಷ ವಿದ್ಯಾರ್ಥಿಗಳಿರಬಹುದು...ಆದರೆ ಇವರೆಲ್ಲಾ ಸಿನಿಮಾ ನೋಡುತ್ತಾರೆಯೇ ಅದರಲ್ಲಿಯೂ ಕನ್ನಡ ಸಿನಿಮಾ ನೋಡುತ್ತಾರೆಯೇ ಎಂಬ ಪ್ರಶ್ನೆ ಪತ್ರಕರ್ತರನ್ನು ಕಾಡಿತ್ತು. ಈ ಬಗ್ಗೆ ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ ಎಂದ ಸುಮಿತ್ ಆ ವಯೋವರ್ಗದವರನ್ನು ಸೆಳೆಯಲು ಸಾಕಷ್ಟು ಕೆಲಸ ಮಾಡಿದ್ದಾರಂತೆ. ಕಾಲೇಜುಗಳಿಗೆ ಹೋಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರಂತೆ. ಅದರ ಫಲ ಏನಾಗುತ್ತದೆ ಎನ್ನುವುದಕ್ಕೆ ಏಪ್ರಿಲ್ 19ರಂದು ಉತ್ತರ ದೊರೆಯಲಿದೆ. ಅಂದು `ಪರಾರಿ' ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.ಒಂದೂವರೆ ತಿಂಗಳ ಹಿಂದೆ ಚಿತ್ರ ಬಿಡುಗಡೆಗೆ ಎಲ್ಲ ತಯಾರಿ ನಡೆದಿದ್ದರೂ ನಿರ್ದೇಶಕ ಕೆ.ಎಂ.ಚೈತನ್ಯ ಕಾದು ನೋಡುವ ತಂತ್ರ ಅನುಸರಿಸಿದ್ದರು. ಈಗ ದೊಡ್ಡ ದೊಡ್ಡ ಚಿತ್ರಗಳ ಆತಂಕ ಅವರಿಗಿಲ್ಲ. ಜತೆಗೆ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಸಿನಿಮಾ ರಿಲೀಫ್ ನೀಡಲಿ ಎಂಬ ಆಶಯದೊಂದಿಗೆ ಏಪ್ರಿಲ್ ಮಾಸವನ್ನು ಅವರು ಆಯ್ದುಕೊಂಡಿದ್ದಾರೆ.`ಬೀಜ ಬೀಜ' ಹಾಡು ಸೇರಿದಂತೆ ಅನೇಕ ದ್ವಂದ್ವಾರ್ಥದ ಅಂಶಗಳು ಚಿತ್ರದಲ್ಲಿವೆ. ನಾಡಿನ ಪ್ರಸಿದ್ಧ ಸಾಹಿತಿಗಳ ಕುಟುಂಬದಿಂದ ಬಂದವರಾದರೂ ಚೈತನ್ಯ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಣಿರತ್ನಂ ಅವರಂಥ ದೊಡ್ಡ ನಿರ್ದೇಶಕರೇ ಇಂಥ ಹಾದಿ ತುಳಿದಿದ್ದಾರೆ ಎಂಬ ಸಮಜಾಯಿಷಿ ಅವರದು. ಪ್ರೇಕ್ಷಕರಿಗೆ ರಸದೌತಣ ನೀಡುವುದಷ್ಟೇ ಅವರ ಕಾಳಜಿಯಂತೆ.ಶೃಂಗ, ಶ್ರವಂತ್, ಬುಲೆಟ್ ಪ್ರಕಾಶ್, ಶುಭಾ ಪೂಂಜಾ, ಜಾಹ್ನವಿ ಕಾಮತ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಉಮಾಶ್ರೀ, ಸಾಧು ಕೋಕಿಲ, ಅರುಣ್ ಸಾಗರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.`ಪರಾರಿ'ಯ ಛಾಯಾಗ್ರಾಹಕ ಎಚ್.ಸಿ. ವೇಣು ಅವರು ಹಾಡುಗಳನ್ನು ಮೆಚ್ಚಿಕೊಂಡಿರುವುದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರಿಗೆ ಖುಷಿ ತಂದಿದೆ. ಛಾಯಾಗ್ರಹಣವೂ ಪೇಂಟಿಂಗ್ ರೀತಿ ಮೂಡಿ ಬಂದಿದೆ ಎಂಬ ಪ್ರತಿ ಮೆಚ್ಚುಗೆ ಇವರಿಂದ.ಸಾಮಾಜಿಕ ಜಾಲತಾಣಗಳಲ್ಲಿ ಹಾಡುಗಳು ಈಗಾಗಲೇ ಹಿಟ್ ಆಗಿರುವುದು ಶ್ರವಂತ್ ಅವರ ಹುಮ್ಮಸ್ಸನ್ನು ಹೆಚ್ಚಿಸಿದೆ. ಅಲ್ಲದೆ ಬೇರೆ ಬೇರೆ ನೆಲೆಗಳಲ್ಲಿ ಚಿತ್ರಕ್ಕೆ ಈಗಾಗಲೇ ಪೂರಕ ಪ್ರತಿಕ್ರಿಯೆ ದೊರೆತಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವ ವಿಶ್ವಾಸ ಅವರದು.ನಾಲ್ಕಾರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜಾಹ್ನವಿ ಕಾಮತ್ ಕನ್ನಡದಲ್ಲೊಂದು ಬ್ರೇಕ್ ಪಡೆಯಲು `ಪರಾರಿ'ಯ ಮೊರೆ ಹೋಗಿದ್ದಾರೆ. ಕಿರಿಯ ನಟರು ಎಂಬ ತಾರತಮ್ಯ ಇಲ್ಲದೆ ಚಿತ್ರತಂಡ ನಡೆಸಿಕೊಂಡ ರೀತಿಗೆ ಅವರು ಕೃತಜ್ಞರಾಗಿದ್ದಾರೆ.ಜರ್ಮನಿಯಲ್ಲಿ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದರಿಂದ ನಟ ಶೃಂಗ ಸುದ್ದಿಗೋಷ್ಠಿಗೆ ಬಂದಿರಲಿಲ್ಲ. ಶುಭಾ ಪೂಂಜಾ ಕೂಡ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ತಡವಾಗಿ ಬಂದ ಬುಲೆಟ್ ಪ್ರಕಾಶ್ ನಿರ್ದೇಶಕರ ಕಾರ್ಯವೈಖರಿಯನ್ನು ಹೊಗಳಿದರು.

ಪ್ರತಿಕ್ರಿಯಿಸಿ (+)