ಇನ್ನೆರಡು ತಿಂಗಳು ವಾಡಿಕೆ ಮಳೆ ನಿರೀಕ್ಷೆ

7

ಇನ್ನೆರಡು ತಿಂಗಳು ವಾಡಿಕೆ ಮಳೆ ನಿರೀಕ್ಷೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗುವ ನಿರೀಕ್ಷೆಯಿದ್ದು, ಹಿಂಗಾರಿನಲ್ಲಿ ರೈತರು ಅಲಸಂದೆ, ಕಡಲೆಕಾಯಿಯಂತಹ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಲಹೆ ನೀಡಿದೆ.`ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಅತಿ ಕಡಿಮೆ ಇರುವುದರಿಂದ ಸಾಧ್ಯವಿರುವಲ್ಲಿ `ಶ್ರೀ~ ಪದ್ಧತಿಯಲ್ಲಿ ಬತ್ತ ಹಾಗೂ ರಾಗಿ ಬೆಳೆಯುವುದು  ಸೂಕ್ತ. ನಾಲಾ ಪ್ರದೇಶದ ಕೊನೆಯಲ್ಲಿರುವ ರೈತರು ಕಡಿಮೆ ನೀರು ಸಾಕಾಗುವ ಬೆಳೆಗಳಾದ ಮುಸುಕಿನ ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳು ಹಾಗೂ ಮೇವಿನ ಬೆಳೆಗಳನ್ನು ಬೆಳೆಯುವುದು ಹೆಚ್ಚು ಸೂಕ್ತ.ನವೆಂಬರ್ ತಿಂಗಳಿನಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ~ ಎಂದು ಕುಲಪತಿ ಡಾ.ನಾರಾಯಣಗೌಡ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುನ್ಸೂಚನೆ ನೀಡಿದರು.`ಕಾವೇರಿ ಜಲಾನಯನ ಪ್ರದೇಶದ ರೈತರು ಕಬ್ಬು ಬೆಳೆ ಕಡಿಮೆ ಮಾಡಿ ಅಲ್ಪಾವಧಿ ಬೆಳೆಗಳ ಕಡೆಗೆ ಗಮನಹರಿಸಬೇಕು. ಈ ಪ್ರದೇಶದಲ್ಲಿ 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ರಾಜ್ಯದಲ್ಲಿ 6.5 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕೃಷಿ ಮಾಡಲಾಗುತ್ತಿದೆ. ನಮ್ಮ ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿರುವುದರಿಂದ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ಕಬ್ಬಿಗೆ ಅಧಿಕ ನೀರು ಬೇಕು~ ಎಂದು ಅವರು ಅಭಿಪ್ರಾಯಪಟ್ಟರು.`ರೈತರು ಈ ನಿಟ್ಟಿನಲ್ಲಿ ಪುನರ್ ಚಿಂತನೆ ಮಾಡಿ ಬೆಳೆ ಬದಲಾವಣೆ ಮಾಡಿಕೊಳ್ಳಬೇಕು. ಮುಸುಕಿನ ಜೋಳವನ್ನು ವರ್ಷಕ್ಕೆ 2-3 ಬೆಳೆ ಬೆಳೆಯಬಹುದು. ಅಕ್ಟೋಬರ್- ನವೆಂಬರ್‌ನಲ್ಲಿ ಸೋಯಾಬಿನ್ ಬೆಳೆಯಬಹುದು~ ಎಂದು ಸಲಹೆ ಮಾಡಿದರು.`ಬರದಿಂದಾಗಿ ರಾಜ್ಯದಲ್ಲಿ ಹುಲ್ಲಿನ ಸಮಸ್ಯೆಯೂ ಗಂಭೀರವಾಗಿದೆ. ಇತ್ತೀಚೆಗೆ ಪಶುಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿರುವ ಹಾಲು ಉತ್ಪಾದಕರ ಸಂಘಗಳಿಗೆ ಮೇವಿನ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

 

ಇದರಿಂದಾಗಿ ಸಾಗಾಣಿಕೆ ವೆಚ್ಚ ಕಡಿಮೆಯಾಗುತ್ತದೆ. ಸಂಗ್ರಹವೂ ಸುಲಭ. ಇದರಿಂದಾಗಿ ಸ್ಥಳೀಯರಿಗೆ ಹಾಗೂ ರೈತರಿಗೆ ಅನುಕೂಲವಾಗುತ್ತದೆ~ ಎಂದು ಅವರು ತಿಳಿಸಿದರು. ವಿವಿ ಕುಲಸಚಿವ ಡಾ.ನಂಜಪ್ಪ, ವಿಸ್ತರಣಾ ನಿರ್ದೇಶಕ ಆರ್.ಎಸ್.ಕುಲಕರ್ಣಿ, ಪ್ರಾಧ್ಯಾಪಕ ಡಾ.ಶೇಷಾದ್ರಿ ಉಪಸ್ಥಿತರಿದ್ದರು. ವಿಸ್ತರಣಾ ಚಟುವಟಿಕೆಗಳಿಗೆ ಹಿನ್ನಡೆ

ರಾಜಧಾನಿಯಲ್ಲಿ ವಾಡಿಕೆಯಂತೆ ಮಳೆಯಾಗದ ಕಾರಣ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇನ್ನೊಂದೆಡೆ, ಬರದಿಂದಾಗಿ ರಾಷ್ಟ್ರೀಯ ಕೃಷಿ ಮೇಳವನ್ನೇ ರದ್ದುಪಡಿಸುವ ಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ವಿವಿ ಕ್ಯಾಂಪಸ್‌ನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ.ರಾಜ್ಯದಲ್ಲಿ ಬರ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ಸಲ ಕೃಷಿ ಮೇಳ ನಡೆಸುವುದು ಬೇಡ ಎಂಬುದಾಗಿ ಕೃಷಿ ಇಲಾಖೆಯಿಂದ ಸೂಚನೆ ಬಂದಿತ್ತು. ಅಲ್ಲದೆ, ಕೃಷಿ ವಿಶ್ವವಿದ್ಯಾಲಯದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ವಾಡಿಕೆ ಮಳೆಯಾಗದ ಕಾರಣದಿಂದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ತಳಮಟ್ಟಕ್ಕೆ ಇಳಿದಿದೆ. ಇದೀಗ ಹೊಸ ಕೊಳವೆಬಾವಿಗಳನ್ನು ತೋಡಲು ನಿರ್ಧರಿಸಲಾಗಿದೆ.

 

ಇಂತಹ ಸ್ಥಿತಿ ಇರುವಾಗ ಕೃಷಿ ಮೇಳ ಸಂಘಟನೆ ಕಷ್ಟ ಎಂಬ ತೀರ್ಮಾನಕ್ಕೂ ಬರಲಾಗಿದೆ. ಲಕ್ಷಾಂತರ ಮಂದಿ ಮೇಳಕ್ಕೆ ಭೇಟಿ ನೀಡುವಾಗ ಅವರಿಗೆ ಆತಿಥ್ಯದಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮೇಳವನ್ನು ರದ್ದುಪಡಿಸಲಾಗಿದೆ.ಮಳೆಯ ಕೊರತೆಯಿಂದಾಗಿ ವಿವಿಯಲ್ಲಿಯೇ ಸರಿಯಾಗಿ ಕೃಷಿ ಫಸಲು ಬಂದಿಲ್ಲ. ನೀರಿಲ್ಲದೆ ಬೆಳೆಗಳೆಲ್ಲಾ ಬಾಡಿವೆ. ಅಲ್ಲದೆ ಕೃಷಿ ಮೇಳದಲ್ಲಿ ರಾಮನಗರ, ಕೋಲಾರ ಮತ್ತಿತರ ಕಡೆಗಳ ರೈತರು ಮಳಿಗೆಗಳನ್ನು ತೆರೆಯುತ್ತಾರೆ. ಆ ಭಾಗದಲ್ಲೂ ಮಳೆ ಕೈಕೊಟ್ಟಿದೆ.ಇಂತಹ ಸಂದರ್ಭದಲ್ಲಿ 700-800 ಮಳಿಗೆಗಳನ್ನು ತೆರೆದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು ಪ್ರದರ್ಶನಗೊಳ್ಳದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಆತಂಕವೂ ಮೇಳವನ್ನು ರದ್ದುಪಡಿಸಲು ಕಾರಣ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಕಳೆದ ವರ್ಷ ಪ್ರಥಮ ಬಾರಿಗೆ ಆಯೋಜಿಸಿದ್ದ ರಾಷ್ಟ್ರೀಯ ಕೃಷಿ ಮೇಳಕ್ಕೆ 10.5 ಲಕ್ಷ ರೈತರು ಭೇಟಿ ನೀಡಿದ್ದರು. ಕೃಷಿಯಲ್ಲಿ ಗ್ರಾಮೀಣ ಜನರನ್ನು ಉತ್ತೇಜಿಸಿ ಅದರಲ್ಲಿಯೇ ತೊಡಗಿಸಿಕೊಳ್ಳುವಂತೆ ಮಾಡಲು ರಾಜ್ಯದ ದಕ್ಷಿಣ ಭಾಗದ 17 ಜಿಲ್ಲೆಗಳ 192 ಪ್ರಗತಿಪರ ಯುವ ರೈತ ಹಾಗೂ ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಿದ್ದನ್ನು ಇಲ್ಲಿ ನೆನಪಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry