ಇದ್ದೂ ಇಲ್ಲದಂತಾಗಿರುವ ಆರೋಗ್ಯ ಕೇಂದ್ರ

7

ಇದ್ದೂ ಇಲ್ಲದಂತಾಗಿರುವ ಆರೋಗ್ಯ ಕೇಂದ್ರ

Published:
Updated:

ಹಿರಿಯೂರು: ತಮ್ಮೂರಿನ ಜನರ ಆರೋಗ್ಯ ಕಾಪಾಡಲು ಅನುಕೂಲವಾಗಲಿ ಎಂದು ಸುಮಾರು ಹದಿನೈದು ವರ್ಷದ ಹಿಂದೆ ದಿ. ನೀರಗಂಟಿ ಕರಿಯಮ್ಮ ಅವರ ಸ್ಮರಣಾರ್ಥ ದಾನ ನೀಡಿದ ಎರಡು ಎಕರೆ ಪ್ರದೇಶದಲ್ಲಿ ತಾಳವಟ್ಟಿ ಗ್ರಾಮದ ದಿ. ಪಂಡರಹಳ್ಳಿ ಸೀತಾರಾಮರೆಡ್ಡಿ ಸ್ಮರಾಣಾರ್ಥ ನೀಡಿದ ಒಂದು ಲಕ್ಷ ರೂ, ದೇಣಿಗೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಪ್ರಾರಂಭಗೊಂಡ ತಾಲ್ಲೂಕಿನ ಐಮಂಗಲ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಜನರ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಆಸ್ಪತ್ರೆ ವ್ಯಾಪ್ತಿಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಐಮಂಗಲ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿದ್ದು, ಐಮಂಗಲ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು. ಆದರೆ, ಇಲ್ಲಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲದಿರುವ ಕಾರಣ ಅನಿವಾರ್ಯವಾಗಿ ಚಿತ್ರದುರ್ಗ ಅಥವಾ ಹಿರಿಯೂರಿಗೆ ಗಾಯಾಳುಗಳನ್ನು ಕಳಿಸಬೇಕಿದೆ. ಇಲ್ಲಿ ಒಬ್ಬ ವೈದ್ಯರು ಮಾತ್ರ ಇದ್ದು, ಬೆಳಿಗ್ಗೆಯಿಂದ ಸಂಜೆ ನಾಲ್ಕರವರೆಗೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ನಂತರ, ಇದು ವೈದ್ಯರಿಲ್ಲದ ಆಸ್ಪತ್ರೆಯಾಗುತ್ತದೆ.ಈ ಆಸ್ಪತ್ರೆಗೆ ಪ್ರತಿದಿನ ಸುತ್ತಮುತ್ತಲ ಹಳ್ಳಿಗಳಿಂದ 150ರಿಂದ 200 ಜನ ಆರೋಗ್ಯ ತಪಾಸಣೆಗೆ ಬರುತ್ತಿದ್ದು, ಇರುವ ಒಬ್ಬರೇ ಪುರುಷ ವೈದ್ಯರು ಇವರ ಆರೋಗ್ಯ ತಪಾಸಣೆ ಮಾಡಬೇಕಿದೆ. ಅಕಸ್ಮಾತ್ ಈ ವೈದ್ಯರು ಅಂಗನವಾಡಿ ಅಥವಾ ಶಾಲಾ ಮಕ್ಕಳ ತಪಾಸಣೆಗೆಂದು ಹೋದರೆ ಕಾಯಿಲೆ ಪೀಡಿತರು ತಾಲ್ಲೂಕು ಆಸ್ಪತ್ರೆಗೆ ಹೋಗಬೇಕು. ಅಲ್ಲಿಯೂ ವೈದ್ಯರು ಇರುವರೆಂಬ ಖಾತರಿ ಇಲ್ಲ. ಹೀಗಾಗಿ, ಸಂಕಷ್ಟ ಅನುಭವಿಸುವುದು ತಪ್ಪಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಈ ಆಸ್ಪತ್ರೆಗೆ ಇಬ್ಬರು ಮಹಿಳಾ ಶುಶ್ರೂಶಕರನ್ನು ನಿಯೋಜನೆ ಮೇಲೆ ಕಳಹಿಸಲಾಗಿತ್ತು. ವೈದ್ಯರಿಲ್ಲದ ಸಮಯದಲ್ಲಿ ರೋಗಿಗಳ ಸಣ್ಣಪುಟ್ಟ ಸಮಸ್ಯೆಗಳಿಗೆ ಅವರಿಂದಲೇ ಪರಿಹಾರ ಸಿಗುತ್ತಿತ್ತು. ಆದರೆ, ಈಚೆಗೆ ನಿಯೋಜನೆ ರದ್ದು ಮಾಡಿರುವ ಕಾರಣ ಶುಶ್ರೂಷಕಿಯರ ಸೇವೆ ಸಿಗದಂತಾಗಿದೆ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ.ಆಗ್ರಹ: ಸದರಿ ಆಸ್ಪತ್ರೆಗೆ ಹಾಲಿ ಇರುವ ವೈದ್ಯರ ಜತೆಗೆ ಒಬ್ಬರು ಮಹಿಳಾ ಹಾಗೂ ಮತ್ತೊಬ್ಬರು ನಿವಾಸಿ ವೈದ್ಯರನ್ನು ನೇಮಕ ಮಾಡಬೇಕು. ಶುಶ್ರೂಷಕಿಯರ ಸೇವೆ ಮುಂದುವರಿಸಬೇಕು. ಪ್ರಯೋಗಶಾಲಾ ತಜ್ಞ ಹುದ್ದೆ ಹಾಗೂ `ಡಿ' ಗುಂಪಿನ ಸಿಬ್ಬಂದಿ ನೇಮಕ ಮಾಡಬೇಕು. ನಾಯಿ ಹಾಗೂ ವಿಷಜಂತು ಕಡಿತಕ್ಕೆ ನೀಡುವ ಔಷಧಿಯನ್ನು ಎಲ್ಲಾ ಕಾಲದಲ್ಲೂ ದಾಸ್ತಾನು ಇಟ್ಟಿರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಬಿಎಸ್‌ಆರ್ ಕಾಂಗ್ರೆಸ್‌ಗೆ ಆಯ್ಕೆ

ತಾಲ್ಲೂಕು ಬಿಎಸ್‌ಆರ್ ಕಾಂಗ್ರೆಸ್‌ನ ಯುವ ಅಧ್ಯಕ್ಷರಾಗಿ ಜಿ. ನಾಗಭೂಷಣ್ ನಾಯ್ಕ ಅವರನ್ನು ಜಿಲ್ಲಾ ಯುವ ಅಧ್ಯಕ್ಷ ರವಿ ಮದಕರಿ ಆಯ್ಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯ ಯಾದವ ಯುವ ಸೇನೆಗೆ ಆಯ್ಕೆ: ರಾಜ್ಯ ಯಾದವ ಯುವ ಸೇನೆಯ ಅಧ್ಯಕ್ಷ ಪ್ರಕಾಶ್‌ಯಾದವ್ ಅವರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹಿರಿಯೂರಿನ ಡಾಬಾ ಚಿಕ್ಕಣ್ಣ ಅವರನ್ನು ರಾಜ್ಯ ಯಾದವ ಸೇನೆಯ ಗೌರವ ಅಧ್ಯಕ್ಷರನ್ನಾಗಿ, ಎ.ಪಿ. ಶಿವಶಂಕರಪ್ಪ (ವಕ್ತಾರ), ಚಿತ್ರಲಿಂಗಪ್ಪ (ಚಿತ್ರದುರ್ಗ ಜಿಲ್ಲೆ ಗೌರವಾಧ್ಯಕ್ಷ), ಚಿತ್ತೇಶ್ ಯಾದವ್ (ತಾಲ್ಲೂಕು ಅಧ್ಯಕ್ಷ) ಅವರನ್ನು ಆಯ್ಕೆ ಮಾಡಿದ್ದಾರೆ. ಚಿತ್ರಜಿತ್ ಯಾದವ್ ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry