ಇದೋ ನೋಡಿ ಹೈಟೆಕ್ ಚಕ್ಕಡಿ!

7

ಇದೋ ನೋಡಿ ಹೈಟೆಕ್ ಚಕ್ಕಡಿ!

Published:
Updated:
ಇದೋ ನೋಡಿ ಹೈಟೆಕ್ ಚಕ್ಕಡಿ!

ಚಿಕ್ಕೋಡಿ: ಇದು ಅಂತಿಂಥ ಚಕ್ಕಡಿಯಲ್ಲ, ಪವರ್‌ಫುಲ್ ಚಕ್ಕಡಿ. ಇದರಲ್ಲೇ ಕುಳಿತು ಟೇಪ್ ರೇಕಾರ್ಡರ್ ಹಾಕಿಕೊಂಡು ಹಾಡು ಕೇಳಬಹುದು, ಟಿವಿ ನೋಡಬಹುದು, ಮೊಬೈಲ್ ಫೋನ್ ಚಾರ್ಜ್ ಕೂಡ ಮಾಡಬಹುದು...!ಇದೆಲ್ಲಾ ಹೇಗೆ ಸಾಧ್ಯ ಅಂತೀರಾ? ಚಲಿಸುವ ಚಕ್ಕಡಿಯಿಂದಲೇ ವಿದ್ಯುತ್ ಉತ್ಪಾದಿಸುವ ವಿನೂತನ ಪ್ರಯೋಗದಿಂದ ಇದೆಲ್ಲಾ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದ ಶಂಕರ ಬಡಿಗೇರ. ಅಂದ ಹಾಗೆ ಇವರು ಮೆಕ್ಯಾನಿಕ್ ಅಲ್ಲ, ವಿಜ್ಞಾನಿ ಅಂತೂ ಅಲ್ಲವೇ ಅಲ್ಲ. 5ನೇ ತರಗತಿ ವರೆಗೆ ಕಲಿತಿರುವ ಸಾಮಾನ್ಯ ರೈತ.ಪ್ರತಿ ವರ್ಷ ಯಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಯಲ್ಲೇ ಹೋಗುವ ಇವರಿಗೆ ವಿದ್ಯುತ್ ಉತ್ಪಾದನೆ ಮಾಡುವ ವಿನೂತನ ಆಲೋಚನೆ ಹೊಳೆಯಿತು. `ಚಲಿಸುವ ಚಕ್ಕಡಿಯ ಚಕ್ರಗಳಿಗೆ ಡೈನಮೊ ಅಳವಡಿಸಿ ಚಕ್ರದೊಂದಿಗೆ ಅದೂ ತಿರುಗುವಂತೆ ಮಾಡಿದೆ. ಹೀಗಾಗಿ ಚಕ್ಕಡಿ ಮುಂದೆ ಹೋಗುತ್ತಿದ್ದಂತೆ ವಿದ್ಯುತ್ ಉತ್ಪಾದನೆಯಾಗತೊಡಗಿತು.ಬ್ಯಾಟರಿಯೊಂದಕ್ಕೆ ಡೈನಮೊ ಸಂಪರ್ಕ ಕಲ್ಪಿಸಿ, ಆ ಮೂಲಕ ವಿದ್ಯುತ್ ಉತ್ಪಾದಿಸಿ ಬ್ಯಾಟರಿ ಚಾರ್ಜ್ ಆಗುವಂತೆ ಮಾಡಿದೆ. ಹೀಗೆ ಚಕ್ಕಡಿಯಿಂದಲೇ ಉತ್ಪಾದಿಸಿದ ವಿದ್ಯುತ್‌ನಿಂದ ಡಿವಿಡಿ, ಮೊಬೈಲ್ ಚಾರ್ಜರ್, ಟಿವಿ. ಫ್ಯಾನ್ ಕಾರ್ಯ ನಿರ್ವಹಿಸುತ್ತವೆ` ಎನ್ನುತ್ತಾರೆ ಬಡಿಗೇರ.ಈ ಪ್ರಯೋಗದಲ್ಲಿ ಅನೇಕ ಬಾರಿ ಬಿಡಿಭಾಗಗಳು ಕೆಟ್ಟು ಆರ್ಥಿಕ ನಷ್ಟವೂ ಉಂಟಾಗಿದೆ. ಆದರೂ ಛಲ ಬಿಡದ ಅವರು ಸತತ ಪ್ರಯತ್ನದಿಂದ 70 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಿ ಈ ಚಕ್ಕಡಿ ತಯಾರಿಸಿದ್ದಾರೆ.`ಎತ್ತುಗಳ ಕೊರಳಲ್ಲಿ ಕಟ್ಟಿದ್ದ ಗೆಜ್ಜೆಗಳ ಘಲ್.., ಘಲ್..., ಸದ್ದುಗಳೊಂದಿಗೆ ಚಕ್ಕಡಿಯಲ್ಲಿ ದೀಪ ಹಾಕಿಕೊಂಡು ಟಿ.ವಿ ನೋಡುತ್ತಾ, ಹಾಡು ಕೇಳುತ್ತಾ ರಾತ್ರಿ ತಂಗಾಳಿಯಲ್ಲಿ ಯಲ್ಲಮ್ಮನ ಗುಡ್ಡದ ಜಾತ್ರೆಗೆ ಹೋಗೋದೆಂದರೆ ಒಂಥರಾ ಮಜಾ` ಎನ್ನುತ್ತಾರೆ ಬಡಿಗೇರ ಕುಟುಂಬ ಸದಸ್ಯರು.ಕುಟುಂಬ ಸಮೇತ ಚಕ್ಕಡಿ ಮೂಲಕ ಕರೋಶಿ ಗ್ರಾಮದಿಂದ ಯಲ್ಲಮ್ಮನಗುಡ್ಡ ತಲುಪಲು ಕನಿಷ್ಠ ಒಂದು ವಾರವಾದರೂ ಬೇಕಾಗುತ್ತದೆ. ಆಗ ಸಮಯ ಕಳೆಯುವುದೇ ದೊಡ್ಡ ಸಮಸ್ಯೆ. ಅಲ್ಲದೇ ಬಿಸಿಲಿನಲ್ಲಿ ಎತ್ತುಗಳು ದಣಿಯುತ್ತವೆ. ರಾತ್ರಿ ವೇಳೆ ಪ್ರಯಾಣ ಮಾಡುವುದು ಒಳ್ಳೆಯದು ಎಂದು ಅರಿತ ಶಂಕರ ಚಕ್ಕಡಿಗೆ ಹೆಡ್‌ಲೈಟ್, ಇಂಡಿಕೇಟರ್‌ಗಳನ್ನೂ ಅಳವಡಿಸಿದ್ದಾರೆ. ಅವುಗಳಿಗೆ ಗುಂಡಿಗಳನ್ನೂ ಅಳವಡಿಸಿದ್ದಾರೆ.ಚಕ್ಕಡಿಯನ್ನು ನಡೆಸಬೇಕಾದರೆ ತಮಗೂ ಟಿ.ವಿ ಕಾಣಿಸಲಿ ಎಂದು ಚಕ್ಕಡಿಗೆ ಕನ್ನಡಿಯನ್ನೂ  ಅಳವಡಿಸಿಕೊಂಡಿದ್ದಾರೆ.ಸಾಧನೆಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ. ಆದರೆ, ಸಾಧಿಸೋಕೆ ಛಲವೊಂದಿದ್ದರೆ ಸಾಕು, ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದಕ್ಕೆ ಶಂಕರ ಬಡಿಗೇರ ಸಾಧನೆ ನಮ್ಮ ಮುಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry