ಇದ್ದಿಲು ಉದ್ದಿಮೆಗೆ ಹೊರ ಜಿಲ್ಲೆಯ ಕಾರ್ಮಿಕರು!

7

ಇದ್ದಿಲು ಉದ್ದಿಮೆಗೆ ಹೊರ ಜಿಲ್ಲೆಯ ಕಾರ್ಮಿಕರು!

Published:
Updated:

ಚಳ್ಳಕೆರೆ: ಬರಪೀಡಿತ ತಾಲ್ಲೂಕು ಎಂದೇ ಗುರುತಿಸಿ ಕೊಂಡಿರುವ ಬಯಲುಸೀಮೆ ಚಳ್ಳಕೆರೆ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆ ಇಲ್ಲದೇ ಬಿತ್ತನೆ ಕಾರ್ಯ ಆಗಿಲ್ಲ. ಮಳೆ ಆಧಾರಿತ ಬೇಸಾಯ ಪದ್ಧತಿ ರೂಢಿಸಿಕೊಂಡಿರುವ ತಾಲ್ಲೂಕಿನ ರೈತರಿಗೆ ಯಾವುದೇ ನೀರಾವರಿ ಸೌಲಭ್ಯಗಳೂ ಇಲ್ಲವಾಗಿದೆ.ಮಳೆಯಾಶ್ರಿತ ಬೆಳೆಯಾದ ಶೇಂಗಾ ಕಳೆದ ಎರಡು- ಮೂರು ವರ್ಷಗಳಿಂದಲೂ ಅಂದುಕೊಂಡಷ್ಟು ಇಳುವರಿ ತಂದುಕೊಡದ ಕಾರಣ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲೂ ಸಹ ರೈತರಿಗೆ ಸಾಧ್ಯವಾಗಿಲ್ಲ.ಇದೀಗ ತಾಲ್ಲೂಕಿನ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬೇರೆಡೆಗೆ ಗುಳೇ ಹೋಗುತ್ತಿದ್ದಾರೆ. ಮುಂದಿನ ಬೇಸಿಗೆ ಹೊತ್ತಿಗೆ ಗ್ರಾಮೀಣ ಪ್ರದೇಶಗಳ ಜನತೆ ಮತ್ತಷ್ಟು ಊರು ಬಿಡುವ ಸಾಧ್ಯತೆಗಳು ಗೋಚರಿಸುತ್ತಿವೆ.ಕೇಂದ್ರ ಸರ್ಕಾರದ ಯೋಜನೆ ಮೂಲಕ ಹಮ್ಮಿಕೊಳ್ಳುವ ಉದ್ಯೋಗ ಖಾತ್ರಿ ಯೋಜನೆ ತಾಲ್ಲೂಕಿನಲ್ಲಿ ಸಂಪೂರ್ಣ ಹಣ ದೋಚುವ ಯೋಜನೆಯಾಗಿ ಕೂಲಿ ಕಾರ್ಮಿಕರಿಗೆ ಮಾಡಿದ ಕೂಲಿ ಹಣವೂ ಕೈ ಸೇರದ ನಿದರ್ಶನಗಳು ಸಾಕಷ್ಟಿವೆ.ಇಂತಹ ಸಂದಿಗ್ಧ ಕಾಲದಲ್ಲಿ  ತಾಲ್ಲೂಕಿನ ಬಹುತೇಕ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಲವರು ಕಟ್ಟಿಗೆಯಿಂದ ಸುಟ್ಟ ಇದ್ದಿಲನ್ನು ತಯಾರಿಸಿ ಬೇರೆಡೆಗೆ ಸಾಗಿಸುವ ಉದ್ದಿಮೆಯನ್ನು ಹೇರಳವಾಗಿ ನಡೆಸುತ್ತಿದ್ದಾರೆ.ಆದರೆ, ಬಹುತೇಕ ಇಂತಹ ಇದ್ದಿಲು ಸುಡುವ ಕೆಲಸ ಮಾಡುವ ಕಾರ್ಮಿಕರು ಹೊರ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಇಲ್ಲಿಯವರಿಗೇ ಮಾಡಲು ಕೆಲಸ ಇಲ್ಲ. ಗದಗ, ಕೊಪ್ಪಳ ಜಿಲ್ಲೆಗಳಿಂದ ಬಂದ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಅಲ್ಲಿಂದ ಕೆಲಸ ಮಾಡಲು ಬಂದಿರುವ ಕಾರ್ಮಿಕರಿಗೂ ಸಹ ಬಡತನದ ಪರಿಸ್ಥಿತಿ ಕಾಡುತ್ತಿದೆ. ಆದರೂ, ಇಲ್ಲಿರುವವರ ಸ್ಥಿತಿ ಏನು? ಎನ್ನುತ್ತಾರೆ ಕೂಲಿಗಾಗಿ ಅಲೆಯುತ್ತಿರುವ ಇಲ್ಲಿನ ಕಾರ್ಮಿಕರು.ಬಹುತೇಕ ಇದ್ದಿಲು ಸುಡುವವರು ಅಡವಿಯಲ್ಲಿರುವ ಸೀಮೆ ಜಾಲಿಯ ಗಿಡ ಮತ್ತು ದೊಡ್ಡದಾದ ಬೇರುಗಳನ್ನು ತೆಗೆದು ಇದ್ದಿಲು ತಯಾರಿಸುತ್ತಾರೆ. ಈಗಂತೂ ಮಳೆ ಇಲ್ಲದೇ ಬಿತ್ತನೆ ಆಗಿಲ್ಲದ ಜಮೀನುಗಳ ಬದುವಿನಲ್ಲಿರುವ ಜಾಲಿ ಮರ ಇನ್ನಿತರೆ ಮರಗಳನ್ನು ಯಾರಿಗೂ ಕಾಣದೇ ನೆಲಕ್ಕೆ ಉರುಳಿಸುತ್ತಾರೆ.ಇಲ್ಲಿನ ಜನರಿಗೆ, ಮೊದಲಾದರೆ ಆಯಿಲ್ ಮಿಲ್‌ಗಳು ಕೆಲಸ ನೀಡುತ್ತಿದ್ದವು. ಇದ್ದ ಅಷ್ಟೂ ಮಿಲ್‌ಗಳು ಈಗಾಗಲೇ ಮುಚ್ಚಿವೆ. ಕೆಲವು ಮುಚ್ಚುವ ಸರದಿಯಲ್ಲಿವೆ. ಇದರಿಂದ ಕೆಲಸ ಇಲ್ಲದೇ ಹಳ್ಳಿಯಲ್ಲಿ ಜನರು ಸುಮ್ಮನಿದ್ದಾರೆ. ಹೀಗಾಗಿ ಇದ್ದಿಲು ಘಟಕಗಳ ಮಾಲೀಕರು ಸ್ಥಳೀಯರಿಗೆ ಕೆಲಸ ನೀಡುವಲ್ಲಿ ಆದ್ಯತೆ ನೀಡಬೇಕು ಎಂಬುದು ಕಾರ್ಮಿಕ ತಿಪ್ಪೇಸ್ವಾಮಿ ಅವರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry