ಇನ್ನೂ ಅಧಿಕಾರವೇ ಸಿಕ್ಕಿಲ್ಲ; ಕಳೆದು ಹೋಗುವ ಆತಂಕ

ಗುರುವಾರ , ಜೂಲೈ 18, 2019
29 °C
ನಗರ ಪಾಲಿಕೆಯಾಗಿ ಅಧಿಸೂಚನೆಯಾದ 6 ತಿಂಗಳಿಗೆ `ಔಟ್'

ಇನ್ನೂ ಅಧಿಕಾರವೇ ಸಿಕ್ಕಿಲ್ಲ; ಕಳೆದು ಹೋಗುವ ಆತಂಕ

Published:
Updated:

ತುಮಕೂರು: ನಗರಸಭೆ ಸದಸ್ಯರಿಗೆ ಇನ್ನೂ ಅಧಿಕಾರವೇ ಸಿಕ್ಕಿಲ್ಲ. ಆದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. ಹೊಸ ಸದಸ್ಯರಿಗೆ 6 ತಿಂಗಳಿಂದ 1 ವರ್ಷ ಅಧಿಕಾರ ದೊರೆತರೆ ಹೆಚ್ಚು. ಇದರಿಂದ ಸದಸ್ಯರ ಸ್ಥಿತಿ `ಕೈಗೆ ಬಂದ ತುತ್ತು ಬಾಯಿಗಿಲ್ಲ' ಎನ್ನುವಂತಾಗಿದೆ.ಸರ್ಕಾರ ಬಜೆಟ್‌ನಲ್ಲಿ ತುಮಕೂರು ಮಹಾನಗರಪಾಲಿಕೆ ಘೋಷಣೆ ಮಾಡಿದೆ. ಆದರೆ ಇನ್ನೂ ಗೆಜೆಟ್ ಅಧಿಸೂಚನೆ ಆಗಿಲ್ಲ. ಗೆಜೆಟ್ ಆದ ನಂತರ ಮತ್ತೆ ಚುನಾವಣೆ ಆಗುವವರೆಗೆ ಗರಿಷ್ಠ 6 ತಿಂಗಳು ಕಾಲಾವಕಾಶ ದೊರೆಯಬಹುದು.ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾದ ನಂತರ ನಗರಸಭೆ ಮೊದಲ ಸಭೆ ನಡೆಯಬೇಕು. ಆ ದಿನದಿಂದ ಸದಸ್ಯರ ಅಧಿಕಾರ ಅವಧಿ ಆರಂಭವಾಗುತ್ತದೆ. ಆನಂತರವೇ ಸರ್ಕಾರ ನಗರ ಪಾಲಿಕೆಯಾಗಿ ಪರಿವರ್ತಿಸಿ ಅಧಿಕೃತ ಘೋಷಣೆ ಹೊರಡಿಸಬೇಕು. ಈ ಸಂದರ್ಭದಲ್ಲಿ ಇರುವ ಆಡಳಿತ ಮಂಡಳಿಗೆ 6 ತಿಂಗಳ ಅವಕಾಶ ನೀಡಬಹುದು. ಆನಂತರವೂ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಕ ಮಾಡಬಹುದು.ಬಜೆಟ್‌ನಲ್ಲಿಯೇ ನಗರ ಪಾಲಿಕೆ ಘೋಷಣೆಯಾಗಿರುವುದರಿಂದ ಅಧಿಸೂಚನೆ ಹೊರಡಿಸುವುದನ್ನು ಸರ್ಕಾರ ವಿಳಂಬ ಮಾಡುವುದಿಲ್ಲ. ಹೀಗಾಗಿ ನಗರಸಭೆ ಸದಸ್ಯರು ತಮ್ಮ ಅಧಿಕಾರಾವಧಿ ಬಗ್ಗೆ ಹೆಚ್ಚು ಆಶಾದಾಯಕ ಪರಿಸ್ಥಿತಿಯನ್ನು ಇಟ್ಟುಕೊಳ್ಳಲು ಸಹ ಸಾಧ್ಯವಿಲ್ಲ.ನ್ಯಾಯಾಲಯದ ಮೊರೆ

ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರ ಪಾಲಿಕೆ ಘೋಷಣೆಯಾದಾಗ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮನ್ನು ಅಧಿಕಾರದ ಪೂರ್ಣ ಅವಧಿಗೆ ಮುಂದುವರಿಸಬೇಕೆಂದು ಕೋರಿದ್ದರು. ಆದರೆ ಆಗ ನಗರಪಾಲಿಕೆ ಮಾಡಲು ನಿಯಮದಂತೆ ಅಗತ್ಯವಿರುವ 3 ಲಕ್ಷ ಜನಸಂಖ್ಯೆಯನ್ನು ನಗರ ದಾಟಿರಲಿಲ್ಲ. ಹೀಗಾಗಿ ನಗರ ಪಾಲಿಕೆ ಘೋಷಣೆ ಅಸಿಂಧು ಆಯಿತು. ಈಗ 2011ರ ಜನಗಣತಿಯಂತೆ ನಗರದ ಜನಸಂಖ್ಯೆ 3.05 ಲಕ್ಷ ದಾಟಿದೆ. ಹೀಗಾಗಿ ಹೊಸ ಸದಸ್ಯರಿಗೆ ಈಗ ಇಂತಹ ಅವಕಾಶ ಸಹ ಈಗ ಇಲ್ಲವಾಗಿದೆ.ಸದಸ್ಯರ ಸಹಿ ಪಡೆದ ಕಾಂಗ್ರೆಸ್

ನಗರಸಭೆ ಕಾಂಗ್ರೆಸ್ ಸದಸ್ಯರು ನ್ಯಾಯಾಲಯದ ಮೆಟ್ಟಿಲು ಹತ್ತುವುದಿಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪ್ರಮಾಣ ಪತ್ರ ಬರೆದು ಸಹಿ ಹಾಕಿ ಕೊಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವೇ ನಗರ ಪಾಲಿಕೆ ಘೋಷಣೆ ಮಾಡಿರುವುದರಿಂದ, ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರೇ ಹೈಕೋರ್ಟ್ ಮೆಟ್ಟಿಲು ಹತ್ತಿದರೆ, ಪಕ್ಷ ಮತ್ತು ಪಕ್ಷದ ನಾಯಕರಿಗೆ ಮುಜುಗರವಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕ ಈ ರೀತಿ ತೀರ್ಮಾನ ಕೈಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಆದರೆ ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಲ್ಲ ಸದಸ್ಯರು ಪಕ್ಷಾತೀತವಾಗಿ ಒಂದಾಗುವ ಸಾಧ್ಯತೆ ಇದೆ. ಏಕೆಂದರೆ ಸದಸ್ಯರಾಗಲು ತಾವು ಹಾಕಿರುವ `ಬಂಡವಾಳ'ವನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ. ನ್ಯಾಯಾಲದ ಮೊರೆ ಹೋಗಲು ಕಾಂಗ್ರೆಸ್ ಸದಸ್ಯರು ಇತರ ಪಕ್ಷಗಳ ಸದಸ್ಯರಿಗೆ ಬೆನ್ನೆಲುಬಾಗಿ ನಿಲ್ಲಬಹುದು.ಆದರೆ ನಗರದ ಜನತೆಗೆ ಅಭಿವೃದ್ಧಿ ದೃಷ್ಟಿಯಿಂದ ನಗರ ಪಾಲಿಕೆಯಾಗಬೇಕು. ನಗರಪಾಲಿಕೆ ಆದರೆ ಅಭಿವೃದ್ಧಿಗಾಗಿ ವಾರ್ಷಿಕ ನೂರು ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬರುತ್ತದೆ. ಇದರಿಂದ ನಗರದ ರಸ್ತೆ, ಒಳಚರಂಡಿ, ನೀರಿನ ಸಮಸ್ಯೆ ಬಗೆಹರಿಯಬಹುದು ಎಂಬುದು ಸ್ಥಳೀಯರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry