ಶನಿವಾರ, ಮಾರ್ಚ್ 6, 2021
19 °C

ಇದು ಸ್ಟ್ರಕ್ಚರ್ಡ್‌ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಸ್ಟ್ರಕ್ಚರ್ಡ್‌ ನೀರು!

‘ಕಳೆದ ವರ್ಷ ಅಜಿತ್‌ ಅವರು ನಮ್ಮ ಹೊಲದ ಹತ್ತಿರ ಬಂದು ‘ಸ್ಟ್ರಕ್ಚರ್ಡ್‌ ವಾಟರ್‌’ ಬಗ್ಗೆ ವಿವರಿಸಿದರು. ನನಗೆ ಇದರ ಬಗ್ಗೆ ಏನೂ ವಿವರ ಗೊತ್ತಿರಲಿಲ್ಲ. ಹಾಗಾಗಿ ಒಮ್ಮೆ ಡೆಮೊ ಕೊಡಿ, ನೋಡೋಣ’ ಎಂದೆ. ‘ಸರಿ’ ಎಂದ ಅವರು ‘ಇ ವಾಟರ್ ಹಾರ್ಮೊನೈಸರ್‌’ ಉಪಕರಣವನ್ನು ನಮ್ಮ ಹೊಲದ 10 ಗುಂಟೆ ಜಾಗಕ್ಕೆ ನೀರು ಹೋಗುವ ಒಂದು ಪೈಪ್‌ಗೆ ಅಳವಡಿಸಿಕೊಟ್ಟರು.ಅಲ್ಲಿ ನಾನು 2,000 ಸಾವಿರ ಮೆಣಸಿನ ಸಸಿಗಳನ್ನು ನೆಟ್ಟಿದ್ದೆ. ಆ ಉಪಕರಣದ ಮೂಲಕ ಬೋರ್‌ ನೀರು ಹಾಯಿಸಿ ಕೃಷಿ ಮಾಡಿದೆ. ಇನ್ನೊಂದು ಕಡೆ 10 ಗುಂಟೆ ಜಾಗದಲ್ಲಿ ಸಾಮಾನ್ಯ ಬೋರ್‌ ನೀರನ್ನು ನೇರವಾಗಿ ಹಾಯಿಸಿ ಇನ್ನೂ 2,000 ಮೆಣಸಿನ ಸಸಿಗಳನ್ನು ಬೆಳೆದೆ’ ಎಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹಂದನಹಳ್ಳಿಯ ಕೃಷಿಕ ಸಿದ್ದರಾಜು ತಿಳಿಸಿದರು.ತಮ್ಮ ಪ್ರಯೋಗದ ಪರಿಣಾಮವನ್ನು ಉತ್ಸಾಹದಿಂದ ವಿವರಿಸಿದ ಅವರು, ‘ಸಸಿಗಳು ಬೆಳೆದು ಫಸಲು ಬಂದಾಗ, ಸಾಮಾನ್ಯ ನೀರು ಬಳಸಿದ ಕಡೆ 500 ಕೆ.ಜಿ. ಮೆಣಸಿನ ಉತ್ಪನ್ನ ಲಭಿಸಿದರೆ, ವಿನ್ಯಾಸಗೊಳಿಸಿದ ನೀರು (ಸ್ಟ್ರಕ್ಚರ್ಡ್‌ ವಾಟರ್‌) ಬಳಸಿದ ಕಡೆ 750 ಕೆ.ಜಿ. ಉತ್ಪನ್ನ ಬಂದಿತ್ತು. ಹೀಗಾಗಿ ನಮ್ಮ ಹೊಲದ ಎಲ್ಲ ಕಡೆ ಈ ಉಪಕರಣದಿಂದ ಹಾಯಿಸಲಾದ ನೀರನ್ನೇ ಬಳಸುವ ವ್ಯವಸ್ಥೆ ಮಾಡಿದ್ದೇನೆ.ಇದರಿಂದ ಕೆಲವು ಉತ್ತಮ ಪರಿಣಾಮಗಳು ಕಂಡು ಬಂದಿವೆ. ರೋಗಬಾಧೆ ಕಡಿಮೆಯಾಗಿದೆ, ಗೊಬ್ಬರ ಪ್ರಮಾಣವನ್ನೂ ಕಡಿಮೆ ಬಳಸಬಹುದು. ಪಪ್ಪಾಯಿಗೂ ಬಳಸಿದ್ದೆ. ಪರಿಣಾಮ ಸೂಪರ್‌’ ಎಂದು ಹೇಳಿದರು. ಮೈಸೂರು ಜಿಲ್ಲೆಯ ಇಲವಾಲ– ಗೊಮ್ಮಟಗಿರಿ ರಸ್ತೆಯಲ್ಲಿ ಫಾರ್ಮ್‌ ಹೌಸ್‌ ಹೊಂದಿರುವ ಅನಂತಕುಮಾರ್‌ ಮಾವಿನ ಗಿಡಗಳಿಗೆ ವಿನ್ಯಾಸಗೊಳಿಸಿದ ನೀರು ಬಳಸಿದ್ದಾರೆ. ಅವರ ಅಭಿಪ್ರಾಯ ಹೀಗಿದೆ–ಸ್ಟ್ರಕ್ಚರ್ಡ್‌ ವಾಟರ್‌ ಅನ್ನು ನಾನು ನನ್ನ ಫಾರ್ಮ್‌ಹೌಸ್‌ನ ಎಲ್ಲ ಬೆಳೆಗಳಿಗೂ ಬಳಸಿದ್ದೇನೆ. ಆದರೆ, ಈಗಲೇ ಅದರ ಪರಿಣಾಮಗಳನ್ನು ಹೇಳಲು ಸಾಧ್ಯವಿಲ್ಲ. ಇನ್ನಷ್ಟು ಕಾಲ ಕಾಯ್ದು ನೋಡಬೇಕು. ಕಳೆದ ನವೆಂಬರ್‌ನಲ್ಲಿ ನನ್ನ ಫಾರ್ಮ್‌ಹೌಸ್‌ನ ಮಾವಿನ ಬೆಳೆಗೆ ನೀರು ಪೂರೈಸುವ 2.5 ಅಂಗುಲದ ಪೈಪ್‌ಗೆ ನಾನು ‘ಇ–ವಾಟರ್‌ ಹಾರ್ಮೊನೈಸರ್‌’ ಉಪಕರಣ ಅಳವಡಿಸಿದ್ದೆ.ಅದರಿಂದ ಸ್ಟ್ರಕ್ಚರ್ಡ್‌ ವಾಟರ್‌ ಬೆಳೆಗಳಿಗೆ ಪೂರೈಕೆಯಾಯಿತು. ಆ ವರ್ಷ ನಮ್ಮ ಆಸುಪಾಸಿನಲ್ಲಿದ್ದ ಫಾರ್ಮ್‌ಹೌಸ್‌ಗಳಲ್ಲಿ ಶೇ 70ರಷ್ಟು ಬೆಳೆ ನಷ್ಟವಾಗಿತ್ತು. ನನಗೆ ಪ್ರತಿವರ್ಷ 400 ಕೆ.ಜಿ.  ಮಾವಿನ ಹಣ್ಣುಗಳು ಲಭಿಸುತ್ತಿದ್ದರೆ, ಈ ಉಪಕರಣ ಬಳಸಿದ ವರ್ಷದಲ್ಲಿ 600 ಕೆ.ಜಿ. ಉತ್ಪನ್ನ ಲಭಿಸಿತ್ತು.  ಆದರೆ, ನಾನು ಸಾವಯವ ದ್ರವರೂಪದ ಕೆಲವು ಗೊಬ್ಬರ ಬಳಸಿದ್ದರಿಂದ ಪರಿಣಾಮ ಅದರದ್ದೇ ಎಂದು ಖಚಿತವಾಗಿ ಹೇಳಲಾಗುತ್ತಿಲ್ಲ ಎಂದು ವಿವರಿಸಿದರು.‘ಆದರೆ, ಈ ನೀರನ್ನು ಕುಡಿಸಿದ್ದರಿಂದ ಕಳೆದ 3–4 ವರ್ಷಗಳಿಂದ ಗರ್ಭ ನಿಲ್ಲದೇ ಇದ್ದ ಮೂರ್ನಾಲ್ಕು ಹಸುಗಳು ಗರ್ಭ ಧರಿಸಿವೆ ಹಾಗಾಗಿ ಈ ಉಪಕರಣ ಉಪಯುಕ್ತ ಹೌದು’ ಎಂದರು. ಇದೇ ರೀತಿ 21 ರೈತರೂ ಆರಂಭಿಕ ಹಂತದಲ್ಲಿ ‘ಸ್ಟ್ರಕ್ಚರ್ಡ್‌ ವಾಟರ್‌’ ಬಳಸಿದ್ದಾರೆ. ಹಲವರು ಉತ್ತಮ ಪರಿಣಾಮ ಕಂಡುಕೊಂಡಿದ್ದಾರೆ. ಆದರೆ ಈ  ಬಗ್ಗೆ ಹೆಚ್ಚಿನ ಪ್ರಚಾರವಾಗಿಲ್ಲ.ಮೈಸೂರಿನಲ್ಲಿ ಇಂಥ ಉಪಕರಣ ತಯಾರಿಸುವ ಕಾರ್ಯವನ್ನು ‘ಕಲ್ಪವೃಕ್ಷ ಅಮೃತ ಸೊಲ್ಯೂಷನ್‌’ ಸಂಸ್ಥೆ ಮಾಡಿದೆ. ಅಮೆರಿಕದ ‘ಗ್ರೀನ್‌ ಫೀಲ್ಡ್‌ ನ್ಯಾಚುರಲ್‌’ ಸಂಸ್ಥೆ ಜತೆಗೂಡಿ ಭಾರತಕ್ಕೆ ‘ಇ–ವಾಟರ್‌ ಹಾರ್ಮೊನೈಸರ್‌’ ಉಪಕರಣವನ್ನು ಸಂಸ್ಥೆ ತಂದಿದೆ. ಉತ್ತಮ ಬೆಳೆಗೆ ಫಲವತ್ತಾದ ಮಣ್ಣು ಮತ್ತು ಪರಿಶುದ್ಧ ಗಾಳಿ ಎಷ್ಟು ಅವಶ್ಯವೋ ಅಷ್ಟೇ ವಿನ್ಯಾಸಗೊಳಿಸಿದ ನೀರೂ ಅಗತ್ಯ ಎನ್ನುತ್ತಾರೆ ‘ಕಲ್ಪವೃಕ್ಷ ಅಮೃತ ಸೊಲ್ಯೂಷನ್‌’ ಸಂಸ್ಥೆಯ ಸಂಸ್ಥಾಪಕ ಅಜಿತ್‌ ತ್ರಿಕನ್ನಾಡ್‌. ಕರ್ನಾಟಕ ಹಾಗೂ ದಕ್ಷಿಣ ಭಾರತದ 21 ಕೃಷಿಕರ ಹೊಲಗಳಲ್ಲಿ ಆಶಾದಾಯಕ ಪರಿಣಾಮ ಕಂಡುಬಂದಿದೆ.ಈ ಉಪಕರಣ ವಿದ್ಯುತ್‌ ಕಂಪನಉಪಯೋಗಿಸಿ ನೀರನ್ನು ವಿನ್ಯಾಸಗೊಳಿಸುತ್ತದೆ. ಇದನ್ನು ಕೊಳವೆಬಾವಿಯಿಂದ ಜಮೀನಿಗೆ ಹೋಗುವ ಪೈಪ್‌ಗೆ ಅಳವಡಿಸಬಹುದು. ಇದು ಕೆಡುವುದಿಲ್ಲ. ಇದರಲ್ಲಿ ಕರಗಿ ಹೋಗುವ ವಸ್ತುಗಳೂ ಇಲ್ಲ. ರಾಸಾಯನಿಕವೂ ಇಲ್ಲ. ನೀರನ್ನು ಚಲಿಸುವ ಶಕ್ತಿಯಾಗಿ ಮಾರ್ಪಡಿಸುವುದೇ ಇದರ ಕಾರ್ಯ ಎನ್ನುವುದು ಅಜಿತ್‌ ಅವರ ಪ್ರತಿಪಾದನೆ.ಬೆಳೆ ರಕ್ಷಣೆ, ಪೋಷಣೆ, ಪಾಲನೆ ಮತ್ತು ಪರಿಪೂರ್ಣ ಕೃಷಿಗೆ ವೈಜ್ಞಾನಿಕ ಮತ್ತು ನೈಸರ್ಗಿಕ ಜೀವಧಾರಕ ಶಕ್ತಿಯನ್ನು ನೀರಿನ ಮೂಲಕ ಕೊಡಲಾಗುತ್ತದೆ. ಇಂಥ ಉಪಕರಣದ ಮೂಲಕ ಹಾಯಿಸಿದ ನೀರನ್ನು ಬಳಸಿದರೆ ಬೆಳೆಗಳಲ್ಲಿ ಶೇ 60ರಿಂದ 100ರಷ್ಟು ಉತ್ಪಾದನೆ ಹೆಚ್ಚುತ್ತದೆ, ಶೇ 30ರಿಂದ 40ರಷ್ಟು ರಾಸಾಯನಿಕ ಗೊಬ್ಬರ ಕಡಿಮೆ ಬಳಕೆಯಾಗುತ್ತದೆ. ಶೇ 25ರಷ್ಟು ಕಡಿಮೆ ನೀರನ್ನು ಬಳಸಬಹುದು. ರೋಗ ಮತ್ತು ನುಸಿಬಾಧೆ ತಡೆಗಟ್ಟಿ, ಕೀಟನಾಶಕ ಬಳಕೆಯನ್ನು ಶೇ 30ರಷ್ಟು ಕಡಿಮೆ ಮಾಡಬಹುದು.ಬೆಳೆಯ ಸಮಗ್ರ ಬೆಳವಣಿಗೆಗೆ ಅವಶ್ಯವಾದ ಸಾರಜನಕ, ರಂಜಕ, ಪೊಟ್ಯಾಶ್‌, ಜಿಂಕ್‌, ಮ್ಯಾಂಗನಿಸ್‌ ಮತ್ತು ಕ್ಯಾಲ್ಸಿಯಂಗಳನ್ನು ಕೂಡ ಇ– ವಾಟರ್‌ ಹಾರ್ಮೊನೈಸರ್‌ ಪೂರೈಸಬಲ್ಲದು. ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಒಳ್ಳೆಯ ಬಣ್ಣ, ಹೊಳಪು ಮತ್ತು ಕಡಿಮೆ ಹಾನಿಗೊಳಗಾದ ಹಣ್ಣು ಮತ್ತು ತರಕಾರಿಗಳು ಉತ್ಪನ್ನವಾಗುತ್ತವೆ.ಮಂಡ್ಯದ ಮಳವಳ್ಳಿಯಲ್ಲಿ ಟೊಮೆಟೊ, ಕೋಲಾರದ ಜೋಡಿಕೃಷ್ಣಾಪುರದಲ್ಲಿ ಬೀನ್ಸ್‌, ಹಾಸನದ ಅರಸೀಕೆರೆಯಲ್ಲಿ ದಾಳಿಂಬೆ, ಮೈಸೂರಿನ ಮುಡುಕುತೊರೆಯಲ್ಲಿ ಕಲ್ಲಂಗಡಿ, ಬಿಳೀಕೆರೆಯ ಹಂದನಹಳ್ಳಿಯಲ್ಲಿ ಮೆಣಸಿನಕಾಯಿ, ಪಪ್ಪಾಯಿ ಮೊದಲಾದ ಬೆಳೆಗಳಿಗೆ ಈ ವಿನ್ಯಾಸಭರಿತ ನೀರಿನ ಬಳಕೆ ಮಾಡಿ ನೋಡಲಾಗಿದೆ. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯ ಈ ಉಪಕರಣದಲ್ಲಿ ಹಾಯಿಸಿದ ನೀರನ್ನು ಹಲವು ಬೆಳೆಗಳ ಮೇಲೆ ಪ್ರಯೋಗಿಸಿ ವರದಿ ನೀಡಿದೆ. ತಮಿಳುನಾಡಿನ ಕೃಷಿ ವಿ .ವಿ ಇದನ್ನು ಹತ್ತಿ ಹಾಗೂ ತರಕಾರಿ ಬೆಳೆಗೆ ಪ್ರಯೋಗಿಸಿ ವರದಿ ನೀಡಿದೆ. ಮಾಹಿತಿಗೆ ಅಜಿತ್‌– 93421 17700 ಸಂಪರ್ಕಿಸಬಹುದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.