`ಇದು ಸ್ಮಾರ್ಟ್‌ಬೋರ್ಡ್ ಶಿಕ್ಷಕರ ಕಾಲ'

7

`ಇದು ಸ್ಮಾರ್ಟ್‌ಬೋರ್ಡ್ ಶಿಕ್ಷಕರ ಕಾಲ'

Published:
Updated:

ಗದಗ: ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಗಳಲ್ಲಿ ಶಿಕ್ಷಕರು ತಂತ್ರಜ್ಞಾನ ಬಳಕೆ ಮಾಡಿಕೊಂಡರೆ ಮಾತ್ರ ಶ್ರೇಷ್ಠ ಶಿಕ್ಷಕರಾಗಲು ಸಾಧ್ಯ ಎಂದು ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ಜರುಗಿದ  ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬ್ಲ್ಯಾಕ್‌ಬೋರ್ಡ್ ಬೋಧನೆ ಹಳೆ ಕಾಲದ್ದಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಸ್ಮಾರ್ಟ್ ಬೋರ್ಡ್ ಶಿಕ್ಷಣ ನೀಡಬೇಕಾಗಿದೆ. ಪಂಚ ಸೌಲಭ್ಯ ಕಲ್ಪನೆ ಐದಾರು ವರ್ಷಗಳಿಂದ ವಿಳಂಬವಾಗಿದೆ. ಇನ್ನೆರಡು ಯೋಜನೆ ಸೇರ್ಪಡೆಗೊಳಿಸಿ ಸಪ್ತ ಸೌಲಭ್ಯ ನೀಡಬೇಕು. ಹನ್ನೊಂದು ಶಾಲೆಗಳಿಗೆ ಮೈದಾನ  ಇಲ್ಲ. ಶಾಲೆಗಳಲ್ಲಿ ಕಡ್ಡಾಯವಾಗಿ ಕಂಪ್ಯೂಟರ್ ಕೇಂದ್ರ ಆರಂಭಿಸಬೇಕು. ಈಗಾಗಲೇ ಉದ್ಯೋಗ ಖಾತ್ರಿಯಲ್ಲಿ ಪ್ರತಿ ಗ್ರಾಮದಲ್ಲೂ ಕಂಪ್ಯೂಟರ್ ಕೇಂದ್ರ ಆರಂಭಿಸಲು ಸೂಚನೆ ನೀಡಲಾಗಿದೆ. ಎರಡು ವರ್ಷಗಳಲ್ಲಿ  ಸಪ್ತ ಸೌಲಭ್ಯ ಎಲ್ಲ ಶಾಲೆಗಳಲ್ಲೂ ದೊರಕುವಂತಾಗಬೇಕು ಎಂದು ನುಡಿದರು.ರಾಧಾಕೃಷ್ಣನ್ ಅವರ ಬದುಕು ಶಿಕ್ಷಕರಿಗೆ  ಮಾರ್ಗದರ್ಶನ ಹಾಗೂ ಪ್ರೇರಣೆಯಾಗಬೇಕು. ಜಿಲ್ಲೆಯ ಪ್ರತಿ ಶಾಲೆಯಲ್ಲೂ ಒಬ್ಬ ವಿದ್ಯಾರ್ಥಿಯಾದರೂ ಶೇ. 100 ಫಲಿತಾಂಶ ಪಡೆಯಬೇಕು. ಶ್ರೀಮಂತರು, ಮೇಲ್ವರ್ಗದವರು ಮಾತ್ರ ಉನ್ನತ ಸ್ಥಾನಕ್ಕೇರುತ್ತಾರೆ ಎನ್ನುತ್ತಿದ್ದರು. ಆದರೆ ಈಗ ಬಡವರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಶಿಕ್ಷಕ ವೃಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ವಾತಾವರಣ ಕಲ್ಪಿಸಬೇಕು. ಶೇ. 95 ಅಂಕ ಗಳಿಸಿದರೆ ವಿದ್ಯಾರ್ಥಿ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಓದಬಹುದು. ಇಲ್ಲದಿದ್ದರೆ. ಮ್ಯಾನೇಜ್‌ಮೆಂಟ್ ಸೀಟಿಗೆ ರೂ. 50 ಮತ್ತು ಒಂದು ಕೋಟಿ ರೂಪಾಯಿ ತೆರಬೇಕಾಗುತ್ತದೆ ಎಂದರು.ರಾಧಾಕೃಷ್ಣನ್ ಅವರ ಆತ್ಮಚರಿತ್ರೆಗಳನ್ನು ಶಿಕ್ಷಕರು ಓದಬೇಕು. ಶೇ.95ರಷ್ಟು ಶಿಕ್ಷಕರು ಅವರ ಆತ್ಮಚರಿತ್ರೆ ಓದಿಲ್ಲ. ಯಾವುದಾದರೂ ಸಮಾರಂಭದಲ್ಲಿ ಶಿಕ್ಷಕರಿಗೆ ರಾಧಾಕೃಷ್ಣನ್ ಕುರಿತು ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸುವ ಮೂಲಕ ಅವರ ಆತ್ಮಚರಿತ್ರೆ ಓದುವಂತೆ ಮಾಡಬೇಕು ಎಂದು ಡಿಡಿಪಿಐಗೆ ಸಲಹೆ ನೀಡಿದರು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಬೆಳೆಸಬೇಕು. ಶಿಕ್ಷಕರಿಗೆ ಗುರುತರವಾದ ಜವಾಬ್ದಾರಿಯಿದೆ.  ಮಕ್ಕಳನ್ನು ಶ್ರೇಷ್ಠ ನಾಗರಿಕನ್ನರಾಗಿ ಮಾಡಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇಲ್ಲ ಎಂದು ಹೇಳಿದರು.ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ ವಸ್ತ್ರದ  ಮಾತನಾಡಿ, ಶಿಕ್ಷಣ ಪದ್ಧತಿ ಉದ್ದೇಶ ಫಲಿತಾಂಶಕ್ಕೆ ಮಾತ್ರ ಸೀಮಿತವಾಗದೇ ಸಮಾಜಮುಖಿಯಾಗಿರಬೇಕು. ಶಿಕ್ಷಣ ಪದ್ಧತಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ, ಮಾನವೀಯ ಮೌಲ್ಯ ಬೆಳೆಸುವಂತೆ ಆಗಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನದ ಬೆಳಕಿನ ಬೀಜ ಬಿತ್ತುವ ಕೆಲಸ ಮಾಡಬೇಕು ಎಂದು ನುಡಿದರು.

  ಜಿಲ್ಲಾ ಉತ್ತಮ ಶಿಕ್ಷಕರು ಹಾಗೂ  ವಿಶೇಷ ಪುರಸ್ಕಾರ ಪಡೆದ ಶಿಕ್ಷಕರಿಗೆ ಪ್ರಮಾಣ ಪತ್ರ, ಶಾಲು ಹೊದಿಸಿ, ಮೂರು ಸಾವಿರ ಚೆಕ್ ನೀಡಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನೂ ಗೌರವಿಸಲಾಯಿತು. ಹೊಸಳ್ಳಿಯ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮುಂದಿನಮನಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಎಸ್.ಡಿ.ಶರಣಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ,  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೀವ ನಾಯಕ, ಡಯಟ್ ಉಪನಿರ್ದೇಶಕ ಬಿ.ಎಸ್. ರಘುವೀರ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಗುಡ್ಲಾನೂರ, ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಐ.ಆರ್. ಅಕ್ಕಿ, ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ  ಪಿ.ಸಿ. ಕಲಹಾಳ, ಮುಖ್ಯ ಶಿಕ್ಷಕ ಎಸ್.ಎನ್.ಬಳ್ಳಾರಿ, ಬಿ.ಬಿ. ಕುಂದಗೋಳ, ಡಿ.ಎಸ್. ತಳವಾರ ಹಾಜರಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಎಸ್.ಎಸ್.ಗೌಡರ ಪ್ರಾರ್ಥಿಸಿದರು. ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಗುಡ್ಲಾನೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry