ಇದು ವಿಜಾಪುರದ ‘ಹಸಿರು ಯುವ ಪಡೆ’

ವಿಜಾಪುರ: ‘ಐತಿಹಾಸಿಕ ವಿಜಾಪುರ ನಗರದ ಸಂಪೂರ್ಣ ಹಸರೀಕರಣ ಮಾಡುವ ಗುರಿಯೊಂದಿಗೆ ಕೆಲಸ ಆರಂಭಿಸಿದ್ದೇವೆ. ನಮ್ಮಿಂದ ಇದು ಸಾಧ್ಯವೇ? ಎಂಬ ಹಿಂಜರಿಕೆ, ನಿರಾಶೆ ಎಂಬುದಿಲ್ಲ. ವರ್ಷಗಳು ಉರುಳಿದರೂ ಸರಿ. ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ...’
ಹಸಿರು ಹೊದಿಕೆಯ ಹೊಂಗನಸು ಹೊತ್ತ ಆ ‘ಹಸಿರು ಯುವ ಪಡೆ’ಯ ವಿದ್ಯಾರ್ಥಿಗಳು ಹೀಗೆ ಹೇಳುತ್ತಲೇ ಹೋದರು. ಅವರಲ್ಲಿ ಡಾಂಭಿಕತೆ ಇರಲಿಲ್ಲ. ಸಾಧಿಸುವ ಛಲ ಇತ್ತು. ಹೊಸ ಸಲಹೆಗಳನ್ನು ಸ್ವೀಕರಿಸಿ, ಸಮಾಜ ಸುಧಾರಣೆಯ ಆ ಮಾರ್ಗದಲ್ಲಿ ಮುನ್ನಡೆಯಬೇಕು ಎಂಬ ಉಮೇದು ಎದ್ದು ಕಾಣುತ್ತಿತ್ತು.
ಎಂಜಿನಿಯರಿಂಗ್, ವೈದ್ಯಕೀಯ, ಬಿಬಿಎ, ಡಿಪ್ಲೊಮಾ ಮತ್ತಿತರ ವೃತ್ತಿಪರ ಕೋರ್ಸ್ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿಜಾಪುರ ನಗರದ ಸಮಾನ ಮನಸ್ಕ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸೇರಿ ‘ಗ್ರೋವ್ ಗ್ರೀನ್’ ಎಂಬ ಸಂಘಟನೆ ಕಟ್ಟಿಕೊಂಡಿದ್ದಾರೆ. ‘ಹಸಿರಿನ ಬಗ್ಗೆ ಚಿಂತಿಸಿ, ಹಸಿರಿನ ಮಧ್ಯೆ ಬದುಕಿ, ಹಸಿರು ಉಳಿಸಿ–ಬೆಳೆಸಿ’ ಎಂಬುದು ಈ ಸಂಘಟನೆಯ ಧ್ಯೇಯ.
ಖರ್ಚಿಗೆ ಕೊಟ್ಟಿದ್ದು ಸಮಾಜ ಸೇವೆಗೆ:
ವಿಜಾಪುರದ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ 2009ರಲ್ಲಿ 10ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳೆಲ್ಲ ಸೇರಿ ಈ ಸಂಘಟನೆ ರಚಿಸಿಕೊಂಡಿದ್ದಾರೆ. ಆರಂಭದಲ್ಲಿ 11 ಜನರಿದ್ದ ಈ ಯುವ ಪಡೆಯ ಸದಸ್ಯರ ಸಂಖ್ಯೆ ಈಗ 40 ದಾಟಿದೆ.
‘ಸಮಾಜ ಸೇವೆಯ ತುಡಿತ ಇತ್ತು. ಹಸಿರಿದ್ದರೆ ಉಸಿರು. ಹೀಗಾಗಿ ಮೊದಲು ಗಿಡ–ಮರ ಬೆಳೆಸೋಣ ಎಂಬ ನಿರ್ಧಾರಕ್ಕೆ ಬಂದೆವು. ಪಾಲಕರು ನಮ್ಮ ಖರ್ಚಿಗೆ ನೀಡುತ್ತಿದ್ದ ಪಾಕೇಟ್ ಮನಿಯನ್ನೇ ಸೇರಿಸಿ ಈ ಕೆಲಸ ಆರಂಭಿಸಿದೆವು. ಈಗಲೂ ಅಷ್ಟೇ ಪ್ರತಿ ವರ್ಷ ನಾವು ತಲಾ ಒಂದೊಂದು ಸಾವಿರ ಹಣ ಸೇರಿಸುತ್ತೇವೆ. ಹುಟ್ಟು ಹಬ್ಬಕ್ಕೆ ಪಾರ್ಟಿ ಮಾಡುವುದಿಲ್ಲ. ಆ ಹಣವನ್ನೂ ಈ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದೇವೆ’ ಎಂದರು ಈ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ ನಾಡಗೌಡ, ಕಾರ್ಯದರ್ಶಿ ಶ್ರೀಕಾಂತ ಜಾಧವ, ಸದಸ್ಯ ರೋಹಿತ್ ದುದಗಿ.
‘ಶಿವಯೋಗಿ ನಗರ, ದಾನೇಶ್ವರಿ ನಗರ, ಶಾಂತಿನಿಕೇತನ ಶಾಲೆ ಹಿಂಭಾಗ, ಚೇತನಾ ಬಿಬಿಎ ಕಾಲೇಜು ಕ್ಯಾಂಪಸ್ನಲ್ಲಿ ಗುಂಡಿ ಅಗೆದು ಸಸಿ ನೆಟ್ಟಿದ್ದೇವೆ. ನಿಸರ್ಗದ ಮಹತ್ವವನ್ನು ತಿಳಿಸಲು ಮಕ್ಕಳಿಗೆ ಚಿತ್ರಕಲಾ ಶಿಬಿರ ಏರ್ಪಡಿಸಿದ್ದೆವು. 800 ಮಕ್ಕಳು ಪಾಲ್ಗೊಂಡಿದ್ದರು. ಸಿದ್ಧೇಶ್ವರ ಸ್ವಾಮೀಜಿ ಅವರು ಸ್ವತಃ ಚಿತ್ರ ಬಿಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ್ದರು. ಸಿದ್ಧೇಶ್ವರ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನಿರಂತರವಾಗಿ ಪ್ರೇರಣೆ ನೀಡುತ್ತಿದ್ದಾರೆ’ ಎಂದು ಮೆಹುಲ್ ಜೈನ್, ಅಜಯ್ ಜಾಧವ, ಸಂಜಯ ಸಂಖ, ಸಿದ್ದನಗೌಡ ದೊಡಮನಿ ಸ್ಮರಿಸಿದರು.
‘ಆರಂಭದಲ್ಲಿ ಈ ಚಿಂತನೆಯನ್ನು ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅರವಿಂದ ಪಾಟೀಲ ಅವರ ಬಳಿ ಹೇಳಿಕೊಂಡಾಗ ಅವರು ತಕ್ಷಣವೇ ₨5,001 ನೀಡಿ, ಕೆಲಸ ಆರಂಭಿಸಿ ಎಂದರು. ನಗರದ ಪ್ರಮುಖ ವರ್ತಕರು ಸಹ ನಮ್ಮ ಸೇವಾ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದಾರೆ. ‘ವನವಾಸ್–14’ಕ್ಕೆ ಸಚಿವ ಎಂ.ಬಿ. ಪಾಟೀಲ ₨50 ಸಾವಿರ ನೆರವು ನೀಡಿದ್ದಾರೆ’ ಎಂದು ಗಿರೀಶ್ ನಗರಗುಂದ, ಅರವಿಂದ ಹಿಪ್ಪರಗಿ, ನಿಖಿಲ್ ಝಳಕಿ, ದರ್ಶನ ಕೋಕರೆ, ಸಂತೋಷ ಬಿರಾದಾರ ಹೇಳಿದರು.
‘ಎರಡು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, ಸಂಘವನ್ನು ನೋಂದಣಿ ಮಾಡಿಸಿದ್ದೇವೆ. ನಮ್ಮಲ್ಲಿ ಒಂದಿಬ್ಬರು ಹುಬ್ಬಳ್ಳಿ, ಬೆಂಗಳೂರುಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜುಗಳ ಬಿಡುವಿನ ಅವಧಿಯಲ್ಲಿ ಎಲ್ಲರೂ ಒಂದೆಡೆ ಸೇರಿ ಚರ್ಚಿಸಿ ಕೆಲಸ ಮಾಡುತ್ತೇವೆ. ವ್ಯವಹಾರ ಪಾರದರ್ಶಕ. ಎಸ್ಎಂಎಸ್ ಮೂಲಕ ಖರ್ಚಿನ ಮಾಹಿತಿ ರವಾನೆಯಾಗುತ್ತದೆ. ನಮ್ಮ ಪಾಲಕರೂ ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮದೇ ಆದ ವೆಬ್ಸೈಟ್ ಸಹ ಆರಂಭಿಸಿದ್ದೇವೆ’ ಎಂಬುದು ಶ್ವೇತಾ ನಾಡಗೌಡ, ಸುಶ್ಮಿತಾ ಮನಗೂಳಿ, ವಿಜಯಲಕ್ಷ್ಮಿ ಪಾಟೀಲ, ಅರ್ಚನಾ ಸೊನ್ನಗಿ, ಅಮೃತಾ ಗೊಳಸಂಗಿ, ತೇಜಸ್ವಿನಿ ಗೋಸಾವಿ ಅವರ ವಿವರಣೆ.
‘ವನವಾಸ್’ ಉತ್ಸವ
ಗ್ರೋವ್ ಗ್ರೀನ್ ಸಂಸ್ಥೆಯಿಂದ ಫೆಬ್ರುವರಿ 8 ಮತ್ತು 9ರಂದು ವಿಜಾಪುರದಲ್ಲಿ ‘ವನವಾಸ್–14’ ಎಂಬ ರಾಜ್ಯಮಟ್ಟದ ಮ್ಯಾನೇಜ್ಮೆಂಟ್ ಉತ್ಸವ ಏರ್ಪಡಿಸಲಾಗಿದೆ. ಪರಿಸರ ಸಂಬಂಧಿ ನಾನಾ ಚಟುವಟಿಕೆಗಳು ನಡೆಯಲಿದ್ದು, ಉತ್ತರ ಕರ್ನಾಟಕದ ಎಲ್ಲ ಕಾಲೇಜುಗಳನ್ನು ಆಹ್ವಾನಿಸಲಾಗಿದೆ. ಈ ಉತ್ಸವದ ಮಾಹಿತಿಗೆ ಅರವಿಂದ ಹಿಪ್ಪರಗಿ (ಮೊ. 8971915520), ರೋಹಿತ್ ದುದಗಿ (ಮೊ.9591903927) ಅವರನ್ನು ಸಂಪರ್ಕಿಸಬಹುದು.
ನೀವೂ ಕೈಜೋಡಿಸಿ
ಸಮಾನ ಮನಸ್ಕ ವಿದ್ಯಾರ್ಥಿಗಳು ನಮ್ಮೊಂದಿಗೆ ಸೇರಬಹುದು. ಒಂದೊಮ್ಮೆ ನಮ್ಮ ಸಂಘಟನೆಯಲ್ಲಿ ಬರಲು ಸಾಧ್ಯವಿಲ್ಲ ಎಂದಾದರೆ ನಿಮ್ಮ ಪ್ರತಿ ವರ್ಷದ ಜನ್ಮದಿನದಂದು ಕನಿಷ್ಠ ಒಂದು ಸಸಿಯನ್ನಾದೂ ನೆಟ್ಟು ಬೆಳೆಸಿ.
ಮಾಹಿತಿಗೆ– ಚಂದ್ರಶೇಖರ ನಾಡಗೌಡ, ಮೊ. 7411677079, ಶ್ರೀಕಾಂತ ಜಾಧವ ಮೊ.7795411165. ವೆಬ್ಸೈಟ್ www.growgreenbijapur.org
– ಗ್ರೋವ್ ಗ್ರೀನ್ಟೀಮ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.