ಮಂಗಳವಾರ, ಏಪ್ರಿಲ್ 13, 2021
32 °C

ಇದೊಂದೇಕೆ ಬೇಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದೊಂದೇಕೆ ಬೇಡ?

ಶಸ್ತ್ರಚಿಕಿತ್ಸೆ ಮಾಡುವ ಮುನ್ನ ಹಾಗೂ ಮಾಡಿದ ನಂತರ ದೇಹದ ಆ    ಭಾಗವನ್ನು ವೈದ್ಯರು ಹೊಲಿದುಬಿಡುವ ಮೊದಲು         ದಾದಿಯೊಬ್ಬಳು      ಶಸ್ತ್ರಚಿಕಿತ್ಸೆಗೆಂದು     ತಂದಿರುವ ಎಲ್ಲ      ಉಪಕರಣಗಳ ಲೆಕ್ಕ ಮಾಡಬೇಕು, ತಾಳೆ   ಹಚ್ಚಬೇಕು.

 

ಇದು ಬಹಳ ಸಣ್ಣ ಕೆಲಸ        ಎಂದೆನ್ನಿಸಿದರೂ ಇದನ್ನು ಆಕೆ ಸರಿಯಾಗಿ     ಮಾಡದಿದ್ದಾಗ        ಆಗಬಹುದಾದ     ದುರ್ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಶಸ್ತ್ರಚಿಕಿತ್ಸೆ ಮುಗಿಸಿದ ನಂತರ    ಉಪಕರಣವೊಂದನ್ನು ರೋಗಿಯ ದೇಹದಲ್ಲೇ ಬಿಟ್ಟು ಅವನನ್ನು ಮನೆಗೆ ಕಳುಹಿಸಿರುವ ಅನೇಕ ಘಟನೆಗಳು ನಮ್ಮಲ್ಲಿ   ನಡೆದಿವೆ,           ನಡೆಯುತ್ತಲೂ ಇವೆ.
ತಪ್ಪು ಮಾಡುವ ಮುನ್ನ ಆ ತಪ್ಪಿನಿಂ ಜಗಕೆ/

ಕಪ್ಪಡವ ಹೊದಿಸುತಿಹೆನೆಂಬರಿವಿನೊಡನೆ//

ಕಪ್ಪ ಕಟ್ಟಲೆಬೇಕು ಎಂಬ ಎಚ್ಚರವಿರಲು/

ಒಪ್ಪಾಗಿ ದುಡಿಯುವನು!- ನವ್ಯಜೀವಿ//ಕಂಪೆನಿಯೊಂದಕ್ಕೆ ಹೊಸದಾಗಿ ಕೆಲಸಕ್ಕೆ ಸೇರುವವರಿಗೆಲ್ಲ ಸರ್ವೇಸಾಮಾನ್ಯವಾಗಿ ಎಲ್ಲ ಕಂಪೆನಿಗಳಲ್ಲಿ ಇಂಡಕ್ಷನ್ ಪ್ರೊಗ್ರಾಮ್ ನಡೆಸುತ್ತಾರೆ. ಹೊಸ ಕೆಲಸಗಾರರಿಗೆ ಇದೊಂದು ರೀತ್ಯಾ ಪ್ರವೇಶ ಕಾರ್ಯಕ್ರಮ.ಇಂತಹ ಕಾರ್ಯಕ್ರಮದಲ್ಲಿ ಹೊಸಬರಿಗೆ ಕಂಪೆನಿ ಮುಖ್ಯಸ್ಥರ, ಕಂಪೆನಿಯ ಕೆಲಸ ಕಾರ್ಯಗಳ, ಮಾನವ ಸಂಪನ್ಮೂಲ ವಿಭಾಗದ ವಿಚಾರಗಳತ್ತ ಸ್ಥೂಲವಾಗಿ ಪರಿಚಯ ನೀಡಲಾಗುತ್ತದೆ. ಈ ಪ್ರಸ್ತಾವನೆಯ ನಂತರ ಅವರ ವೈಯಕ್ತಿಕ ಕೆಲಸ ಕಾರ್ಯಗಳ ಸುದೀರ್ಘ ವಿವರಣೆ ಹಾಗೂ ತರಬೇತಿ ಇತ್ಯಾದಿ.

 

ನಿಮ್ಮಿಂದ ಕಂಪೆನಿ ಏನನ್ನು ಅಪೇಕ್ಷಿಸುತ್ತದೆ ಎಂಬ ಮಾಹಿತಿಯ ಜತೆಯಲ್ಲೇ ನಿಮಗೆ ಕಂಪೆನಿ ಏನೇನು ಸವಲತ್ತುಗಳನ್ನು ನೀಡುತ್ತದೆ ಎಂಬುದರ ಬಗೆಗೂ ಮುಕ್ತವಾಗಿ ಚರ್ಚೆಗಳಾಗುತ್ತವೆ. ಇಷ್ಟರ ಹೊತ್ತಿಗೆ ಹೊಸಬನಾದ ನೌಕರನಿಗೆ ತನ್ನ ಹೊಣೆಗಾರಿಕೆಗಳೇನು ಎಂಬ ವಿಷಯವಾಗಿ ಸಾಕಷ್ಟು ದರ್ಶನವಾಗಿರುತ್ತದೆ. ಎಲ್ಲ ಕಂಪೆನಿಗಳಲ್ಲಿ ಈ ಕಾರ್ಯಕ್ರಮ ಇಲ್ಲಿಗೇ ಮುಕ್ತಾಯವಾಗಿಬಿಡುವುದು ವಿಷಾದನೀಯ.ಈ ಕಾರ್ಯಕ್ರಮದ ಯಾವುದೇ ಹಂತದಲ್ಲೂ ದಂಡಬದ್ಧತೆ (ಅಕೌಂಟಬಿಲಿಟಿ) ಬಗ್ಗೆ ಯಾವುದೇ ಚರ್ಚೆ ಇಲ್ಲ. ವಿಚಾರ ವಿನಿಮಯವಿಲ್ಲ. ಹೈಟೆಕ್ ಜಗತ್ತಿನಲ್ಲಂತೂ ಇದರ ಬಗ್ಗೆ ಅಷ್ಟಾಗಿ ಮಾತೇ ಇಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಸಮಯ ಕಳೆದಂತೆ ನೌಕರರೇ ಇದನ್ನು ಅರ್ಥೈಸಿಕೊಳ್ಳುತ್ತಾರೆಂಬ ಭ್ರಮೆ ಮೇಲಿನವರಿಗಿರಬೇಕು. ಕಂಪೆನಿಗೆ ಸೇರಿರುವ ಈ ಯುವಕ ಬುದ್ಧಿವಂತ ಹಾಗೂ ಚುರುಕು ಸ್ವಭಾವದವನು.ಈ ರೀತಿಯ ವಿಚಾರಗಳಿಂದ ಮೊದಲನೆ ದಿನವೇ ಅವನ ಅಂತರಂಗದಲ್ಲಿ ಸಣ್ಣದಾಗಿ ಹೆಡೆ ಎತ್ತಿರುವ ಅಹಂಕಾರವನ್ನು ನಾವೇ ಏಕೆ ಖುದ್ದಾಗಿ ಕೆಣಕಬೇಕೆಂಬ ತಪ್ಪು ಪ್ರಜ್ಞೆಯೂ ಕಾರಣವಿರಬಹುದು. ಮಾನವ ಸಂಪನ್ಮೂಲ ವಿಭಾಗದ ಅನೇಕ ಕಾರ್ಯಕ್ರಮಗಳು ಇದರ ಬಗ್ಗೆ ಒಂದು ಪ್ರಮಾಣದಲ್ಲಿ ಆಗಿಂದಾಗ್ಗೆ ನೌಕರರಿಗೆ ಮನದಟ್ಟು ಮಾಡಿಕೊಡುವುದರಿಂದ ಶುಭಾರಂಭದಲ್ಲೇ ಏಕೆ ಇವುಗಳ ಪಾಠವಾಗಬೇಕೆಂಬ ನಿಲುವು ಕೂಡ ಇರಬಹುದು.ಕಾರಣವೇನೇ ಇರಲಿ, ಪ್ರವೇಶ ಕಾರ್ಯಕ್ರಮವನ್ನು ಮುಗಿಸಿ ಕೆಲಸಕ್ಕೆ ಬರುವಷ್ಟರಲ್ಲಿ ಕಂಪೆನಿಯ ಸುಮಾರು ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಈ ಹೊಸಬ, ತನ್ನ ಹೆಗಲಿಗಿರುವ ದಂಡಬದ್ಧತೆ ಬಗ್ಗೆ ಮಾತ್ರ ಯಾವುದೇ ಸುಳಿವಿರದೆ `ಹಾಗೆಂದರೇನು?~ ಎಂದು ಕೇಳುವ ಬಾಲಿಶ ಸ್ತರದಲ್ಲೇ ನಿಂತಿರುತ್ತಾನೆ.`ನೀನೇನು ಮಾಡಬೇಕು?~ ಅಥವಾ `ನಿನ್ನಿಂದ ಕಂಪೆನಿಯ ಅಪೇಕ್ಷೆ ಏನು?~ ಎಂಬ ವಿಚಾರಗಳಿಂದ ಆತ ಹೊಣೆಗಾರನಾಗುತ್ತಾನೆ. ಅವನಿಗೆ ತನ್ನ ಜವಾಬ್ದಾರಿ ಏನು ಎಂಬ ಅರಿವು ಒಂದು ಪ್ರಮಾಣದಲ್ಲಿ ಮೂಡುತ್ತದೆ.ನಿಜ, ಆದರೆ, `ನೀನು ಮಾಡಬೇಕಿರುವ ಕೆಲಸವನ್ನು ನೀನು ಮಾಡದಿದ್ದಾಗ, ಅದರಿಂದ ಏನೇನು ಅನಾಹುತಗಳು ಸಂಭವಿಸಬಹುದು~ ಎಂಬ ಅರಿವನ್ನೂ ಅವನಲ್ಲಿ ಮೂಡಿಸಿದಾಗ ಆತನಿಗೆ ತನ್ನ ಹೊಣೆಗಾರಿಕೆಯ ಪೂರ್ಣ ಜ್ಞಾನ ಲಭಿಸುತ್ತದೆ. ಇದನ್ನು ಅವನಿಗೆ ಹೊಸತರಲ್ಲೇ ತಿಳಿಸಿ ಹೇಳುವುದರಲ್ಲಿ ನನಗಂತೂ ಏನೂ ಅಭ್ಯಂತರ ಕಾಣುವುದಿಲ್ಲವಾದರೂ ಬಹುತೇಕ ಯಾವ ಕಂಪೆನಿಗಳು ಇದನ್ನು ಮಾಡುತ್ತಿಲ್ಲ ಎಂಬುದೂ ಸತ್ಯ.ಒಂದು ಕಾರು ತಯಾರಾಗಬೇಕಾದರೆ ಅದು ಅಸೆಂಬ್ಲಿಯಲ್ಲಿ ಅನೇಕ ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಒಂದೊಂದು ಹಂತದಲ್ಲೂ ಒಬ್ಬೊಬ್ಬ ನೌಕರನ ಒಂದೊಂದು ನಿರ್ದಿಷ್ಠವಾದ ಜವಾಬ್ದಾರಿ ಇರುತ್ತದೆ. ಅವನು ಅದನ್ನು ಸರಿಯಾಗಿ ನಿಭಾಯಿಸದೇ ಇದ್ದಾಗ ಅದನ್ನು ಅವಲಂಬಿಸಿ ಮುಂದೆ ನಡೆಯುವ ಮತ್ತೊಬ್ಬನ ಕೆಲಸ ಹದಗೆಡುತ್ತದೆ ಎಂಬ ತಿಳಿವು ಅವನಲ್ಲಿದ್ದರೆ ಒಳ್ಳೆಯದು. ಅಷ್ಟರಮಟ್ಟಿಗೆ ಅವನ ಎಚ್ಚರ ಅವನನ್ನು ಕಾಯುತ್ತದೆ.ಅವನೊಬ್ಬನ ತಪ್ಪಿನಿಂದಾಗಿ ಆ ಕಾರಿನ ತಯಾರಿ ಕೆಲಸ ವಿಳಂಬವಾಗಿ ಅದರಿಂದ ಆ ಕಾರಿಗಾಗಿ ಕಾಯುತ್ತಿರುವ ಗ್ರಾಹಕನಿಗೆ ಬೇಸರವಾಗುತ್ತದೆ. ಅದರಿಂದ ಕಂಪೆನಿಗೆ ಕೆಟ್ಟ ಹೆಸರು ಎಂಬ ಸೂಕ್ಷ್ಮವಾದರೂ ವಾಸ್ತವವಾದ ದೂರದೃಷ್ಟಿಯನ್ನು ಅವನಲ್ಲಿ ಕಂಪೆನಿಯೇ ಮುಂದಾಗಿ ನಿಂತು ಕಲ್ಪಿಸಿಕೊಡುವುದರಲ್ಲಿ ತಪ್ಪೇನು ಇಲ್ಲ.ಶಸ್ತ್ರಚಿಕಿತ್ಸೆ ಮಾಡುವ ಮುನ್ನ ಹಾಗೂ ಮಾಡಿದ ನಂತರ ದೇಹದ ಆ ಭಾಗವನ್ನು ವೈದ್ಯರು ಹೊಲಿದುಬಿಡುವ ಮೊದಲು ದಾದಿಯೊಬ್ಬಳು ಶಸ್ತ್ರಚಿಕಿತ್ಸೆಗೆಂದು ತಂದಿರುವ ಎಲ್ಲ ಉಪಕರಣಗಳ ಲೆಕ್ಕ ಮಾಡಬೇಕು, ತಾಳೆ ಹಚ್ಚಬೇಕು. ಇದು ಬಹಳ ಸಣ್ಣ ಕೆಲಸ ಎಂದೆನ್ನಿಸಿದರೂ ಇದನ್ನು ಆಕೆ ಸರಿಯಾಗಿ ಮಾಡದಿದ್ದಾಗ ಆಗಬಹುದಾದ ದುರ್ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ.ಶಸ್ತ್ರಚಿಕಿತ್ಸೆ ಮುಗಿಸಿದ ನಂತರ ಉಪಕರಣವೊಂದನ್ನು ರೋಗಿಯ ದೇಹದಲ್ಲೇ ಬಿಟ್ಟು ಅವನನ್ನು ಮನೆಗೆ ಕಳುಹಿಸಿರುವ ಅನೇಕ ಘಟನೆಗಳು ನಮ್ಮಲ್ಲಿ ನಡೆದಿವೆ, ನಡೆಯುತ್ತಲೂ ಇವೆ. ದಾದಿ ನಡೆಸುವ ಆ ಲೆಕ್ಕ ಹಾಗೂ ತಾಳೆ ಜೀವನ್ಮರಣಗಳ ಅಂತರ ಎಂಬ ಅರಿವು ಅವಳಲ್ಲಿದ್ದರೆ ಅಥವಾ ಅವಳಲ್ಲಿ ವ್ಯವಸ್ಥೆ ಆ ತಿಳಿವನ್ನು ಮೂಡಿಸಿದ್ದರೆ, ಬಹುಶಃ ಆಕೆ ತನ್ನ ಕೆಲಸವನ್ನು ಮತ್ತಷ್ಟು ಎಚ್ಚರದಲ್ಲಿ ಮಾಡಿಯಾಳು.ಈ ಪರಿಯ ಅರಿವನ್ನು ಮೂಡಿಸುವಾಗ ನೌಕರನೊಬ್ಬನ ಹೊಣೆಗಾರಿಕೆಯ ಜತೆಗೇ ಅವನಿಗೆ ದಂಡಬದ್ಧತೆಯ ಮೊದಲ ಪಾಠವನ್ನೂ ಪರಿಚಯಿಸಿದಂತೆ ಆಗುತ್ತದೆ. ಈಗ ಉಳಿದಿರುವುದು ದಂಡಬದ್ಧತೆಯ ಎರಡನೆಯ ಹಾಗೂ ನನ್ನ ಮಟ್ಟಿಗೆ ಅತ್ಯಂತ ಮಹತ್ವದ ವಿಚಾರ.

ತಪ್ಪು ಎಲ್ಲರಿಂದಲೂ ಜರಗುತ್ತದೆ, ಅದು ಸ್ವಾಭಾವಿಕ. `ತಪ್ಪು ಮಾಡುವುದು ಮಾನವ ಸಹಜ ಗುಣ. ಅದನ್ನು ಮನ್ನಿಸುವುದು ದೈವಿಕ ಗುಣ~ ಎಂದು ಅಧ್ಯಾತ್ಮ ತಿಳಿಸುತ್ತದೆ.ಬೋರ್ಡ್‌ರೂಮಿನ ಸುತ್ತಮುತ್ತ ಈ ಸೂಕ್ತಿಯನ್ನು ಮಾನವೀಯ ದೃಷ್ಟಿಯಲ್ಲಿ ಆದಷ್ಟೂ ಪಾಲಿಸುವುದು ಒಳ್ಳೆಯದೇ ಆದರೂ `ಹಣದ ಪ್ರಪಂಚದಲ್ಲಿ~ ಇದಕ್ಕೆ ತೀರಾ ಮನ್ನಣೆ ಅನವಶ್ಯಕ. `ತಪ್ಪು ಮಾಡುವುದು ನೌಕರನೊಬ್ಬನ ಸಹಜ ಗುಣ. ಆದರೆ ಆ ತಪ್ಪನ್ನು ಆತ ಮತ್ತೆ ಮಾಡದಂತೆ ನೋಡಿಕೊಳ್ಳುವುದು ಕಂಪೆನಿಯ ಕರ್ತವ್ಯ. ಅಷ್ಟೇ ಏಕೆ, ಆತ ಆ ತಪ್ಪನ್ನು ಮೊದಲಲ್ಲೇ ಮಾಡದಂತೆ ನೋಡಿಕೊಳ್ಳುವುದು ಒಳ್ಳೆಯ ಕಂಪೆನಿಯೊಂದರ ಗುಣ ವಿಶೇಷ~.ದೇಶ ವಿದೇಶದ ಟೆಲಿಕಾಂ ಗ್ರಾಹಕರೊಂದಿಗೆ ಬಲು ದೊಡ್ಡ ಮೊತ್ತದ, ಸಂಕೀರ್ಣಮಯವಾದ ಕಾಂ     ಟ್ರ್ಯಾಕ್ಟ್‌ಗಳನ್ನು ನಾನು ವ್ಯವಹರಿಸಿದ್ದೇನೆ. ಈ ಪರಿಯ ಕಾಂಟ್ರ್ಯಾಕ್ಟ್‌ಗಳು ಕೆಲ ತಿಂಗಳ ಕಾಲ ನಡೆವ ಚರ್ಚೆಗಳಿಂದ ಒಂದು ರೂಪ ತಾಳಿ ಎರಡೂ ಕಂಪೆನಿಗಳು ಹಿರಿಯ ಅಧಿಕಾರಿಗಳ ಸಹಿಗೆ ತಯಾರಾಗುತ್ತವೆ.ಇಲ್ಲಿ ಗ್ರಾಹಕರು ಸುಲಭದಲ್ಲಿ ಬಿಟ್ಟುಕೊಡದ ಒಂದು `ಲಯಬಿಲಿಟಿ ಕ್ಲಾಸ್~ ಇದೆ- ದಂಡಬದ್ಧತೆಯ ಕರಾರಿನ ಒಂದು ಅಧಿನಿಯಮ ಇದು. ಇದರ ಅನುಸಾರ ಗ್ರಾಹಕರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾರೆಂದರೆ `ನಿಮ್ಮಿಂದ ಕೊಡಲ್ಪಟ್ಟ ಉಪಕರಣ ಸರಿಯಾಗಿ ನಡೆಯದೇ ಇದ್ದ ಪಕ್ಷದಲ್ಲಿ ಅದರಿಂದ ಉಂಟಾಗುವ ನನ್ನೆಲ್ಲ ನಷ್ಟಗಳಿಗೆ ನೀವು ಪೂರ್ಣ ಪರಿಹಾರ ನೀಡಬೇಕು~.`ನನ್ನೆಲ್ಲ ನಷ್ಟಗಳು~ ಅಂದರೆ ಏನು? ನಿಮ್ಮ ಉಪಕರಣದ ಕಾರಣದಿಂದ ನನ್ನ ನೆಟ್‌ವರ್ಕಿನಲ್ಲಿ ಮತ್ತೆಲ್ಲೋ ಸಂಭವಿಸಬಹುದಾದ ಗಂಡಾಂತರಗಳಿಂದ ಮೊದಲುಗೊಂಡು, ನನಗಾಗಬಹುದಾದ ಲಾಭದ ನಷ್ಟ ಹಾಗೂ ಇದರಿಂದ ನನ್ನ ಗ್ರಾಹಕರಿಗೆ ನಾನು ನೀಡಬೇಕಾದ ಪರಿಹಾರಗಳ ಒಟ್ಟು ಮೊತ್ತ... ಹೀಗೆ ಗ್ರಾಹಕರ ನಷ್ಟಗಳ ಲೆಕ್ಕಾಚಾರ ಹನುಮಂತನ ಬಾಲದಂತೆ ಬೆಳೆಯುತ್ತದೆ.ಕೆಲವೊಮ್ಮೆ ಗ್ರಾಹಕರೊಂದಿಗಿನ ನಮ್ಮ ವ್ಯವಹಾರ ನಮಗೆ ಲಕ್ಷ ರೂಪಾಯಿ ನೀಡಿದರೆ ನಾವು ಅವರುಗಳ ಕಾಂಟ್ರ್ಯಾಕ್ಟ್‌ನಲ್ಲಿ ಕೋಟಿ ರೂಪಾಯಿವರೆಗಿನ ನಷ್ಟವನ್ನು ಭರಿಸುತ್ತೇವೆ ಎಂದು ಒಪ್ಪಬೇಕಾದ ಪರಿಸ್ಥಿತಿ ಇರುತ್ತದೆ.ಕಂಪೆನಿಯೊಂದಕ್ಕೆ ಅದರ ಗ್ರಾಹಕರೆಡೆಗೆ ತಪ್ಪು ಎಲ್ಲೂ ಸಂಭವಿಸಬಹುದು. ಅದಕ್ಕೆ ಅದರ ಯಾವುದೇ ನೌಕರ ಅಥವಾ ವಿಭಾಗ ಕಾರಣವಾಗಬಹುದು. ಆದ್ದರಿಂದ ನೌಕರನಿಗೆ ಅವನ ಹೊಣೆಗಾರಿಕೆಯ ಅರಿವಿನೊಂದಿಗೆ ಕಂಪೆನಿಗೆ ತನ್ನ ಗ್ರಾಹಕರೊಂದಿಗಿರುವ ಈ ಅನಿವಾರ್ಯತೆಗಳ ಪರಿಚಯವನ್ನು ಮಾಡಿಸುತ್ತ, ತಪ್ಪುಗಳು ನೌಕರರಿಂದ ಅಜಾಗರೂಕತೆಯ ಕಾರಣಕ್ಕಾಗಿ ಏರ್ಪಟ್ಟಾಗ ಆ ನೌಕರನಿಗೆ ಕಂಪೆನಿ ವಿಧಿಸುವ ದಂಡವನ್ನೂ ತಿಳಿಸಿ ಹೇಳುವುದು ಸೂಕ್ತ.ದಂಡಬದ್ಧತೆಯ ಈ ಎರಡನೆಯ ನೋಟದ ಅನುಭವದಿಂದ ಎಲ್ಲರೂ ಈಗ ಕಾಯಿದೆಯ ಮೇರೆಗೆ ಹೊಣೆಗಾರರಾಗುತ್ತಾರೆ. ದಂಡಬದ್ಧತೆಯ ಪೂರ್ಣ ತಿಳಿವಿನೊಂದಿಗೆ ಸ್ವಯಂ ತಮ್ಮನ್ನೇ ತಿದ್ದಿಕೊಳ್ಳುತ್ತಾ, ಮಾನಸಿಕವಾಗಿ ಎಚ್ಚರದಲ್ಲಿ ಬೆಳೆಯುವುದರ ಜತೆಗೇ ತಮ್ಮ ಕಂಪೆನಿಯನ್ನು ಮತ್ತೂ ಉತ್ತಮ ಕಂಪೆನಿಯನ್ನಾಗಿಸುವುದರಲ್ಲಿ ಸಹಭಾಗಿಗಳಾಗುತ್ತಾರೆ ಎಂಬುದು ನನ್ನ ಮತ. ಆದರೆ ಇದರ ಬಗ್ಗೆ ತನ್ನ ನೌಕರರೊಂದಿಗೆ ಮುಕ್ತವಾಗಿ ಚರ್ಚಿಸುವುದಕ್ಕೂ ಅನೇಕ ಕಂಪೆನಿಗಳು ಹಿಂದುಮುಂದು ನೋಡುತ್ತವಲ್ಲ ಎಂಬುದು ವಿಪರ್ಯಾಸವೂ ಹೌದು.ಇದೊಂದೇಕೆ ಬೇಡ? ಕಾರಣಗಳೇನೇ ಇದ್ದರೂ ನನಗಂತೂ ಸಮಂಜಸ ಎಂದೆನ್ನಿಸುತ್ತಿಲ್ಲ! ಲೇಖಕರನ್ನು 

satyesh.bellur@gmail.com

 ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.