ಇನ್ನಷ್ಟು ದಾಖಲೆ ಹೊರಗೆಡವಿದ ಕೇಜ್ರಿವಾಲ್: ವಾದ್ರಾಗೆ ಡಿಎಲ್‌ಎಫ್ ಭಕ್ಷೀಸು

7

ಇನ್ನಷ್ಟು ದಾಖಲೆ ಹೊರಗೆಡವಿದ ಕೇಜ್ರಿವಾಲ್: ವಾದ್ರಾಗೆ ಡಿಎಲ್‌ಎಫ್ ಭಕ್ಷೀಸು

Published:
Updated:

ನವದೆಹಲಿ: ರಾಬರ್ಟ್ ವಾದ್ರಾ ಹಾಗೂ ರಿಯಾಲಿಟಿ ಕಂಪೆನಿ ಡಿಎಲ್‌ಎಫ್ ನಡುವಿನ ವ್ಯವಹಾರಗಳು ಅಕ್ರಮ ಎಂಬ ಆಪಾದನೆಯನ್ನು ತೀವ್ರಗೊಳಿಸಿರುವ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್, ಇದಕ್ಕೆ ಪೂರಕವಾಗಿ ಮಂಗಳವಾರ ಮತ್ತಷ್ಟು ದಾಖಲೆಗಳನ್ನು ಬಹಿರಂಗಗೊಳಿಸಿದರು.ಹರಿಯಾಣ ಸರ್ಕಾರವು ಡಿಎಲ್‌ಎಫ್‌ಗೆ ಪಂಚಾಯ್ತಿ ಮತ್ತು ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡುವ ಜತೆಗೆ, ಭೂಪರಿವರ್ತನೆ ನಿಯಮಗಳನ್ನು ಸಡಿಲಿಸಿ ಅನುಕೂಲ ಮಾಡಿಕೊಟ್ಟಿದೆ ಎಂದು ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ದೂರಿದರು.ಹರಿಯಾಣ ಸರ್ಕಾರವು ಈ ಕುರಿತು ಶ್ವೇತಪತ್ರ ಹೊರಡಿಸಿದರೆ, `ಡಿಎಲ್‌ಎಫ್ ಮತ್ತು ವಾದ್ರಾ ನಡುವಿನ ವ್ಯವಹಾರವು ಕೇವಲ ಮಿತ್ರರ ನಡುವಿನ ವ್ಯವಹಾರವಲ್ಲ; ಅದು ಸರ್ಕಾರವು ಡಿಎಲ್‌ಎಫ್‌ಗೆ ಮಾಡಿಕೊಟ್ಟ ಅನುಕೂಲಕ್ಕೆ ಪ್ರತಿಯಾಗಿ ಪಡೆದಿರುವ ಭಕ್ಷೀಸು ಎಂಬುದು ನಿಚ್ಚಳವಾಗುತ್ತದೆ~ ಎಂದರು.`ವಾದ್ರಾ ಅವರಿಗೆ ಯಾವುದೇ ಭದ್ರತೆ ಪಡೆಯದೆ ಸಾಲ ಮಂಜೂರು ಮಾಡಿಲ್ಲ~ ಎಂಬ ಡಿಎಲ್‌ಎಫ್ ಸ್ಪಷ್ಟನೆಯನ್ನೂ  ಕೇಜ್ರಿವಾಲ್ ತಳ್ಳಿಹಾಕಿದರು. ಇದಕ್ಕೆ ಪೂರಕವಾಗಿ, ವಾದ್ರಾ ಅವರ ಕಂಪೆನಿಗಳ ಬ್ಯಾಲೆನ್ಸ್ ಶೀಟ್‌ಗಳನ್ನು (ಲೆಕ್ಕಪತ್ರ ವಿವರ) ಕೇಜ್ರಿವಾಲ್ ತೋರಿಸಿದರು. `ಕಂಪೆನಿಯು ವಾದ್ರಾ ಅವರಿಗೆ ನಾನು ಈ ಮುಂಚೆ ಆರೋಪಿಸಿದ್ದಂತೆ ಕೇವಲ 65 ಕೋಟಿ ರೂಪಾಯಿ ಸಾಲವನ್ನು ನೀಡಿಲ್ಲ. ಆ ಮೊತ್ತ 85 ಕೋಟಿ ರೂಪಾಯಿ~ ಎಂದು ದೂರಿದರು.ಹರಿಯಾಣ ಸರ್ಕಾರವು 2006ರಲ್ಲಿ, ಆಸ್ಪತ್ರೆಗೆಂದು ಮೀಸಲಾಗಿಟ್ಟಿದ್ದ 30 ಎಕರೆ ಜಮೀನನ್ನು ವಿಶೇಷ ಆರ್ಥಿಕ ವಲಯಕ್ಕಾಗಿ ಬಳಕೆ ಮಾಡಿಕೊಳ್ಳಲು ಡಿಎಲ್‌ಎಫ್‌ಗೆ ಅನುಮತಿ ನೀಡಿತು. ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ನಿರ್ಧಾರವನ್ನು ರದ್ದುಗೊಳಿಸಿತು. ಆ ಸಂದರ್ಭದಲ್ಲಿ ಕೋರ್ಟ್, `ಸದರಿ ಭೂಮಿಯನ್ನು ಕಬಳಿಸುವ ಸಲುವಾಗಿ ಸರ್ಕಾರ ಹಾಗೂ ಡಿಎಲ್‌ಎಫ್ ನಡುವೆ ಅಪವಿತ್ರ ಮೈತ್ರಿ ಏರ್ಪಟ್ಟಿದೆ ಎಂದು ಹೇಳಿತ್ತು~ ಎಂಬುದನ್ನು ಕೇಜ್ರಿವಾಲ್ ಉಲ್ಲೇಖಿಸಿದರು.ವಾದ್ರಾ ಅವರ ಮೆಸರ್ಸ್ ನಾರ್ಥ್ ಇಂಡಿಯಾ ಐಟಿ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಅಸ್ತಿತ್ವಕ್ಕೆ ಬಂದ ಒಂದೇ ವರ್ಷದಲ್ಲಿ, ಅಂದರೆ  2008ರಲ್ಲಿ ಡಿಎಲ್‌ಎಫ್ ಎಸ್‌ಇಝಡ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಮಾರು ಶೇ 50ರಷ್ಟು ಷೇರುಗಳನ್ನು ಖರೀದಿಸುತ್ತದೆ.  ಆದರೆ 2009ರಲ್ಲಿ ಈ ಷೇರುಗಳನ್ನು ಡಿಎಲ್‌ಎಫ್ ಸಮೂಹಕ್ಕೆ ಪುನಃ ಮಾರಾಟ ಮಾಡುತ್ತದೆ.ವಾದ್ರಾ ಅವರ ಕಂಪೆನಿ ಯಾವ ಬೆಲೆಗೆ ಷೇರುಗಳನ್ನು ಖರೀದಿಸಿತ್ತು? ಯಾವ ಬೆಲೆಗೆ ಅದನ್ನು ಮಾರಾಟ ಮಾಡಿತು? ಡಿಎಲ್‌ಎಫ್ ಎಸ್‌ಇಝಡ್ ತಮ್ಮ ನಿಯಂತ್ರಣದಲ್ಲಿದ್ದ ಒಂದು ವರ್ಷದ ಅವಧಿಯಲ್ಲಿ ವಾದ್ರಾ ಅವರು ವಹಿಸಿದ್ದ ಪಾತ್ರ ಏನು?- ಇವನ್ನೆಲ್ಲಾ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಡಿಎಲ್‌ಎಫ್ ಮತ್ತು ಹರಿಯಾಣ ಸರ್ಕಾರದ ನಡುವೆ 350 ಎಕರೆ ಭೂಮಿಯ ಮತ್ತೊಂದು ಅಕ್ರಮವೂ ನಡೆದಿದೆ. ಅರಣ್ಯೀಕರಣ ಮತ್ತು ಪ್ಲಾಂಟೇಷನ್ ಉದ್ದೇಶಕ್ಕೆ ಮೀಸಲಾಗಿದ್ದ 275 ಎಕರೆಗಳೂ ಸೇರಿ ಒಟ್ಟು 350 ಎಕರೆ ಜಮೀನನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಕಂಪೆನಿಗೆ ನೀಡಲಾಗಿದೆ. ನಂತರ ಇದನ್ನು ಕಾನೂನು ಪ್ರಕಾರ ಊರ್ಜಿತಗೊಳಿಸಲು, ಸರ್ಕಾರವು ಅಂತರರಾಷ್ಟ್ರೀಯ ಬಿಡ್ ಆಹ್ವಾನಿಸಿತ್ತು. ಗಾಲ್ಫ್ ಕೋರ್ಸ್ ನಿರ್ಮಿಸುವುದರಲ್ಲಿ ಪರಿಣತಿ ಇಲ್ಲವೆಂಬ ತಾಂತ್ರಿಕ ನೆಪವೊಡ್ಡಿ ಕಂಟ್ರಿ ಹೈಟ್ಸ್ ಮತ್ತು ಯುನಿಟೆಕ್ ಕಂಪೆನಿಗಳ ಬಿಡ್‌ಗಳನ್ನು ತಿರಸ್ಕರಿಸಿ ಆ ಭೂಮಿಯನ್ನು ಡಿಎಲ್‌ಎಫ್‌ಗೆ ನೀಡಿದೆ ಎಂದರು.ವಾದ್ರಾ ಮತ್ತು ಡಿಎಲ್‌ಎಫ್ ನಡುವಿನ ವ್ಯವಹಾರ ಸಂಬಂಧ ಕುರಿತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಂಡದಿಂದ ವಿಶೇಷ ತನಿಖೆ ನಡೆಸಬೇಕು. ವಾದ್ರಾ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದರು.ವಾದ್ರಾ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲು ಇದು ಅತ್ಯಂತ ಸೂಕ್ತ ಪ್ರಕರಣ. ಆದರೆ ರಾಷ್ಟ್ರದ ಹಣಕಾಸು ಸಚಿವರೇ ವಾದ್ರಾ ಪರ ವಕಾಲತ್ತು ವಹಿಸಿರುವಾಗ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಯಾರಿಗಿರುತ್ತದೆ ಎಂದು ಭಾರತೀಯ ಕಂದಾಯ ಸೇವೆಯ ಮಾಜಿ ಅಧಿಕಾರಿಯೂ ಆದ ಕೇಜ್ರಿವಾಲ್ ಪ್ರಶ್ನಿಸಿದರು.ಕೇಜ್ರಿವಾಲ್ ಅವರ ಈ ಆಪಾದನೆಗಳ ಕುರಿತು ಸೋನಿಯಾ ಅವರ ಅಳಿಯನಾದ ವಾದ್ರಾ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ ಕಾಂಗ್ರೆಸ್ ವಕ್ತಾರ ರಷೀದ್ ಅಲ್ವಿ ಮಾತನಾಡಿ, `ಈ ಆರೋಪಗಳು ನಿರಾಧಾರ ಹಾಗೂ ಸಾಕ್ಷ್ಯ ರಹಿತ. ಬೇಕಿದ್ದರೆ ಕೇಜ್ರಿವಾಲ್ ಅವರು ಈ ಸಂಬಂಧ ಕ್ರಿಮಿನಲ್ ದೂರು ನೀಡಿ, ನ್ಯಾಯಾಲಯದ ಮೆಟ್ಟಿಲು ಹತ್ತಲಿ ಎಂದಿದ್ದಾರೆ.ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಜನರಿಂದ ಸಂಗ್ರಹಿಸಿದ ಹಣದ ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಇದೇ ವೇಳೆ ಅವರು ಸವಾಲು ಹಾಕಿದ್ದಾರೆ.ಹರಿಯಾಣ ಹಾಗೂ ಡಿಎಲ್‌ಎಫ್ ಕಂಪೆನಿಯ ಭೂ ವ್ಯವಹಾರ ಕುರಿತು ನಡೆಸಿದ ಪರಿಶೀಲನೆಯಲ್ಲಿ ಯಾವ ಗಂಭೀರ ನಿಯಮ ಉಲ್ಲಂಘನೆಯೂ ಕಂಡುಬಂದಿಲ್ಲ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಸಮರ್ಥಿಸಿಕೊಂಡಿದ್ದಾರೆ.ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ 9ನೇ ಸೆಕ್ಷನ್ ಮತ್ತು ಸಾಕ್ಷ್ಯ ಕಾಯಿದೆಯ 114ನೇ ಸೆಕ್ಷನ್‌ಗಳಡಿ ವಾದ್ರಾ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ವಕೀಲ ಶಾಂತಿ ಭೂಷಣ್ ಹೇಳಿದರು.ಅಳಲು ತೋಡಿಕೊಂಡ ರೈತರು

ಕೇಜ್ರಿವಾಲ್ ಅವರೊಂದಿಗೆ ಮಾನೇಸರ್ ಗ್ರಾಮದ ರೈತರೂ ಸುದ್ದಿಗೋಷ್ಠಿಗೆ ಬಂದಿದ್ದರು. `ಹರಿಯಾಣ ಸರ್ಕಾರವು 2009ರಲ್ಲಿ ಭೂಸ್ವಾಧೀನದ ನೋಟಿಸ್ ನೀಡಿ ನಮ್ಮಲ್ಲಿ  ಭಯ ಮೂಡಿಸಿತು. ದಿಗಿಲುಬಿದ್ದ ನಾವು, ಬಂದಷ್ಟು ಹಣ ಬರಲಿ ಎಂದು ಡಿಎಲ್‌ಎಫ್ ಕಂಪೆನಿಗೆ ಭೂಮಿಯನ್ನು ಮಾರಾಟ ಮಾಡಿದೆವು.ಹೀಗೆ ರೈತರು ಭೂಮಿಯನ್ನೆಲ್ಲಾ ಮಾರಾಟ ಮಾಡಿದ ಮೇಲೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಯಿತು~ ಎಂದು ರೈತರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry