ಇದ್ದ ದಾರಿ ಬಿಟ್ಟು ನಡೆದವ

7

ಇದ್ದ ದಾರಿ ಬಿಟ್ಟು ನಡೆದವ

Published:
Updated:

ಅಭಯ್ ಡಿಯೋಲ್ ಎಂಬುದು ಅಪಭ್ರಂಶ, ಅಭಯ್ ದೇವನ್ ಅನ್ನೋದೇ ಸರಿ. ಧಮೇಂದ್ರ ಅಥವಾ ಸನ್ನಿ ದೇವನ್‌ಗೆ ಇದ್ದ ತಾರಾ ವರ್ಚಸ್ಸು ಅಭಯ್‌ಗೆ ಇಲ್ಲವಾದರೂ ಅವರು ಹತ್ತರಲ್ಲಿ ಹನ್ನೊಂದನೆಯವರಾಗಿ ಕಾಣುತ್ತಾರೆ.ಬಾಲಿವುಡ್‌ಗೆ ಅವಕಾಶ ಕೇಳಿಕೊಂಡು ಬರುತ್ತಿದ್ದ ಹುಡುಗರನ್ನೆಲ್ಲಾ ಅನತಿ ದೂರದಿಂದಲೇ ನೋಡುತ್ತಿದ್ದ ಅಭಯ್‌ಗೆ ಅವರೆಲ್ಲಾ ಕಾರ್ಟೂನ್‌ಗಳಂತೆ ಕಾಣುತ್ತಿದ್ದರಂತೆ. ಜಿಮ್‌ಗೆ ಹೋಗಿ ಸಾಮು ಮಾಡಿ ಬಂದ ದೇಹಗಳ ನರಗಳು ಅವರಿಗೆ ತಮಾಷೆಯಾಗಿಯೂ ಡಯಟ್ ಮಾಡಿ ಮಾಡಿ ಸಣ್ಣಗಾಗಿ ಬಿಳಿಚಿಕೊಂಡ ಭಾವೀ ನಟೀಮಣಿಯರು ಜೀವ ತಳೆದು ಬಂದ ಅಳತೆ ತಪ್ಪಿದ `ಕ್ಯಾರಿಕೇಚರ್~ಗಳಂತೆಯೂ ಗೋಚರಿಸುತ್ತಿದ್ದರಂತೆ.ಜಗತ್ತು ಒಂದು ದಿಕ್ಕಿನಲ್ಲಿ ಯೋಚಿಸುವಾಗ ಅಭಯ್ ಇನ್ನೊಂದು ದಿಕ್ಕಿನತ್ತ ಮುಖ ಮಾಡುವ ಆಸಾಮಿ. ಒಂದಿನ ಬೆಳ್ಳಂಬೆಳಿಗ್ಗೆ ಹಾಸಿಗೆ ಬಿಟ್ಟೆದ್ದ ಅವರು ಜಿಮ್‌ಗೆ ಹೋಗುವ ತೀರ್ಮಾನ ಕೈಗೊಂಡರು. ಹಾದಿಯಲ್ಲಿ ಹೋಗುವಾಗ ಕಂಡದ್ದು ಬೆಂಚುಕಲ್ಲು. ಅದರ ಮೇಲೆ ಹಳದಿ ಬಣ್ಣದ ಹೂಗಳ ರಾಶಿ.ರಾತ್ರಿ ತಂಗಾಳಿ ತೀಡಿದ್ದಕ್ಕೆ ಕುರುಹಾಗಿದ್ದ ಹಿತವಾದ ಹವೆ. ಆ ಕಲ್ಲಿನ ಮೇಲೆಯೇ ಅಭಯ್ ತುಭ್ಯನ್ನಮಃ. ಪವಡಿಸಿದ ಮೇಲೆ ನಿದ್ರೆ ಆವರಿಸಿಕೊಂಡಿತು. ಆಗ ತೆರೆದುಕೊಂಡದ್ದೇ ಕನಸಿನ ಲೋಕ. ಕನಸಲ್ಲಿ ಅವರು ಹೀರೋ ಆಗಿದ್ದರು. ಎದುರಲ್ಲಿ ನಿರ್ದೇಶಕನ ಇಶಾರೆ.ಮಿಟುಕಿಸುತ್ತಿದ್ದ ಕ್ಯಾಮೆರಾ ಕಣ್ಣು. ಗಾವುದ ದೂರದಲ್ಲಿ ಕನ್ನಡಿಗೆ ಮುಖ ತೋರಿಸುತ್ತಾ ಕುಳಿತ ನಾಯಕಿ. ಪದೇಪದೇ ಡೈಲಾಗ್ ಮರೆತುಹೋಗಿ, ಪೀಕಲಾಟವಾಗುತ್ತಿತ್ತು. `ಇನ್ನೊಂದು ಟೇಕ್, ಪ್ಲೀಸ್~ ಎಂದು ವಿನಂತಿಸಿಕೊಳ್ಳುವಷ್ಟರಲ್ಲಿ ಕನಸು ಭಗ್ನ. ದಿಗ್ಗನೆದ್ದು ಕೂತರೆ ರಸ್ತೆಯಲ್ಲಾಗಲೇ ವಾಹನ ದಟ್ಟಣೆ.ಹೀಗೆ ರಸ್ತೆಬದಿಯಲ್ಲಿ ಕಂಡ ಕನಸು ನನಸಾಯಿತು. ಅಭಯ್ ನಾಯಕರಾದರು. ಆರಿಸಿಕೊಂಡದ್ದು ಆಫ್‌ಬೀಟ್ ಚಿತ್ರಗಳನ್ನು. ಮುದ್ದಿಸಿದ್ದು ನಿಜ ಬದುಕಿಗೆ ಹತ್ತಿರವಾದ ಪಾತ್ರಗಳನ್ನು. `ಮನೋರಮಾ ಸಿಕ್ಸ್ ಫೀಟ್ ಅಂಡರ್~, `ಏಕ್ ಚಾಲೀಸ್ ಕೀ ಲಾಸ್ಟ್ ಲೋಕಲ್ ಟ್ರೇನ್~, `ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್~ ಚಿತ್ರಗಳು ಭಿನ್ನ ಧಾಟಿಯವಾದರೂ ಅಭಯ್ ಹೆಚ್ಚು ಗುರುತು ಮೂಡಿಸಲು ಆಗಲಿಲ್ಲ.`ಜಿಂದಗಿ ನಾ ಮಿಲೇಗಿ ದುಬಾರಾ~ ಚಿತ್ರಕ್ಕೆ ಸಹಿ ಹಾಕಿದಾಗಲೂ ಅನೇಕರು ಅವರನ್ನು ಆಡಿಕೊಂಡದ್ದುಂಟು. `ಯಾರೂ ನೋಡದ ಸಿನಿಮಾಗಳನ್ನು ಮಾಡಿ ನೀನು ಉದ್ಧಾರ ಆಗೋದಿಲ್ಲ~ ಎಂದು ಮೂದಲಿಸಿದವರಲ್ಲಿ ಆಪ್ತರೂ ಇದ್ದರು.ಅಭಯ್ ಆ ಮಾತುಗಳಿಂದ ಸೊಪ್ಪಾಗಲಿಲ್ಲ. ಮೇಕಪ್ ಹಚ್ಚಿಕೊಳ್ಳದ ನಟನಾಗಬೇಕೆಂದೇ ಬಯಸಿದರು. ಸೆಟ್‌ಗೆ ಹೋಗಿ ಕನ್ನಡಿಯನ್ನು ತಾವೇ ನೋಡಿಕೊಂಡು, ಕೂದಲನ್ನು ಮಾತ್ರ ಸರಿಪಡಿಸಿಕೊಂಡು ಶಾಟ್‌ಗೆ ಅವರು ನಿಂತದ್ದನ್ನು ಕಂಡು ಅನೇಕರು ದಂಗುಬಡಿದುಹೋದರು.`ನಮ್ಮದು ಕಲಾತ್ಮಕ ಚಿತ್ರ. ಕಡಿಮೆ ಸಂಭಾವನೆಗೆ ಒಪ್ಪಿಕೊಂಡರೆ ಒಳ್ಳೆಯದು~ ಎಂದು ಕೆಲವರು ಕೇಳಿಕೊಂಡರು. ಇನ್ನೊಂದು ಗುಂಪು ಬಂದು, `ಒಳ್ಳೆಯ ಕಮರ್ಷಿಯಲ್ ಸಿನಿಮಾ. ಕಡಿಮೆ ಸಂಭಾವನೆಯಾದರೂ ಚಿಂತಿಲ್ಲ, ಒಪ್ಪಿಕೊಳ್ಳಿ.ಒಳ್ಳೆಯದಾಗುತ್ತೆ~ ಎಂದು ಸಲಹೆ ಕೊಟ್ಟರು. ಇವೆರಡೂ ಅಭಿಪ್ರಾಯಗಳನ್ನು ಕೇಳಿದ್ದೇ ಅಭಯ್ ಮುಖ ಕಿವುಚಿದರು. ಬೇರೆ ನಾಯಕರಂತೆ ತಾವೂ ಸಾಮು ಮಾಡಬೇಕು, ಮರ ಸುತ್ತಬೇಕು, ನಾಯಕಿಯರನ್ನು ಓಲೈಸಬೇಕು, ಅಫೇರುಗಳನ್ನು ಇಟ್ಟುಕೊಳ್ಳಬೇಕು, ರಾತ್ರಿ ಪಾರ್ಟಿಗಳಿಗೆ ಹೋಗಿ ಪಟ್ಟಾಂಗ ಹೊಡೆಯಬೇಕು ಎಂಬಿತ್ಯಾದಿ ಯೋಚನೆಗಳು ಮನಸ್ಸನ್ನು ಚುಚ್ಚತೊಡಗಿದವು.ಅವೆಲ್ಲವುಗಳು ಮೂಡಿದ ಹೊತ್ತಿನಲ್ಲೇ ಮನದಲ್ಲಿ ಹೊಳೆದದ್ದು `ದೇವ್-ಡಿ~. ಅನುರಾಗ್ ಕಶ್ಯಪ್ ಜೊತೆ ಕೂತು ತಮ್ಮ ಪರಿಕಲ್ಪನೆಯನ್ನು ಹರಳುಗಟ್ಟಿಸಿಕೊಂಡ ಅಭಯ್ ನಿರ್ಮಾಪಕರು ಸಿಗಲಿಲ್ಲವೆಂಬ ಕಾರಣಕ್ಕೆ ಬೇಸರಗೊಂಡರು.ಖಾಲಿ ಕೂರುವುದು ಗಂಡಸಿನ ಲಕ್ಷಣವಲ್ಲ ಎಂದು ನಂಬಿದ ಅವರು ಸ್ಪೇನ್‌ಗೆ ಹೋಗಿ ಬಾರ್‌ಟೆಂಡಿಂಗ್ ಕೋರ್ಸ್ ಮಾಡಿದರು. ಆ ಕೆಲಸ ಕಲಿಯುತ್ತಲೇ ಸ್ಪೇನ್ ಭಾಷೆಯೂ ಒಲಿಯಿತು. ಮತ್ತೆ ಭಾರತಕ್ಕೆ ಬಂದರೂ ಅನುರಾಗ್ ಕಶ್ಯಪ್ `ದೇವ್ ಡಿ~ ತಿದ್ದುತ್ತಾ ಕೂತಿದ್ದರು. ನಿರ್ಮಾಪಕರು ಇನ್ನೂ ಸಿಕ್ಕಿರಲಿಲ್ಲ.ಆ ಸಿನಿಮಾ ಸೆಟ್ಟೇರುವ ಮೊದಲು ನ್ಯೂಯಾರ್ಕ್‌ಗೆ ಹೋಗಿ, ವೆಲ್ಡಿಂಗ್ ಕೋರ್ಸ್ ಮಾಡಿಕೊಂಡು ಬಂದ ಅಭಯ್, ತತ್ವಜ್ಞಾನಿಯಂತೆ ಮಾತನಾಡತೊಡಗಿದರು. ತಾವು ಕಲಿತ ಬಾರ್‌ಟೆಂಡಿಂಗ್ ಹಾಗೂ ಬೆಸುಗೆ ಕಲೆಯನ್ನು ಅವರು ಬಾಳಿಗೆ ಬೆಸೆದೇ ಮಾತನಾಡುತ್ತಿದ್ದರು.ಯಾರ ಬಳಿಯೂ ತಂದೆ ಹಾಗೂ ಅಣ್ಣನ ಪ್ರಭಾವಳಿಯ ಪ್ರಸ್ತಾಪ ಮಾಡದ ಅವರಿಗೆ ಸ್ವಂತಿಕೆಯ ಮೇಲೆ ಅಪಾರ ನಂಬಿಕೆ. ಕೊನೆಗೆ ಆ ನಂಬಿಕೆಯೇ `ದೇವ್ ಡಿ~ ಚಿತ್ರವನ್ನು ಗೆಲ್ಲಿಸಿತು. `ಜಿಂದಗಿ ನಾ ಮಿಲೇ ದುಬಾರಾ~ ಹಣ ಬಾಚಿಕೊಂಡಾಗ, ಕಿಚಾಯಿಸಿದ್ದವರೆಲ್ಲಾ ಬಾಯಿಮುಚ್ಚಿದರು.ಈಗಲೂ ಅಭಯ್ ತಮ್ಮಿಷ್ಟದ ಚಿತ್ರಗಳನ್ನಷ್ಟೇ ಒಪ್ಪಿಕೊಳ್ಳುವುದು. `ಓಯ್ ಲಕ್ಕಿ ಲಕ್ಕಿ ಓಯ್~ ಚಿತ್ರ ನಿರ್ದೇಶಿಸಿದ್ದ ದಿಬಾಂಕರ್ ಬ್ಯಾನರ್ಜಿ ಈಗ `ಶಾಂಘೈ~ ಸಿನಿಮಾಗೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ಅಭಯ್ ಅದರಲ್ಲೂ ನಾಯಕ. ಪ್ರೀತಿ ದೇಸಾಯ್ ಎಂಬ ಗೆಳತಿಯ ಜೊತೆ ತಮ್ಮದೇ ತತ್ವಜ್ಞಾನವನ್ನು ಹಂಚಿಕೊಳ್ಳುವ ಅಭಯ್ ರೊಮ್ಯಾಂಟಿಕ್ ಆಸಾಮಿ ಅಲ್ಲ. `ನಾನು ಪ್ಯಾಂಟ್ ಹಾಕಿಕೊಳ್ಳುತ್ತೇನೆ.ಪ್ರೀತಿ ಸ್ಕರ್ಟ್ ಹಾಕಿಕೊಳ್ಳುತ್ತಾಳೆ. ಇಬ್ಬರೂ ಸೇರಿ ಇಡೀ ಚಿತ್ರರಂಗದವರ ಚೆಡ್ಡಿ ಕಳಚುವುದು ಹೇಗೆ ಅಂತ ಮಾತಾಡಿಕೊಳ್ಳುತ್ತೇವೆ~ ಎಂದು ನಗುವ ಅಭಯ್‌ಗೆ ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುವ ಹಾಸ್ಯಪ್ರಜ್ಞೆಯೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry