ಗುರುವಾರ , ಮೇ 19, 2022
20 °C

ಇದು ಮಾರುಕಟ್ಟೆ ಬಸ್ ನಿಲ್ದಾಣ: ಮೂಗು ಮುಚ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಮಾರುಕಟ್ಟೆ ಬಸ್ ನಿಲ್ದಾಣ: ಮೂಗು ಮುಚ್ಚಿ

ಬೆಂಗಳೂರು: ಕೃಷ್ಣರಾಜ ಮಾರುಕಟ್ಟೆ ಬಸ್ ನಿಲ್ದಾಣ ಸಾಕಷ್ಟು ಹದಗೆಟ್ಟಿದೆ. ಪ್ರಯಾಣಿಕರು ಬಸ್ ನಿಲ್ದಾಣವನ್ನು ಪ್ರವೇಶಿಸುವ ಮುನ್ನ ಮೂಗು ಮುಚ್ಚಿಕೊಂಡು ಬರುವುದನ್ನು ಮರೆಯುವಂತಿಲ್ಲ. ಕನಿಷ್ಠ ಸೌಲಭ್ಯವಿಲ್ಲದ ಈ ಪ್ರದೇಶ `ಬಸ್ ನಿಲ್ದಾಣ~ದ ಕುರುಹು ಕಾಣದಂತೆ ಹಾಳಾಗಿದೆ. ಕಸದ ರಾಶಿಯಿಂದ ತುಂಬಿರುವ ಈ ಪ್ರದೇಶ ದುರ್ನಾತದ ಬೀಡಾಗಿದೆ.ಬಸ್ ನಿಲ್ದಾಣ ಪ್ರವೇಶಿಸಿದರೆ ಸಾಕು ಮೂತ್ರ, ಕೊಳೆತ ಕಸದ ರಾಶಿಯ ದುರ್ನಾತ ಮೂಗಿಗೆ ಬಡಿಯುವುದಂತೂ ಖಂಡಿತ. ಇದರಿಂದ ಪ್ರಯಾಣಿಕರ ಪರದಾಟ ಹೇಳತೀರದು. ಜತೆಗೆ ವಾಹನ ಚಾಲಕರು ಗಂಟೆಗಟ್ಟಲೆ ವಾಹನದಲ್ಲಿ ಪ್ರಯಾಣಿಕರಿಗಾಗಿ ಕಾಯಲು ಈ `ನಾತ~ ಬಿಡುತ್ತಿಲ್ಲ.ಸಮಸ್ಯೆಗೆ ಕಾರಣ?: ಈ ಎಲ್ಲಾ ಸಮಸ್ಯೆಗೆ ಮುಖ್ಯ ಕಾರಣ, ಕೃಷ್ಣರಾಜ ಮಾರುಕಟ್ಟೆಯಲ್ಲಿ ಕುಂಟುತ್ತಾ ಸಾಗಿರುವ ಸುರಂಗ ಮಾರ್ಗದ ಕಾಮಗಾರಿ. 2006ನೇ ಸಾಲಿನಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಕೆ.ಆರ್.ಮಾರುಕಟ್ಟೆ ಸದಾ ಜನದಟ್ಟಣಿಯಿಂದ ಕೂಡಿದ್ದು, ಮಾರುಕಟ್ಟೆ ಉದ್ದೇಶದಿಂದ ಇಲ್ಲಿಗೆ ಸಾವಿರಾರು ನಾಗರಿಕರು ಆಗಮಿಸುತ್ತಾರೆ. ಕನಕಪುರ, ಮಾಗಡಿ ಹಾಗೂ ಮೈಸೂರು ರಸ್ತೆಗಳಿಗೆ ವಾಹನ ಸಂಪರ್ಕ ಇಲ್ಲಿಂದಲೇ ಇದೆ. ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಿರುವ ಕಾರಣ ಬಿಬಿಎಂಪಿ ಮತ್ತೊಂದು ಪಾದಚಾರಿ ಸುರಂಗ ಮಾರ್ಗಕ್ಕೆ ಮುಂದಾಗಿದೆ.ಸುರಂಗ ಮಾರ್ಗದ ನಿರ್ಮಾಣವನ್ನು ಮಾರುತಿ ಕನ್‌ಸ್ಟ್ರಕ್ಷನ್ ಕಂಪೆನಿಗೆ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಪಾಲಿಕೆಯು 18 ತಿಂಗಳು ಗಡುವು ನೀಡಿತ್ತು. 2007ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ನೀರು ಸರಬರಾಜು ಮತ್ತು ಚರಂಡಿ ಕೊಳವೆಗಳನ್ನು ಸ್ಥಳಾಂತರಿಸಲು ಜಲ ಮಂಡಳಿ ಸುಮಾರು ಒಂದು ವರ್ಷ ಕಾಲಾವಕಾಶ ತೆಗೆದುಕೊಂಡಿದ್ದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು.ನಂತರ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಈ ವೇಳೆ ತೆಗೆಯಲಾಗಿರುವ ಮಣ್ಣನ್ನು ವಿಲೇವಾರಿ ಮಾಡದೆ ಇರುವುದರಿಂದ ದೊಡ್ಡ ಶೌಚಾಲಯವೇ ನಿರ್ಮಾಣವಾಗಿದ್ದು ನಿಲ್ದಾಣವೆಲ್ಲಾ ಗಬ್ಬು ನಾರುತ್ತಿದೆ.ಸುರಂಗ ಮಾರ್ಗದ ಕೆಲಸಕ್ಕೆ ಸ್ಪಲ್ಪ ಪ್ರಮಾಣದ ಮಣ್ಣಿನ ಬಳಕೆ ಅವಶ್ಯಕತೆ ಇದೆ. ಆದ್ದರಿಂದ ವಿಲೇವಾರಿ ಮಾಡಿಲ್ಲ ಎನ್ನುತ್ತಾರೆ ಪಾಲಿಕೆ ಎಂಜಿನಿಯರ್‌ಗಳು. ಆದರೆ, ಅಗತ್ಯ ಪ್ರಮಾಣದಷ್ಟು ಮಾತ್ರ ಶೇಖರಿಸಿಟ್ಟುಕೊಂಡು ಉಳಿದ ಮಣ್ಣನ್ನು ವಿಲೇವಾರಿ ಮಾಡುವ ಗೋಜಿಗೆ ಗುತ್ತಿಗೆದಾರರು ಹೋಗಿಲ್ಲದಿರುವುದೇ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.ಮಳೆ ಬಂದರೆ ಅಧೋಗತಿ: ಮಳೆ ಬಂದರೆ ಇಲ್ಲಿನ ನಿಲ್ದಾಣ, ರಸ್ತೆಗಳ ಮೇಲೆ ಒಂದೆಡೆ ಮೂತ್ರದ ಪ್ರವಾಹ ಹರಿದರೆ, ಮತ್ತೊಂದೆಡೆ ರಸ್ತೆಯೆಲ್ಲಾ ರಾಡಿಯಾಗಿ ಕಾಲಿಡಲೂ ತೊಂದರೆ.ವಾರಕ್ಕೊಮ್ಮೆ ತ್ಯಾಜ್ಯ ವಿಲೇವಾರಿ: ಮಾರುಕಟ್ಟೆ ಪ್ರದೇಶವಾದ್ದರಿಂದ ಇಲ್ಲಿ ಹೆಚ್ಚು ತ್ಯಾಜ್ಯ ಶೇಖರಣೆಯಾಗುತ್ತದೆ. ಮಾರುಕಟ್ಟೆಯಿಂದ ಪುರಭವನ, ಚಾಮರಾಜಪೇಟೆ ಹಾಗೂ ಅವೆನ್ಯೂ ಮಾರ್ಗದ ರಸ್ತೆಗಳಲ್ಲಿ ಕಸ ಕೊಳೆತು ನಾರುತ್ತಿದ್ದರೂ ನೋಡುವವರೇ ಇಲ್ಲ. ಪಾಲಿಕೆ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಕಾಮಗಾರಿ ನಡೆಯುತ್ತಿರುವ ಕಾರಣ ಈ ರಸ್ತೆಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ನಿರ್ಲಕ್ಷಿಸಲಾಗಿದೆ. ಪರಿಣಾಮ ದುರ್ನಾತ ಬಸ್ ನಿಲ್ದಾಣದವರೆಗೂ ಬೀರುತ್ತಿದೆ.ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಕಾರಣ ಪಾಲಿಕೆಯು ಗುತ್ತಿಗೆದಾರರಿಗೆ ದಂಡ ವಿಧಿಸಿದೆ. ಈಗ ಒಂದೆಡೆ ಮಾತ್ರ ಕಾಮಗಾರಿ ಮುಗಿದಿದ್ದು ಮೊದಲಿದ್ದ ಪಾದಚಾರಿ ಸುರಂಗ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದು ಪಾಲಿಕೆ ಎಂಜಿನಿಯರ್‌ಗಳ ಉತ್ತರ. ಆದರೆ, ಇಷ್ಟೆಲ್ಲಾ ಸಮಸ್ಯೆಗಳಿಗೆ ಪಾಲಿಕೆಯೇ ಹೊಣೆ ಎಂದು ಸ್ಥಳೀಯ ವ್ಯಾಪಾರಿಗಳು ದೂರುತ್ತಾರೆ.ಗುತ್ತಿಗೆದಾರರ ನಿರ್ಲಕ್ಷ್ಯ

ಈಗಾಗಲೇ ಗುತ್ತಿಗೆದಾರರಿಗೆ ದಂಡ ವಿಧಿಸಿದ್ದು ನೋಟಿಸ್ ಸಹ ನೀಡಲಾಗಿದೆ.

ಕಂಪೆನಿಯು ಸರಿಯಾಗಿ ಕಾರ್ಯ ನಿರ್ವಹಿಸದಿರುವುದೇ ವಿಳಂಬಕ್ಕೆ ಕಾರಣ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ.

-ಸೋಮಶೇಖರ್, ಬಿಬಿಎಂಪಿ ಮುಖ್ಯ ಎಂಜಿನಿಯರ್ (ಬೃಹತ್ ರಸ್ತೆ ವಿಭಾಗ)ಅದೇ ಚಾಳಿ


ಇನ್ನೂ 5 ವರ್ಷಗಳಾದರೂ ಕಾಮಗಾರಿ ಮುಗಿಯುವ ಲಕ್ಷಣಗಳಿಲ್ಲ. ನಿತ್ಯ ತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ತ್ಯಾಜ್ಯ ಕೊಳೆತು ನಾರುತ್ತಿದೆ.ವಾರಕ್ಕೊಮ್ಮೆ ಮಾತ್ರ ತ್ಯಾಜ್ಯ ಸಾಗಿಸುತ್ತಾರೆ. ಗ್ರಾಹಕರು ದುರ್ನಾತದಿಂದ ಹೋಟೆಲ್‌ಗಳಿಗೆ ಬರಲು ಮುಜುಗರ ವ್ಯಕ್ತಪಡಿಸುತ್ತಾರೆ. ಇದರಿಂದ ರೋಗ ಬರುವುದು ಖಂಡಿತ. ಅಧಿಕಾರಿಗಳು, ಪಾಲಿಕೆ ಸದಸ್ಯರು ಬಂದಾಗ ಮಾತ್ರ ಸ್ವಚ್ಛಗೊಳಿಸುತ್ತಾರೆ. ನಂತರ ಅದೇ ಚಾಳಿ ಮುಂದುವರಿಸುತ್ತಾರೆ.

- ವಸೀಂ, ಕ್ಯಾಂಟೀನ್ ಉದ್ಯಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.