ಬುಧವಾರ, ಜೂನ್ 16, 2021
22 °C

ಇನ್ನಷ್ಟು ಬೆಳೆಯಿತು ಜೆ.ಪಿ ಪಾರ್ಕ್,

ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

ಇನ್ನಷ್ಟು ಬೆಳೆಯಿತು ಜೆ.ಪಿ ಪಾರ್ಕ್,

ಹೂವಿನಿಂದ ಅಲಂಕೃತಗೊಂಡು ಸ್ವಾಗತಿಸುವ ಹೆಬ್ಬಾಗಿಲು. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನಸ್ಸಿಗೆ ಮುದ ನೀಡುವ ಹಚ್ಚ ಹಸುರಿನ ವಾತಾವರಣ. ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲಾಕೃತಿಗಳು. ಮೀನಿನಂತೆ ನೀರಿನಲ್ಲಿ ಈಜುವ ಹಂಬಲ ನಿಮಗಿದ್ದರೆ ಅದಕ್ಕೂ ಇಲ್ಲಿದೆ ತರಬೇತಿ.ಈ ಎಲ್ಲ ಸೊಬಗು ಕಾಣಸಿಗುವುದು ಆರು ವರ್ಷದ ಸಂಭ್ರಮಾಚರಣೆಯಲ್ಲಿರುವ ನಗರದ ಮತ್ತಿಕೆರೆಯಲ್ಲಿನ ಜಯಪ್ರಕಾಶ ಉದ್ಯಾನವನದಲ್ಲಿ.  ರಾಮಕೃಷ್ಣ ಹೆಗಡೆಯವರ ಕನಸಿನ ಕೂಸಾದ ಇದನ್ನು, 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಿದ್ದರು. ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ನ ನಂತರದ ಸ್ಥಾನ ಪಡೆದಿರುವ ಜೆ.ಪಿ ಉದ್ಯಾನವನ ಪ್ರಾರಂಭದಿಂದಲೂ ಪ್ರಯೋಗಗಳನ್ನು ನಡೆಸುತ್ತಲೇ ಜನರ ಆಕರ್ಷಣೆಯ ಕೇಂದ್ರವಾಗಿದೆ.ಉದ್ಯಾನವನವೆಂದರೆ ಸಾಮಾನ್ಯವಾಗಿ ವಿಶ್ರಾಂತಿಗೆ ಮೀಸಲೆಂದು ಭಾವಿಸುತ್ತೇವೆ. ಆದರೆ ಇಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಸ್ಥಳಾವಕಾಶ ಕಡಿಮೆ. ಆ ಸ್ಥಳಾವಕಾಶ ಒದಗಿಸಿ ಅವರ ಪ್ರತಿಭೆಗೆ ನೀರೆರೆಯುವ ಉದ್ದೇಶದಿಂದ ಮೂರು ಎಕರೆ ಪ್ರದೇಶದಲ್ಲಿ ಚಿಕ್ಕ ಬಂಡಪ್ಪ ರಾಮಯ್ಯ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ.

 

ಹುಟ್ಟುಹಬ್ಬದ ಸಂಭ್ರಮಾಚರಣೆಯ ಕೊಡುಗೆಯಾಗಿ ಈ ಹಿಂದೆ ಇದ್ದ ಮೈದಾನವನ್ನು ಒಂದು ಕೋಟಿ ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. ಮೈದಾನದ ಅಗಲವನ್ನು 20 ಮೀ. ಹೆಚ್ಚಿಸಲಾಗಿದೆ.

 

ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಆಸನದ ಸಂಖ್ಯೆಯನ್ನು ಏರಿಸಲಾಗಿದೆ. ಬಾಸ್ಕೆಟ್ ಬಾಲ್, ಕ್ರಿಕೆಟ್, ಕೊಕೊ, ಫುಟ್‌ಬಾಲ್ ಹೀಗೆ ಎಲ್ಲ ಕ್ರೀಡೆಗೂ ಅನುಕುಲವಾಗುವಂತೆ ಇದರ ವಿನ್ಯಾಸಗೊಳಿಸಲಾಗಿದೆ.ಹಾಗೆಯೇ ಒಲಿಂಪಿಕ್ ಮಟ್ಟದಲ್ಲಿ ಈಜುಪಟುವಾಗಿ ಹೊರಹೊಮ್ಮಬೇಕೆಂಬ ಕನಸು ಹೊಂದಿರುವವರಿಗಾಗಿಯೇ ವಿಶೇಷವಾಗಿ ಹತ್ತು ಸಾಲುಗಳ ಬೃಹತ್ ಈಜುಕೊಳವನ್ನಿಲ್ಲಿ ಸ್ಥಾಪಿಸಿದ್ದಾರೆ.ಕರ್ನಾಟಕ ಈಜು ಸಂಸ್ಥೆಯಿಂದ ಮಾನ್ಯತೆ ಪಡೆದ ಡಾಲ್ಫಿನ್ ಅಕ್ವಾಟಿಕ್ಸ್ ಇಲ್ಲಿ ತರಬೇತಿ ನೀಡುತ್ತದೆ. ನೀವು ಹೊಸದಾಗಿ ಈಜು ಕಲಿಯುವವರಾಗಿದ್ದಾರೆ ತಿಂಗಳ ಶುಲ್ಕ 3,000, ಈಗಾಗಲೇ ಈಜಲು ಕಲಿತಿದ್ದು ಅಭ್ಯಾಸ ಮಾಡಲು ತಿಂಗಳಿಗೆ 600 ರೂಪಾಯಿ.ಇಲ್ಲಿಯ ಮತ್ತೊಂದು ಕೇಂದ್ರೀಯ ಆಕರ್ಷಣೆ ಎಂದರೆ ಸಿಮೆಂಟಿನ ಕಲಾಕೃತಿಗಳು. ಪಾರ್ಕ್‌ನ ಪ್ರಾರಂಭದಿಂದಲೂ ಈ ಕಲಾಕೃತಿಗಳಿದ್ದು, ಈವರೆಗೂ ಅವನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.ಬಿಸಿಲ ಬೇಗೆಯಲ್ಲೂ ದನ ಕಾಯುವ ಮನುಷ್ಯ, ಗುಡಿಸಲು, ಜಗಲಿಯಲ್ಲಿ ಕೂತು ಹರಟೆ ಹೊಡೆಯುವ ಮಹಿಳೆಯರು, ವನ್ಯ ಜೀವಿಗಳು ಹೀಗೆ ಗ್ರಾಮೀಣ ಸೊಗಡೇ ಮೈ ತಳೆದಿದೆ.

ಈ ಕಲಾಕೃತಿಗಳು ಮಕ್ಕಳ ಮನಸ್ಸನ್ನು ಸೂರೆಗೊಳ್ಳುವುದರಲ್ಲೂ ಯಶಸ್ವಿಯಾಗಿವೆ.

 

ನನಗೆ ಬೇರೆಲ್ಲ ಪಾರ್ಕ್‌ಗಿಂತ ಇದು ತುಂಬಾ ಇಷ್ಟ. ಇಲ್ಲಿ ಇರುವ ಹುಲಿ, ಸಿಂಹ, ನವಿಲು, ಜಿಂಕೆಗಳನ್ನು ನೋಡಲೆಂದೇ ನಾನಿಲ್ಲಿಗೆ ಬರ್ತೀನಿ. ಇವನ್ನು ನೋಡಿದರೆ ಜೀವಂತ ಪ್ರಾಣಿಯನ್ನು ನೋಡಿದಂತೆಯೇ ಅನ್ನಿಸುತ್ತದೆ ಎನ್ನುತ್ತಾಳೆ ಎಂಟು ವರ್ಷದ ಪುಟಾಣಿ ಲಿಷಾ.

 

ವನ್ಯ ಜೀವಿಗಳ ಬಗ್ಗೆ ಮಕ್ಕಳಲ್ಲಿ ಪ್ರೀತಿ  ಹುಟ್ಟುವಂತೆ ಮಾಡಲು ಇದು ಸಹಕಾರಿ. ಹಾಗೆಯೇ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮೂರು ಆಟದ ಮೈದಾನವು ಇಲ್ಲಿದೆ.

ತನ್ನ ಮಡಿಲನ್ನು ಮಾತ್ರ ಹಸಿರಾಗಿಸದೇ ಈಡೀ ಬೆಂಗಳೂರಿನಲ್ಲಿ ಹಸಿರು ತುಂಬುವ ಉದ್ದೇಶದಿಂದ ನರ್ಸರಿಯನ್ನಿಲ್ಲಿ ಪ್ರಾರಂಭಿಸಲಾಗಿದೆ.

 

ಈಗಾಗಲೇ 60ರಿಂದ 70 ಸಾವಿರ ಗಿಡಗಳ ಸಂಗ್ರಹಣೆ ಇದ್ದು, ಮಳೆಗಾಲದಲ್ಲಿ ಬೆಂಗಳೂರಿನ ಸುತ್ತಮುತ್ತ ಖಾಲಿ ಜಾಗ ಇರುವ ಪ್ರದೇಶದಲ್ಲಿ ನೆಡುವ ಯೋಜನೆಯನ್ನು ಹೊಂದಿದ್ದೇವೆ ಎನ್ನುತ್ತಾರೆ ಕೌನ್ಸಿಲರ್ ನಂಜುಂಡಪ್ಪ. ಸ್ವಚ್ಛತೆಗೆ ವಿಶೇಷ ಪ್ರಧಾನ್ಯ ನೀಡಲಾಗಿದೆ. ತಿಂಡಿ, ಪೊಟ್ಟಣವನ್ನು ಒಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಸುಮಾರು 150 ಮಂದಿ ಕೆಲಸಗಾರರಿದ್ದು ದಿನವೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

 

ಗಿಡಗಳಿಗೂ ನಿಯಮಿತವಾಗಿ ನೀರು ಹಾಯಿಸಲಾಗುತ್ತದೆ.  ಮಹಾನಗರ ಪಾಲಿಕೆಯಿಂದ ಕುಡಿಯುವ ನೀರಿನ ಪೂರೈಕೆ ಆಗುತ್ತದೆ. ಲೈಟ್‌ಗಳ ವ್ಯವಸ್ಥೆಗೆ ಯಾವುದೇ ಕೊರತೆ ಇಲ್ಲಿಲ್ಲ.ಈ ಎಲ್ಲ ಸೌಕರ್ಯಗಳ ಹೊರತಾಗಿ ಇಲ್ಲಿ ಕೇಳಿಬರುವ ಆಪಾದನೆ ಎಂದರೆ ಕೆರೆ ನೀರು ಬೇಸಿಗೆಯಲ್ಲಿ ಆವಿಯಾಗುವ ಪರಿಣಾಮ ಮೀನುಗಳು ಸಾವನ್ನಪ್ಪುತ್ತಿವೆ.ಈ ಬಗ್ಗೆ ಪ್ರತಿಕ್ರಿಯಿಸಿದ ಕೌನ್ಸಿಲರ್, `28 ಎಕರೆ ಕೆರೆ ಇದ್ದು, ಸ್ಯಾನಿಟರಿ ನೀರನ್ನು ಪುನರ್ಬಳಕೆ ಮಾಡಿ ಆ ನೀರನ್ನು ಕೆರೆಗೆ ಹಾಯಿಸುವ ಪ್ರಕ್ರಿಯೆ ತ್ವರಿತವಾಗಿ ಪ್ರಾರಂಭವಾಗಲಿದೆ~ ಎಂದರು. ಇಲ್ಲಿನ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಿದರೆ ಈ ಉದ್ಯಾನವನದ ಸೊಬಗು ದ್ವಿಗುಣಗೊಂಡೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.