ಸೋಮವಾರ, ಮೇ 23, 2022
30 °C

ಇದ್ದೊಂದು ಸೂರನ್ನೂ ಕೆಡವಿದರು...

ಪ್ರಜಾವಾಣಿ ವಾರ್ತೆ/ -ದೊಡ್ಡಬಾಣಗೆರೆ ಮಾರಣ್ಣ Updated:

ಅಕ್ಷರ ಗಾತ್ರ : | |

ಮಾಗಡಿ: ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪೌರ ಕಾರ್ಮಿಕರು ಮೂಲ ಸವಲತ್ತುಗಳಿಂದ ವಂಚಿತರಾಗಿ ಶೋಚನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 22 ವಾರ್ಡ್‌ಗಳಿದ್ದು,16 ಕಾಯಂ ಹಾಗೂ 33 ಹಂಗಾಮಿ ಪೌರ ಕಾರ್ಮಿಕರಿದ್ದಾರೆ.

ಶ್ರಮ ವಹಿಸಿ ದುಡಿಯುವ ಪೌರ ಕಾರ್ಮಿಕರಿಗೆ ತಿಂಗಳ ವೇತನ ಸರಿಯಾದ ಸಮಯಕ್ಕೆ ಕೈ ಸೇರುತ್ತಿಲ್ಲ. ಅಲ್ಲದೆ ಇವರಿಗೆ ಕೈಗವಸು ಮತ್ತು ಮುಖಕ್ಕೆ ಮಾಸ್ಕ್‌ಗಳನ್ನೂ ನೀಡಿಲ್ಲ. ಇದರಿಂದ ಇವರು ಹಲವರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ವಾರ್ಡ್ ನಂ.1ರಲ್ಲಿದ್ದ ಪೌರ ಕಾರ್ಮಿಕರ ಹತ್ತು ವಸತಿ ಗೃಹಗಳನ್ನು ಕೆಡವಿ ಈಗ ಉದ್ಯಾನವನ ನಿರ್ಮಿಸಲಾಗುತ್ತಿದೆ. ಹತ್ತು ಕಿ.ಮೀ ದೂರದಲ್ಲಿರುವ ತಟವಾಳ್, ಕರಗದ ಹಳ್ಳಿ, ಬೈಚಾಪುರ, ಜೋಡುಗಟ್ಟೆ, ಕರ‌್ಲಮಂಗಲ, ತಿಪ್ಪಸಂದ್ರ ಗ್ರಾಮಗಳಿಂದ ಬೆಳಿಗ್ಗೆ ಐದು ಗಂಟೆಗೆ ಮಾಗಡಿಗೆ ಬಂದು ನಗರವನ್ನು ಶುಚಿಗೊಳಿಸುವ ಕಾರ್ಯದಲ್ಲಿ ಇವರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.`ಪಟ್ಟಣವನ್ನು ನಿತ್ಯವೂ ಶುಚಿಗೊಳಿಸುವ ನಮ್ಮ ಬದುಕನ್ನು ಹಸನುಗೊಳಿಸಲು ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ನೀಡಬೇಕಾಗಿರುವ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಕೆಲಸಕ್ಕೆ ಬೆಳಿಗ್ಗೆ ಯಾವತ್ತಾದರೂ ತಡವಾಗಿ ಬಂದರೆ ಅಂದಿನ ದಿನಗೂಲಿಯನ್ನೇ ಕಡಿತಗೊಳಿಸಿ ಬಿಡುತ್ತಾರೆ. ಗುತ್ತಿಗೆದಾರರು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.ಬರಿಗೈಯಲ್ಲಿ ಕಸ ಎತ್ತುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದರೂ ನಮ್ಮ ಆರೋಗ್ಯ ರಕ್ಷಣೆಗೆ ಮತ್ತು ಮಕ್ಕಳ ಶೈಕ್ಷಣಕ್ಕೆ ಯೋಜನೆಗಳನ್ನು ರೂಪಿಸಲು ಸಂಬಂಧಪಟ್ಟವರು ಚಿಂತಿಸುತ್ತಿಲ್ಲ' ಎಂದು ಕಾಯಂ ಪೌರ ಕಾರ್ಮಿಕ ನೌಕರರ ಸಂಘದ ಅಧ್ಯಕ್ಷ  ನಾಗಯ್ಯ ವಿಷಾದಿಸಿದರು.ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, `ಪಟ್ಟಣದ ನೈರ್ಮಲ್ಯವನ್ನು ಕಾಪಾಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರುವ ಪೌರ ಕಾರ್ಮಿಕರು ಜೀವ ಸವೆಸುತ್ತಿದ್ದಾರೆ. ಇವರಾರಿಗೂ ಪಟ್ಟಣದಲ್ಲಿ ವಸತಿ ಗೃಹಗಳಿಲ್ಲ. ಇವರೆಲ್ಲಾ ದೂರದ ಊರುಗಳಿಂದ ಇಲ್ಲಿಗೆ ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಯ ಶೌಚಾಲಯದ ನೀರನ್ನು ತೆರೆದ ಚರಂಡಿಗೆ ಬಿಡಲಾಗುತ್ತಿದೆ. ಕೆಟ್ಟ ವಾಸನೆ ಬೀರುವ ಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಎಷ್ಟೋ ಬಾರಿ ತಲೆಸುತ್ತಿ ಬಿದ್ದಿದ್ದೇವೆ. ನಮಗೆ ಮೂಲ ಸವಲತ್ತುಗಳನ್ನು ದೊರಕಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ' ಎಂದು ತಿಳಿಸಿದರು.ಪೌರ ಕಾರ್ಮಿಕರ ಬದುಕು ಬವಣೆ

ನಗರ, ಪಟ್ಟಣಗಳ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಗುರುತರ ಕೆಲಸ ನಿರ್ವಹಿಸುವ ನಮ್ಮ ನಡುವಿನ ಪೌರ ಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಹೇಳಿಕೊಳ್ಳುವಷ್ಟು ಸುಧಾರಣೆ ಕಂಡಿಲ್ಲ. ಇವರ ಆರ್ಥಿಕ, ಸಾಮಾಜಿಕ ಹಾಗೂ ಇವರ ಮಕ್ಕಳ ಶೈಕ್ಷಣಿಕ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಕಾಣಬೇಕಿದೆ.ಇಡೀ ನಗರವನ್ನು ಶುಚಿಗೊಳಿಸಿ, ಸ್ವಚ್ಛತೆಯಿಂದ ಕಂಗೊಳಿಸುವಂತೆ ಮಾಡುವ ಈ ಪೌರ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ನಿತ್ಯವೂ ಇವರು ಒಂದಿಲ್ಲೊಂದು ರೀತಿಯ ನರಕಯಾತನೆ ಅನುಭವಿಸುತ್ತಲೇ ಇದ್ದಾರೆ. ಇವರ ಬದುಕು ಮತ್ತು ಬವಣೆಗಳ ಸುತ್ತ ಒಂದು ಸಣ್ಣ ಸುತ್ತು...`ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ'

`ನಮಗೆ ಎರಡು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ನಮ್ಮ ಜೀವ ವಿಮೆ ಕಂತಿನ ಹಣವನ್ನೂ ತುಂಬಿಲ್ಲ. ಹಂಗಾಮಿ ನೌಕರರಿಗೆ ದಿನಕ್ಕೆ ್ಙ.164 ನೀಡುವುದಾಗಿ ಹೇಳಿ ಗುತ್ತಿಗೆಗೆ ನೇಮಿಸಿಕೊಳ್ಳಲಾಗಿದೆ. ಇವರ‌್ಯಾರಿಗೂ ಪಿಎಫ್ ಹಣವನ್ನು ಕೊಟ್ಟಿಲ್ಲ. ದಿನಗೂಲಿ ಸಂಬಳದಲ್ಲಿ ಕಡಿತಗೊಳಿಸಿದ್ದ ಒಂದೂವರೆ ವರ್ಷದ ಪಿಎಫ್ ಹಣದೊಂದಿಗೆ ಕಳೆದ ವರ್ಷ ಗುತ್ತಿಗೆದಾರರಾಗಿದ್ದವರು ಪರಾರಿಯಾಗಿದ್ದಾರೆ.ಕಾಲ ಕಾಲಕ್ಕೆ ನಮ್ಮ ಆರೋಗ್ಯ ತಪಾಸಣೆಯನ್ನೂ ಮಾಡಿಸುತ್ತಿಲ್ಲ. ಮೂಲ ಸವಲತ್ತುಗಳನ್ನು ಕೇಳಿದರೆ ಅಧಿಕಾರಿಗಳು ಕಿವಿಯ ಮೇಲೆ ಹಾಕಿಕೊಳ್ಳುತ್ತಲೇ ಇಲ್ಲ' ಎಂದು ಕಾಯಂ ಪೌರ ಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ನಾಗಯ್ಯ ಅಸಮಾಧಾನ ವ್ಯಕ್ತಪಡಿಸುತ್ತಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.