ಇದ್ದು ಇಲ್ಲದಂತಾದ ಕ್ರೀಡಾಂಗಣ

7

ಇದ್ದು ಇಲ್ಲದಂತಾದ ಕ್ರೀಡಾಂಗಣ

Published:
Updated:

ಜಾವಗಲ್: ಪಟ್ಟಣದಲ್ಲಿ ಹೋಬಳಿ ಕ್ರೀಡಾಂಗಣ ಇದ್ದರೂ ಕ್ರೀಡಾ ಪ್ರೇಮಿಗಳ ಪಾಲಿಗೆ ಇಲ್ಲದಂತಾಗಿದೆ. ಹೋಬಳಿ ಕ್ರೀಡಾಂಗಣ ಸೌಲಭ್ಯದ ಕೊರತೆಯಿಂದ ನಲುಗುತ್ತಿದೆ.ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂದಿನ ಶಾಸಕ ಬಿ.ಶಿವರಾಂ, ಗ್ರಾಮದವರೇ ಆದ ಅಂತರಾಷ್ಟ್ರೀಯ ಕ್ರಿಕೇಟ್‌ತಾರೆ ಜಾವಗಲ್ ಶ್ರೀನಾಥ್ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2.20ಎಕರೆ ಜಾಗದ ವ್ಯವಸ್ಥೆ ಮಾಡಿದ್ದರು.ಮೈದಾನದಲ್ಲಿ ಕೇವಲ ಕಟ್ಟಡ ಮಾತ್ರ ನಿರ್ಮಿಸಲಾಗಿದೆ. ಸಂಪೂರ್ಣ ಕ್ರೀಡಾಂಗಣ ಕಾಮಗಾರಿ ಈವರೆಗೂ ಆಗಿಲ್ಲ. ರಾಜಕಾರಣಿಗಳು ಕೇವಲ ಸುಳ್ಳು ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕ್ರೀಡಾಂಗಣ ಕಟ್ಟಡದ ಕೊಠಡಿ ಬಾಗಿಲು ಮುರಿದು ಅನೈತಿಕ ಚಟುವಟಿಕೆ ನಡೆಸುವವರ ತಾಣವಾಗಿ ಮಾರ್ಪಟ್ಟಿದೆ.ಪ್ರೇಕ್ಷಕರ ಗ್ಯಾಲರಿಯ ಆಸನದ ಕಲ್ಲುಗಳನ್ನು ಕೆಲವು ಜನರು ಕಿತ್ತು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ. ಮದ್ಯಪಾನ ಮಾಡುವವರಿಗಂತೂ ಹೇಳಿ ಮಾಡಿಸಿದ ಸ್ಥಳದಂತಾಗಿದೆ. ಇದೀಗ ಪೂರ್ಣ ಪ್ರಮಾಣದಲ್ಲಿ ಗಿಡಗಳು ಕ್ರೀಡಾಂಗಣ ಕಟ್ಟಡ ಆವರಿಸಿರುವುದರಿಂದ ಕಟ್ಟಡ ಇದೆಯೇ ಎನ್ನುವುದೇ ತಿಳಿಯದಂತಾಗಿದೆ.ಗ್ಯಾಲರಿಯ ಮುಂಭಾಗದಲ್ಲಿ ಮುಖ್ಯಭಾಗಕ್ಕೆ ಮೇಲ್ಛಾವಣಿ ಅಳವಡಿಸಿಲ್ಲ. ಉರಿಯುವ ಬಿಸಿಲಿನಲ್ಲಿಯೇ ವೀಕ್ಷಣೆ ಪಂದ್ಯ ವೀಕ್ಷಣೆ ಮಾಡುವಂತಾಗಿದೆ. ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿಲ್ಲ. ಕನಿಷ್ಠ ಪಕ್ಷ ಮೈದಾನ ಸಮತಟ್ಟು ಮಾಡುವ ಕೆಲಸ ನಿರ್ವಹಿಸದೇ ಇದ್ದರಿಂದ ಗಿಡಗಳು ಎಲ್ಲೆಂದರಲ್ಲಿ ಬೆಳೆಯುತ್ತಿವೆ. ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಗೆ ಕ್ರೀಡಾಂಗಣ ಸೇರಿದ್ದರೂ ಇಲಾಖೆಯ ಸಹಕಾರ ಇಲ್ಲ. ಅದರಿಂದ ಅಭಿವೃದ್ಧಿ ಕೆಲಸ ಮಾತ್ರ ಶೂನ್ಯವಾಗಿದೆ.ಹಾಸನ ಜಿಲ್ಲಾ ಕ್ರೀಡಾ ಹಾಗೂ  ಯುವಜನ ಸೇವಾ ಇಲಾಖೆಯ ನಿರ್ದೇಶಕರು ಗಮನಹರಿಸಿ ಕ್ರೀಡಾಂಗಣ ನಿರ್ವಹಣೆಗೆ ಮುಂದಾಗಬೇಕು ಎಂಬುದು ಜನರ ಒತ್ತಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry