ಇನ್ನೆಷ್ಟು ದೂರ ಈ ಬಯಲು ದಾರಿ?

ಮಂಗಳವಾರ, ಜೂಲೈ 23, 2019
20 °C

ಇನ್ನೆಷ್ಟು ದೂರ ಈ ಬಯಲು ದಾರಿ?

Published:
Updated:

ನವ ವಧು ಪ್ರಿಯಾಂಕಾ ಭಾರ್ತಿ ಹೊಸ ಕನಸುಗಳೊಂದಿಗೆ ಅತ್ತೆ ಮನೆಯನ್ನು ಪ್ರವೇಶಿಸಿದಳು. ಹೊಸ ವಾತಾವರಣದಲ್ಲಿ ನಗು ನಗುತ್ತಲೇ ಕಾಲ ಕಳೆದಳು. ಆಗ ಅತ್ತೆ ಮನೆ ಪ್ರಿಯಾಂಕಾಗೆ ಸ್ವರ್ಗದಂತೆ ಭಾಸವಾಯಿತು. ತಾನು ಎಷ್ಟೊಂದು ಒಳ್ಳೆಯ ಕುಟುಂಬಕ್ಕೆ ಸೇರಿದೆ ಎನ್ನುವ ಖುಷಿ ಮನಸ್ಸಿನಲ್ಲಿ ಬುಗ್ಗೆಯಾಗಿ ಚಿಮ್ಮಿ ಮುಖದ ಮೇಲೆ ಪ್ರತಿಫಲಿಸಿತು. ಹಾಗೆಯೇ ಸಮಯ ಜಾರಿ ಹೋಯಿತು. ಅತ್ತೆಯನ್ನು ಕರೆದ ಪ್ರಿಯಾಂಕಾ `ಶೌಚಾಲಯ ಎಲ್ಲಿದೆ~ ಎಂದು ಮೆಲ್ಲಗೆ ಕಿವಿಯಲ್ಲಿ ಉಸುರಿದಳು. ಆಗ ಅತ್ತೆ `ಒಂದು ನಿಮಿಷ ತಾಳು~ ಎನ್ನುತ್ತಲೇ ಬಚ್ಚಲು ಮನೆಗೆ ಹೋಗಿ ನೀರು ತುಂಬಿದ ಚೊಂಬನ್ನು ಕೈಯಲ್ಲಿ ಹಿಡಿದುಕೊಂಡು ಬಂದು ನಿಂತವಳು `ನಡಿಯವ್ವ ಹೋಗೋಣ~ ಎಂದಳು. ಏನೊಂದೂ ಅರ್ಥವಾಗದ ಪ್ರಿಯಾಂಕಾ `ಎಲ್ಲಿಗೆ~ ಎಂದು ಕೇಳಿದಳು. ಮನೆ ಸಮೀಪವೇ ಇದ್ದ ಬೇಲಿಯತ್ತ ಕೈ ತೋರಿದಳು ಅತ್ತೆ. ಬಯಲಿನಲ್ಲಿ ಬಹಿರ್ದೆಸೆಗೆ ಹೋಗಿ ಅಭ್ಯಾಸವಿಲ್ಲದ ಪ್ರಿಯಾಂಕಾ ಅಸಹಾಯಕಳಾಗಿ ಭೂಮಿಗೆ ಇಳಿದುಹೋದಳು. ತಾನು ಬಯಲಲ್ಲಿ ಬಹಿರ್ದೆಸೆಗೆ  ಹೋಗುವುದಿಲ್ಲ ಎಂದು ಹಟ ಹಿಡಿದಳು. ಹೇಗೋ ಎರಡು ದಿನ ಸಹಿಸಿಕೊಂಡ ಆಕೆ ಮೂರನೇ ದಿನ ಯಾರಿಗೂ ಹೇಳದೇ ಕೇಳದೇ ಅತ್ತೆ ಮನೆ ಬಿಟ್ಟು ಓಡಿಹೋಗಿ ತವರು ಮನೆ ಸೇರಿಕೊಂಡಳು.

ಬೀಗರ ಮನೆ ತುಂಬಿಸಿ ಬಂದ ಮೂರೇ ದಿನಗಳಲ್ಲಿ ಮಗಳು ತವರಿಗೆ ಓಡೋಡಿ ಬಂದರೆ ಎಂಥವರಿಗೂ ಗಾಬರಿ ಆಗದಿರುತ್ತದೆಯೇ? ಪ್ರಿಯಾಂಕಾ ಪೋಷಕರಿಗೂ ಹಾಗೇ ಆಯಿತು. ತಲೆ ಮೇಲೆ ಕೈ ಹೊತ್ತು `ಏನಾಯ್ತು ಮಗಳೇ, ಏನಾದರೂ ವರದಕ್ಷಿಣೆ...~ ಎಂದು ಸಂಶಯದಿಂದ ಕೇಳಿದರು. ಏನೇನೂ ಇಲ್ಲ ಎನ್ನುವಂತೆ ತಲೆ ಆಡಿಸಿದ ಪ್ರಿಯಾಂಕಾ `ಅತ್ತೆ ಮನೆಯಲ್ಲಿ ಶೌಚಾಲಯವಿಲ್ಲ, ಬಯಲಿಗೆ ಹೋಗಬೇಕು. ಅದು ನನ್ನಿಂದ ಸಾಧ್ಯವೇ ಇಲ್ಲ~ ಎಂದು ಹೇಳುತ್ತಾ ಜಪ್ಪಯ್ಯ ಎಂದರೂ ವಾಪಸ್ ಹೋಗಲು ಒಪ್ಪಲಿಲ್ಲ. ಈ ಸುದ್ದಿ ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ ಹರಡುತ್ತಾ `ಸುದ್ದಿಮನೆ~ಯನ್ನೂ ತಲುಪಿತು, ಆಮೇಲೆ ಇದು ರಾಷ್ಟ್ರೀಯ ಸುದ್ದಿ ಆಯಿತು. ಇದಿಷ್ಟೂ ನಡೆದದ್ದು ಉತ್ತರ ಪ್ರದೇಶದ ವಿಷ್ಣುಪುರ ಎಂಬ ಹಳ್ಳಿಯಲ್ಲಿ.

ನಮ್ಮೂರ ಕಥೆಯೂ...

ಕರ್ನಾಟಕದ ಸ್ಥಿತಿ ಉತ್ತರ ಪ್ರದೇಶಕ್ಕಿಂತ ಭಿನ್ನವಾಗೇನೂ ಇಲ್ಲ. ಅತ್ತೆ ಮನೆಯಲ್ಲಿ ಶೌಚಾಲಯವಿಲ್ಲ ಎನ್ನುವ ಕಾರಣಕ್ಕೆ ಪ್ರಿಯಾಂಕಾ ಭಾರ್ತಿ ರೀತಿಯಲ್ಲೇ ನಮ್ಮೂರು, ನಿಮ್ಮೂರಿನ ನವ ವಧುಗಳು ಬಂಡೆದ್ದು ತವರು ಮನೆಗೆ ಓಡಿಬರುವುದೇ ಆದರೆ, ಬಹುತೇಕರ ಮನೆಗಳಲ್ಲಿ ಸೊಸೆಯಂದಿರನ್ನು ಕಾಣುವುದೇ ಕಷ್ಟವಾಗುತ್ತದೆ! ಏಕೆಂದರೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ `ಮನೆಗೊಂದು ಶೌಚಾಲಯ~ ಇರಬೇಕು ಎನ್ನುವ ಮನೋಭಾವ ಬೆಳೆದೇ ಇಲ್ಲ. ಕರ್ನಾಟಕದಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ. ಅವುಗಳಲ್ಲಿ ಅರ್ಧದಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ. ಅಂದರೆ ಇವರೆಲ್ಲ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ.

ಗ್ರಾಮೀಣ ಪ್ರದೇಶದ ಪುರುಷರು ಮಲ, ಮೂತ್ರ ವಿಸರ್ಜನೆಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಮಲ ವಿಸರ್ಜನೆ ಮಾಡಬೇಕು ಎನಿಸಿದರೆ ಬೀಡಿಗೆ ಬೆಂಕಿ ಹಚ್ಚಿ ಧಮ್ ಎಳೆಯುತ್ತಾ ಬಯಲಲ್ಲೇ ಹಾಯಾಗಿ ಕುಳಿತುಬಿಡುತ್ತಾರೆ. ಮೂತ್ರ ವಿಸರ್ಜನೆಗೆ ಅವಸರವಾದರೆ ಯಾವುದಾದರೂ ಗೋಡೆಗೆ `ಮುಖಾಮುಖಿ~ ಆಗುತ್ತಾರೆ. ಆದರೆ ಮಹಿಳೆಯರು ಇಷ್ಟೊಂದು ಸಲೀಸಾಗಿ, ಲಜ್ಜೆಗೆಟ್ಟು ಮಲ, ಮೂತ್ರ ವಿಸರ್ಜಿಸುವ ಮನೋಭಾವ ಹೊಂದಿಲ್ಲ. ಅವರು ಈ ವಿಷಯದಲ್ಲಿ ಸಂಕೋಚದ ಮುದ್ದೆ.

ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಶೌಚಾಲಯವೇ ಇಲ್ಲ. ಅಲ್ಲಿನ ಹೆಣ್ಣು ಮಕ್ಕಳು ಬಯಲನ್ನೇ ಒಪ್ಪಿಕೊಂಡು ಬಿಟ್ಟಿದ್ದಾರೆ. ಮುಂದುವರಿದ ಪ್ರದೇಶ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿರುವ ಹಳೆ ಮೈಸೂರು ಭಾಗದಲ್ಲಿಯೂ ಪರಿಸ್ಥಿತಿ ತೀರಾ ಸುಧಾರಿಸಿಲ್ಲ. ಇಲ್ಲಿಯೂ ಮಹಿಳೆಯರು ಬಹಿರ್ದೆಸೆಗೆ ಬೇಲಿ, ಬಯಲನ್ನು ಆಶ್ರಯಿಸುತ್ತಿರುವುದು ಸುಳ್ಳಲ್ಲ.

ಇಂದಿಗೂ ಹಳ್ಳಿಗಳಲ್ಲಿ ಮಹಿಳೆಯರು ಸಹಜವಾದ ಮಲಬಾಧೆಯನ್ನು ತೀರಿಸಿಕೊಳ್ಳಲು ಬೆಳಕು ಹರಿಯುವ ಮುನ್ನ, ಇಲ್ಲವೇ ಕತ್ತಲಾಗುವುದನ್ನೇ ಕಾಯಬೇಕು.

ಈ ಅವಧಿಯ ನಡುವೆ ಏನಾದರೂ ಮಲಬಾಧೆ ತೀರಿಸಿಕೊಳ್ಳಬೇಕು ಅನಿಸಿದವರ ಪಾಡನ್ನು ಕೇಳುವವರು ಯಾರು? ಅದರಲ್ಲೂ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಬಾಣಂತಿಯರು, ವೃದ್ಧೆಯರು, ಅನಾರೋಗ್ಯಕ್ಕೆ ಒಳಗಾದವರಿಗೆ ಮಲ ವಿಸರ್ಜಿಸುವುದೇ ದೊಡ್ಡ ಸಮಸ್ಯೆ ಆಗುತ್ತದೆ. ದಿನವಿಡೀ ಗಾಣದೆತ್ತಿನಂತೆ ಮನೆ ಒಳಗೂ, ಹೊರಗೂ ದುಡಿಯುವ ಮಹಿಳೆಯರು, ಮಲಬಾಧೆ ತೀರಿಸಿಕೊಳ್ಳಲು ಕತ್ತಲಾಗುವುದನ್ನೇ ಕಾಯಬೇಕಾದುದು ಅಮಾನವೀಯ.

ಮುಂಜಾನೆ ಮಲ ವಿಸರ್ಜನೆ ಮಾಡುವುದು ಸಹಜ ಕ್ರಿಯೆ. ಆದರೆ ಮನೆಯಲ್ಲಿ ಶೌಚಾಲಯ ಇಲ್ಲದ ಮಹಿಳೆಯರು ರಾತ್ರಿಗಾಗಿ ಕಾಯಬೇಕು. ಕತ್ತಲಾಗುತ್ತಿದ್ದಂತೆಯೇ ಅವರು ಕೈಯಲ್ಲಿ ಚೊಂಬು ಹಿಡಿದುಕೊಂಡು ಹೊರಡುತ್ತಾರೆ.

ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕೂರುತ್ತಾರೆ. ದಾರಿಯಲ್ಲಿ ಗಂಡಸರು ಬಂದರೆ ಎದ್ದು ನಿಲ್ಲುತ್ತಾರೆ, ಅವರು ಹೋದ ಮೇಲೆ ಮತ್ತೆ ಕೂರುತ್ತಾರೆ. ಯಾವುದಾದರೂ ವಾಹನದ ಸದ್ದು ಕೇಳಿಸಿದರೆ ಸಾಕು, ತಕ್ಷಣವೇ ಎದ್ದು ನಿಲ್ಲುತ್ತಾರೆ. ಹಾಗೆಯೇ ವಾಹನದ ಬೆಳಕು ಬಿದ್ದರೂ ಎದ್ದು ನಿಲ್ಲುತ್ತಾರೆ. ಸಂಕೋಚದಿಂದ ದೇಹವನ್ನು ಹಿಡಿ ಮಾಡಿಕೊಂಡು, ಮೂಗನ್ನು ಸೆರಗಿನಿಂದ ಮುಚ್ಚಿಕೊಂಡು, ಮುಖವನ್ನು ಎತ್ತಲೋ ತಿರುಗಿಸಿ ನಿಂತಿರುವ ಮಹಿಳೆಯರನ್ನು ಕಾಣಬಹುದು. ಇವರು ರಾತ್ರಿ ಹೊತ್ತಲ್ಲೂ ನೆಮ್ಮದಿಯಾಗಿ ಮಲಬಾಧೆಯನ್ನು ತೀರಿಸಿಕೊಳ್ಳಲು ಆಗುವುದಿಲ್ಲ. ಶಾಲೆಯಲ್ಲಿ ತಪ್ಪು ಮಾಡಿದ ವಿದ್ಯಾರ್ಥಿನಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದಂತೆ ಭಾಸವಾಗುತ್ತದೆ ಆ ದೃಶ್ಯ.

ಮಳೆಗಾಲದಲ್ಲಿ ಗ್ರಾಮೀಣ ಮಹಿಳೆಯರ ಸ್ಥಿತಿಯನ್ನು ನೆನಪಿಸಿಕೊಳ್ಳುವುದೂ ಕಷ್ಟ. ಏಕೆಂದರೆ ಮಳೆಯಿಂದ ರಸ್ತೆಯಲ್ಲಿ ಕಾಲಿಡುವುದೇ ಕಷ್ಟವಾಗಿರುತ್ತದೆ. ಅಂತಹ ಸ್ಥಿತಿಯಲ್ಲಿ, ಅದಾಗಲೇ ಹೇಸಿಗೆಯಾಗಿ ಹೋಗಿರುವ ಜಾಗದಲ್ಲೇ ಮತ್ತೆ ಕುಳಿತುಕೊಳ್ಳಬೇಕೆಂದರೆ ನರಕಕ್ಕೆ ಸಮ. ಆದರೂ ನಿತ್ಯ ಇತ್ತ ಮುಖ ಮಾಡುವುದನ್ನು ಇವರು ಬಿಡುವಂತಿಲ್ಲ. ಏಕೆಂದರೆ ಇವರಿಗೆ ಬೇರೆ ದಾರಿ ಇಲ್ಲ.

ಹೆಚ್ಚು ವಿದ್ಯಾವಂತರನ್ನು ಹೊಂದಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಯಲು ಮಲ ವಿಜರ್ಸನೆ ಕಡಿಮೆಯಾಗಿದೆ ಎನ್ನುವುದು ಆಶಾದಾಯಕ ಬೆಳವಣಿಗೆ.

ನಮ್ಮದು ಪುರುಷ ಪ್ರಧಾನ ಸಮಾಜ. ಹೀಗಾಗಿ ಮನೆಯ ಬೇಕು, ಬೇಡಗಳನ್ನು ನಿರ್ಧರಿಸುವವ ಆತನೇ. ಬಹುತೇಕ ಮನೆಗಳಲ್ಲಿ `ಕಕ್ಕಸ್ಸಿಗೆ ಬಯಲಿಗೆ ಹೋಗಲು ಸಂಕೋಚವಾಗುತ್ತದೆ. ಮನೆಯಲ್ಲೊಂದು ಕಕ್ಕಸ್ಸು ಮನೆ ಕಟ್ಟಿಸಿಕೊಡಿ~ ಎಂದು ವಯಸ್ಸಿಗೆ ಬಂದ ಮಗಳು ಅಪ್ಪನ ಎದುರು ನಿಂತು ಕೇಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಇನ್ನು ಮನೆಯಲ್ಲಿರುವ ಹೆಂಗಸರು `ಇಷ್ಟು ದಿನಗಳನ್ನು ಹೇಗೋ ದೂಡಿದ್ದೇವೆ. ಇನ್ನೊಂದಷ್ಟು ದಿನ ತಳ್ಳಿ ಕಣ್ಮುಚ್ಚಿಕೊಂಡು ಬಿಡೋಣ~ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಾಗಿ ಮನೆ ಯಜಮಾನನ ಬೇಕುಗಳ ಪಟ್ಟಿಯಲ್ಲಿ ಕಕ್ಕಸ್ಸು ಮನೆ ಕೊನೆಯ ಸ್ಥಾನವನ್ನೂ ಪಡೆದುಕೊಂಡಿರುವುದಿಲ್ಲ!

ಇಲ್ಲಿ ಮೂರು ಪ್ರಸಂಗಗಳನ್ನು ಹಂಚಿಕೊಳ್ಳುತ್ತೇನೆ

ಪ್ರಸಂಗ ಒಂದು

ಕಡಿಮೆ ಆದಾಯವನ್ನು ಮುಂದೆ ಮಾಡುತ್ತಾ ಕಕ್ಕಸ್ಸು ಮನೆ ಹೊಂದದ ಕುಟುಂಬಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಆದರೆ ಇಂತಹವರ ಮನೆಯಲ್ಲಿ ಟಿ.ವಿ ಮತ್ತು ಕೇಬಲ್, ಡಿಶ್ ಸಂಪರ್ಕವಿರುತ್ತದೆ. ಮನೆ ಮಂದಿ ಕೈಯಲ್ಲಿ ಬಗೆ ಬಗೆಯ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಇರುತ್ತವೆ. ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಹುಬ್ಬು ತೀಡಿಸಿಕೊಂಡು, ತಲೆಗೂದಲನ್ನು ಚೆಂದದ ಆಕಾರಕ್ಕೆ ಕತ್ತರಿಸಿಕೊಂಡು ಬಂದಿರುತ್ತಾರೆ. ಬಾಹ್ಯವಾಗಿ ಸುಂದರವಾಗಿ ಕಾಣುವುದಕ್ಕಾಗಿ ಧಾರಾಳವಾಗಿಯೇ ಹಣ ಖರ್ಚು ಮಾಡುತ್ತಾರೆ. ಮಕ್ಕಳ ಹುಟ್ಟುಹಬ್ಬ, ಮಗಳು ಮೈನೆರೆದರೆ ಅದ್ದೂರಿಯಾಗಿ ಸಮಾರಂಭ ಮಾಡಿ ಬೀಗುತ್ತಾರೆ.

ಪ್ರಸಂಗ ಎರಡು

ಅದು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಎನ್ನುವ ಹಳ್ಳಿ. ಅಲ್ಲಿ ರೈತನೊಬ್ಬ ಹೊಸದಾಗಿ ಮನೆ ಕಟ್ಟಿಸಿದ. ಆ ಮನೆಗೆ ತೇಗದ ಮರವನ್ನೇ ಬಳಸಿದ್ದ. ಮಾರ್ಬಲ್ ಸಹ ಹಾಕಿಸಿದ್ದ. ಗುರುತು ಪರಿಚಯಸ್ಥರ ಮುಂದೆ `ಮನೆಗೆ 13 ಲಕ್ಷ ಖರ್ಚು ಮಾಡಿದೆ~ ಎಂದು ಗರ್ವದಿಂದಲೇ ಕೊಚ್ಚಿಕೊಳ್ಳುತ್ತಿದ್ದ. ಆದರೆ ಮನೆ ಹೆಂಗಸರು ಗೌರವಯುತವಾಗಿ ಕಕ್ಕಸ್ಸಿಗೆ ಹೋಗಲು ಶೌಚಾಲಯವನ್ನೇ ಕಟ್ಟಿಸಿರಲಿಲ್ಲ; ಪುಣ್ಯಾತ್ಮ! ಗ್ರಾಮ ಪಂಚಾಯಿತಿಯವರು ಆತನ ಮನೆ ಮುಂದೆ ಧರಣಿ ಕುಳಿತಾಗಲೂ ಬಯಲಿನತ್ತ ಕೈ ತೋರಿಸಿ `ನಮಗೆ ಅದೇ ಸಾಕು~ ಎಂದಿದ್ದ. ನಂತರ ಗ್ರಾಮ ಪಂಚಾಯಿತಿಯವರ ಪ್ರತಿಭಟನೆಗೆ ಮಣಿದು ಶೌಚಾಲಯ ಕಟ್ಟಿಸಿಕೊಂಡ.

ಪ್ರಸಂಗ ಮೂರು

ಕೇಂದ್ರ ಸರ್ಕಾರ ಬಯಲು ಮಲ ವಿರ್ಸಜನೆಯನ್ನು ತಪ್ಪಿಸುವ ಸಲುವಾಗಿ ಹತ್ತು ವರ್ಷಗಳಿಂದ ಹಲವಾರು ಯೋಜನೆಗಳು, ಕಾರ್ಯಕ್ರಮಗಳನ್ನು ಘೋಷಿಸುತ್ತಲೇ ಇದೆ. ಸರ್ಕಾರದ ಅಂಕಿಅಂಶದ ಪ್ರಕಾರ ನಮ್ಮ ರಾಜ್ಯದಲ್ಲಿ ಶೇಕಡಾ 50 ಮಂದಿ ಶೌಚಾಲಯ ಹೊಂದಿದ್ದಾರೆ. ಸರ್ಕಾರ ಕೊಡುವ ಪಟ್ಟಿಯನ್ನು ಹಿಡಿದು ಯಾವುದಾದರೂ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ತಪಾಸಣೆಗೆ ಹೊರಟರೆ ಸತ್ಯ ಏನೆಂಬುದು ಗೊತ್ತಾಗುತ್ತದೆ. ಸರ್ಕಾರದ ಪಟ್ಟಿಯಲ್ಲಿ ಕಕ್ಕಸ್ಸು ಮನೆ ಕಟ್ಟಿಸಿಕೊಂಡಿರುತ್ತಾರೆ. ಆದರೆ  ವಾಸ್ತವದಲ್ಲಿ ಅವು ಕಾಣಿಸುವುದೇ ಇಲ್ಲ!

ಕೊನೆಯದಾಗಿ: ಎಲ್ಲರೂ ಶೌಚಾಲಯ ಹೊಂದಬೇಕು ಎನ್ನುವ ಸರ್ಕಾರದ ಯೋಜನೆ ದುಡ್ಡು ನುಂಗುವುದಕ್ಕಾಗಿಯೇ ಇದೆ ಎನ್ನುವ ಭಾವನೆ ಅಧಿಕಾರಿಗಳು, ನೌಕರರು, ಫಲಾನುಭವಿಗಳಿಂದ ದೂರವಾಗಬೇಕು. `ಬಯಲು ಇದೆಯಲ್ಲ~ ಎನ್ನುವ ನಕಾರಾತ್ಮಕ ಭಾವನೆ ಜನರ ಮನಸ್ಸಿನಿಂದ ತೊಲಗಬೇಕು. ತನ್ನ ಮನೆಯ ಹೆಣ್ಣು ಮಕ್ಕಳು ಮರ್ಯಾದೆಯಿಂದ ಶೌಚಾಲಯಕ್ಕೆ ಹೋಗುವಂತಾಗಬೇಕು ಎನ್ನುವ ಪ್ರಜ್ಞೆ ಯಜಮಾನನಿಗೆ ಬರಬೇಕು. ಇಲ್ಲದೇ ಹೋದರೆ ಹಳ್ಳಿಗಳ ಈಗಿನ ಪರಿಸ್ಥಿತಿ ಬದಲಾಯಿಸಲು ಪ್ರಿಯಾಂಕಾ ಭಾರ್ತಿಯಂತಹ ಸೊಸೆಯಂದಿರೇ ಬರಬೇಕಾಗುತ್ತದೇನೋ! ಕೇಂದ್ರ ಸರ್ಕಾರದ ಸಂಪೂರ್ಣ ನೈರ್ಮಲ್ಯ ಆಂದೋಲನ ಯೋಜನೆಯ ಅನುಷ್ಠಾನದ ಹೊಣೆಯನ್ನು ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ (ಕೆಆರ್‌ಡಬ್ಲುಎಸ್‌ಎಸ್‌ಆರ್) ಹೊತ್ತಿದೆ. ಈ ಸಂಸ್ಥೆಯ ಪ್ರಕಾರ, 2004-05 ರ ಸಮೀಕ್ಷೆ ಅನುಸಾರ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 58.70 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿರಲಿಲ್ಲ. 2012ರ ಹೊತ್ತಿಗೆ ಈ ಎಲ್ಲ ಕುಟುಂಬಗಳೂ ಶೌಚಾಲಯ ಹೊಂದುವಂತೆ ಮಾಡುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ 2011-12 ರ ಹೊತ್ತಿಗೆ 41.74 ಲಕ್ಷ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡಲಾಗಿದೆ. ಇದರಲ್ಲಿ ಬಿಪಿಎಲ್, ಎಪಿಎಲ್ ಕಾರ್ಡುದಾರರೂ ಸೇರಿದ್ದಾರೆ. ಇದು ಶೇಕಡಾ 71ರಷ್ಟು ಸಾಧನೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ 14ನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರ ಸಂಪೂರ್ಣ ನೈರ್ಮಲ್ಯ ಆಂದೋಲನವನ್ನು ಮತ್ತೆ ಐದು ವರ್ಷ (2012 ರಿಂದ 2017) ವಿಸ್ತರಿಸಿದೆ. ಅಲ್ಲದೇ 2012ರ ಏಪ್ರಿಲ್ 4ರಿಂದ `ನಿರ್ಮಲ ಭಾರತ್ ಅಭಿಯಾನ~ವನ್ನೂ ಆರಂಭಿಸಿದೆ. ಇದರಲ್ಲಿ ಎಪಿಎಲ್, ಬಿಪಿಎಲ್ ಎನ್ನುವ ವಿಂಗಡಣೆ ಇರುವುದಿಲ್ಲ. ಅಲ್ಲದೇ ಸಹಾಯಧನ ಕೂಡ ಹೆಚ್ಚಾಗಿರುತ್ತದೆ.

`ರಾಜ್ಯದಲ್ಲಿ ಸಂಪೂರ್ಣ ನೈರ್ಮಲ್ಯ ಆಂದೋಲನದ ಪ್ರಗತಿ ಆಶಾದಾಯಕವಾಗಿದೆ. ಉತ್ತರ ಕರ್ನಾಟಕದಲ್ಲಿ ಜನ ತಮ್ಮ ಮನೋಭಾವವನ್ನು ಬದಲಿಸಿಕೊಂಡು ಶೌಚಾಲಯ ಹೊಂದಲು ಆಸಕ್ತಿ ತೋರಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಿದರೆ ನಾವು ಅಗತ್ಯ ನೆರವು ನೀಡುತ್ತೇವೆ~ ಎನ್ನುತ್ತಾರೆ ಕೆಆರ್‌ಡಬ್ಲ್ಯುಎಸ್‌ಎಸ್‌ಆರ್‌ನ ಹೆಚ್ಚುವರಿ ನಿರ್ದೇಶಕ ಜಿ.ಎಸ್.ಜಿದ್ದಿಮನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry