ಇನ್ನೂ 200 ಮೆವಾ ವಿದ್ಯುತ್ ಖರೀದಿ

7

ಇನ್ನೂ 200 ಮೆವಾ ವಿದ್ಯುತ್ ಖರೀದಿ

Published:
Updated:

ಬೆಂಗಳೂರು: ವಿದ್ಯುತ್ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಜನವರಿಯಿಂದ ಹೆಚ್ಚುವರಿಯಾಗಿ 200 ಮೆಗಾವಾಟ್ ವಿದ್ಯುತ್ ಖರೀದಿಸಲಾಗುವುದು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ಹೇಳಿದರು.ಈಗ ನಿತ್ಯ 1,280 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಜನವರಿಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನಿಂದ 200 ಮೆಗಾವಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಈಗ ನಿತ್ಯ ಆರು ಗಂಟೆ ಕಾಲ ತ್ರೀಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲೂ ಇದೇ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲಾಗುವುದು. ಬಳ್ಳಾರಿ ಶಾಖೋತ್ಪನ್ನ ಸ್ಥಾವರದ ಎರಡನೇ ಘಟಕ ಮತ್ತು ಯುಪಿಸಿಎಲ್‌ನ ಎರಡನೇ ಘಟಕದಿಂದ ವಿದ್ಯುತ್ ಲಭ್ಯವಾಗುವುದರಿಂದ ಈ ವರ್ಷ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಾಂತ್ರಿಕ ಕಾರಣಗಳಿಂದಾಗಿ ಸ್ಥಗಿತಗೊಂಡಿರುವ ಬಳ್ಳಾರಿ ಸ್ಥಾವರದ ಎರಡನೇ ಘಟಕ ಜನವರಿ ವೇಳೆಗೆ ಪುನಃ ಆರಂಭವಾಗಲಿದೆ. ತಮಿಳುನಾಡಿನ ಕೂಡುಂಕುಳಂ ಸ್ಥಾವರದಿಂದ 221 ಮೆಗಾವಾಟ್ ವಿದ್ಯುತ್ ರಾಜ್ಯಕ್ಕೆ ದೊರೆಯಲಿದೆ. ಹೀಗಾಗಿ ಬೇಸಿಗೆಯಲ್ಲೂ ನಿತ್ಯ ಆರು ಗಂಟೆ ಕಾಲ ತ್ರೀಫೇಸ್ ವಿದ್ಯುತ್ ಪೂರೈಸಲು ತೊಂದರೆಯಾಗದು ಎಂದರು.ಈಗ ಮಧ್ಯರಾತ್ರಿಯಲ್ಲಿ ಒಂದೆರಡು ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜನವರಿಯಿಂದ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ಸಿಂಗಲ್‌ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಯರಮರಸ್, ಯದ್ಲಾಪುರ, ಬಳ್ಳಾರಿ ಸ್ಥಾವರದ ಮೂರನೇ ಘಟಕ ಸೇರಿದಂತೆ ಹೊಸ ಯೋಜನೆಗಳಿಗೆ ಕಲ್ಲಿದ್ದಲು ಗಣಿ ಮಂಜೂರು ಮಾಡುವಂತೆ ಕೇಂದ್ರದ ಕಲ್ಲಿದ್ದಲು ಮತ್ತು ಇಂಧನ ಸಚಿವರಿಗೆ ಮನವಿ ಮಾಡಲು ಮಂಗಳವಾರ ದೆಹಲಿಗೆ ತೆರಳುವುದಾಗಿ ಅವರು ಹೇಳಿದರು.ಬಳ್ಳಾರಿ ಎರಡನೇ ಘಟಕಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಮಾರ್ಚ್‌ವರೆಗೂ ಕಲ್ಲಿದ್ದಲು ವ್ಯವಸ್ಥೆ ಮಾಡಿದೆ. ಆ ನಂತರವೂ ಕಲ್ಲಿದ್ದಲು ಹಂಚಿಕೆ ಮಾಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದರು.ಕಳೆದ ವರ್ಷ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ 180 ದಶಲಕ್ಷ ಯೂನಿಟ್‌ಗೆ ತಲುಪಿತ್ತು. ಈ ವರ್ಷ 185 ದಶಲಕ್ಷ ಯೂನಿಟ್‌ಗೆ ಏರುವ ನಿರೀಕ್ಷೆ ಇದೆ. ಈಗ ಪವನ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ಜಲ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರಂತರ ಜ್ಯೋತಿ: ಮುಂಬರುವ ಮಾರ್ಚ್ ವೇಳೆಗೆ ನಿರಂತರ ಜ್ಯೋತಿ ಯೋಜನೆ ಪೂರ್ಣಗೊಳ್ಳಲಿದೆ. ಮೊದಲ ಹಂತದ ಕಾಮಗಾರಿಗಳು ಸ್ವಲ್ಪ ಮಂದಗತಿಯಲ್ಲಿ ಸಾಗಿವೆ. ಆದರೆ, ಎರಡನೇ ಹಂತದ ಕಾಮಗಾರಿಗಳು ಭರದಿಂದ ಸಾಗಿದ್ದು, ಮಾರ್ಚ್ ಒಳಗೆ ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಿಬ್ಬಂದಿ ನೇಮಕ: 2,500 ಲೈನ್‌ಮೆನ್‌ಗಳು, 400 ಮಂದಿ ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳು ಹಾಗೂ 50 ಜನ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

`ರಾಷ್ಟ್ರೀಯ ಸ್ಮಾರಕವಾಗಲಿ'

`ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣ ಸಮಾಧಿ ಮತ್ತು ಅವರನ್ನು ನೇಣಿಗೇರಿಸಿದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು. ಅಲ್ಲಿ ಉದ್ಯಾನ ನಿರ್ಮಿಸಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ' ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ರಾಯಣ್ಣ ಸಮಾಧಿ ಸ್ಥಳ ಇದೆ. ಅಲ್ಲಿಂದ 5-6 ಕಿ.ಮೀ. ದೂರದಲ್ಲಿ ಆತನನ್ನು ನೇಣಿಗೆ ಏರಿಸಿದ ಮರ ಇದೆ. ಅಲ್ಲಿಗೆ ಹೋಗಲು ರಸ್ತೆ ಇಲ್ಲ. ನೀರು, ವಿದ್ಯುತ್ ಸೌಲಭ್ಯವೂ ಇಲ್ಲ. ಕಾಡಿನ ವಾತಾವರಣವಿದೆ ಎಂದು ಬೇಸರ ವ್ಯಕ್ತಪಡಿಸಿದರು.`ಸಮಾಧಿ ಸಂರಕ್ಷಣೆಗೆ ಪ್ರಾಧಿಕಾರ ಇದ್ದರೆ ಸಾಲದು. ಅದಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಬೆಳಗಾವಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ' ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry