ಮಂಗಳವಾರ, ಜುಲೈ 14, 2020
27 °C

ಇದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ...

ಡಾ.ಎಸ್.ಬಿ.ಜೋಗುರ Updated:

ಅಕ್ಷರ ಗಾತ್ರ : | |

ಇದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ...

   ಮನಬಂದ ಹೆಣ್ಣನ್ನು ವಿನಯದಲಿ ಕರೆದಿತ್ತು

   ಮನಮುಟ್ಟಿ ಬಾಳ್ವೆ ಮಾಡಿದರೆ ಅಮೃತದ

    ಕೆನೆಯ ಸವಿದಂತೆ ಸರ್ವಜ್ಞ -ಸರ್ವಜ್ಞ

ಸಾಮಾಜಿಕ ಬದಲಾವಣೆಯ ಹೊಡೆತಕ್ಕೆ ಸಿಲುಕದ ಸಾಮಾಜಿಕ ಸಂಸ್ಥೆಗಳೇ ಅಪರೂಪ. ಪ್ರಜೋತ್ಪಾದನೆ, ಲೈಂಗಿಕ ಬಯಕೆಗಳ ಈಡೇರಿಕೆ  ಹಾಗೂ ಮಕ್ಕಳ ಪಾಲನೆ ಪೋಷಣೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡು ಆವಿರ್ಭವಿಸಿದ ವಿವಾಹ ಹಾಗೂ ಕುಟುಂಬದಂತಹ ಸಂಘ-ಸಂಸ್ಥೆಗಳ ರಚನೆ ಮತ್ತು ಕಾರ್ಯಗಳಲ್ಲಿ ಕೆಲ ಬಾಹ್ಯ ಮತ್ತು ಆಂತರಿಕ ಸಂಗತಿಗಳ ಒತ್ತಡದಿಂದ ಗಣನೀಯ ಸ್ವರೂಪದ ಬದಲಾವಣೆಗಳಾಗಿವೆ.ವೈವಾಹಿಕ ಹಾಗೂ ಕೌಟುಂಬಿಕ ಸಂಬಂಧಗಳಲ್ಲಿ ಹಿಂದೆಂದೂ ಕಾಣದಂತಹ ಬಿರುಕುಗಳು, ಸಡಿಲತೆಗಳು ಬದಲಾವಣೆಯ ಹೆಸರಲ್ಲಿ ಘಟಿಸುತ್ತಲೇ ಇವೆ.  ಇಂದು ಕೌಟುಂಬಿಕ ಕಿರಿಕಿರಿಗಳು ಗಂಡು-ಹೆಣ್ಣು ಇಬ್ಬರಿಗೂ ನುಂಗದ ತುತ್ತಾಗಿವೆ. ಮನೆ ಎನ್ನುವುದು ಕೇವಲ ಇಟ್ಟಿಗೆ ಮತ್ತು ಸಿಮೆಂಟಿನ ಕಟ್ಟಡ ಎನ್ನುವಷ್ಟು ನಿರ್ಭಾವುಕ ಸ್ಥಿತಿ ನಿರ್ಮಾಣವಾಗುತ್ತಿದೆ.ಬರ್ಟಂಡ್ ರಸಲ್ ಹೇಳುವಂತೆ  ಈಚೆಗೆ ಅನೇಕ ಹೆಂಗಸರು ವೈಯಕ್ತಿಕತೆ, ವೃತ್ತಿಗಳಿಗಾಗಿ ಸ್ವಾತಂತ್ರ್ಯವನ್ನು ಬಯಸಿ, ತಮ್ಮ ಗಂಡಂದಿರೊಡನೆ ಯಾವುದೋ ಒಂದು ಮಿತಿಯನ್ನು ಮೀರಿ ಹೊಂದಿಕೊಳ್ಳಲಿಚ್ಛಿಸುವುದಿಲ್ಲ.ಹಾಗೆಯೇ ಪುರುಷ ಪ್ರಾಧಾನ್ಯ ವ್ಯವಸ್ಥೆಗೆ ಜೋತು ಬಿದ್ದಿರುವ ಗಂಡಸರಿಗೆ ತಾವೇ ಹೆಂಡತಿಯರೊಡನೆ ಹೊಂದಿಕೊಳ್ಳಬೇಕಾದ ಪ್ರಮೇಯ ಕಾಣುತ್ತಿಲ್ಲ. ಈ ಕಷ್ಟ ಹೆಚ್ಚು ಕಾಣುವುದು ದಾಂಪತ್ಯ ನಿಷ್ಠೆಯ ವಿಚಾರದಲ್ಲಿ ಎಂದಿರುವುದನ್ನು ನೋಡಿದರೆ ಕೌಟುಂಬಿಕ ವಲಯದಲ್ಲಿ ಇಂದು ಗಂಡ-ಹೆಂಡತಿಯ ಮಧ್ಯೆ ಒಂದು ಬಗೆಯ ಅಗಮ್ಯವಾದ ಹುಸಿ ಪ್ರತಿಷ್ಠೆಯ ಗೋಡೆಯೊಂದು ಎದ್ದು ನಿಂತಂತಿದೆ.

 

ಎಲ್ಲವೂ ತೋರಿಕೆಗಾಗಿ ಎನ್ನುವ ಪರಿಪಾಠವೊಂದು ಆರಂಭವಾಗಿದೆ. ಹೊರನೋಟದಲ್ಲಿ ನೆರೆಮನೆಯವರ ನಡುವೆ, ಗಂಡ-ಹೆಂಡತಿ ತಾವು ಚೆನ್ನಾಗಿಯೇ ಇದ್ದೇವೆ ಎಂದು ತೋರಿಸಿಕೊಂಡರೂ ಒಳಗಡೆ ಒಂದು ಬಗೆಯ ಮುಸುಕಿನ ತಿಕ್ಕಾಟ ಇದ್ದೇ ಇದೆ.ಲೈಂಗಿಕ ಬಯಕೆ ಎನ್ನುವುದು ಒಂದು ಸಹಜ ಪ್ರವೃತ್ತಿಯಾದರೂ ಇದರ ವಿಧಿಬದ್ಧವಾದ ಈಡೇರಿಕೆಯ ಹಿಂದೆಯೂ ವಿವಾಹ ಎನ್ನುವ ಸಂಸ್ಥೆಯ ಸಾರ್ಥಕತೆ ಅಡಗಿದೆ. ಲೈಂಗಿಕ ಬಯಕೆಯ ಈಡೇರಿಕೆಯಲ್ಲಿಯ ಸಮರ್ಥತೆ- ಅಸಮರ್ಥತೆಗಳು, ದಿನಗಳೆದಂತೆ ಗಂಡ-ಹೆಂಡತಿಯರು ಪರಸ್ಪರ ಆಕರ್ಷಣೆಯನ್ನು ಕಳೆದುಕೊಂಡು ವಿಚಲಿತರಾಗುವ ಮಾನಸಿಕ ಸ್ಥಿತಿಯನ್ನು ತಲುಪುವವರೆಗಿನ ಬೆಳವಣಿಗೆಗಳು ಕೂಡಾ ಇಂದಿನ ದಾಂಪತ್ಯದಲ್ಲಿಯ ಇರುಸು-ಮುರುಸುಗಳಿಗೆ ಒಂದು ಬಹುಮುಖ್ಯವಾದ ಕಾರಣ.ಲೈಂಗಿಕತೆಯೊಂದೇ ದಾಂಪತ್ಯದ ಆಧಾರವಲ್ಲ ಎಂದು ಹೇಳುವ ಸ್ಥಿತಿಯೂ ಈಗಿಲ್ಲ. ಕೆಲವು ಗಂಡ-ಹೆಂಡತಿಯರು ತೀರಾ ಬಾಲಿಶ ಕಾರಣಕ್ಕೂ ವಿಚ್ಛೇದನವೇ ಪರಿಹಾರ ಎಂದು ಮಾತನಾಡುವುದೂ ಇದೆ.

 

ಆತುರಗಾರ ಗಂಡ-ಹೆಂಡತಿಯರಿಗೆ ಖಂಡಿತ ಅವರು ಎದುರಿಸುತ್ತಿರುವ ತೊಂದರೆಗಳಿಗೆ ಈ ವಿಚ್ಛೇದನ ಪರಿಹಾರವಂತೂ ಆಗಲಾರದು ಎನ್ನುವ ಕನಿಷ್ಠ ತಿಳುವಳಿಕೆಯೂ ಇಲ್ಲದಂತಹ ಸ್ಥಿತಿ ವಿಚಿತ್ರವಾದರೂ ಸತ್ಯ. ಸಂತಾನವನ್ನು ಎದುರಲ್ಲಿಟ್ಟುಕೊಂಡು ವಿಚ್ಛೇದನದ ಸೊಲ್ಲೆತ್ತುವ ಸತಿ-ಪತಿಗಳಿಗೆ ಹೊಂದಿಕೊಂಡು ಹೋಗುವಲ್ಲಿಯೇ ಸುಖಕರವಾದ ಮಾರ್ಗ ಬಿಂಬಿತವಾಗಬೇಕು.ಗಂಡನೇನು ಮಹಾ..? ಹೆಂಡತಿಯೇನು ಮಹಾ..? ಎನ್ನುವ ಉಡಾಫೆಯ ಪ್ರಶ್ನೆಯೊಂದಿಗೆ ಶುರುವಾಗುವ ವಾಗ್ವಾದ ಇಲ್ಲವೇ ಕಲಹ ದಾಂಪತ್ಯವನ್ನು ಹಗುರವಾಗಿ ಪರಿಗಣಿಸುವ ದಡ್ಡತನದ ಧೀಮಂತಿಕೆಯನ್ನು ಬೆಳೆಸುತ್ತದೆ. ಈ ಬಗೆಯ ಮನಸ್ಥಿತಿಯೇ ದಾಂಪತ್ಯದಲ್ಲಿ ಗೋಡೆಯನ್ನು ಎಬ್ಬಿಸುತ್ತದೆ.ದುರಂತವೆಂದರೆ ಅವರ ನೆತ್ತಿಗೆ ಕುಕ್ಕಿ ಬುದ್ಧಿ ಹೇಳಿ ಆ ಗೋಡೆಯನ್ನು ಬೀಳಿಸಬೇಕಾದ ಹೆಂಡತಿಯ ಕಡೆಯ ಸಂಬಂಧಿಗಳು ಗೋಡೆಯ ಒಂದು ಬದಿ ನಿಂತು, ಗಂಡನ ಕಡೆಯ ಸಂಬಂಧಿಗಳು ಗೋಡೆಯ ಇನ್ನೊಂದು ಬದಿ ನಿಂತು ನೀರು ಸಿಂಪಡಿಸುವ ಮೂಲಕ ಆ ಗೋಡೆಯನ್ನು ಇನ್ನಷ್ಟು ಮಜಬೂತು ಮಾಡುತ್ತಾರೆ. ಆ ಮೂಲಕ ಸೇಡಿನ ಸಂಬಂಧಕ್ಕೆ ನಾಂದಿ ಹಾಡುತ್ತಾರೆ.ಭಾರತೀಯ ಸಮಾಜದಲ್ಲಿ ದಾಂಪತ್ಯ ಎನ್ನುವುದು ದೀರ್ಘಕಾಲದ ಅನ್ಯೋನ್ಯ ಸಂಬಂಧವಾಗಿರಬೇಕು, ಸಣ್ಣ ಪುಟ್ಟ ಜಗಳಗಳು ಉಂಡು ಮಲಗುವ ವೇಳೆಗೆ ಹಾಸಿಗೆಯಲ್ಲೇ ಕರಗುವಂತಿರಬೇಕು ಎನ್ನುವ ನಿರೀಕ್ಷೆಗಳಿದ್ದವು.

 

ಆ ನಿರೀಕ್ಷೆಗೆ ತಕ್ಕಂತೆ ಕೌಟುಂಬಿಕ ಪರಿಸರದಲ್ಲಿಯ ಕಾರ್ಯಚಟುವಟಿಕೆಗಳು ಇರುತ್ತಿದ್ದವು. ಔದ್ಯೋಗೀಕರಣ, ಪಾಶ್ಚಾತ್ಯೀಕರಣ, ಆಧುನೀಕರಣ ಮತ್ತು ನಗರೀಕರಣಗಳೊಂದಿಗೆ ಶುರುವಾದ ಬದಲಾವಣೆಯ ಭರಾಟೆ ಅನೇಕ ಬಗೆಯ ಅನಿರೀಕ್ಷಿತ ಪರಿವರ್ತನೆಗಳನ್ನು ಕೌಟುಂಬಿಕ ವಲಯದಲ್ಲಿ ಉಂಟು ಮಾಡಿದವು.ಹಾಗೆ ನೋಡಿದರೆ ದೀರ್ಘಕಾಲದ ದಾಂಪತ್ಯಕ್ಕೆ ಇಂಥದೇ ಎನ್ನುವ ಒಂದು ಸ್ಥಾಪಿತ ಸೂತ್ರವಿಲ್ಲ. ಆದಾಗ್ಯೂ ಸಾಂಪ್ರದಾಯಿಕ ಸಮಾಜಗಳು ಗಂಡ-ಹೆಂಡತಿಯ ಮಧ್ಯೆ ಇರಬಹುದಾದ ನಿಷ್ಠೆ, ಪರಸ್ಪರ ತಿಳಿವಳಿಕೆ, ಹೊಂದಾಣಿಕೆಯ ಮನೋಭಾವ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಆ ದಿಶೆಯಲ್ಲಿ ಒಪ್ಪಿಕೊಳ್ಳಬಹುದಾದ ಮಾರ್ಗಗಳು ಎಂದು ಒಪ್ಪಿಕೊಂಡಂತಿದ್ದರೂ ಅವೇ ಅಂತಿಮವಲ್ಲ.

 

ಈಗಂತೂ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸಂಗಾತಿಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ, ಅಂತರ್ಜಾತಿ ವಿವಾಹ, ಪ್ರೇಮ ವಿವಾಹ, ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದನೆ, ವೃತ್ತಿ ಸಮಾನತೆ, ಸಮಾನ ಶಿಕ್ಷಣ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮುಂತಾದ ಸಂಗತಿಗಳು ದೀರ್ಘಕಾಲ ಬಾಳಿಕೆ ಬರಬೇಕಾದ ದಾಂಪತ್ಯವನ್ನು ಸ್ವಹಿತಾಸಕ್ತಿಗಾಗಿ ಪ್ರಶ್ನಿಸುವ, ಅಲ್ಲಾಡಿಸುವ ಯತ್ನ ಮಾಡುವ ಮೂಲಕ ಅದರ ಬುಡವನ್ನು ಸಡಿಲಗೊಳಿಸಲಾಗುತ್ತಿದೆ.ಕೌಟುಂಬಿಕ ವಲಯದಲ್ಲಿ ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಮತ್ತೆ ಮತ್ತೆ ನಡೆಯುವ ಮಾತಿನ ಚಕಮಕಿ, ವ್ಯಕ್ತಿನಿಷ್ಠ  `ಇಸಂ~ ಗಳ ಪ್ರತಿಪಾದನೆ, ನನ್ನದೇ ಆಗಬೇಕು ಎನ್ನುವ ಹಠಮಾರಿತನ, ಹಿರಿಯರ ಹಿಡಿತದಿಂದ ಹೊರಗಿರುವುದು, ಸಿನಿಮೀಯ ರೀತಿಯಲ್ಲಿ ಬದುಕುವ ಬಯಕೆ, ಅನೈತಿಕ ಸಂಬಂಧಗಳನ್ನು ಸಾಮಾನ್ಯ ಮತ್ತು ಸಹ್ಯ ಎಂದು ಬಿಂಬಿಸುವ ಕೆಲ ಟಿವಿ ಧಾರಾವಾಹಿಗಳು, ಚಲನಚಿತ್ರಗಳು ಇಂದಿನ ದಂಪತಿಗಳ ಬದುಕಿನ ಭಾಗವಾಗಿ ದಾಂಪತ್ಯ ಎನ್ನುವುದು ಮರಳಿನ ಮೇಲಿನ ಮನೆಯಂತಾಗುತ್ತಿದೆ.ಮುಂಬರುವ ದಿನಗಳಲ್ಲಿ  ಅದೋ ಅಲ್ಲಿ ನೋಡಿ  ಒಂದು ದಶಕದ ಕಾಲ ಕೂಡಿ ಬದುಕಿದ ದಂಪತಿಗಳವರು  ಎಂದು ಕೈ ಮಾಡಿ ತೋರಿಸುವ, ಪ್ರಶಸ್ತಿ ಪುರಸ್ಕಾರಗಳನ್ನು ಕೊಡುವ ದಿನಗಳು ಬಂದರೆ ಅಚ್ಚರಿ ಪಡಬೇಕಿಲ್ಲ. ಇಂದು ಮದುವೆಯಾಗುವ ಹುಡುಗ-ಹುಡುಗಿಯ ಮುಂದಿರುವ ಬಹುದೊಡ್ಡ ಸವಾಲು ತಮ್ಮ ದಾಂಪತ್ಯ ಸುದೀರ್ಘವಾಗಿರುವಲ್ಲಿ ಏನು ಮಾಡಬೇಕು? ಎನ್ನುವುದಾಗಿದೆ.ದಾಂಪತ್ಯ ಜೀವನದ ಯಶಸ್ಸಿಗೆ ನಿರ್ದಿಷ್ಟವಾದ ಸೂತ್ರವಂತೂ ಇಲ್ಲ. ಅದೊಂದು ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಸಂಗತಿಗಳ ಸುಸಂಬದ್ಧವಾದ ಹೊಂದಾಣಿಕೆ. ಆ ಹೊಂದಾಣಿಕೆಯನ್ನು ಮೈಗೂಡಿಸಿಕೊಳ್ಳುವಲ್ಲಿಯೇ ದಾಂಪತ್ಯ ಜೀವನದ ಯಶಸ್ಸು ಅಡಗಿದೆ. ಹಾಗಾದಾಗ ಮಾತ್ರ ಸಂಸಾರ ಸಸಾರವಾಗಿ, ಸಮರಸವೇ ಜೀವನ ಎನ್ನುವುದರ ಬಗ್ಗೆ ಮನದಟ್ಟಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.