ಬುಧವಾರ, ಜನವರಿ 29, 2020
23 °C

ಇನ್ನು ರೋಡಿನಲ್ಲೂ ಹೈ ಬ್ರಿಡ್ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಕ್ ಓಡಿಸಲು ಮೋಟಾರು ಹೇಗೆ ಅವಶ್ಯವೋ ಹಾಗೆಯೇ ಸೈಕಲ್ ಓಡಿಸಲು ಪೆಡಲ್ ಅತ್ಯಗತ್ಯ. ಶ್ರಮವಿಲ್ಲದೆ ಸಂಚರಿಸಲು ಅತ್ಯಗತ್ಯವಿರುವ ಮೋಟಾರು ಮತ್ತು ಪೆಡಲ್ ತಂತ್ರಜ್ಞಾನಗಳ ಸಮ್ಮಿಶ್ರಣವೇ `ಮೊಪೆಡ್~. ದ್ವಿಚಕ್ರವಾಹನ ಮುಂದೆ ಚಲಿಸಲು ಬೇಕಿರುವ ಪೆಟ್ರೋಲ್ ಎಂಜಿನ್ ಹಾಗೂ ಪೆಡಲ್‌ಗಳ ಶಕ್ತಿಗಳನ್ನು ಒಂದೇ ವಾಹನಕ್ಕೆ ಅಳವಡಿಸಿ ತಯಾರಿಸಿದ ಹೈಬ್ರಿಡ್ ವಾಹನವನ್ನು ನಮ್ಮಲ್ಲಿನ ಬಹುತೇಕ ಪೋಷಕರು ಒಂದು ಕಾಲದಲ್ಲಿ ಹೊಂದಿದ್ದರು.

 

18ನೇ ಶತಮಾನದಲ್ಲೇ ಮೊಪೆಡ್ ವಿನ್ಯಾಸ ಸಿದ್ಧಗೊಂಡಿದ್ದರೂ 1947ರ ನಂತರ ಈ ಹೈಬ್ರಿಡ್ ತಂತ್ರಜ್ಞಾನದ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. 80ರ ದಶಕದಲ್ಲಿ ಮೊಪೆಡ್‌ಗಳ ಬಳಕೆ ಹೆಚ್ಚಾಗಿತ್ತಾದರೂ, ಅಧಿಕ ಆಶ್ವಶಕ್ತಿಯ ಬೈಕುಗಳ ಶಕೆ ಆರಂಭವಾದ ನಂತರ ಮೊಪೆಡ್‌ಗಳು ನೇಪಥ್ಯಕ್ಕೆ ಸರಿದವು. ಮೊಪೆಡ್‌ಗಳ ನಂತರ ಹೈಬ್ರಿಡ್ ತಂತ್ರಜ್ಞಾನದ ಅಭಿವೃದ್ಧಿ ತನ್ನ ವೇಗವನ್ನು ಕಳೆದುಕೊಂಡಿತು. ಆದರೆ ಈಗ ಮತ್ತೊಮ್ಮೆ ಹೈಬ್ರಿಡ್ ಅನಿವಾರ್ಯ ಎಂಬುದು ಜಗತ್ತಿನ ಬೇಡಿಕೆಯಾಗಿದೆ.1665ರಲ್ಲಿ ಚೀನಾದ ರಾಜ ಖಾಂಗ್ ಹಿಸ್ ಎಂಬುವವನಿಗೆ ಫರ್ಡಿನಾಂಡ್ ವರ್ಬೀಸ್ಟ್ ಎಂಬ ಫಾದ್ರಿ ಉಗಿಬಂಡಿ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನದಿಂದ ಹಿಡಿದು ಇಲ್ಲಿಯವರೆಗೂ ನಿರಂತರವಾಗಿ ಹೈಬ್ರಿಡ್ ಕಾರುಗಳ ಅನ್ವೇಷಣೆ ಹಾಗೂ ಅಭಿವೃದ್ಧಿ ನಡೆಯುತ್ತಲೇ ಬಂದಿದೆ.ಆದರೆ 1993ರಲ್ಲಿ ಕ್ಲಿಂಟನ್ ಸರ್ಕಾರ ಘೋಷಿಸಿದ ಪಾಲುದಾರಿಕೆಯಲ್ಲಿ ಹೊಸ ಪೀಳಿಗೆಯ ವಾಹನಗಳ ತಯಾರಿಕೆಯು ಹೈಬ್ರಿಡ್ ವಾಹನಗಳ ಅಭಿವೃದ್ಧಿ ವೇಗವನ್ನು ಹೆಚ್ಚಿಸಿತು.ಅಮೆರಿಕದ ಈ ಆಹ್ವಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು ಜಪಾನಿನ ಟೊಯೋಟಾ ಹಾಗೂ ಹೋಂಡಾ ಕಂಪೆನಿಗಳು.ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಚೀನಾ ಹಾಗೂ ಭಾರತದಲ್ಲಿ 2030ರ ವೇಳೆಗೆ 1.6 ಶತಕೋಟಿ ಕಾರುಗಳು ರಸ್ತೆಗಳಿಯಲಿವೆ. ಇಂಧನ ಮಿತವ್ಯಯದ ಜಪ ನಡೆಯುತ್ತಿರುವ ಹೊತ್ತಿನಲ್ಲೇ ವಾಹನಗಳ ಮಾರಾಟವೂ ದುಪ್ಪಟ್ಟಾಗುತ್ತಾ ಸಾಗುತ್ತಿದೆ. ಬರುವ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ. 40ರಷ್ಟು ಹೆಚ್ಚಾಗಲಿದೆಯಂತೆ. ಜತೆಗೆ ಭಾರತದಲ್ಲೂ ತೀವ್ರತರವಾಗಿ ಪೆಟ್ರೋಲ್ ಬೇಡಿಕೆ ಹೆಚ್ಚುವುದರಿಂದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದ್ದೇ ಇರುತ್ತದೆ.ಹೀಗಾಗಿ ಪರ್ಯಾಯ ಇಂಧನದ ಹುಡುಕಾಟ ಆರಂಭವಾಗಿ ಸಾಕಷ್ಟು ವರ್ಷಗಳೇ ಕಳೆದಿವೆ. ಹೀಗಾಗಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ಹೈಬ್ರಿಡ್ ಕಾರುಗಳ ತಯಾರಿಕೆಯತ್ತ ಈಗ ವಾಹನ ತಯಾರಿಕಾ ಕಂಪೆನಿಗಳು ಆಸಕ್ತಿ ವಹಿಸಿವೆ. ಸರ್ಕಾರವೂ ಸಹ ಈ ಕುರಿತು ಸೂಕ್ತ ನೀತಿ ರೂಪಿಸುವತ್ತ ಚಿಂತನೆ ನಡೆಸಿರುವ ಬೆನ್ನಲ್ಲೇ ದೇಶ ಹಾಗೂ ವಿದೇಶಿ ಕಾರು ತಯಾರಿಕಾ ಕಂಪೆನಿಗಳು ತಮ್ಮ ತಮ್ಮ ಹೈಬ್ರಿಡ್ ತಂತ್ರಜ್ಞಾನದಲ್ಲಿ ಅಭಿವೃದ್ಧಿಗೊಂಡ ಕಾರುಗಳ ಪರೀಕ್ಷಾರ್ಥ ಪ್ರಯೋಗ ನಡೆಸಿವೆ.ಇತ್ತೀಚೆಗಷ್ಟೇ ನಡೆದ ದೆಹಲಿ ಆಟೋ ಎಕ್ಸ್‌ಪೋನಲ್ಲಿ ಇಂಥ ಹಲವು ಕಲ್ಪನೆಯ ಕಾರುಗಳು ಪ್ರದರ್ಶನವನ್ನೂ ಕಂಡವು. ಏರುತ್ತಿರುವ ಇಂಧನ  ಬೆಲೆ ಹಾಗೂ ಪರಿಸರ ಕಾಳಜಿಯಿಂದ ಹೈಬ್ರಿಡ್ ವಾಹನಗಳು ಮುಂದಿನ ಪೀಳಿಗೆಯ ತಂತ್ರಜ್ಞಾನ ಎಂದೇ ಬಿಂಬಿತವಾಗಿದೆ.ಒಂದಕ್ಕಿಂಥ ಹೆಚ್ಚು ಎಂಜಿನ್‌ಗಳನ್ನು ಒಂದೇ ವಾಹಕ್ಕೆ ಅಳವಡಿಸಿ ಅವುಗಳ ಮೂಲಕ ಇಂಧನದ ಮೇಲಿನ ಭಾರೀ ಅವಲಂಬನೆ ತಗ್ಗಿಸುವುದು ಇದರ ಮುಖ್ಯ ಉದ್ದೇಶ.ಹೈಬ್ರಿಡ್ ಕಾರುಗಳ ತಂತ್ರಜ್ಞಾನವೇನು?

ಒಂದಕ್ಕಿಂಥ ಅಧಿಕ ಎಂಜಿನ್‌ಗಳನ್ನು ಅಳವಡಿಸಿಕೊಂಡು ಹೆಚ್ಚು ಇಂಧನ ಕ್ಷಮತೆ ಹಾಗೂ ಕಡಿಮೆ ಮಾಲಿನ್ಯ ಸಾಮರ್ಥ್ಯ ಹೊಂದಿರುವ ಬಗೆಬಗೆಯ ಹೈಬ್ರಿಡ್ ತಂತ್ರಜ್ಞಾನ ಇಂದು ಲಭ್ಯ. ಅವುಗಳಲ್ಲಿ ಬ್ಯಾಟರಿ ಚಾಲಿತ ಕಾರುಗಳಿಗೆ ಪೆಟ್ರೋಲ್, ಡೀಸಲ್ ಹಾಗೂ ಜಲಜನಕದಿಂದ ಚಲಿಸಬಲ್ಲ ಕಾರುಗಳು ಸಧ್ಯದ ಆವಿಷ್ಕಾರಗಳು.ಪೆಟ್ರೋಲ್ ಚಾಲಿತ ಹೈಬ್ರಿಡ್ ಕಾರುಗಳಲ್ಲಿ ಎಲ್ಲಾ ಕಾರುಗಳಲ್ಲಿ ಇರುವಂತೆ ಪೆಟ್ರೋಲ್ ಎಂಜಿನ್ ಇದ್ದೇ ಇರುತ್ತದೆ. ಆದರೆ ಅದು ಕಡಿಮೆ ಹೊಗೆ ಉಗುಳುವ ಹಾಗೂ ಕಡಿಮೆ ಶಬ್ದ ಮಾಡುವಂಥ ಎಂಜಿನ್ ಆಗಿರುತ್ತದೆ.ಇಂಧನ ಟ್ಯಾಂಕ್: ಕಾರಿನ ಎಂಜಿನ್ ಕಾರ್ಯನಿರ್ವಹಿಸಲು ಅಗತ್ಯವಿರುವ ಇಂಧನವನನು ಶೇಖರಿಸಿಡುವ ಟ್ಯಾಂಕ್. ಪೆಟ್ರೋಲ್ ಎಂಜಿನ್‌ನ ಶಕ್ತಿಯ ಸಾಂಧ್ರತೆ ಬ್ಯಾಟರಿ ಎಂಜಿನ್‌ಗಿಂತ ಹೆಚ್ಚು. ಉದಾಹರಣೆಗೆ ಒಂದು ಗ್ಯಾಲನ್ (3.785 ಲೀ.) ಪೆಟ್ರೋಲ್ ಉರಿಸಿದಾಗ ಉತ್ಪತ್ತಿಯಾಗು ಶಕ್ತಿಯನ್ನು ಶೇಖರಿಸಿಡಲು 453.6 ಕಿಲೋಗ್ರಾಂ ತೂಕದ ಬ್ಯಾಟರಿ ಬೇಕಾಗುತ್ತದೆ.ಎಲೆಕ್ಟ್ರಿಕ್ ಮೋಟಾರು: ಹೈಬ್ರಿಡ್ ಕಾರುಗಳಲ್ಲಿನ ಬಹುಮುಖ್ಯ ಅಂಗವೇ ಇದು. ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸ ಮಾಡಲಾಗಿರುವ ಈ ಎಲೆಕ್ಟ್ರಿಕ್ ಮೋಟಾರು ಅಗತ್ಯಕ್ಕೆ ತಕ್ಕಂತೆ ತನ್ನನ್ನು ಮೋಟಾರು ಹಾಗೂ ಜನರೇಟರ್ ಆಗಿ ಬದಲಾಯಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಉದಾಹರಣೆಗೆ ಚಲಿಸುವ ಕಾರಿನಿಂದ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವ ಹಾಗೂ ಅಗತ್ಯ ಬಿದ್ದಾಗ ಬ್ಯಾಟರಿಯಲ್ಲಿ ಶೇಖರವಾದ ಶಕ್ತಿಯನ್ನು ಬಳಸಿಕೊಂಡು ಕಾರನ್ನು ಮುಂದಕ್ಕೆ ಚಲಿಸಬಲ್ಲ ತಂತ್ರಜ್ಞಾನ ಇದರದ್ದು.ಜನರೇಟರ್: ಎಲೆಕ್ಟ್ರಿಕ್ ಮೋಟಾರಿನಂತೆಯೇ ಕಾರ್ಯ ನಿರ್ವಹಿಸುವ ಜನರೇಟರ್‌ಗಳು ಕೇವಲ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಇದು ಕೇವಲ ಸೀರೀಸ್ ಹೈಬ್ರಿಡ್ ಕಾರುಗಳಲ್ಲಿ ಮಾತ್ರ ಲಭ್ಯ.ಟ್ರಾನ್ಸ್‌ಮಿಷನ್: ಇದು ಸಾಧಾರಣ ಕಾರುಗಳಲ್ಲಿ ಶಕ್ತಿಯನ್ನು ಎಂಜಿನ್‌ಗೆ ವರ್ಗಾಯಿಸುವ ತಂತ್ರಜ್ಞಾನವನ್ನೇ ಹೈಬ್ರಿಡ್ ಕಾರು ಸಹ ಹೊಂದಿರುತ್ತದೆ.ಇವು ಹೈಬ್ರಿಡ್ ಕಾರಿನ ಪ್ರಮುಖ ಭಾಗಗಳು. ಇನ್ನು ಹೈಬ್ರಿಡ್ ಕಾರುಗಳಲ್ಲಿ ಎರಡು ಬಗೆ. ಒಂದು ಪ್ಯಾರಲಲ್ ಹಾಗೂ ಸೀರೀಸ್ ಹೈಬ್ರಿಡ್ ಕಾರುಗಳು. ಪ್ಯಾರಲಲ್ ಹೈಬ್ರಿಡ್ ಕಾರುಗಳಲ್ಲಿ ಇರುವ ಇಂಧನ ಟ್ಯಾಂಕ್ ಎಂಜಿನ್‌ಗೆ ಪೆಟ್ರೋಲ್ ಪೂರೈಸುತ್ತದೆ. ಜತೆಗೆ ಬ್ಯಾಟರಿ ಸಮೂಹವೂ ಎಲೆಕ್ಟ್ರಿಕ್ ಮೋಟಾರ್‌ಗೆ ಇಂಧನ ಕಳುಹಿಸುತ್ತದೆ. ಈ ಶಕ್ತಿಗಳನ್ನು ಟ್ರಾನ್ಸ್‌ಮಿಷನ್ ಎಂಜಿನ್‌ಗೆ ಪೂರೈಕೆಯಾಗಿ ವಾಹನ ಮುಂದೆ ಚಲಿಸುತ್ತದೆ.ಆದರೆ ಸೀರೀಸ್ ಹೈಬ್ರಿಡ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಮೂಲಕ ಜನರೇಟರ್ ಕೆಲಸ ಮಾಡುತ್ತದೆ. ಇದರಿಂದ ಬ್ಯಾಟರಿಯಲ್ಲಿ ಇಂಧನ ಶೇಖರವಾಗಿ ಅದು ಮೋಟಾರು ಚಲಿಸುವಂತೆ ಮಾಡುತ್ತದೆ. ಇಲ್ಲಿ ಕಾರು ಪೆಟ್ರೋಲ್ ಮೂಲಕ ಚಲಿಸುವುದೇ ಇಲ್ಲ.ಈಗ ಸದ್ಯ ಅಮೆರಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಟೊಯೊಟಾ ಪ್ರಿಯುಸ್ ಹಾಗೂ ಹೋಂಡಾ ಇನ್‌ಸೈಟ್, ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಿಲ್ಲದ ನಗರದ ರಸ್ತೆಗಳಲ್ಲಿ ವಿದ್ಯುತ್ ಶಕ್ತಿಯಿಂದ ಚಲಿಸುತ್ತದೆ. ಕಾರಿನ ವೇಗನ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ ತನ್ನಿಂದತಾನೆ ಎಲೆಕ್ಟ್ರಿಕ್ ಎಂಜಿನ್‌ನ ಕೆಲಸ ನಿಂತು ಪೆಟ್ರೋಲ್ ಎಂಜಿನ್ ಕಾರ್ಯಾರಂಭ ಮಾಡುತ್ತದೆ. ಈ ವ್ಯವಸ್ಥೆ ನಗರ ಪ್ರದೇಶದಲ್ಲಿ ಮಾಲಿನ್ಯವನ್ನು ನಿಯಂತ್ರಿಸುವುದರ ಜೊತೆಗೆ ಇಂಧವನ್ನೂ ಉಳಿಸುತ್ತದೆ.ದೇಶೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್

ನಿಸ್ಸಾನ್, ಫೋಕ್ಸ್‌ವ್ಯಾಗನ್ 0.8 ಲೀಟರ್ ಸಾಮರ್ಥ್ಯದ  ಹೈಬ್ರಿಡ್ ಎಂಜಿನ್‌ಗಳನ್ನು ಸಿದ್ಧಪಡಿಸಿವೆ. ಫ್ರೆಂಚ್ ಕಾರು ತಯಾರಿಕಾ ಕಂಪೆನಿ ಪ್ಯುಗೊ ತನ್ನ ಹೈಬ್ರಿಡ್ ಕಾರು 3008ರ ಪರೀಕ್ಷಾರ್ಥ ಚಾಲನೆ ನಡೆಸಿದೆ.

 

ವೋಲ್ವೊ ಕೂಡಾ ಹೈಬ್ರಿಡ್ ಎಂಜಿನ್ ಹೊಂದಿರುವ ಬಸ್ ಒಂದನ್ನು ಇತ್ತೀಚೆಗೆ ಅನಾವರಣಗೊಳಿಸಿದೆ. ಅತಿ ಶೀಘ್ರದಲ್ಲಿ ಈ ಬಸ್ಸುಗಳು ಬೆಂಗಳೂರು ಸೇರಿದಂತೆ ಭಾರತದ ರಸ್ತೆಗಳ ಮೇಲೆ ಚಲಿಸಲಿವೆ. ಕೇವಲ ಕಾರುಗಳು ಮಾತ್ರವಲ್ಲದೆ, ಹೀರೊ ಮೋಟೊ ಕಾರ್ಪ್ ಕಂಪೆನಿ ದ್ವಿಚಕ್ರ ವಾಹನಕ್ಕೆ ಹೊಸ ಬಗೆಯ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಮಾರುತಿ ಸುಜುಕಿ ಕೂಡಾ ಎರಡು ಹೈಬ್ರಿಡ್ ಕಾರುಗಳನ್ನು ಸಿದ್ಧಪಡಿಸಿದೆ. ಎಸ್‌ಎಕ್ಸ್4 ಹಾಗೂ ಸ್ವಿಫ್ಟ್ ಹಾಗೂ ಸ್ವಿಫ್ಟ್ ರೀವ್‌ಗಳು ಈಗಾಗಲೇ ಸಿದ್ಧಗೊಂಡಿವೆ. ಕಳೆದ ಕಾಮನ್‌ವೆಲ್ತ್ ಕ್ರೀಡೆ ಸಂದರ್ಭದಲ್ಲಿ ಇಂಥ ಹದಿನಾಲ್ಕು ಕಾರುಗಳನ್ನು ಕ್ರೀಡಾಪಟುಗಳ ಓಡಾಟಕ್ಕಾಗಿ ಮಾರುತಿ ನಿಡಿತ್ತು. ಎಸ್‌ಎಕ್ಸ್4 ಸೆಡಾನ್ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 50 ಕಿಲೋ ವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಇದೆ  ಜತೆಗೆ ಐದು ಮ್ಯಾನುಯಲ್ ಗಿಯರ್ ಹೊಂದಿದೆ.ಸ್ವಿಫ್ಟ್ ರೀವ್ ಸಂಪೂರ್ಣವಾಗಿ ಬ್ಯಾಟರಿ ಚಾಲಿತ. ಇದರಲ್ಲೂ ಪೆಟ್ರೋಲ್ ಎಂಜಿನ್ ಇದೆ. ಆದರೆ ಅದು ಕಾರಿನಲ್ಲಿರುವ ಜನರೇಟರ್ ಚಾಲನೆ ಮಾಡಲು. ಇದರಿಂದ ಬ್ಯಾಟರಿ ಚಾರ್ಜ್ ಮಾಡಲು ಅನುಕೂಲ. ಒಮ್ಮೆ ಬ್ಯಾಟರಿ ಚಾರ್ಜ್ ಆದಲ್ಲಿ ಕಾರು 30 ಕಿ.ಮೀ ಚಲಿಸಲಿದೆ.ಟಾಟಾ ಕೂಡಾ ತನ್ನ ಸೆಡಾನ್ ಶ್ರೇಣಿಯ ಮಾಂಜಾ ಕಾರನ್ನು ಹೈಬ್ರಿಡ್ ಆಗಿ ಬದಲಾಯಿಸುವ ಯೋಜನೆ ಹೊಂದಿದೆ. ಈಗಾಗಲೇ ಇದರ ಕಾಲ್ಪನಿಕ ವಿನ್ಯಾಸವನ್ನು ದೆಹಲಿಯ ಆಟೋ ಎಕ್ಸ್‌ಪೋನಲ್ಲಿ ಅನಾವರಣಗೊಳಿಸಿತ್ತು. ವಿಲಾಸಿ ಕಾರು ತಯಾರಿಕಾ ಕಂಪೆನಿ ಆಡಿ ಕೂಡಾ 2013ರ ವೇಳೆಗೆ ದುಬಾರಿ ಬೆಲೆಯ ಹೈಬ್ರಿಡ್ ಕಾರು ಹಾಗೂ ಎಸ್‌ಯುವಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.ನ್ಯಾಷನಲ್ ಹೈಬ್ರಿಡ್ ಪ್ರೊಪಲ್ಷನ್ ಕಾರ್ಯಕ್ರಮ (ಎನ್‌ಎಚ್‌ಪಿಪಿ)ದಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೈಬ್ರಿಡ್ ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಯತ್ನ ನಡೆಯುತ್ತಿದೆ. ಹೈಬ್ರಿಡ್ ತಂತ್ರಜ್ಞಾನ ಕುರಿತು ಪ್ರಚಾರ ಕಾರ್ಯ ಆರಂಭವಾಗಿದೆ. ಹೈಬ್ರಿಡ್ ವಾಹನಗಳಿಗೆ ನೀತಿ ಇನ್ನೂ ರೂಪಿಸಬೇಕಿದೆ.ಇವೆಲ್ಲವೂ ನಿಗಧಿತ ದಿನಾಂಕದೊಳಗೆ ಆದಲ್ಲಿ ಬಹುಶಃ ಮುಂದಿನ ಐದು ವರ್ಷಗಳಲ್ಲಿ ಹೈಬ್ರಿಡ್ ಕಾರುಗಳು ಭಾರತದ ರಸ್ತೆಗಳಿಯಬಹುದು. ಆದರೆ ಆ ಸಮಯಕ್ಕಾಗಿ ಈಗಾಗಲೇ ದೇಶ ಹಾಗೂ ವಿದೇಶ ಕಾರು ತಯಾರಿಕಾ ಕಂಪೆನಿಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿವೆ.

ಪ್ರತಿಕ್ರಿಯಿಸಿ (+)