ಭಾನುವಾರ, ಜನವರಿ 26, 2020
28 °C

ಇದು ಮೈಸೂರು ರಂಗಾಯಣದ ಕಾಪಿ ಅಲ್ಲ...

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

ಸಂದರ್ಶನ

ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯುತ್ತಮ ನಟರಲ್ಲೊಬ್ಬರು ಏಣಗಿ ನಟರಾಜ. `ವಿಗಡ ವಿಕ್ರಮರಾಯ~, `ಮ್ಯಾಕ್‌ಬೆತ್~, `ನಾ ತುಕಾರಾಮ ಅಲ್ಲ~, `ನಟಸಾರ್ವಭೌಮ~ ನಾಟಕಗಳಲ್ಲಿ ಅವರ ಅಭಿನಯ ಅವರಿಗೇ ಸಾಟಿ. `ಹಳ್ಳಿ ಹುಡುಗಿ~, `ಹಣ್ಣೆಲೆ ಹಸಿರೆಲೆ~, `ತದ್ರೂಪಿ~ ಮುಂತಾದ ಹತ್ತಾರು ನಾಟಕಗಳನ್ನು ನಿರ್ದೇಶಿಸಿರುವ ನಟರಾಜ; ಕೇರಳದ ತ್ರಿಶೂರು, ಮೈಸೂರಿನ ರಂಗಾಯಣ, ನೀನಾಸಂ ರಂಗಶಾಲೆ ವಿದ್ಯಾರ್ಥಿಯಾಗಿ - ಶಿಕ್ಷಕರಾಗಿ ದುಡಿದಿದ್ದಾರೆ.`ಕಿನ್ನರಿ~ ಮೆಗಾ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿ ನಿರ್ದೇಶಿಸಿದ್ದಾರೆ, ನಟಿಸಿದ್ದಾರೆ. ಕಲಾತ್ಮಕ ಚಲನಚಿತ್ರಗಳಲ್ಲೂ ನಟಿಸಿರುವ ಅವರು ರಂಗಾಯಣದ ರಂಗ ಸಮಾಜ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ಕರ್ನಾಟಕ ಸರ್ಕಾರ ಧಾರವಾಡದಲ್ಲಿ ಸ್ಥಾಪಿಸಿರುವ ರಂಗಾಯಣದ ಮೊದಲ ನಿರ್ದೇಶಕರಾಗಿ ಇತ್ತೀಚೆಗೆ ನೇಮಕವಾಗಿರುವ ಅವರಿಗೆ ಅದನ್ನು ಕಟ್ಟಿ ಬೆಳೆಸುವ ಗುರುತರ ಹೊಣೆ ಹೆಗಲಿಗೇರಿದೆ.

ನೀವು ಮೂಲತಃ ನಟ. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವ ಆಡಳಿತಾತ್ಮಕ, ಸಂಘಟನಾತ್ಮಕ ಕೆಲಸವನ್ನು ಹೇಗೆ  ನಿಭಾಯಿಸುತ್ತೀರಿ?

ಹೊಂದಿಕೊಳ್ಳಾಕತ್ತೀನಿ. ಅಷ್ಟಕ್ಕೂ ಈ ಕಟ್ಟುವ ಕೆಲಸ ನನಗ ಹೊಸದಲ್ಲ. ನಟ ಆದ್ರ ಏನಾತು? ಇದನ್ನೆಲ್ಲ ಮಾಡಾಬೇಕಲ್ಲ. ಮಾಡ್ತೀನಿ ಅನ್ನೂ ಧೈರ್ಯ ಐತಿ. ಜೀವನ- ನಾಟಕ ಬ್ಯಾರೆ ಬ್ಯಾರೆ ಅಲ್ಲಲ್ಲ? ನಾನು ರಂಗಭೂಮಿಯವ ಆಗಿರೂದರಿಂದ ಮಾಡೇ ಮಾಡತೀವಿ ಅನ್ನೂ ಕೆಟ್ಟ ಹಟ, ಧೈರ್ಯ ಇರತೈತಿ.

ಹೊಸ ರಂಗಾಯಣದ ನಿಮ್ಮ ಕನಸುಗಳೇನು?

ಇಲ್ಲಿ ಸೃಜನಶೀಲತೆ ಮಾತ್ರ ಕೆಲಸಕ್ಕ ಬರೂದಿಲ್ಲ. ಗೌಂಡಿ ಕೆಲಸ ಮಾಡಬೇಕು. ಸದ್ಯಕ್ಕ ನಮಗ ಬಸವರಾಜ ರಾಜಗುರು ಬಯಲು ರಂಗಮಂದಿರದಾಗ ಜಾಗ ಕೊಟ್ಟಾರ. ಹೊಸ ರಂಗಾಯಣಕ್ಕ ಸ್ವಂತದ ಜಾಗ ಬೇಕು. ಸುಸಜ್ಜಿತ ರಂಗಪಾರ್ಟಿ, ರಂಗಮಂದಿರ ಬೇಕು. ಸದ್ಯಕ್ಕ 15 ಮಂದಿ ನೇಮಕ ಮಾಡಿಕೊಳ್ಳಾಕ ಸರ್ಕಾರ ಅನುಮತಿ ನೀಡೈತಿ. ತುರ್ತಾಗಿ ಬೇಕಾಗಿದ್ದ 6 ಮಂದಿ ನೇಮಕ ಮಾಡಿಕೊಂಡೇನಿ. ಇನ್ನು 9 ಮಂದಿ ನೇಮಕಕ್ಕ ಸಮಿತಿ ಮಾಡೀನಿ.ಇನ್ನು ಎಂತಾ ನಾಟಕ ಮಾಡಬೇಕು? ಏನೇನು ಕಾರ್ಯಕ್ರಮ ಮಾಡಬಹುದು ಅನ್ನೂದರಾಗ ನಮ್ಮ ಸೃಜನಶೀಲತೆ ಕೆಲಸ ಮಾಡತೈತಿ.

ಎಂಥಾ ನಾಟಕ ಮಾಡ್ತೀರಿ? ಏನೇನು ಕಾರ್ಯಕ್ರಮ ಹಮ್ಮಿಕೊಂಡೀರಿ?

ಅಂದಂಗ ಇದು ಮೈಸೂರು ರಂಗಾಯಣದ ಕಾಪಿ ಅಲ್ಲ. ನನ್ನ ಮಣ್ಣಿಗೆ, ನನ್ನ ಊರಿಗೆ- ಅಂದರ ಉತ್ತರ ಕರ್ನಾಟಕದ ಈ ಭಾಗಕ್ಕ ಎಂಥಾ ನಾಟಕ ಮಾಡಬೇಕು, ಇಲ್ಲಿ ರಂಗಕರ್ಮಿಗಳು ಏನು ಬಯಸ್ತಾರ.. ಅವರ ಬಯಸೂದು ಅಷ್ಟ ಅಲ್ಲ, ಅವರಿಗೆ ಏನು ಕಾರ್ಯಕ್ರಮದ ಅವಶ್ಯಕತಾ ಐತಿ- ಅದು ಮುಖ್ಯ.

ಉತ್ತರ ಕರ್ನಾಟಕದ ಸ್ಪಂದನ ನಿಮ್ಮ ಪ್ರಯೋಗಗಳಲ್ಲಿ ಇರತಾವು...

ನನ್ನ ಕಾರ್ಯಕ್ಷೇತ್ರ ಎಲ್ಲೆವರೆಗೆ ಅಂತಾ ಇನ್ನೂ ಗುರುತಿಸಿಕೊಟ್ಟಿಲ್ಲ!

-ಪೂರಾ ಉತ್ತರ ಕರ್ನಾಟಕ ಅಂದ್ರ ಬಾಳ ದೊಡ್ಡದಾತು.  ಗುಲ್ಬರ್ಗಕ್ಕೂ ಒಂದು ಪ್ರತ್ಯೇಕ ರಂಗಾಯಣ ಬೇಕಿತ್ತಲ್ಲ?

ಹೌದು. ಗುಲ್ಬರ್ಗಕ್ಕ ಅವಶ್ಯ ಬೇಕಿತ್ತು. ಬಿ.ವಿ.ಕಾರಂತರು ನಾಲ್ಕು ರಂಗಾಯಣದ ಪರ ಇದ್ದರು. ಅಂದ್ರ ಬರೀ ನಾಲ್ಕು ಭೂಭಾಗ ಮಾತ್ರ ಅಲ್ಲ, ಕರ್ನಾಟಕದೊಳಗ ನಾಲ್ಕು ಪ್ರತ್ಯೇಕ ಸಂಸ್ಕೃತಿ ಅದಾವು ಅನ್ನೂ ಸ್ಪಷ್ಟ ತಿಳಿವಳಿಕೆ ಅವರಿಗೆ ಇತ್ತು. ಹಳೇ ಮೈಸೂರು, ಕರಾವಳಿ, ಗುಲ್ಬರ್ಗ, ಧಾರವಾಡ ವಿಭಾಗಕ್ಕ ನಾಲ್ಕು ಬ್ಯಾರೆ ಬ್ಯಾರೇನ ರಂಗಾಯಣ ಬೇಕಿತ್ತು. ಆದರ ಈಗ ಹಳೇ ಮೈಸೂರು ಭಾಗಕ್ಕ ಎರಡು ಆಗಿಬಿಟ್ಟವು; ಒಂದು ಮೈಸೂರು, ಮತ್ತೊಂದು ಶಿವಮೊಗ್ಗ.

-ಎಲ್ಲವೂ ಪ್ರತ್ಯೇಕ ಸ್ವಾಯತ್ತತೆ ಹೊಂದ್ಯಾವಲ್ಲ?

ಹೌದು. ನಾನು ಧಾರವಾಡದ ಮ್ಯಾನೇಜರ್ ಅಥವಾ ಸಂಘಟಕ ಅಲ್ಲ, ನಿರ್ದೇಶಕ ಇದ್ದೀನಿ. ಧಾರವಾಡ ಆಗಲಿ, ಶಿವಮೊಗ್ಗ ಆಗಲಿ- ಮೈಸೂರು ರಂಗಾಯಣದ ಘಟಕ ಅಲ್ಲ.

-ಅದಕ್ಕಂತನ ಧಾರವಾಡಕ್ಕ ಒಂದು ಕೋಟಿ ರೂ. ಅನುದಾನ

    ಪ್ರಕಟಿಸಿತ್ತಲ್ಲ?


ಅದರಾಗ 20ಲಕ್ಷ ಮಾತ್ರ ನಮಗ ಬಂದೈತಿ. 80 ಲಕ್ಷ ಮೈಸೂರೊಳಗ ಐತಿ.

-ನಿಮ್ಮ ರಂಗಾಯಣದ ರೊಕ್ಕ ನೀವು ಕೇಳಲಿಲ್ಲ?

ರಂಗಭೂಮಿಯವರು ನಾವೆಲ್ಲಾ ಒಂದೇ ಅದೀವಿ. ನಮ್ಮ ಮಧ್ಯೆ ಸಹಕಾರ, ಸಹಮತ ಬೇಕು. ನಾ ಯಾಕ ಮೈಸೂರಿನವರನ್ನ ಕೇಳಲಿ? ಸರ್ಕಾರ ಕೇಳತೀನಿ.

-ಸದ್ಯ ಏನು ಕಾರ್ಯಕ್ರಮ ನಡೆಸೀರಿ?

ಜಿಲ್ಲಾ ನಾಟಕೋತ್ಸವ ಮಾಡಬೇಕು. ಆಯಾ ಜಿಲ್ಲೆ ರಂಗಕರ್ಮಿಗಳನ್ನು, ನಾಟಕಕಾರರನ್ನು ಒಳಗೊಳ್ಳಬೇಕು. ರಂಗಶಿಕ್ಷಣ ಕೇಂದ್ರಗಳು ಹಳೇ ಮೈಸೂರು ಭಾಗಕ್ಕ ಹೆಚ್ಚು ಸೀಮಿತ ಆಗ್ಯಾವು. ಅಗದೀ ಅವಶ್ಯವಾಗಿ ಧಾರವಾಡ ಅಥವಾ ಬೆಳಗಾವಿಗೆ ಒಂದು ರಂಗಶಿಕ್ಷಣ ಕೇಂದ್ರ ಆಗಬೇಕು. ಮಹಾರಾಷ್ಟ್ರದೊಳಗ ಶಿವಾಜಿ ಕುರಿತು `ಜಾಣತಾರಾಜ~ ಅನ್ನೂ ಬೃಹತ್ ನಾಟಕ ಮಾಡತಾರ. ಅದು ರಂಗಮಂದಿರದಾಗ ಪ್ರಯೋಗ ಆಗೂದಿಲ್ಲ, ಬಯಲೊಳಗ ಆಗತೈತಿ. ಜೀವಂತ ಆನಿ, ಕುದುರಿ ರಂಗದ ಮ್ಯಾಲ ತರತಾರ. `ಕಿತ್ತೂರು ಚೆನ್ನಮ್ಮ~ನ ಬಗ್ಗೆ ಇಲ್ಲಿ ಅಂತಾದೊಂದು ಪ್ರಯೋಗ ಮಾಡಬೇಕು ಅಂತ ಕನಸು ಐತಿ. ಮಕ್ಕಳ ನಾಟಕೋತ್ಸವ, ಜಾನಪದ ನಾಟಕೋತ್ಸವ, ವೃತ್ತಿರಂಗಭೂಮಿಯ ಅತಿರೇಕಗಳನ್ನ ಕೈಬಿಟ್ಟ ನಾಟಕೋತ್ಸವಗಳು ಆಗಬೇಕು.

ನಿಮ್ಮ ತಂದೆ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ  ಸಂಘ ಮುಂದುವರಿಸೂ ಪ್ರಯತ್ನ ಮಾಡಲಿಲ್ಲ?

ವೃತ್ತಿ ರಂಗಭೂಮಿ ನಾಟಕಗಳನ್ನು, ಅಪ್ಪ, ಅವ್ವ (ಏಣಗಿ ಲಕ್ಷ್ಮೀಬಾಯಿ) ಅವರಂತಹ ದಿಗ್ಗಜರ ಅಭಿನಯವನ್ನು ನೋಡ್ತಾ ಬೆಳೆದ ನಾನು ಆಧುನಿಕ ರಂಗ ಶಿಕ್ಷಣ ಪಡೆದು ಹವ್ಯಾಸಿ ರಂಗಭೂಮಿ ನಟ ಆದೆ. ಆದರೂ ಅಪ್ಪನ ಕಂಪನಿ ಮುಂದುವರಿಸೂ ಪ್ರಯತ್ನ ಕೆಲವು ದಿನ ಮಾಡಿದೆ. ಲುಕ್ಸಾನು ಆತು. ನಡಸೂದ ಬ್ಯಾಡ ಅನಿಸ್ತು.

ನಟ ಆಗಿ ಇನ್ನೂ ಪ್ರಸಿದ್ಧಿಗೆ ಬರಬೇಕಿತ್ತು ಅನಿಸಿಲ್ಲ- ನಿಮಗೆ?

ಅವಕಾಶ ಬಂದಾಂಗ ಬಳಸಿಕೊಳ್ಳಬೇಕಾಗತೈತಿ. ನನಗ ಸಿಕ್ಕ ಅವಕಾಶಗಳೊಳಗ ನನ್ನ ಪ್ರಾಮಾಣಿಕ ಪ್ರಯತ್ನ ಮಾಡೀನಿ.

 

 

 

ಪ್ರತಿಕ್ರಿಯಿಸಿ (+)