ಭಾನುವಾರ, ನವೆಂಬರ್ 17, 2019
24 °C

ಇನ್ನೂ ಚೇತರಿಸಿಕೊಳ್ಳದ ಚೆಲುವನಹಳ್ಳಿ

Published:
Updated:

ಕೊಳ್ಳೇಗಾಲ: ಹದಗೆಟ್ಟಿರುವ ಮುಖ್ಯ ಸಂಪರ್ಕ ರಸ್ತೆ, ಶಾಲಾ ಆವರಣದಿಂದ ತೆರವುಗೊಳ್ಳದ ವಿದ್ಯುತ್ ಕಂಬ, ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿದ ಅಂಗನವಾಡಿ ಕಟ್ಟಡ... 

 

-ಇದು ತಾಲ್ಲೂಕಿನ ಧನಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚೆಲುವನಹಳ್ಳಿ ಚಿತ್ರಣ.ಕೊಳ್ಳೇಗಾಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಆದರೆ, ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಪ್ರಾರಂಭಕ್ಕೂ ಮುನ್ನವೇ ಶಿಥಿಲಾವಸ್ಥೆ ತಲುಪಿದೆ. ಅಂಗನವಾಡಿ ಸುತ್ತ ಗಿಡಗಂಟೆಗಳು ಬೆಳೆದಿವೆ.ಸರ್ಕಾರಿ ಶಾಲೆಯ ಆವರಣದಲ್ಲಿ ವಿದ್ಯುತ್ ಕಂಬ ಇದ್ದು, ಮಕ್ಕಳಿಗೆ ಅಪಾಯ ಆಹ್ವಾನಿಸುತ್ತಿದೆ. ಬೇರೆಡೆ ಸ್ಥಳಾಂತರಿಸುವಂತೆ ಸೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರೂ ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರು ದೂರು.ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಅದಾಲತ್‌ನಲ್ಲಿ ನಿರ್ಣಯಕೈಗೊಂಡಿದ್ದರೂ ಇಲ್ಲಿವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ.ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು ನಡೆದುಕೊಂಡೇ ಮುಖ್ಯರಸ್ತೆಗೆ ಹೋಗಬೇಕಾದ ಸ್ಥಿತಿ ಇದೆ. ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ತಕ್ಷಣದಿಂದಲೇ ಬಸ್ ಸೌಲಭ್ಯ ಕಲ್ಪಿಸಬೇಕು. ರಸ್ತೆ ಅಭಿವೃದ್ಧಿಪಡಿಸಬೇಕು. ಶಾಲೆ ಆವರಣದಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನಸ್ವಾಮಿ, ಶಿವನಂಜಪ್ಪ, ನಿಂಗಪ್ಪ, ಮಹದೇವಪ್ಪ ಸೇರಿದಂತೆ ಇತರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)