ಇನ್ನಾ ಉಳದದ... ನಾದದೊಳಗ

7

ಇನ್ನಾ ಉಳದದ... ನಾದದೊಳಗ

Published:
Updated:
ಇನ್ನಾ ಉಳದದ... ನಾದದೊಳಗ

ಸಂಗೀತ ಯಾವತ್ತೂ ಮುಗಿಯಾಕ ಸಾಧ್ಯನೆ ಇಲ್ಲ. ಕಲಿತಷ್ಟೂ ಉಳೀತದ.. ಹೀಗೆ ಹೇಳುತ್ತ ಮಾತಿಗೆ ಇಳಿದಿದ್ದು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಪಂ. ಫಕೀರೇಶ ಕಣವಿ.ತಮ್ಮ ಮಕ್ಕಳಾದ ಕುಮಾರ್ ಕಣವಿ, ಮಾಲಾಶ್ರೀ ಕಣವಿ ಅವರ ಗಜಲ್ ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ವಿಶೇಷ ಕಛೇರಿ ನೀಡಿದ ಬಳಿಕ `ಮೆಟ್ರೊ~ದೊಂದಿಗೆ ಸಂಗೀತ, ಕಲಿಕೆ ಮತ್ತು ತಪದ ಬಗ್ಗೆ ಒಂದಷ್ಟು ತಮ್ಮ ಕಾಳಜಿ, ಆತಂಕ ಹಾಗೂ ನಿರೀಕ್ಷೆಗಳನ್ನು ಬಿಚ್ಚಿಟ್ಟರು.ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ವಾತಾವರಣ ಹೇಗಿದೆ?

ಒಂದೆರಡು ದಶಕಗಳನ್ನು ಹೋಲಿಸಿದರೆ ಈಗ ಹಿಂದೂಸ್ತಾನಿ ಸಂಗೀತಕ್ಕೆ ಅಭಿಮಾನಿಗಳೂ, ಶ್ರೋತೃಗಳೂ ಹೆಚ್ಚಾಗಿದ್ದಾರೆ. ಇದಕ್ಕೆ ಉತ್ತರ ಭಾರತೀಯರು ಹಾಗೂ ಉತ್ತರ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆಗೆ ಬಂದು ನೆಲೆಸಿರುವುದೂ ಕಾರಣವಾಗಿರಬಹುದು.ನಿಮಗೆ ಯಾವ ಪ್ರಕಾರ ಇಷ್ಟ?

ನಮ್ಮ ಗುರುಗಳು ಎರಡೂ ಶೈಲಿಗಳನ್ನು ಕಲಿತಿದ್ದರು. ನನಗೆ ಎರಡೂ ಶೈಲಿಗಳೂ ಇಷ್ಟ. ಇದರಲ್ಲಿ ಯಾವುದು ಶ್ರೇಷ್ಠ ಎಂದು ಹೇಳುವುದು ಸಲ್ಲ. ಎರಡಕ್ಕೂ ತಮ್ಮದೇ ಇತಿಮಿತಿಗಳಿವೆ. ವಿಶೇಷಗಳಿವೆ.ಹಿಂದೂಸ್ತಾನಿಯತ್ತ ಒಲವು ಹೆಚ್ಚಲು ಕಾರಣವೆಂದರೆ ಇದು ವಿಸ್ತಾರವಾಗಿದೆ. ನವರಸಗಳಲ್ಲಿ ಆರು ರಸ(ಷಡ್ರಸ)ಗಳನ್ನೂ ಇಲ್ಲಿ ಅಭಿವ್ಯಕ್ತಿಗೊಳಿಸಬಹುದಾಗಿದೆ. ಪ್ರಯೋಗಗಳೂ ಸಾಧ್ಯ.

 

ಸಂಗೀತ ಕಲಿಕೆಯಲ್ಲಿ ಯುವಜನಾಂಗ ಆಸಕ್ತಿ ತೋರುತ್ತಿದೆಯೇ?

ಆಸಕ್ತಿ ತೋರುತ್ತಿದೆ. ಆದರೆ ಶ್ರದ್ಧೆ ಕಡಿಮೆ. ಸಂಯಮ ಕಾಣುತ್ತಿಲ್ಲ. ಒಂದೆರಡು ವರ್ಷಗಳಲ್ಲಿ ಎಲ್ಲವನ್ನೂ ಕಲಿಯಬೇಕೆನ್ನುವ ಕಾತರ ಹೆಚ್ಚಿದೆ. ಈ ಇನ್‌ಸ್ಟಂಟ್ ಕಲಿಕೆಯಿಂದಾಗಿ ಸಂಗೀತ ಕ್ಷೇತ್ರಕ್ಕೆ ಯಾವ ಅನುಕೂಲವೂ ಇಲ್ಲ.

 

ಸಂಗೀತ ಕಲಿಕೆಗೆ ಗುರು-ಶಿಷ್ಯ ಪರಂಪರೆಯೇ ಉತ್ತಮ ಪರಿಹಾರವೇ?

ನಾನು 14 ವರ್ಷಗಳ ಕಾಲ ಪಂಡಿತ್ ಪುಟ್ಟರಾಜ ಗವಾಯಿಗಳ ಬಳಿ ಸಂಗೀತ ಕಲಿತೆ. ನಾವಿದ್ದ ಗುರು-ಶಿಷ್ಯ ಪರಂಪರೆಯಲ್ಲಿ, ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ ಆಗಿದ್ದರು.ಸೇವೆಯ ಮೂಲಕ ಭಕ್ತಿಯನ್ನು ತೋರುತ್ತಿದ್ದೆವು. ಅದು ಸಾತ್ವಿಕ ಭೀತಿಯೊಂದನ್ನು ಹುಟ್ಟಿಸುತ್ತಿತ್ತು. ಒಂದು ಚೀಜ್ ಕಲಿಯಲು ವರ್ಷಗಟ್ಟಲೆ ಶ್ರಮಪಡಬೇಕಾಗುತ್ತಿತ್ತು. ಅಂಥ ಸಂಯಮ ಈಗ ಗುರುಗಳಲ್ಲಿಯೂ ಕಾಣುತ್ತಿಲ್ಲ.ಶಿಷ್ಯರಲ್ಲಂತೂ ಹುಡುಕಿದರೂ ಸಿಗುವುದಿಲ್ಲ. ಧಾವಂತದ ಬದುಕಿನಲ್ಲಿ ಸಂಗೀತವೊಂದು ತಪಸ್ಸಾಗಿ ಉಳಿದಿಲ್ಲ. ಕಲೆಯಾಗಿ ಉಳಿಯುತ್ತಿದೆ. ಇಲ್ಲಿ ಇನ್ನೊಂದು ಮಾತು ಗುರು-ಶಿಷ್ಯ ಎನ್ನುವುದು ಕಲಿಕೆಗೆ ಮಾತ್ರ ಸಂಬಂಧಿಸಿದ್ದು. ಉಳಿದಂತೆ ನಾದ ಲೋಕದಲ್ಲಿ ಸಂಗೀತವೇ ಗುರು. ಉಳಿದವರೆಲ್ಲ ಶಿಷ್ಯರೇ.ಮಕ್ಕಳೊಳಗ ಶ್ರದ್ಧೆ ಕಡಿಮೆ ಅಂದ್ರೇನು?

ಕಲೀತಾರ... ಆದ್ರ ಕಂಠಶುದ್ಧಿ-ಭಾಷಾ ಶುದ್ಧಿ ಕಡೆ ಗಮನ ಇಲ್ಲ. ಹಾಡುವುದಷ್ಟೆ ಕಲೀತಾರೆ. ಹಾಡೋದನ್ನು ಅನುಭವಿಸೋದು ಕಲಿಸಲು ಸಾಧ್ಯವೇ ಇಲ್ಲ. ಅದು ತಾದಾತ್ಮ್ಯ ಭಾವದಿಂದ ಬರುತ್ತದೆ. ಅದನ್ನು ಸಾಧಿಸಲು ಸ್ವರ-ರಾಗಗಳೊಂದಿಗೆ ಶಾರೀರವಷ್ಟೇ ಅಲ್ಲ, ಶರೀರವೂ ತಲ್ಲೆನವಾಗಬೇಕು. ಅವಾಗ ರಾಗವೊಂದು ನಮ್ಮ ವಶವಾಗುತ್ತದೆ. ಇಂಥ ಶ್ರದ್ಧೆ ಕಡಿಮೆ ಆಗಿದೆ.ಇದಕ್ಕೆ ಕಾರಣವೇನು?

ರಿಯಾಲಿಟಿ ಶೋಗಳು. ಬಲುಬೇಗನೆ ಜನಪ್ರಿಯದ ರುಚಿ ತಾಕುತ್ತದೆ. ನಂತರ ಅವರು ಸಂಗೀತ ಸಾಧನೆಯಿಂದ ದೂರ ಸರಿಯುತ್ತಾರೆ. ಸಂಗೀತ ಸಾಧನೆಗೆ ಈ ಜನಪ್ರಿಯತೆ ಸಣ್ಣದೊಂದು ತೆರೆ ಸೃಷ್ಟಿಸುತ್ತದೆ. ಅಚಲ ನಿರ್ಧಾರ ಇದ್ದರೆ ಮಾತ್ರ ಈ ತೆರೆಯನ್ನು ಸರಿಸಿ ಮತ್ತೆ ಸಾಧಕರಾಗಬಹುದು.ಕುಮಾರ ಹಾಗೂ ಮಾಲಾಶ್ರೀಗೂ ಇದನ್ನೇ ಹೇಳಿದ್ದೆ. ಒಂದು ಹಂತದವರೆಗೆ ನಿಮ್ಮನ್ನು ಮೌಲ್ಯಮಾಪನ ಮಾಡಿಕೊಳ್ಳಲು ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ. ತುಲನೆ ಮಾಡಿಕೊಳ್ಳಲು ಅಲ್ಲ. ಅವರು ಭಾಗವಹಿಸಿದರು. ಗೆದ್ದರು. ಮತ್ತೆ ತಮ್ಮ ಸಾಧನೆಗೆ ಹಿಂದಿರುಗಿದರು. ಆದರೆ ಹಾಗೆ ಹಿಂದಿರುಗಲು ಸಾಕಷ್ಟು ಗಟ್ಟಿ ಮನಸು ಬೇಕು. ಸಂಗೀತದೆಡೆಗೆ ಸತ್ಯದ ಸೆಳೆತ ಬೇಕು.ಇಷ್ಟಾದರೆ ಸಂಗೀತದಲ್ಲಿ ಸಾಧನೆ ಸಾಧ್ಯವೆ?

ಸಂಗೀತ ಕೇವಲ ಕಲೆ ಅಲ್ಲ. ಅದು ಜೀವನವನ್ನೇ ಬೇಡುತ್ತದೆ. ಬದ್ಧರಾಗಿರಬೇಕು. ಸಾತ್ವಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಂಠಶುದ್ಧಿ ಆಗದು. ಸಾತ್ವಿಕ ಆಹಾರದೊಂದಿಗೆ ಸಾತ್ವಿಕ ಬದುಕು ಇರಬೇಕು. ಸಪ್ತ ಸ್ವರಗಳೊಂದಿಗೆ ಬಸವಣ್ಣನವರ ಸಪ್ತ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

 

ಇವೆಲ್ಲವೂ ವಿನಯವಂತಿಕೆ ಕಲಿಸಿಕೊಡುತ್ತವೆ. ವಿನಮ್ರರಾಗುವಂತೆ ಮಾಡುತ್ತವೆ. ಸಾಧನೆಯಿಂದ ದುರಹಂಕಾರ ಬರುತ್ತದೆ. ಅದನ್ನು ತಡೆಯಲು ಈ ಸಪ್ತ ಸೂತ್ರಗಳು ಸಹಾಯ ಮಾಡುತ್ತವೆ. ಇದು ನನ್ನ ಬದುಕಿನ ಮಂತ್ರವಾಗಿದೆ.ಯಾವುದದು ಸಪ್ತ ಸೂತ್ರ?

ಇದು ಸಂಗೀತಗಾರರಿಗೆ ಅಷ್ಟೇ ಅಲ್ಲ, ಎಲ್ಲರಿಗೂ ಅನ್ವಯವಾಗುವ ಸೂತ್ರ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ.. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಈ ಎರಡೂ ಬಗೆಯ ಶುದ್ಧಿಗಳಿದ್ದಾಗ ಕಂಠದಲ್ಲಿ ಮಾಧುರ್ಯ ಹಾಗೂ ಪ್ರೇಮ ಎರಡೂ ತುಂಬುತ್ತವೆ. ಆಗ ಹಾಡುವುದು ಮನಸನ್ನಷ್ಟೇ ಅಲ್ಲ, ದೇವರನ್ನೂ ತಲುಪುತ್ತದೆ.ಫಕೀರೇಶ ಕಣವಿ ಅವರು ಕಳೆದ 23 ವರ್ಷಗಳಿಂದ ಗುಲ್ಬರ್ಗ ಆಕಾಶವಾಣಿ ಕೇಂದ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅಪಾರ ಶಿಷ್ಯ ಬಳಗ ಹೊಂದಿದ್ದಾರೆ. ಪ್ರಚಾರದಿಂದ ಯಾವತ್ತೂ ದೂರ ಉಳಿಯುವ ಇವರಿಗೆ ನಾದವೇ ಬ್ರಹ್ಮ, ಜಗತ್ತು ಎಲ್ಲ..! ಬೇಂದ್ರೆ ಅವರ ಮಾತು `ನಾದ ಬೇಕು... ನಾದಬೇಕು~ ಎನ್ನುವುದು ಜೀವನ ಮಂತ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry