ಶನಿವಾರ, ಅಕ್ಟೋಬರ್ 19, 2019
28 °C

ಇನ್ನಷ್ಟು ವಸತಿ ಶಾಲೆಗಳ ಸ್ಥಾಪನೆ

Published:
Updated:

ಹಾವೇರಿ: `ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮಕ್ಕಳು ಉತ್ಸುಕರಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವಸತಿ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ~ ಎಂದು ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಹಾನಗಲ್ ತಾಲ್ಲೂಕಿನ ಮಾರನಬೀಡ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಜ್ಯದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ 120 ವಸತಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶಗಳಿಸುವಲ್ಲಿ ಯಶಸ್ವಿಯಾಗಿವೆ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವುದರೊಂದಿಗೆ ಶಿಕ್ಷಕರು ಅವರೊಂದಿಗೆ ಇದ್ದು ಶಿಕ್ಷಣ ನೀಡುವುದೇ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದರು.ರಾಜ್ಯದಲ್ಲಿ ಒಟ್ಟು 548 ಮೋರಾರ್ಜಿ ಹಾಗೂ ಕಿತ್ತೂರ ಚೆನ್ನಮ್ಮ ವಸತಿ ಶಾಲೆಗಳಿದ್ದು, ಶೇ.78ರಷ್ಟು ಸ್ವಂತ ಕಟ್ಟಡಗಳನ್ನು ಹೊಂದಿದೆ. 140 ವಸತಿ ಶಾಲೆಗಳ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ವಸತಿ ಶಾಲೆಗಳ ನಿರ್ಮಾಣಕ್ಕಾಗಿ 480 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ವಸತಿ ಶಾಲೆ ನಿರ್ಮಿಸಲು 240 ನಿವೇಶನಗಳ ಕೊರತೆಯಿದ್ದು, ನಿವೇಶನ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಒಟ್ಟು 36 ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಒಂದು ವಸತಿ ನಿಲಯ ಹೊರತುಪಡಿಸಿ, ಎಲ್ಲ ನಿಯಲಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಮಾರನಬೀಡದಲ್ಲಿ ನಿರ್ಮಿಸಲಾದ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಒಟ್ಟು 4.75 ಕೋಟಿ ರೂ.ವೆಚ್ಚ ಮಾಡಲಾಗಿದೆ. ಅದಲ್ಲದೇ ಈ ವಸತಿ ಶಾಲೆಯ ಕಂಪೌಂಡ ನಿರ್ಮಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 60 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ, ಜಿ.ಪಂ.ಸದಸ್ಯೆ ಸುಜಾತಾ ಕೊಟಗಿಮನಿ, ತಾ.ಪಂ.ಅಧ್ಯಕ್ಷೆ ಲಲಿತಾ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಸವರಾಜ ಸಂಶಿ, ಮಾರನಬೀಡ ಗ್ರಾ.ಪಂ. ಬಸವರಾಜ ಕಡಕೋಳ, ಎ.ಎಸ್.ಬಳ್ಳಾರಿ, ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ.ತಿರ್ಲಾಪೂರ, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಕೃಷ್ಣ ಬುಗಟ್ಯಾಗೋಳ, ತಹಸೀಲ್ದಾರ್ ಎಸ್.ಎನ್. ರುದ್ರೇಶ, ಪ್ರಾಚಾರ್ಯ ಎಸ್.ಬಿ.ಕರಾಳೆ ಸೇರಿದಂತೆ ಮತ್ತಿತರ ಸ್ಥಳೀಯ ಜನಪ್ರತಿನಿಧಿಗಳು  ಹಾಜರಿದ್ದರು.

Post Comments (+)