ಭಾನುವಾರ, ಮೇ 16, 2021
21 °C

ಇನ್ನಷ್ಟು ತಾಂತ್ರಿಕ, ವಿಜ್ಞಾನ ಸಂಸ್ಥೆಗಳ ಸ್ಥಾಪನೆ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಹೊಸದಾಗಿ ಹಲವು ತಾಂತ್ರಿಕ ಹಾಗೂ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಶನಿವಾರ ಇಲ್ಲಿ ಹೇಳಿದರು.ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ರ‌್ಯಾಂಕ್ ವಿಜೇತರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, `ಈ ವರ್ಷ ಕೇಂದ್ರವು 8 ಐಐಟಿ, 7 ಐಐಎಂ ಸಂಸ್ಥೆಗಳನ್ನು ಪ್ರಾರಂಭಿಸುವುದರ ಜತೆಗೆ, ಐದು ಭಾರತೀಯ ವಿಜ್ಞಾನ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ. ಇದರಿಂದ ಎಲ್ಲ ವರ್ಗದ ಜನರಿಗೂ ತಾಂತ್ರಿಕ ಹಾಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಅನುಕೂಲವಾಗಲಿದೆ~ ಎಂದರು.`ಭಾರತ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ನಮ್ಮಲ್ಲಿನ ತಂತ್ರಜ್ಞರು ಎಲ್ಲೆಡೆ ಯಶಸ್ಸು ಸಾಧಿಸಿದ್ದಾರೆ. ದೇಶದಲ್ಲಿ ಯಶಸ್ವಿಯಾದ ತಂತ್ರಜ್ಞರು ಜಗತ್ತಿನ ಯಾವುದೇ ಜಾಗದಲ್ಲಾದರೂ ಯಶಸ್ಸು ಸಾಧಿಸುತ್ತಾರೆ ಎನ್ನುವ ವಾತಾವರಣ ನಿರ್ಮಾಣವಾಗಿದೆ~ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.`ಯುವ ವಿದ್ಯಾರ್ಥಿಗಳು ಮುಂದಿನ ತಮ್ಮ ವೃತ್ತಿಪರ ಜೀವನದಲ್ಲಿ ಘನತೆ- ಗೌರವ ಕಾಪಾಡುವ ಮೂಲಕ ಏಕತೆಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಜತೆಗೆ ಭ್ರಷ್ಟಾಚಾರ ನಿಯಂತ್ರಣಕ್ಕೂ ಪಣ ತೊಡಬೇಕು. ಯುವ ಜನಾಂಗ ಲಂಚ ತಿರಸ್ಕರಿಸಿ, ಅವ್ಯವಹಾರ ತಡೆಗಟ್ಟುವ ದೃಢಸಂಕಲ್ಪ ಮಾಡಬೇಕು. ಅಂತೆಯೇ ಪ್ರಾಮಾಣಿಕವಾಗಿ ಎಲ್ಲ ವರ್ಗದ ಜನರ ಸೇವೆ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು. ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ದೊರೆಸ್ವಾಮಿ ಮಾತನಾಡಿ, 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರಾಜ್ಯಕ್ಕೆ ಐಐಟಿ ಮಂಜೂರು ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮೊಯಿಲಿ ಅವರಲ್ಲಿ ಮನವಿ ಮಾಡಿದರು.`ರಾಜ್ಯವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸುಮಾರು 200 ಎಂಜಿನಿಯರಿಂಗ್ ಕಾಲೇಜುಗಳಿದ್ದು, 80 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣದಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಬೆಳವಣಿಗೆ ಸಾಧಿಸಲು ರಾಜ್ಯದಲ್ಲಿ ಐಐಟಿ ಸ್ಥಾಪಿಸುವ ಅಗತ್ಯವಿದೆ~ ಎಂದು ಒತ್ತಾಯಿಸಿದರು.`ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಶಾಲೆ ಸ್ಥಾಪಿಸುವುದರ ಜತೆಗೆ, ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವುದು ಸಂಸ್ಥೆಯ ಕನಸಾಗಿದ್ದು, 10 ಕೋಟಿ ರೂಪಾಯಿ ಠೇವಣಿಯಿಟ್ಟು ಅದರಿಂದ ಬರುವ ಬಡ್ಡಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿದೆ~ ಎಂದರು.ಪಿಇಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೊ.ಡಿ. ಜವಾಹರ್ ಸ್ವಾಗತಿಸಿದರು. ಅಧ್ಯಕ್ಷ ಕೆ.ಪಾಪರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 48 ಮಂದಿ ರ‌್ಯಾಂಕ್ ವಿಜೇತರಿಗೆ ಚಿನ್ನದ ಪದಕ ಹಾಗೂ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.