ಇದು ಮಕ್ಕಳಿಗೆ ಸಂದ ಗೌರವ: ನಂದನಾ ರೆಡ್ಡಿ

7

ಇದು ಮಕ್ಕಳಿಗೆ ಸಂದ ಗೌರವ: ನಂದನಾ ರೆಡ್ಡಿ

Published:
Updated:

ಬೆಂಗಳೂರು: `ಈ ಗೌರವ ನಿಜಕ್ಕೂ ಸಲ್ಲಬೇಕಿರುವುದು ನಮ್ಮ ಚಳವಳಿಯ ಉದ್ದಕ್ಕೂ ಜೊತೆಗಿದ್ದ ಮಕ್ಕಳಿಗೆ. ಇದು ಕೇವಲ ನಮ್ಮ ಸಂಸ್ಥೆಗೆ ಸಂದಿರುವ ಗೌರವ ಎಂದು ಖಂಡಿತ ಭಾವಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಮಕ್ಕಳ ಭಾಗವಹಿಸುವಿಕೆ ಕುರಿತು 1970-80ರ ದಶಕದಲ್ಲಿ ನಾವು ಆರಂಭಿಸಿದ ಆಂದೋಲನಕ್ಕೆ ಇದು ಹಿರಿದಾದ ಗರಿಮೆ...~ಮಕ್ಕಳ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಸಿಡಬ್ಲ್ಯೂಸಿಯ (ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್) ಕಾರ್ಯಗಳಿಗಾಗಿ ಸಂಸ್ಥೆಯನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ.

 

ಈ ಹಿನ್ನೆಲೆಯಲ್ಲಿ ಸಂಸ್ಥೆಯ ನಿರ್ದೇಶಕಿ (ಅಭಿವೃದ್ಧಿ) ನಂದನಾ ರೆಡ್ಡಿ ಅವರು `ಪ್ರಜಾವಾಣಿ~ಗೆ ನೀಡಿದ ಪ್ರತಿಕ್ರಿಯೆ ಇದು.  ನಾರ್ವೆ ದೇಶದ ಸಂಸದರಾದ ಲಿಂಡಾ ಹಾಫ್‌ಸ್ಟಾಡ್ ಹೆಲ್ಲೆಲ್ಯಾಂಡ್, ಗುನ್ ಕರಿನ್ ಮತ್ತು ಆಂಡ್ರೆ ಒಕ್ಟೆ ದಾಲ್ ಅವರು ಸಿಡಬ್ಲ್ಯೂಸಿಯನ್ನು ನೊಬೆಲ್ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ `ಯುನಿಸೆಫ್~ ಮತ್ತು `ಸೇವ್ ದಿ ಚಿಲ್ಡ್ರನ್~ ಸ್ವಯಂ ಸೇವಾ ಸಂಸ್ಥೆಗಳನ್ನೂ ನಾಮನಿರ್ದೇಶನ ಮಾಡಲಾಗಿದೆ.`ನಮ್ಮದೊಂದು ಚಿಕ್ಕ ಸಂಸ್ಥೆ. ಆದರೂ ವಿಚಾರಗಳ ಮೂಲಕ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರಲು ಸಾಧ್ಯವಾಗಿದೆ. ಹಿಂದೆ ಮಕ್ಕಳ ಹಕ್ಕುಗಳ ಕುರಿತು ಮಾತನಾಡಲು ನಮ್ಮ ಜೊತೆ ಇದ್ದವರು ಕೆಲವೇ ಮಂದಿ. ಆದರೆ ಇಂದು ಸಾಕಷ್ಟು ಜನ ಈ ಕುರಿತು ಕಾಳಜಿ ಹೊಂದಿದ್ದಾರೆ. ಪರಿಸ್ಥಿತಿ ಬದಲಾಗಿದೆ~ ಎಂದು ನಂದನಾ ರೆಡ್ಡಿ ಅವರು ಅಭಿಮಾನದಿಂದ ಹೇಳಿದರು.`ಕುಂದಾಪುರದಲ್ಲಿ ಪ್ರಯೋಗ~: `ಪ್ರಜಾಪ್ರಭುತ್ವದಲ್ಲಿ ಮಕ್ಕಳ ಭಾಗವಹಿಸುವಿಕೆ ಕುರಿತ ನಮ್ಮ ಮೊದಲ ಪ್ರಯೋಗ ನಡೆದಿದ್ದು ಕುಂದಾಪುರ ತಾಲ್ಲೂಕಿನಲ್ಲಿ. 2002ರಲ್ಲಿ ಅಲ್ಲಿನ ಆಯ್ದ ಐದು ಗ್ರಾಮ ಪಂಚಾಯಿತಿಗಳಲ್ಲಿ ಸಿಡಬ್ಲ್ಯೂಸಿ ಮತ್ತು ಭೀಮ ಸಂಘ (ಸಂಸ್ಥೆಯೇ ಹುಟ್ಟುಹಾಕಿರುವ ದುಡಿಯುವ ಮಕ್ಕಳ ಸಂಘಟನೆ) ಜೊತೆಗೂಡಿ ಮಕ್ಕಳ ಗ್ರಾಮ ಸಭೆಯನ್ನು ಆರಂಭಿಸಿತು. ಇದು 2004ರಲ್ಲಿ ತಾಲ್ಲೂಕಿನ 56 ಜಿಲ್ಲೆಗಳಿಗೆ ವಿಸ್ತರಿಸಿತು~ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ದಾಮೋದರ ಆಚಾರ್ಯ ಮಾಹಿತಿ ನೀಡಿದರು.ನಂತರ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮಕ್ಕಳ ಗ್ರಾಮಸಭೆ ನಡೆಸಬೇಕು ಎಂದು ಸರ್ಕಾರ ಸುತ್ತೋಲೆಯನ್ನೂ ಹೊರಡಿಸಿತು.`ಮಕ್ಕಳಿಗಿಲ್ಲವೇ ಸ್ವಾತಂತ್ರ್ಯ?~: `ತನ್ನ ಬದುಕಿನ ಮೇಲೆ ಪರಿಣಾಮ ಬೀರುವ ವಿದ್ಯಮಾನಗಳ ಕುರಿತು ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶಗಳ ಎಲ್ಲ ಹಿರಿಯ ನಾಗರಿಕರಿಗೆ ಇದೆ. ಆದರೆ ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಜಗತ್ತಿನ ಯಾವ ಪ್ರಜಾಪ್ರಭುತ್ವ ದೇಶದಲ್ಲೂ ಮಕ್ಕಳಿಗೆ ಈ ಸ್ವಾತಂತ್ರ್ಯ ಲಭ್ಯವಾಗಿಲ್ಲ. ತಮ್ಮ ಬದುಕಿನ ಕುರಿತು ಸ್ವತಂತ್ರವಾಗಿ ಮಾತನಾಡುವ ಹಕ್ಕು ಲಭಿಸಬೇಕು ಎಂಬ ಆಗ್ರಹವನ್ನು ಮುಂದಿಟ್ಟುಕೊಂಡೇ 1980ರಿಂದ ಸಿಡಬ್ಲ್ಯೂಸಿ ಕೆಲಸ ಮಾಡುತ್ತಿದೆ~ ಎಂದು ಸಂಸ್ಥೆಯ ತಾತ್ವಿಕತೆ ಕುರಿತು ಸಹಾಯಕ ನಿರ್ದೇಶಕ ಎಂ.ಎಂ. ಗಣಪತಿ `ಪ್ರಜಾವಾಣಿ~ಗೆ ತಿಳಿಸಿದರು.ಅಭಿಪ್ರಾಯ ಹೇಳುವ ಹಕ್ಕು ಮಾತ್ರವಲ್ಲ, ಬದುಕಿನ ಕುರಿತು ನಿರ್ಧಾರ ಕೈಗೊಳ್ಳುವ ಹಕ್ಕೂ ಮಕ್ಕಳಿಗಿರಬೇಕು ಎಂಬುದು ಸಂಸ್ಥೆಯ ಆಶಯ ಎಂದು ಅವರು ನುಡಿದರು.ಸಂಸ್ಥೆ ಪ್ರಸ್ತುತ ಬೆಂಗಳೂರು ನಗರ, ಉಡುಪಿ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕ್ಷೇತ್ರ ಕಾರ್ಯಕರ್ತರನ್ನು ಹೊಂದಿದೆ. ಅಲ್ಲದೆ, ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿ ಬಳಿ ಬಾಲಕಾರ್ಮಿಕರು ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮಕ್ಕಳಿಗೆ 1993ರಿಂದ ವೃತ್ತಿತರಬೇತಿ ಕೇಂದ್ರವನ್ನೂ ನಡೆಸುತ್ತಿದೆ ಎಂದು ಆಚಾರ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry