ಇದೇನು ದೊಡ್ಡ ತಪ್ಪಲ್ಲ: ಕೃಷ್ಣ

7

ಇದೇನು ದೊಡ್ಡ ತಪ್ಪಲ್ಲ: ಕೃಷ್ಣ

Published:
Updated:

ನ್ಯೂಯಾರ್ಕ್ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ನಡೆದ ಚರ್ಚೆಯ ಸಂದರ್ಭದಲ್ಲಿ ತಾವು ಪೋರ್ಚುಗೀಸ್ ವಿದೇಶಾಂಗ ಸಚಿವರ ಭಾಷಣವನ್ನು ಓದಿದ್ದು ದೊಡ್ಡ ತಪ್ಪೇ ನಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಸಮರ್ಥಿಸಿಕೊಂಡಿದ್ದಾರೆ.ಇಂತಹ ತಪ್ಪುಗಳು ನಡೆಯುವುದು ಸಹಜ, ಯಾಕೆಂದರೆ ಎಲ್ಲಾ ಭಾಷಣಗಳ ಆರಂಭದಲ್ಲಿ ಇಂತಹ ವಾಕ್ಯಗಳೇ ಇರುತ್ತವೆ, ಹೀಗಾಗಿ ತಾವು ಓದಿದ್ದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದ್ದಾರೆ.‘ನನ್ನ ಮುಂದೆ ಹಲವಾರು ಕಾಗದಗಳು ಹರಡಿಕೊಂಡಿದ್ದವು. ಕಣ್ತಪ್ಪಿನಿಂದ ನಾನು ಇನ್ನೊಬ್ಬರ ಭಾಷಣದ ಪ್ರತಿಯನ್ನು ತೆಗೆದುಕೊಂಡು ಓದಲಾರಂಭಿಸಿದೆ ಅಷ್ಟೆ’ ಎಂದು ಹೇಳಿದ್ದಾರೆ.ಶುಕ್ರವಾರ ಭದ್ರತಾ ಮಂಡಳಿಯಲ್ಲಿ ಅಭಿವೃದ್ಧಿ ಮತ್ತು ಭದ್ರತೆ ವಿಚಾರದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಈ ಪ್ರಮಾದ ನಡೆದಿತ್ತು. ಪೋರ್ಚುಗಲ್ ಸಚಿವರ ಭಾಷಣವನ್ನು ಅವರು 3 ನಿಮಿಷ ಓದಿದ್ದಾಗ ಭಾರತದ ಪ್ರತಿನಿಧಿ ಹರದೀಪ್‌ಸಿಂಗ್ ಪುರಿ ಅವರು ಅರ್ಧಕ್ಕೇ ತಡೆದಿದ್ದರು.

ಅಸಮರ್ಥತೆ ಸಾಬೀತು: ಬಿಜೆಪಿ

ನವದೆಹಲಿ (ಐಎಎನ್‌ಎಸ್): ವಿಶ್ವಸಂಸ್ಥೆಯಲ್ಲಿ ಸಚಿವ ಎಸ್.ಎಂ. ಕೃಷ್ಣ ಅವರು ಅಜಾಗರೂಕತೆಯಿಂದ ಪೋರ್ಚುಗೀಸ್ ವಿದೇಶ ಸಚಿವರ ಭಾಷಣ ಓದುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಇರುಸುಮುರುಸು ಸ್ಥಿತಿ ಉಂಟು ಮಾಡಿದ್ದಾರೆ ಎಂದು ಬಿಜೆಪಿ ಭಾನುವಾರ ಇಲ್ಲಿ ಟೀಕಿಸಿದೆ.‘ಸ್ವಂತ ಭಾಷಣ ಮಾಡುವ ಬದಲಿಗೆ, ಬೇರೆಯವರು ಬರೆದುಕೊಟ್ಟುದ್ದನ್ನು ಓದಿದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಇದು ಸಚಿವರ ಅಸಮರ್ಥತೆಯನ್ನು ಪ್ರದರ್ಶಿಸುತ್ತದೆ’ ಎಂದು ಪಕ್ಷದ ವಕ್ತಾರೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry