ಶನಿವಾರ, ಡಿಸೆಂಬರ್ 7, 2019
16 °C

ಇದು ಶ್ವಾನಗಳ ಸಾಮ್ರಾಜ್ಯ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಶ್ವಾನಗಳ ಸಾಮ್ರಾಜ್ಯ...!

ಮಹದೇವಪುರ:  ಕ್ಷೇತ್ರದಲ್ಲಿ ಈಚೆಗೆ ಏಕಾಏಕಿ ಬೀದಿ ನಾಯಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಅಕ್ಷರಶಃ ಶ್ವಾನಗಳ ಸಾಮ್ರಾಜ್ಯ. ರಸ್ತೆಗಳಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚಾಗಿವೆ.ಸಂಜೆ ವೇಳೆ ಕಂಡ ಕಂಡವರ ಮೈ ಮೇಲೆ ಎರಗಿ ಕಚ್ಚಿ ಓಡಿ ಹೋಗುವ ಬೀದಿ ನಾಯಿಗಳಿಂದಾಗಿ ಜನರು ಭಯದಿಂದ ಓಡಾಡುವಂತಾಗಿದೆ.  ವರ್ತೂರು ವಾರ್ಡ್, ಹಗದೂರು ಮತ್ತು ಗರುಡಾಚಾರ್ಯಪಾಳ್ಯ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಬಿಬಿಎಂಪಿ ಆರೋಗ್ಯ ಇಲಾಖೆಯೇ ಪರೋಕ್ಷ ಕಾರಣ ಎಂದು ಜನರು ದೂರುತ್ತಾರೆ. ಬಿಬಿಎಂಪಿ ಕಾರ್ಮಿಕರು ಬೇರೆ ವಾರ್ಡ್‌ಗಳಲ್ಲಿ ಹಿಡಿದು ಶಸ್ತ್ರಚಿಕಿತ್ಸೆ ಮಾಡಿಸಿದಂತಹ ನೂರಾರು ಬೀದಿ ನಾಯಿಗಳನ್ನು ವಾಹನಗಳಲ್ಲಿ ತುಂಬಿಕೊಂಡು ಬಂದು ರಾತ್ರಿ ವೇಳೆ ಇಲ್ಲಿ ಬಿಟ್ಟು ಹೋಗುತ್ತಾರೆ. ಹಾಗಾಗಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಜನತೆಗೆ ಭಾರಿ ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.ರಸ್ತೆಗಳ ಅಕ್ಕಪಕ್ಕದ ಮಾಂಸದ ಅಂಗಡಿಗಳ ಮಾಲೀಕರು ಅಳಿದುಳಿದಿದ್ದನ್ನು ರಸ್ತೆ ಪಕ್ಕದ ಚರಂಡಿಗಳಲ್ಲಿ ಸುರಿಯುತ್ತಿರುವುದು ಇದಕ್ಕೆ ಮತ್ತೊಂದು ಕಾರಣ. ಇದರಿಂದಲೂ ಬೀದಿ ನಾಯಿಗಳು ಜನರ ಮೇಲೆ ಎರಗುತ್ತಿವೆ.ಇವುಗಳ ಹತೋಟಿಗೆ ಬಿಬಿಎಂಪಿ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ಬೇರೆ ಪ್ರದೇಶದ ಬೀದಿ ನಾಯಿಗಳನ್ನು ಮಹದೇವಪುರದಲ್ಲಿ ತಂದು ಬಿಡುವುದನ್ನು ಮಹಾನಗರ ಪಾಲಿಕೆ ಕೂಡಲೇ ನಿಲ್ಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಇಲ್ಲದಿದ್ದಲ್ಲಿ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)