ಭಾನುವಾರ, ಆಗಸ್ಟ್ 25, 2019
28 °C
ಸಮಸ್ಯೆಗಳ ಸಾಲು-ಸಾಲು: ಕ್ರೀಡಾಪ್ರೇಮಿಗಳಿಂದ ಹಿಡಿ ಶಾಪ

ಇದ್ದು ಇಲ್ಲದಂತಾಗಿರುವ ತಾಲ್ಲೂಕು ಕ್ರೀಡಾಂಗಣ

Published:
Updated:

ಮದ್ದೂರು: ಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾ ಪ್ರೇಮಿಗಳ ಪಾಲಿಗೆ ಇದ್ದು ಇಲ್ಲದಂತದಾಗಿದ್ದು, ಅವರ ಹಿಡಿ ಶಾಪಕ್ಕೆ ಗುರಿಯಾಗಿದೆ.ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ತಮ್ಮೂರಿನ ಕ್ರೀಡಾ ಪ್ರೇಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈಸ್ಕೂಲ್ ಮೈದಾನವನ್ನು ಕ್ರೀಡಾಂಗಣವನ್ನಾಗಿಸಲು ಚಾಲನೆ ನೀಡಿದರು.ಅದರಂತೆ ಒಳಾಂಗಣ ಸೇರಿದಂತೆ ಹೊರ ಕ್ರೀಡಾಂಗಣದ ಕಾಮಗಾರಿ ಆರಂಭಗೊಂಡಿತು. ಭೂ ಸೇನಾ ನಿಗಮವು ತರಾತುರಿಯಲ್ಲಿ ಕೆಲಸ ಆರಂಭಿಸಿತು. ಅಷ್ಟರಲ್ಲಿ ಎಸ್.ಎಂ. ಕೃಷ್ಣ ಅವರ ಅಧಿಕಾರ ಅವಧಿಯು ಮುಕ್ತಾಯವಾಯಿತು.  ಕ್ರೀಡಾಂಗಣ ಕಾಮಗಾರಿಯು ಅಂತಿಮ ಹಂತಕ್ಕೆ ಬಂದು ನಿಂತು ಹೋಯಿತು.ಇದೀಗ ಪ್ರೇಕ್ಷಕರ ಗ್ಯಾಲರಿಯಲ್ಲಿನ ಆಸನದ ಕಲ್ಲುಗಳು ಕಳಪೆ ಕಾಮಗಾರಿಯಿಂದ ಎದ್ದಿವೆ. ಇದಲ್ಲದೇ ಗ್ಯಾಲರಿಯ ಮೇಲಿನ ಹಂತದಲ್ಲಿ ಪಾರ್ಥೆನಿಯಂ ಕಳೆ ಬೆಳೆದು ನಿಂತು, ಹಾವು ಚೇಳು ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದಲ್ಲದೇ ಗ್ಯಾಲರಿಯ ಮುಖ್ಯಭಾಗಕ್ಕೆ ಮೆಲ್ಚಾವಣಿ ಇಲ್ಲದೇ ಕ್ರೀಡಾ ಪ್ರೇಮಿಗಳು ಉರಿ ಬಿಸಿಲಿನಲ್ಲಿಯೇ ಕುಳಿತು ಪಂದ್ಯ ವೀಕ್ಷಿಸಬೇಕಾದ ದುಸ್ಥಿತಿ ಒದಗಿದೆ.

ಕ್ರೀಡಾಂಗಣದಲ್ಲಿ ಯಾವುದೇ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಿಸಿಲ್ಲ. ಕನಿಷ್ಠ ಪಕ್ಷ ಮೈದಾನವನ್ನು ಸಮತಟ್ಟುಗೊಳಿಸಿಲ್ಲದ ಕಾರಣ ಮೈದಾನದಲ್ಲಿ ಮುಳ್ಳು ಗಿಡಗಳು ಬೆಳದಿದ್ದು, ಕ್ರೀಡಾಳುಗಳ ಪಾಡು ಹೇಳ ತೀರದ್ದಾಗಿದೆ.ಸುಧಾರಣೆಗೊಂಡ ಒಳಾಂಗಣ: ಇಲ್ಲಿನ ಒಳಾಂಗಣ ಕ್ರೀಡಾಂಗಣವನ್ನು ಯುವಜನ ಸೇವಾ ಕ್ರೀಡಾ ಇಲಾಖೆ ಇತ್ತೀಚೆಗೆ ಸುಧಾರಣೆಗೊಳಿಸಿದೆ. ಒಳಾಂಗಣದಲ್ಲಿ ಎರಡು ಸುಸಜ್ಜಿತ ವುಡನ್ ಷಟಲ್ ಬ್ಯಾಡ್ಮಿಂಟನ್ ಕೋರ್ಟುಗಳನ್ನು ನಿರ್ಮಾಣ ಮಾಡಿದ್ದು, ಪ್ರತಿನಿತ್ಯ ಬೆಳಿಗ್ಗೆ ಸಂಜೆ 30ಕ್ಕೂ ಹೆಚ್ಚು ಷಟಲ್ ಆಟಗಾರರು ಈ ಕ್ರೀಡಾಂಗಣವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಇಲ್ಲಿನ ಅಂಗಸಾಧನೆ(ಜಿಮ್)ವಿಭಾಗ ಸಮರ್ಪಕವಾಗಿಲ್ಲ. ಈ ಹಿಂದೆ ಇಲ್ಲಿ ತಂದಿಡಲಾದ ಉಪಕರಣಗಳು ಕೆಲವು ಮುರಿದಿವೆ. ಇನ್ನು ಕೆಲವು ತುಕ್ಕು ಹಿಡಿಯುತ್ತಿವೆ. ಹೀಗಾಗಿ ಜಿಮ್ ವಿಭಾಗಕ್ಕೆ ಅತ್ಯಾಧುನಿಕ ಉಪಕರಣಗಳನ್ನು ಪೂರೈಕೆ ಮಾಡಬೇಕಿದೆ.ಹೆಸರಿಲ್ಲ: ಈ ಕ್ರೀಡಾಂಗಣಕ್ಕೆ ಯಾವುದೇ ಹೆಸರನ್ನು ನಾಮಕರಣಗೊಳಿಸಿಲ್ಲ. ಹೀಗಾಗಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವವರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿ ಹೆಸರಿಗೆ ಮಾತ್ರ ಈ ಕ್ರೀಡಾಂಗಣ ಸೇರಿದೆ. ಆದರೆ ಇದರ ನಿರ್ವಹಣೆಗೆ ಕೇವಲ ಒಬ್ಬರು ಅಧಿಕಾರಿಯನ್ನು ನಿಯೋಜನೆ ಮೇರೆಗೆ  ನೇಮಿಸಿದೆ. ಅವರಿಂದ ಇಡೀ ಕ್ರೀಡಾಂಗಣದ ಜವಾಬ್ದಾರಿ ನಿರ್ವಹಿಸುವುದು ಗಗನ ಕುಸುಮ. ಹೀಗಾಗಿ ಕ್ರೀಡಾಂಗಣದಲ್ಲಿ ಕಾಲಿಟ್ಟಲೆಲ್ಲ ಅವ್ಯವಸ್ಥೆಗಳ ಸಾಲು ಸಾಲು ಎದುರಾಗುತ್ತದೆ.ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಈ ಕೂಡಲೇ ಕ್ರೀಡಾಂಗಣದ ಸಮರ್ಪಕ ನಿರ್ವಹಣೆ ಹಾಗೂ ಸುಧಾರಣೆಗೆ ಮುಂದಾಗಬೇಕಿದೆ. ಸಲವತ್ತುಗಳ ಕೊರತೆ ಎದುರಿಸುತ್ತಿರುವ ಕ್ರೀಡಾಂಗಣಕ್ಕೆ ಸೂಕ್ತ ಸವಲತ್ತುಗಳನ್ನು ಒದಗಿಸಲು ಸರ್ಕಾರದ ಗಮನ ಸೆಳೆಯಬೇಕಿದೆ. ಈ ಮೂಲಕ ತಮ್ಮೂರಿನ ಕ್ರೀಡಾ ಪ್ರೇಮಿಗಳಿಗೆ ಸುಸಜ್ಜಿತ ಕ್ರೀಡಾಂಗಣ ರೂಪಿಸಬೇಕು ಎಂಬ ಎಸ್.ಎಂ. ಕೃಷ್ಣ ಕನಸನ್ನು ನನಸಾಗಿಸಬೇಕಿದೆ.

Post Comments (+)