ಸೋಮವಾರ, ನವೆಂಬರ್ 18, 2019
20 °C
ಚುನಾವಣೆ ಆಯೋಗದ ಕಾರ್ಯವೈಖರಿ

ಇದು ಬೇಕಿತ್ತೇ? ಇದು ಬೇಕಿತ್ತು!

Published:
Updated:

ಕೋಲಾರ: ನಮ್ಮ ಹಳ್ಳಿಯಲ್ಲಿ ಬ್ಯಾನರ್‌ಗಳನ್ನು ಕಟ್ಟಲು ಅವಕಾಶವೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ ಅದೆಷ್ಟೋ ಹೊಡೆದಾಟಗಳು ಆಗಿಬಿಡುತ್ತಿದ್ದವು. ಇಂಥವನ್ನೆಲ್ಲ ಚುನಾವಣೆ ಆಯೋಗದ ಬಿಗಿ ನಿಲವುಗಳು ಸರಿಯಾಗಿ ನಿಯಂತ್ರಿಸುತ್ತಿವೆ. ನಮಗೆ ಇದು ಬೇಕಿತ್ತು...-ತಾಲ್ಲೂಕಿನ ಮಾರ್ಕಂಡಪುರ ರೈತ ಎಂ.ವಿ.ನಾರಾಯಣಸ್ವಾಮಿ ಖುಷಿ ಮತ್ತು ಸಮಾಧಾನದಿಂದ ಹೇಳಿದ ಮಾತುಗಳಿವು.

ಹಿಂದಿನ ಚುನಾವಣೆಗಳ ಸಂದರ್ಭಗಳಲ್ಲಿ ಬ್ಯಾನರ್‌ಗಳನ್ನು ಕಟ್ಟುವ ವಿಷಯಕ್ಕೆ ನಡೆದ ದೊಡ್ಡ ಗಲಾಟೆಗಳ ನೆನಪು ಅವರಲ್ಲಿ ಹಸಿರಾಗಿಯೇ ಇದೆ.

ಅಭ್ಯರ್ಥಿ-ಪಕ್ಷಗಳ ಪ್ರಚಾರದ ಪೈಪೋಟಿಯು ಹಳ್ಳಿಯ ಜನರ ಶಾಂತಿಯನ್ನು ಕದಡುತ್ತಿತ್ತು. ಇದು ಕೇವಲ ನಮ್ಮ ಹಳ್ಳಿ ವಿಷಯವಲ್ಲ. ಬಹಳಷ್ಟು ಹಳ್ಳಿಗಳಲ್ಲಿ ಪ್ರಚಾರದ ಏರುಪೇರುಗಳೇ ಸನ್ನಿವೇಶದ ತಿಳಿಯನ್ನು ಕದಡುತ್ತಿತ್ತು. ಈಗ ಅಂಥ ಸನ್ನಿವೇಶವೇ ಇಲ್ಲದಿರುವುದು ನೆಮ್ಮದಿ ತಂದಿದೆ ಎಂದು ಅವರು ಖಚಿತವಾಗಿಯೇ ನುಡಿದರು.ಮುದ್ರಿತ ಪ್ರತಿಗಳ ಸಂಖ್ಯೆ, ಮುದ್ರಿಸಿದವರ ಮಾಹಿತಿ ಇಲ್ಲದ ಮತಯಾಚನೆ ಕರಪತ್ರಗಳನ್ನು ವಶಪಡಿಸಿಕೊಳ್ಳುತ್ತಿರುವುದು ಕೂಡ ಹೊಸ ಬೆಳವಣಿಗೆ. ಈ ಬಗ್ಗೆಯೂ ಸ್ವಾಗತ ವ್ಯಕ್ತವಾಗಿದೆ.ಹಳ್ಳಿ ಬೀದಿಗಳಲ್ಲಿ, ರಸ್ತೆಗಳಲ್ಲಿ ಎಲ್ಲೆಲ್ಲೂ ಕರಪತ್ರಗಳು ಚೆಲ್ಲಾಡುತ್ತಿದ್ದವು. ಈಗ ಅಂಥ ಸನ್ನಿವೇಶವೇ ಇಲ್ಲವಾಗಿದೆ ಎಂಬುದು ಚಿಕ್ಕಹಸಾಳದ ಯುವಕ ಅವಿನಾಶ್ ಅಭಿಪ್ರಾಯ.ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಗೆ ಸಾರ್ವಜನಿಕರಿಂದ ಸ್ವಾಗತ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೆ, ಪಕ್ಷಗಳು, ಕಾರ್ಯಕರ್ತರಿಂದ ವಿರೋಧಗಳೂ ವ್ಯಕ್ತವಾಗುತ್ತಿರುವುದನ್ನು ಗಮನಿಸಲೇಬೇಕು.ಆಯೋಗದ ಕಟ್ಟುನಿಟ್ಟಿನ ನಿಯಮಗಳ ಅನುಷ್ಠಾನದ ಪರಿಣಾಮವಾಗಿ ಪೊಲೀಸ್ ಠಾಣೆಗಳಲ್ಲಿ, ವಶಪಡಿಸಿಕೊಂಡ ಪಾತ್ರೆ, ಬಟ್ಟೆ, ಕರಪತ್ರ, ಅಕ್ಕಿ ಮೊದಲಾದ ಸಾಮಗ್ರಿಗಳ ರಾಶಿ ಏಳುತ್ತಿದೆ. ಇಂಥದೊಂದು ಬದಲಾದ ಸನ್ನಿವೇಶ ಬೇಕಿತ್ತು ಎಂದು ಹಲವರು ಹೇಳುತ್ತಿರುವ ಹೊತ್ತಿನಲ್ಲೇ `ಆಯೋಗದ ಕ್ರಮ ಅತಿಯಾಯಿತು, ಇದೆಲ್ಲ ಬೇಕಿರಲಿಲ್ಲ' ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.ವಾಗ್ವಾದ-ಪ್ರತಿರೋಧ: ಚುನಾವಣೆ ಅಕ್ರಮವನ್ನು ತಡೆಗಟ್ಟಲು ನೇಮಕವಾಗಿರುವ ಸೆಕ್ಟರಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯೊಡನೆ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ವಾಗ್ವಾದ ನಡೆಸುವ, ಪ್ರತಿರೋಧಿಸುವ ಘಟನೆಗಳೂ ಜಿಲ್ಲೆಯಲ್ಲಿ ನಡೆಯುತ್ತಿವೆ.ತಾಲ್ಲೂಕಿನ ಈಕಂಬಳ್ಳಿಯಲ್ಲಿ ಮೈಕ್, ಪೆಂಡಾಲ್‌ಗೆ ಜೆಡಿಎಸ್ ಅನುಮತಿ ಪಡೆಯದೆ ಪ್ರಚಾರ ನಡೆಸುತ್ತಿರುವುದನ್ನು ಪ್ರಶ್ನಿಸಿದ ಅಧಿಕಾರಿಗಳನ್ನು ದಬಾಯಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ವೇಮಗಲ್‌ನಲ್ಲೂ ಅಂಥದ್ದೇ ಘಟನೆ ಭಾನುವಾರ ನಡೆದಿದೆ.ತಾಲ್ಲೂಕಿನ ವೇಮಗಲ್‌ನ ಪುರಳ್ಳಿ ಶ್ರೀನಿವಾಸ್ ಎಂಬುವರ ಮನೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆ ಪ್ರಯುಕ್ತ ಸಿದ್ಧಪಡಿಸಿದ್ದ ಅಡುಗೆ, ಪಾತ್ರೆಗಳನ್ನು ವಶಕ್ಕೆ ಪಡೆಯಲು ಯತ್ನಿಸಿದ ಸೆಕ್ಟರಲ್ ಅಧಿಕಾರಿ ಕೆ.ರಾಘವೇಂದ್ರ ಅವರೊಂದಿಗೆ ಕೆಲವು ಮುಖಂಡರು ವಾಗ್ವಾದ ನಡೆಸಿದ್ದಾರೆ. `ಮುಖಂಡರ ಪ್ರತಿರೋಧದ ನಡುವೆಯೇ ಪಾತ್ರೆಗಳನ್ನು ವಶಪಡಿಸಿಕೊಂಡು ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎನ್ನುತ್ತಾರೆ ರಾಘವೇಂದ್ರ.

ಅಧಿಕಾರಿಗಳ ಮೇಲೆ ಪ್ರಭಾವಿಗಳ ಒತ್ತಡ

ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರ ವಿತರಿಸುವುದು, ನೂರಾರು ಮಂದಿಗೆ ಅಡುಗೆ ತಯಾರಿಸುವುದು, ವಾಹನಕ್ಕೆ ಅನುಮತಿ ಪಡೆಯದೆ ಪ್ರಚಾರ ಮಾಡುವುದು ಸೇರಿದಂತೆ ಹಲವು ಅಕ್ರಮಗಳ ವಿರುದ್ಧ ಮೊಕದ್ದಮೆ ದಾಖಲಿಸುವ ಅಧಿಕಾರಿಗಳ ಮೇಲೆ ಪ್ರಭಾವಿ ರಾಜಕಾರಣಿಗಳು, ದೂರು, ಪ್ರಕರಣ ವಾಪಸು ಪಡೆಯುವಂತೆ ಒತ್ತಡ ಹೇರುತ್ತಿರುವ ಘಟನೆಗಳೂ ನಡೆಯುತ್ತಿವೆ.ವೇಮಗಲ್‌ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಡುಗೆ, ಪಾತ್ರೆಗಳನ್ನು ವಶಪಡಿಸಿಕೊಂಡು ವೇಮಗಲ್ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ವಾಪಸ್ ಪಡೆಯುವಂತೆ ಅಧಿಕಾರಿಯೊಬ್ಬರಿಗೆ ಪಕ್ಷದ ಪ್ರಭಾವಿಯೊಬ್ಬರು ಸೋಮವಾರ ಬೆಳಗಿನ ಜಾವ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)