ಇನ್ನಾ ಮುದ್ದಾಣು ದೇವಳಕ್ಕೆ ನುಗ್ಗಿದ ಕಳ್ಳರು.ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳವು

7

ಇನ್ನಾ ಮುದ್ದಾಣು ದೇವಳಕ್ಕೆ ನುಗ್ಗಿದ ಕಳ್ಳರು.ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published:
Updated:

ಇನ್ನಾ (ಪಡುಬಿದ್ರಿ): ಇನ್ನಾ ಮುದ್ದಾಣು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಮಹಾದ್ವಾರದ ಬೀಗ ಮುರಿದು ಒಳನುಗ್ಗಿದ ಕಳ್ಳರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ದೇವಳದಲ್ಲಿ ರಾತ್ರಿ ಪೂಜೆ ಸಲ್ಲಿಸಿ ಅರ್ಚಕ ಶ್ರೀಶ ರಾವ್ ಮನೆಗೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಪೂಜೆಗಾಗಿ ದೇವಳಕ್ಕೆ ಬಂದಿದ್ದ ವೇಳೆ ಮುಂಬಾಗಿಲು ಸಹಿತ ಐದು ಬಾಗಿಲ ಬೀಗವನ್ನು ಆಯುಧದಿಂದ ಮುರಿದು ಕಳವು ನಡೆಸಿರುವುದು ಬೆಳಕಿಗೆ ಬಂತು.ದೇವರ ಚಿನ್ನದ ಮುಖವಾಡ, ದೇವರ ಬೆಳ್ಳಿಯ ಮುಖವಾಡ, 1.5 ಅಡಿ ಎತ್ತರದ ದೇವರ ಬೆಳ್ಳಿಯ ವಿಗ್ರಹ, ನಂದಿಗೆ ಮುಚ್ಚಿದ ಬೆಳ್ಳಿಯ ಕವಚ, ಮರಕ್ಕೆ ಹೊದಿಸಿದ ಬೆಳ್ಳಿಯ ಮಂಟಪ, ಬೆಳ್ಳಿಯ ಸಂಪುಷ್ಟ, ಬೆಳ್ಳಿಯ ಧಾರಾ ಪಾತ್ರೆ, ಬೆಳ್ಳಿಯ ನಾಗಾಭರಣ, ಬೆಳ್ಳಿಯ ಕಳಸ (ಕೊಡಪಾನ) ಕಳವಾಗಿದೆ ಎಂದು ದೇವಳದ ಮಾಜಿ ಆಡಳಿತ ಮೊಕ್ತೇಸರ ಇನ್ನಾ ವಿಶ್ವನಾಥ್ ಭಟ್ ದೂರು ನೀಡಿದ್ದಾರೆ.ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಂದಿದ್ದು, ಶ್ವಾನ ದೇವಳಕ್ಕೆ ಒಂದು ಸುತ್ತು ಬಂದು ಹಿಂಬದಿಯಲ್ಲಿರುವ ಕೆರೆಯೊಂದರ ಬಳಿ ನಿಂತಿತು. ಕಳ್ಳರು ಚಿನ್ನಾಭರಣ ಎಸೆದಿರಬಹುದು ಎಂದು ಶಂಕಿಸಿ ಕೆರೆ ನೀರನ್ನು ಖಾಲಿ ಮಾಡಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ದೇವಳದ ಮುಖ್ಯದ್ವಾರದ ಬಳಿ ಬೆಳ್ಳಿಯ ತಗಡಿನಿಂದ ಮುಚ್ಚಿದ್ದ ಮರದ ಮಂಟಪ ಪತ್ತೆಯಾಗಿದೆ. ಇದನ್ನು ಎಸೆದು ವಾಹನದಲ್ಲಿ ಪರಾರಿಯಾಗಿರಬಹುದು ಎಂದು ಶಂಕಿಸಲಸಾಗಿದೆ.ನಾಲ್ಕು ತಂಡಗಳು: ಕಳ್ಳರ ತಂಡ ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಡಿವೈಎಸ್‌ಪಿ, ಪಡುಬಿದ್ರಿ ಪೊಲೀಸ್, ಜಿಲ್ಲಾ ಅಪರಾಧ ಪತ್ತೆದಳ, ಕಾಪಿ ವೃತ್ತ ಎಂಬ ನಾಲ್ಕು ವಿಶೇಷ ತಂಡ ಇದೆ. ಈಗಾಗಲೇ ಕಳ್ಳರ ಕುರುಹು ಪತ್ತೆಯಾಗಿದೆ ಎಂದು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ವೆಂಕಟೇಶಯ್ಯ, ಡಿವೈಎಸ್‌ಪಿ ಜಯಂತ್ ಶೆಟ್ಟಿ, ಕಾಪು ಇನ್ಸ್‌ಪೆಕ್ಟರ್ ಚೆಲುವರಾಜ್, ಪಡುಬಿದ್ರಿ ಪಿಎಸ್‌ಐ ಮಹದೇವ ಸೆಟ್ಟಿ ಭೇಟಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry