ಇನ್ನು ಸಂಚಾರ ಹೈಟೆಕ್ ಆಸ್ಪತ್ರೆ

7

ಇನ್ನು ಸಂಚಾರ ಹೈಟೆಕ್ ಆಸ್ಪತ್ರೆ

Published:
Updated:

ವಿಜಾಪುರ: ಜನರ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ಕೊಡಲಿಕ್ಕಾಗಿ ‘ಸಂಚಾರ ಹೈಟೆಕ್ ಆಸ್ಪತ್ರೆ’ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು.ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾಜಪೇಯಿ ಆರೋಗ್ಯಶ್ರೀ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಾವು ಆರಂಭಿಸಿರುವ 108 ಆರೋಗ್ಯ ರಕ್ಷಾ ಕವಚ ಯೋಜನೆ ನಿಜವಾಗಿಯೂ ಬಡವರ ಪಾಲಿನ ಸಂಜೀವಿನಿಯಾಗಿದೆ. ಇದೇ ಮಾದರಿಯಲ್ಲಿ 104 ಸೇವೆಯನ್ನು ಆರಂಭಿಸಲಾಗುವುದು. ಸೂಪರ್ ಸ್ಪೇಷಾಲಿಟಿ ಮಾದರಿಯ ಮಿನಿ ಆಸ್ಪತ್ರೆಯ ಎಲ್ಲ ಸೌಲಭ್ಯಗಳನ್ನು ಹೊಂದಿರುವ ವಾಹನ ಜನರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಿದೆ. ರಕ್ತ ತಪಾಸಣೆಯಿಂದ ಹಿಡಿದು ಶಸ್ತ್ರ ಚಿಕಿತ್ಸೆ ವರೆಗಿನ ಎಲ್ಲ ಸೌಲಭ್ಯಗಳನ್ನು ಈ ಆಸ್ಪತ್ರೆ ಒಳಗೊಂಡಿರುತ್ತದೆ ಎಂದರು.ರಾಜ್ಯದಲ್ಲಿ 30 ಜಿಲ್ಲಾ, 146 ತಾಲ್ಲೂಕು ಆಸ್ಪತ್ರೆಗಳಿವೆ. 8870 ಉಪ ಆರೋಗ್ಯ ಕೇಂದ್ರ, 2310 ಪ್ರಾಥಮಿಕ ಆರೋಗ್ಯ ಕೇಂದ್ರ, 180 ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳು ಚಿಕಿತ್ಸೆ ಪಡೆಯುವ ಹೈಟೆಕ್ ಆಸ್ಪತ್ರೆಗಳಲ್ಲಿಯೂ ಬಡವರಿಗೆ ಚಿಕಿತ್ಸೆ ದೊರೆಯಬೇಕು ಎಂಬ ಕಾರಣಕ್ಕಾಗಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಈ ವರೆಗೆ 36 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಯೋಜನೆಯಡಿ ರಾಜ್ಯದ 140 ಖಾಸಗಿ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.ಈ ವರೆಗೆ ರಾಜ್ಯದಲ್ಲಿ ಆರೋಗ್ಯ ಸಚಿವರು ಬದಲಾಗುತ್ತಿದ್ದರೂ ಯೋಜನೆಗಳು ಮಾತ್ರ ಬದಲಾಗುತ್ತಿರಲಿಲ್ಲ. ಈ ರಾಜ್ಯದ 6 ಕೋಟಿ ಜನರಲ್ಲಿ 2 ಕೋಟಿಯಷ್ಟು ಕಡುಬಡವರಿದ್ದಾರೆ. ಕುಟುಂಬದಲ್ಲಿ ಗಂಭೀರ ಕಾಯಿಲೆ ಎದುರಾದಾಗ ಅವರು ಹಣಕ್ಕಾಗಿ ಪರದಾಡುವುದು ಬೇಡ ಎಂಬ ಕಾರಣಕ್ಕಾಗಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಜಾರಿಗೊಳಿಸಿದ್ದೇವೆ. ಬಡವರೂ ಆರೋಗ್ಯವಂತರಾಗಿ ಜೀವನ ಸಾಗಿಸಬೇಕು ಎಂಬುದು ನಮ್ಮ ಉದ್ದೇಶ ಎಂದರು.ವೈದ್ಯರು ದೇವರ ಸಮಾನ ಎಂದು ಜನ ನಂಬಿದ್ದಾರೆ. ದೇವರಂತೆ ವೈದ್ಯರೂ ದಯಾಳುಗಳಾಗಬೇಕು. ಬಡರೋಗಿಗಳನ್ನು ಗೌರವದಿಂದ ಕಂಡು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ‘108 ಯೋಜನೆ ಜಾರಿ ನಮ್ಮ ಸರ್ಕಾರದ ಮಹತ್ವದ ಸಾಧನೆಗಳಲ್ಲೊಂದು. ಬಡವರಿಗೆ ಉಚಿತ ಹೈಟೆಕ್ ಚಿಕಿತ್ಸೆ ನೀಡುವ ಸರ್ಕಾರದ ಈ ಕೆಲಸ ನಿಜವಾಗಿಯೂ ಮಾನವೀಯ ಕಾರ್ಯಗಳಲ್ಲಿ  ಒಂದಾಗಿದೆ’ ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಜಾಪುರ ನಗರ ಶಾಸಕ ಅಪ್ಪು ಪಟ್ಟಣಶೆಟ್ಟಿ, ಆಯುಷ್ ವೈದ್ಯರ ಪುನರ್ ನೇಮಕ ಮಾಡುವ ಮೂಲಕ ಸಚಿವ ಶ್ರೀರಾಮುಲು ಅವರು ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದರು.ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಬಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ಇ.ವಿ.ರಮಣರಡ್ಡಿ, ಆಯುಕ್ತ ಡಿ.ಎನ್. ನಾಯಕ, ಚಿಕ್ಕಮಕ್ಕಳ ತಜ್ಞ ಡಾ.ಎಲ್.ಎಚ್. ಬಿದರಿ, ರೆಡ್‌ಕ್ರಾಸ್ ಸಂಸ್ಥೆಯ ಡಾ.ಪ್ರೇಮಾನಂದ ಅಂಬಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್. ಜಗನ್ನಾಥ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎಂ. ಸಜ್ಜನ, ಮಾಜಿ ಶಾಸಕ ಮನೋಹರ ಐನಾಪುರ ಇತರರು ವೇದಿಕೆಯಲ್ಲಿದ್ದರು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿದರು. ಜಿ.ಪಂ. ಸಿಇಒ ಎ.ಎನ್. ಪಾಟೀಲ ವಂದಿಸಿದರು.ಸಚಿವರು ನಿಮ್ಮ ಜೀತದಾಳು!

ವಿಜಾಪುರ: ‘ನಾವು ಮಂತ್ರಿಗಳು ನಿಮ್ಮ ಮನೆಯ ಜೀತದಾಳಿನಂತೆ ದುಡಿಯುತ್ತಿದ್ದೇವೆ. ಇನ್ನಷ್ಟು ಜನಸೇವೆಯ ನಿರ್ಧಾರ ಮಾಡಿದ್ದೇವೆ. ವಿರೋಧ ಪಕ್ಷಗಳ ಯಾವುದೇ ಆರೋಪಗಳಿಗೆ ಕಿವಿಗೊಡಬೇಡಿ...’ಆರೋಗ್ಯ ಸಚಿವ ಬಿ.ಶ್ರೀರಾಮುಲು ಜನತೆಗೆ ಮಾಡಿಕೊಂಡ ಮನವಿ ಇದು.‘ಯಾವ ಸರ್ಕಾರ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇನ್ನು ತಮಗೆ ರಾಜಕೀಯ ಭವಿಷ್ಯವೇ ಇಲ್ಲ ಎಂಬ ಭಯದಿಂದ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ’ ಎಂದು ದೂರಿದರು.ನಿಗದಿತ ಅವಧಿಗಿಂತ ನಾಲ್ಕು ಗಂಟೆ ತಡವಾಗಿ ಆಗಮಿಸಿದ ಸಚಿವರು, ಧೋತಿ ಧರಿಸಿ ವಿಶಿಷ್ಟ ವೇಶದಲ್ಲಿ ಕಂಗೊಳಿಸುತ್ತಿದ್ದರು. ಧೋತಿ ಧರಿಸಿದ್ದ ಸಚಿವರಿಗೆ ಬೆಂಬಲಿಗರು ಪೇಟ ತೊಡಿಸಿದರು. ತೊಟ್ಟಿದ್ದ ಧೋತಿ ಎಲ್ಲಿ ಏರುಪೇರಾಗುತ್ತೋ ಎಂಬ ಭಯದಿಂದ ಸಚಿವರು ಆಗಾಗ ಧೋತಿಯನ್ನು ಸರಿಪಡಿಸಿಕೊಳ್ಳುತ್ತಿದ್ದರು. ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರೂ ಸಚಿವರಿಗೆ ನೆರವಾಗುತ್ತಿದ್ದರು.556 ರೋಗಿಗಳ ತಪಾಸಣೆಗೆ ಶಿಫಾರಸು

ವಿಜಾಪುರ: ನಗರದಲ್ಲಿ ಶುಕ್ರವಾರ ನಡೆದ ವಾಜಪೇಯಿ ಆರೋಗ್ಯಶ್ರೀ ಶಿಬಿರದಲ್ಲಿ 3500 ರೋಗಿಗಳು ನೊಂದಾಯಿಸಿಕೊಂಡು ತಪಾಸಣೆಗೆ ಒಳಗಾದರು. ಅವರಲ್ಲಿ 556 ರೋಗಿಗಳನ್ನು ರಾಜ್ಯದ ವಿವಿಧ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.ರಾಜ್ಯದ 33 ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಳ ವೈದ್ಯರ ತಂಡ ಇಲ್ಲಿ ರೋಗಿಗಳನ್ನು ತಪಾಸಣೆ ನಡೆಸಿದರು. ಹೃದಯ ಬೇನೆಗೆ ತುತ್ತಾದ 221, ಕ್ಯಾನ್ಸರ್-60, ನರರೋಗ-157, ಚಿಕ್ಕಮಕ್ಕಳ ಕಾಯಿಲೆ-30, ಪ್ಲಾಸ್ಟಿಕ್ ಸರ್ಜರಿಗಾಗಿ-43 ಹಾಗೂ ಅಪಘಾತಕ್ಕೆ ತುತ್ತಾದ 45 ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry