ಶನಿವಾರ, ನವೆಂಬರ್ 23, 2019
17 °C

ಇದು `ಮದುಮಗಳ' ಫೇಸ್‌ಬುಕ್!

Published:
Updated:

ಒಂದು ಬೆಳಗು. `ಮಲೆಗಳಲ್ಲಿ ಮದುಮಗಳು' ಫೇಸ್‌ಬುಕ್‌ನಲ್ಲಿ ಅಲೆದಾಡುತ್ತಿದ್ದಳು. ಅರೆರೆ ಹೇಗೆ ಬಂದಳು ಎಂದು ಹುಬ್ಬೇರಿಸುತ್ತಿದ್ದಂತೆಯೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿಬಿಟ್ಟಳು. ಅಲ್ಲಿ ಅವಳ ಪರಿಚಯ ಹೀಗಿತ್ತು: ಲಿಂಗ- ಹೆಣ್ಣು, ವಿಳಾಸ- ಕಲಾಗ್ರಾಮ, ಮಲ್ಲತ್ತಹಳ್ಳಿ ಬಸ್‌ಸ್ಟಾಪ್, ಬೆಂಗಳೂರು  ವಿಶ್ವವಿದ್ಯಾಲಯದ ಸಮೀಪ, ರಿಂಗ್‌ರಸ್ತೆ, ಬೆಂಗಳೂರು. ಯೂಟ್ಯೂಬ್ ಹಾಗೂ ಇಮೇಲ್ ವಿಳಾಸವೂ ಆಕೆಯ ಪರಿಚಯದ ಜೊತೆಗೇ ಇತ್ತು.ಆಕೆಯ ಪ್ರೊಫೈಲ್ ಚಿತ್ರವಂತೂ ಮಲೆನಾಡಿನ ಹೆಣ್ಣುಮಗಳ ಕನಸನ್ನೇ ಹೊತ್ತಂತಿತ್ತು. ಹಣೆಗೆ ಬಾಸಿಂಗ, ಅದರ ಕೆಳಗೆ ಸಿಂಧೂರ. ಕೆಂಪಂಚಿನ ಹಾಲುಬಣ್ಣದ ಸೀರೆ. ಆಕೆಯ ಮುಖದಲ್ಲಿ ಗಂಡನ ಮನೆಯನ್ನು ನೆನೆವ ಎಲ್ಲ ಹೆಣ್ಣುಗಳಲ್ಲಿ ಇರಬಹುದಾದ ಆತಂಕ...

`ಹಾಯ್ ನಾನು ಮಲೆಗಳಲ್ಲಿ ಮದುಮಗಳು' ಫೇಸ್‌ಬುಕ್‌ನಲ್ಲಿ ಇದು ಅವಳ ಮೊದಲ ಮಾತು.`ಸರಿ'

`ಆದಷ್ಟು ಬೇಗ ಬೆಂಗಳೂರಿಗೆ ಬರುತ್ತಿದ್ದೇನೆ'

`ಹೌದಾ?'

`ಕಾಣಲು ಬಯಸುವವರು ಕಲಾಗ್ರಾಮಕ್ಕೆ ಬನ್ನಿ'

`ಯಾರಿದು?' ಇತ್ತಲಿಂದ ಪ್ರಶ್ನೆ.

`ನಾನು ಮದುಮಗಳು'

`ಅದು ಸರಿ. ಆಕೆಯ ಹಿಂದಿರುವವರು ಯಾರು?'ಆಗ ಬಂತು `ಜಿ. ಸುರೇಶ್‌ಕುಮಾರ್' ಎಂಬ ಉತ್ತರ. ಇವರು ಮೂಲತಃ ಚಿತ್ರ ಕಲಾವಿದ. ಚಿತ್ರಕಲಾ ಪರಿಷತ್‌ನಿಂದ ಬಿಎಫ್‌ಎ ಪದವಿ ಪಡೆದವರು. ನಂತರ ದೆಹಲಿಯ `ಕಾಲೇಜ್ ಆಫ್ ಆರ್ಟ್ಸ್'ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿದರು. ಅಲ್ಲಿಂದ ಬಂದವರೇ ತಮ್ಮೂರು ಸರ್ಜಾಪುರ ಸಮೀಪದ ಕಲ್ಲಳ್ಳಿಯಲ್ಲಿ ಕಲಾ ಸ್ಟುಡಿಯೋ ಆರಂಭಿಸಿದರು. `ಸಮೂಹ' ಹಾಗೂ `ಬಾರ್ ಒನ್' ಕಲಾಸಂಸ್ಥೆಗಳ ಸಂಸ್ಥಾಪಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದರು.`ಮಲೆಗಳಲ್ಲಿ ಮದುಮಗಳು' ನಿರ್ದೇಶಕ ಸಿ. ಬಸವಲಿಂಗಯ್ಯ ಮೊದಲಿನಿಂದಲೂ ಸುರೇಶರ ಮಾನಸಿಕ ಗುರುಗಳು. ಆ ಪ್ರೀತಿಯೇ ಮದುಮಗಳಿಗೆ ವಿಭಿನ್ನ ರೀತಿಯ ಪ್ರಚಾರ ನೀಡಲು ಸಾಧ್ಯವಾಯಿತು. ಮದುಮಗಳ ಹೆಸರಿನಲ್ಲಿಯೇ ಫೇಸ್‌ಬುಕ್ ಅಕೌಂಟ್ ತೆರೆದರೆ ಜನಪ್ರಿಯತೆ ಹೆಚ್ಚಾಗುತ್ತದೆ ಎಂಬ ಭಾವನೆ ಮೊಳೆಯಿತು. ತಕ್ಷಣ ಕಾರ್ಯಪ್ರವೃತ್ತರಾದರು. ಜೊತೆಗೆ ಪ್ರತ್ಯೇಕ ಇಮೇಲ್ ಅಕೌಂಟ್ ತೆರೆದರು. ಪ್ರದರ್ಶನಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವವರು ​malegalallimadhumagalu@ gmail.com ಗೆ ಮೇಲ್ ಮಾಡಬಹುದು. ಪ್ರತಿಕ್ರಿಯೆ, ವಿಚಾರ ವಿನಿಮಯಕ್ಕೂ ಅವಕಾಶವಿದೆ.ನಾಟಕದ ಪ್ರಚಾರಕ್ಕೆ ತೊಡಗಿಕೊಂಡವರಲ್ಲಿ ಸುರೇಶ್ ಪ್ರಮುಖರು. ಒಂಬತ್ತು ಗಂಟೆ ಅವಧಿಯ ಈ ಸುದೀರ್ಘ ನಾಟಕದ `ರಿಹರ್ಸಲ್'ನಿಂದ ಹಿಡಿದು ಪ್ರಮುಖ ಘಟ್ಟಗಳವರೆಗೆ ಸೂಕ್ಷ್ಮವಾಗಿ ಅವರು ಛಾಯಾಗ್ರಹಣ, ವೀಡಿಯೊ ಮೂಲಕ ದಾಖಲಿಸಿಟ್ಟಿದ್ದಾರೆ.ಆಸಕ್ತರಿಗೆ ಉಚಿತವಾಗಿ ಚಿತ್ರಗಳನ್ನು ನೀಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ `ಮದುಮಗಳು' ಅಪ್‌ಡೇಟ್ ಆಗುತ್ತಿರುವುದು ಅವರ ಶ್ರಮದ ಫಲವಾಗಿಯೇ. ಅಲ್ಲಿ ರಿಹರ್ಸಲ್‌ನ ದೃಶ್ಯಗಳು, ರಂಗಪರಿಕರ ಸಿದ್ಧತೆ, ಕಲಾವಿದರು ಅಣಿಯಾಗುವ ಪರಿಯೆಲ್ಲಾ ಚಿತ್ರಿತ. ಅಷ್ಟೇ ಅಲ್ಲ ನಾಟಕದಲ್ಲಿ ಬಳಕೆಯಾಗುವ ಹಾವು-ಚೇಳು, ಹುಳು ಹುಪ್ಪಟೆಗಳನ್ನೂ ಇವರು ಸೆರೆಹಿಡಿದು ವಿಭಿನ್ನ ಬಗೆಯ ಪ್ರಚಾರ ನೀಡುತ್ತಿದ್ದಾರೆ.ಈ ಮೊದಲು ಬಸವಲಿಂಗಯ್ಯ ಅವರ ಅನೇಕ ನಾಟಕಗಳನ್ನು ದಾಖಲಿಸಿದ ಅನುಭವ ಅವರಿಗೆ ಇದೆ. ಮದುಮಗಳ ಮೈಸೂರಿನ ಪ್ರದರ್ಶನದ ವೇಳೆಯೂ  ಪ್ರಚಾರಕ್ಕಾಗಿ ದುಡಿದಿದ್ದರು. ಎಚ್‌ಡಿಟಿವಿ ಗುಣಮಟ್ಟದ ದೃಶ್ಯಗಳನ್ನು ನೀಡುತ್ತಿರುವ ಅವರು ದೃಶ್ಯಗಳ ಸಂಕಲನದ ಕುರಿತಂತೆಯೂ ಮುತುವರ್ಜಿ ವಹಿಸಿದ್ದಾರೆ. ಮತ್ತೊಬ್ಬ ಕಲಾವಿದ ಸುಬ್ರಮಣಿ ಛಾಯಾಚಿತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಕೆಲಸಕ್ಕೆ ಅವರು ಹಣ ಪಡೆಯುತ್ತಿಲ್ಲ ಎನ್ನುವುದು ವಿಶೇಷ.ಮದುಮಗಳಿಗೆ ಡಿಜಿಟಲ್ ಪ್ರಪಂಚ ಹೊಸತೇನೂ ಅಲ್ಲ. ಮೈಸೂರಿನ ಪ್ರದರ್ಶನದ ವೇಳೆ ನಾಟಕದ ಸಿದ್ಧತೆ ಹಾಗೂ ರಂಗರೂಪದ ಡಿವಿಡಿ ಸಿದ್ಧವಾಗಿತ್ತು. ಕೃಪಾಕರ ಸೇನಾನಿ ಅದನ್ನು ನಿದೆರ್ರ್ಶಿಸಿದ್ದರು. ಆಮೇಲೆ ಕೆಲವರು ಅದಕ್ಕೆ ಧನಸಹಾಯ ಮಾಡಿದ್ದರು.ಬೆಂಗಳೂರಿನ ಪ್ರದರ್ಶನವನ್ನೂ  ಹೀಗೆ ಚಿತ್ರೀಕರಿಸುವ ಬಯಕೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಯೂಟ್ಯೂಬ್, ಫೇಸ್‌ಬುಕ್ ಮಾತ್ರವಲ್ಲದೇ ಬ್ಲಾಗ್‌ನಲ್ಲಿಯೂ ಮದುಮಗಳು ಪ್ರತ್ಯಕ್ಷವಾಗಿದ್ದಾಳೆ. ಅಲ್ಲಿ ನಾಟಕ ಪ್ರದರ್ಶನದ ವಿವಿಧ ಘಟ್ಟಗಳನ್ನು ವಿವರಿಸಲಾಗಿದೆ. ಅಂತರ್ಜಾಲದಲ್ಲಿ ಮದುಮಗಳು ಹೀಗೆ ಅಪ್‌ಡೇಟ್ ಆಗುತ್ತಿರುವುದರಿಂದ ಹೊರದೇಶಗಳಲ್ಲಿರುವ ಅನೇಕ ರಂಗಾಸಕ್ತರ ಗಮನವನ್ನೂ ಸೆಳೆದಂತಾಗಿದೆ. ಹಲವಾರು ಪ್ರತಿಕ್ರಿಯೆಗಳು ಹೊರದೇಶದಿಂದಲೂ ಬರುತ್ತಿವೆ. ಬ್ಲಾಗ್‌ನಲ್ಲಿ ವಿವರಣೆ ಬಯಸುವವರು malegalallimadhumagalu.tumblr.com ಸಂಪರ್ಕಿಸಬಹುದು.ಕುವೆಂಪು ಅವರ ಈ ಕಾದಂಬರಿಯಲ್ಲಿ ಮಲೆನಾಡಿನ ಸೀಮೆಗೆ ಸೈಕಲ್ ಬರುವುದು, ಆಧುನಿಕತೆಯ ಗಾಳಿ ಬೀಸುತ್ತಿರುವುದರ ಸಂಕೇತ. ಈಗ ಅದೇ ಮದುಮಗಳು ಇಂಟರ್‌ನೆಟ್ ಸಂಗ ಬಯಸಿದ್ದಾಳೆ. ಇದೂ ಒಂದು ಹೊಸ ರೂಪಕ ಅಲ್ಲವೆ?  ನಾಟಕ ನಡೆಯುವ ಸ್ಥಳದಲ್ಲಿಯೂ ಪ್ರಚಾರ ಕಾರ್ಯ ಬಿರುಸಾಗಿದೆ. ದಿನಪತ್ರಿಕೆಗಳಲ್ಲಿ ನಾಟಕಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಲೇಖನಗಳನ್ನು ಪ್ರಚಾರಕ್ಕೆ ಬಳಸಲಾಗುತ್ತಿದೆ. ಅಲ್ಲದೆ ನಾಟಕದ ಮೇಕಿಂಗ್ ದೃಶ್ಯಗಳನ್ನು ಪರದೆಯ ಮೇಲೆ ತರುವ ಯತ್ನ ನಡೆಯುತ್ತಿದೆ. ನಾಟಕ ಪ್ರದರ್ಶನದ ವೇಳೆ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಫೋಟೊ ವೀಡಿಯೊ ತೆಗೆಯಲು ಅವಕಾಶ ಇರುವುದಿಲ್ಲ.ಆದರೆ ಈ ಸಂಪ್ರದಾಯವನ್ನು ಇಲ್ಲಿ ಮುರಿಯಲಾಗಿದೆ. ಜನರಿಂದ ಜನರಿಗೆ ನಾಟಕ ಹಬ್ಬಬೇಕು ಎನ್ನುವುದು ಇದರ ಹಿಂದಿನ ಕಾಳಜಿ.

ಮದುಮಗಳ ಕುರಿತು ಹೆಚ್ಚಿನ ಮಾಹಿತಿಗೆ ಸುರೇಶ್‌ಕುಮಾರ್ ಅವರನ್ನು ಸಂಪರ್ಕಿಸಿ: 9880282402.

 

ಪ್ರತಿಕ್ರಿಯಿಸಿ (+)