ಇದು ಹೆದ್ದಾರಿಯೊ ಮೃತ್ಯುಪಥವೊ...

7

ಇದು ಹೆದ್ದಾರಿಯೊ ಮೃತ್ಯುಪಥವೊ...

Published:
Updated:
ಇದು ಹೆದ್ದಾರಿಯೊ ಮೃತ್ಯುಪಥವೊ...

ಕೋಲಾರ: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿದ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ನಂಗಲಿ ಮಾರ್ಗ ಮೃತ್ಯುಪಥವಾಗಿ ಪರಿಣಮಿಸಿದೆ.ಹೆದ್ದಾರಿ ನಿರ್ಮಾಣ ಕಾಮಗಾರಿ ವಿಸ್ತರಣೆ ವಿಳಂಬವಾಗಿರುವುದು ಮತ್ತು ಈಗ ಇರುವ ರಸ್ತೆಯುದ್ದಕ್ಕೂ ಹಳ್ಳಗಳಿರುವುದು ಅಪಘಾತಗಳಿಗೆ ಕಾರಣ ಎಂಬ ದೂರು, ಪ್ರಾಣ ಭಯದ  ನಡುವೆಯೇ ಜನ ಅನಿವಾರ್ಯವಾಗಿ ಪ್ರಯಾಣ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಪಘಾತ ಮತ್ತು ಸಾವು-ನೋವಿನ ಪ್ರಮಾಣವೂ ಹೆಚ್ಚಾಗುತ್ತಲೇ ಇದೆ.ಜಿಲ್ಲಾ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 2010ರಲ್ಲಿ 392 ಅಪಘಾತ ನಡೆದಿದ್ದು, 93 ಮಂದಿ ಸಾವಿಗೀಡಾಗಿದ್ದಾರೆ. 608 ಮಂದಿ ಗಾಯಗೊಂಡಿದ್ದಾರೆ. 2011ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. 428 ಅಪಘಾತಗಳಲ್ಲಿ 99 ಮಂದಿ ಸಾವಿಗೀಡಾಗಿದ್ದಾರೆ 490 ಮಂದಿ ಗಾಯಗೊಂಡಿದ್ದಾರೆ. ವಿಪರ್ಯಾಸವೆಂದರೆ 2012ರ ಮೇ ಅಂತ್ಯದ ಹೊತ್ತಿಗೆ ನಡೆದಿರುವ ಅಪಘಾತಗಳ ಸಂಖ್ಯೆ 300 ದಾಟಿದೆ. 315 ಅಪಘಾತಗಳಲ್ಲಿ 96 ಮಂದಿ ಸಾವಿಗೀಡಾಗಿದ್ದಾರೆ. 457 ಮಂದಿಗೆ ಗಾಯವಾಗಿದೆ.ಕೋಲಾರ ತಾಲ್ಲೂಕಿನ ನರಸಾಪುರದ ಸಮೀಪದ ರಾಮಸಂದ್ರ ಗಡಿಯಿಂದ ಮುಳಬಾಗಲು ತಾಲ್ಲೂಕಿನ ನಂಗಲಿ ಗಡಿವರೆಗೆ ನಡೆದಿರುವ ಅಪಘಾತಗಳ ಅಂಕಿ ಅಂಶ ಇದು. ನರಸಾಪುರದ ಬಳಿ ಅಪಘಾತಗಳು ನಡೆದರೂ ನಂಗಲಿ ಮಾರ್ಗದಲ್ಲಿ ನಡೆಯುವ ಅಪಘಾತಗಳಲ್ಲಿ ಹೆಚ್ಚು ಮಂದಿ ಪ್ರಾಣ ತೆರುತ್ತಿದ್ದಾರೆ.  ವರ್ಷದ ಮೊದಲಾರ್ಧದಲ್ಲೇ ಇಷ್ಟು ಅಪಘಾತಗಳು ನಡೆದಿರುವುದು ಆಘಾತಕಾರಿ ಸಂಗತಿ ಎನ್ನುತ್ತಿದ್ದಾರೆ, ನಿತ್ಯವೂ ಅಪಘಾತಗಳಿಗೆ ಸಾಕ್ಷಿಯಾಗುವ ನಂಗಲಿ ಸುತ್ತಮುತ್ತಲ ಗ್ರಾಮಸ್ಥರು.ರಾಷ್ಟ್ರೀಯ ಹೆದ್ದಾರಿ 4 ಕೋಲಾರ -ಮುಳಬಾಗಲುವರೆಗೆ ಭಾಗಶಃ ಪೂರ್ಣಗೊಂಡಿದೆ. ಮುಳಬಾಗಲಿಂದ ನಂಗಲಿ ಮಾರ್ಗವಾಗಿ ಆಂಧ್ರದ ಗಡಿವರೆಗೆ ಹೆದ್ದಾರಿ ವಿಸ್ತರಣೆ ಇನ್ನೂ ನಡೆದಿಲ್ಲ. ಮುಳಬಾಗಲುವರೆಗೆ ಅತ್ಯಧಿಕ ವೇಗದಲ್ಲಿ ಸಂಚರಿಸುವ ವಾಹನಗಳು, ಮುಳಬಾಗಲು ದಾಟಿದ ವೆುೀಲೆ ದೊರಕುವ ಕಿರು ರಸ್ತೆಯಲ್ಲೂ ಅದೇ ವೇಗದಲ್ಲಿ ಸಂಚರಿಸುತ್ತಿರುವುದು, ರಸ್ತೆಯ ನಡುವೆ ಮತ್ತು ಅಂಚಿನಲ್ಲಿ ಏರ್ಪಟ್ಟಿರುವ ಹಳ್ಳಗಳನ್ನು ಮುಚ್ಚದಿರುವುದು, ರಸ್ತೆ ತಿರುವಿನ ಸೂಚನಾ ಫಲಕಗಳನ್ನು ಅಳವಡಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣ ಎಂಬುದು ಮುಳಬಾಗಲು ನಿವಾಸಿಗಳ ಅನಿಸಿಕೆ.ರಸ್ತೆಯಂಚಿಗೆ ವಾಹನಗಳನ್ನು ಇಳಿಸಲು ಆಗುವುದಿಲ್ಲ. ಅತಿ ವೇಗದಲ್ಲಿ ಸಂಚರಿಸುತ್ತಿರುವಾಗ ಎದುರಾಗುವ ಹಳ್ಳಗಳನ್ನು ತಪ್ಪಿಸಲು ವೇಗ ಕಡಿಮೆ ಮಾಡಿದರೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು. ವಾಹನಗಳನ್ನು ಹಿಂದಿಕ್ಕುವ ಭರಾಟೆಯಲ್ಲೂ ಅಪಘಾತಗಳು ನಡೆಯುತ್ತಿವೆ. ಯಾರಾದರೂ ಪ್ರಾಣ ತೆತ್ತರೆ ಮಾತ್ರ ರಸ್ತೆಯನ್ನು ಸರಿಪಡಿಸಲು ಬರುವ ಹೆದ್ದಾರಿ ಪ್ರಾಧಿಕಾರ ತನ್ನ ನಿಲವನ್ನು ಬದಲಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಮುಳಬಾಗಲು ನಿವಾಸಿ ಡಾ.ಜಿ.ಶಿವಪ್ಪ.ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರು ವಾಹನಗಳನ್ನು ಹಿಂದಿಕ್ಕುವಾಗ ವೇಗಕ್ಕಿಂತ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂಬುದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್ ದಾಸ್ ಅವರ ಸಲಹೆ.ದುರಸ್ತಿಯಾಗದ ಸೇತುವೆ: ಇತ್ತೀಚೆಗೆ ಹಳ್ಳದಲ್ಲಿ ವಾಹನ ಇಳಿಸುವುದನ್ನು ತಪ್ಪಿಸಲು ಪ್ರಯತ್ನಿಸಿದಾಗಲೇ ಅಪಘಾತ ನಡೆದು ಒಂದೇ ಕುಟುಂಬದ ಆರು ಮಂದಿ ಪ್ರಾಣ ತೆರಬೇಕಾಯಿತು. ಅವರಿದ್ದ ಕಾರು ಡಿಕ್ಕಿ ಹೊಡೆದ ಸೇತುವೆ ಗೋಡೆಯ ಎರಡೂ ಬದಿ ಈ ಹಿಂದೆ ನಡೆದಿರುವ ಅಪಘಾತಗಳಿಂದ ನುಜ್ಜುಗಜ್ಜಾಗಿದೆ. ಅದನ್ನು ಮತ್ತೆ ನಿರ್ಮಿಸಿಲ್ಲ ಎಂದು ಅವರು ವಿಷಾದಿಸುತ್ತಾರೆ.ಅಪಘಾತವಾದ ಸ್ಥಳದಲ್ಲಿ ಕೊಂಚ ದೂರದವರೆಗೆ ಮಾತ್ರ ಹಳ್ಳಗಳನ್ನು ಮುಚ್ಚಲಾಗಿದೆ. ಇದು ತಾತ್ಕಾಲಿಕ ಕ್ರಮವಷ್ಟೆ. ಮುಂದೆ ಗುಂಡಿಗಳು ಕಂಡುಬಂದರೂ ದುರಸ್ತಿ ಮಾಡವ ಭರವಸೆ ಇಲ್ಲ. ಆಂಧ್ರ ಗಡಿಯಿಂದ ನಂಗಲಿವರೆಗೆ ಮಾತ್ರ ಗುಂಡಿಗಳನ್ನು ಮುಚ್ಚಲಾಗಿದೆ. ಅಪಾಯಕಾರಿ ಗುಂಡಿಗಳು ನಂಗಲಿ ಮತ್ತು ಮುಳಬಾಗಲು ನಡುವೆ ಹಾಗೆಯೇ ಉಳಿದಿವೆ. ಅವನ್ನು ಮುಚ್ಚಬೇಕಾದರೆ ಮತ್ತೊಂದು ಅಪಘಾತ ನಡೆದು ಯಾರಾದರೂ ಸಾಯಬೇಕೆ? ಎಂದು ಪ್ರಶ್ನಿಸುತ್ತಾರೆ ಮುಳಬಾಗಲು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ನಂಗಲಿ ನಿವಾಸಿ ಪ್ರಭಾಕರ ಗುಪ್ತಾ.ಎನ್.ವಡ್ಡಹಳ್ಳಿ ಬಳಿ ಟೊಮೆಟೊ ಮಾರುಕಟ್ಟೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಇಲಾಖೆ ಚೆಕ್‌ಪೋಸ್ಟ್ ಇದೆ. ರಸ್ತೆಯುದ್ದಕ್ಕೂ ಲಾರಿಗಳು ನಿಲ್ಲುವುದು ಸಾಮಾನ್ಯ ದೃಶ್ಯ. ಅಲ್ಲಿ ವಾಹನಗಳ ಮುಕ್ತ ಸಂಚಾರಕ್ಕೆ ಸಂಚಕಾರ ಬಂದಿದೆ. ಕಿರಿದಾದ ರಸ್ತೆಯಲ್ಲಿ  ಅಪಾಯಕಾರಿ ವೇಗದಲ್ಲಿ ವಾಹನಗಳು ಸಂಚರಿಸುವುದನ್ನು ತಡೆಯಲು ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು, ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎನ್ನುತ್ತಾರೆ ಅವರು.

ಅಪಘಾತ ಸ್ಥಳಕ್ಕೆ ಐಜಿಪಿ ಭೇಟಿ

ಮುಳಬಾಗಲು: ನಂಗಲಿ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರ ಮುದುಗೆರೆ ಗ್ರಾಮದ ಬಳಿ ಟ್ಯಾಂಕರ್ ಮತ್ತು ಕಾರು ಅಪಘಾತ ನಡೆದ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಭಾಸ್ಕರರಾವ್ ಅವರು ಬುಧವಾರ ಭೇಟಿ ನೀಡಿದರು.ಅಪಘಾತಕ್ಕೆ ರಸ್ತೆ ಗುಂಡಿಗಳೇ ಕಾರಣ ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚಿ ಸೂಕ್ತ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ  ಎಲ್ಲಾ ಅವಾಂತರಗಳಿಗೂ ಕಾರಣ ಆಗಿರುವುದರಿಂದ ಈ ಎರಡು ಇಲಾಖೆಗಳ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry