ಇನ್ನಷ್ಟು ರೈಲು ಸೌಲಭ್ಯಕ್ಕೆ ಚಿಂತನೆ

7

ಇನ್ನಷ್ಟು ರೈಲು ಸೌಲಭ್ಯಕ್ಕೆ ಚಿಂತನೆ

Published:
Updated:

ಚಿಕ್ಕಬಳ್ಳಾಪುರ: ನಗರದ ರೈಲು ನಿಲ್ದಾಣದಲ್ಲಿರುವ ಬ್ರಿಟಿಷ್ ಆಳ್ವಿಕೆ ಕಾಲದ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ನೂತನ ಕಟ್ಟಡವನ್ನು ಮುಂದಿನ ಜೂನ್ ವೇಳೆಗೆ ನಿರ್ಮಿಸಲಾಗುವುದು. ಶೌಚಾಲಯ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.ರೈಲ್ವೆ ಕಾಮಗಾರಿ ಪರಿಶೀಲನೆಗಾಗಿ ಶನಿವಾರ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸುಮಾರು 1.20 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ನಿಲ್ದಾಣ ನಿರ್ಮಿಸುವ ಉದ್ದೇಶವಿದ್ದು, ಇದಕ್ಕಾಗಿ ಸಿದ್ಧತಾ ಪ್ರಕ್ರಿಯೆ ಕೈಗೊಳ್ಳಲಾಗಿದೆ~ ಎಂದರು.`ತಾತ್ಕಾಲಿಕ ಶೌಚಾಲಯಗಳು, ವಿಶ್ರಾಂತಿ ಗೃಹ, ಕುಡಿಯುವ ನೀರು ಪೂರೈಕೆ ಮುಂತಾದವುಗಳ ಅನುಷ್ಠಾನಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಮಾರ್ಚ್ ಅಥವಾ ಜೂನ್ ಅಂತ್ಯದ ವೇಳೆಗೆ ಪೂರ್ಣಪ್ರಮಾಣದ ರೈಲು ನಿಲ್ದಾಣ ನಿರ್ಮಿಸಲಾಗುವುದು. ಬ್ರಿಟಿಷ್ ಆಳ್ವಿಕೆ ಕಾಲದ ಹಳೆಯ ಕಟ್ಟಡದಲ್ಲೇ ಶೌಚಾಲಯ, ವಿಶ್ರಾಂತಿ ಗೃಹ ಮುಂತಾದವು ಕಲ್ಪಿಸಲಾಗುವುದು~ ಎಂದು ಅವರು ಹೇಳಿದರು.`ಜೂನ್ ವೇಳೆಗೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನಿಂದ ಚಿಂತಾಮಣಿಯವರೆಗೆ ರೈಲು ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ರೈಲು ಮಾರ್ಗ ಯೋಜನೆ ರೂಪಿಸಲಾಗಿದ್ದು, ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ನಡುವೆ ಇನ್ನಷ್ಟು ರೈಲುಗಳ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗುವುದು~ ಎಂದರು.

`ರೈಲು ನಿಲ್ದಾಣ ಮತ್ತು ರೈಲು ಮಾರ್ಗಕ್ಕೆ ಹೊಂದಿಕೊಂಡಂತಿರುವ ಚಾಮರಾಜಪೇಟೆಯ ನಿವಾಸಿಗಳಿಗೆ ಸದ್ಯಕ್ಕೆ ತೊಂದರೆ ನೀಡುವುದಿಲ್ಲ. ಅವರನ್ನು ತೆರವುಗೊಳಿಸದೇ ಚಿಂತಾಮಣಿಯವರೆಗೆ ರೈಲು ಹಳಿಗಳನ್ನು ಅಳವಡಿಸಲಾಗುವುದು. ವಸತಿ ಮತ್ತು ನಿವೇಶನ ಸೌಲಭ್ಯ ನೀಡಿದ ನಂತರವಷ್ಟೇ ಚಾಮರಾಜಪೇಟೆಯ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗುವುದು~ ಎಂದರು.`ಚಾಮರಾಜಪೇಟೆಯ ನಿವಾಸಿಗಳಿಗೆ ಮನೆ ಮತ್ತು ನಿವೇಶನ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಮತ್ತು ನಗರಸಭೆ ಪ್ರತಿನಿಧಿಗಳು ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು~ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಡಾ. ಎನ್. ಮಂಜುಳಾ, ಶಾಸಕ ಕೆ.ಪಿ.ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry