ಇನ್ನೊಂದು ಸೌರವ್ಯೂಹ!

ಸೋಮವಾರ, ಜೂಲೈ 22, 2019
27 °C

ಇನ್ನೊಂದು ಸೌರವ್ಯೂಹ!

Published:
Updated:

ಮಾರ್ಚ್ 2009ರಲ್ಲಿ `ನಾಸಾ~ ಹಾರಿಸಿದ ವ್ಯೋಮನೌಕೆ `ಕೆಪ್ಲರ್ ಮಿಶನ್~ ಇದೀಗ ಪ್ರಪ್ರಥಮ ಪರಮ ವಿಸ್ಮಯವೊಂದನ್ನು ಪತ್ತೆ ಮಾಡಿದೆ. ನಮ್ಮ ಗ್ಯಾಲಕ್ಸಿಯಾದ `ಕ್ಷೀರಪಥ~ದಲ್ಲೇ ಇನ್ನೊಂದು ಸೌರವ್ಯೂಹವನ್ನು ಎಂದರೆ ಒಂದು ನಕ್ಷತ್ರದ ಸುತ್ತಲಿನ ಬಹುಗ್ರಹವ್ಯೂಹವನ್ನು ಪತ್ತೆಹಚ್ಚಿದೆ. ಇಡೀ ವಿಶ್ವದಲ್ಲೇಕೆ, ಕ್ಷೀರಪಥದಲ್ಲೇ ನಮ್ಮ ಸೌರವ್ಯೂಹ ಏಕಮೇವ ಸೃಷ್ಟಿ ಏನಲ್ಲ ಎಂಬುದನ್ನು ನಿಚ್ಚಳಗೊಳಿಸಿದೆ.ನಮ್ಮ ಸೌರವ್ಯೂಹ ನೆಲೆಗೊಂಡಿರುವ ಗ್ಯಾಲಕ್ಸಿಯಾದ ಕ್ಷೀರಪಥದಲ್ಲಿ (ಚಿತ್ರ - 1, 2) ಸುಮಾರು ಮುನ್ನೂರು ಶತಕೋಟಿ ನಕ್ಷತ್ರಗಳಿವೆ (ವಿಶ್ವದಲ್ಲಿ ಸುಮಾರು ಒಂದು ನೂರು ಶತಕೋಟಿ ಗ್ಯಾಲಕ್ಸಿಗಳಿವೆ).ಕ್ಷೀರಪಥದ ಇಂಥ ಬೃಹತ್ ತಾರಾ ಸಾಮ್ರಾಜ್ಯದಲ್ಲಿ ನಮ್ಮ ಸೂರ್ಯನನ್ನು ಬಿಟ್ಟು ಬೇರಾವ ನಕ್ಷತ್ರವೂ ಗ್ರಹ ಸಾಂಗತ್ಯ ಹೊಂದಿಲ್ಲವೇ? ನಮ್ಮ ಸೌರವ್ಯೂಹದಂತಹ ಗ್ರಹವ್ಯೂಹ, ನಮ್ಮ ಪೃಥ್ವಿಯಂತಹ ಜೀವಿ ವಿಹಿತ ಜೀವಿ ಭರಿತ ಗ್ರಹ ಇನ್ನಾವ ನಕ್ಷತ್ರದ ಸುತ್ತಲೂ ಇಲ್ಲವೇ?ವಾಸ್ತವ ಏನೆಂದರೆ ಅತ್ಯಂತ ಕುತೂಹಲದ ಈ ಪ್ರಶ್ನೆಗಳಿಗೆ ಉತ್ತರಗಳು ದೊರಕಲಾರಂಭಿಸಿವೆ. ನೆಲದ ಮೇಲಿನ ಅತ್ಯುತ್ತಮ ದೂರದರ್ಶಕ ಮತ್ತು ಅಂತರಿಕ್ಷ ದೂರದರ್ಶಕಗಳ (ಚಿತ್ರ - 3, 4, 5, 6) ದಿವ್ಯ ಚಕ್ಷುಗಳ ನೆರವಿನಿಂದ ಹೇರಳ ಸಂಖ್ಯೆಯ ಅನ್ಯಗ್ರಹಗಳು ಪತ್ತೆಯಾಗುತ್ತಲಿವೆ.

 

ನಮ್ಮಿಂದ ಹತ್ತಾರು, ನೂರಾರು, ಸಾವಿರಾರು ಜ್ಯೋತಿರ್ವರ್ಷ ದೂರ ಇರುವ ತಾರೆಗಳ ಸುತ್ತಲಿನ ಗ್ರಹಗಳ ಅಸ್ತಿತ್ವ ಸ್ಪಷ್ಟವಾಗಿ ತಿಳಿಯುತ್ತಲಿವೆ (ಚಿತ್ರ - 8, 10, 11). ಇದೇ ಅನ್ಯಗ್ರಹ ಪತ್ತೆಯ, ವಿಶೇಷವಾಗಿ ಭೂ ಸದೃಶ ಅನ್ಯಗ್ರಹಗಳ ಪತ್ತೆಯ ಉದ್ದೇಶದಿಂದ ಕಳುಹಿರುವ ವಿಶಿಷ್ಟ ವ್ಯೋಮನೌಕೆ `ಕೆಪ್ಲರ್ ಮಿಶನ್~ (ಚಿತ್ರ - 7).2009ರ ಮಾರ್ಚ್ ಏಳರಂದು ಹಾರಿದ ಈ ವ್ಯೋಮನೌಕೆಯಲ್ಲಿರುವ ದೂರದರ್ಶಕ ನಲವತ್ತೆರಡು ಸಿಸಿಡಿಗಳಿರುವ ಸೂಕ್ಷ್ಮಾತಿಸೂಕ್ಷ್ಮ ಕ್ಯಾಮರಾವನ್ನು ಹೊಂದಿದೆ ಈವರೆಗೆ ವ್ಯೋಮಕ್ಕೆ ಕಳುಹಿರುವ ಅತಿ ಬೃಹತ್ ಕ್ಯಾಮೆರಾ ಇದು. 4.7 ಮೀ. ಎತ್ತರ, 2.7 ಮೀ. ವ್ಯಾಸ ಮತ್ತು 1039 ಕಿಲೋ ತೂಕ ಇರುವ ಈ ವ್ಯೋಮನೌಕೆ ಕನಿಷ್ಠ ಮೂರೂವರೆ ವರ್ಷ ನಿರಂತರ ಕ್ರಿಯಾಶೀಲವಾಗಿರುವ ಸಾಮರ್ಥ್ಯ ಹೊಂದಿದೆ.

 

ಕ್ಷೀರಪಥದಲ್ಲಿ `ಸಿಗ್ನಸ್ - ಲೈರಾ~ ನಕ್ಷತ್ರ ಪುಂಜಗಳ ಪ್ರದೇಶದ ಒಂದೂವರೆ ಲಕ್ಷ ನಕ್ಷತ್ರಗಳನ್ನು ಗಮನಿಸಿ ಅವು ಹೊಂದಿರಬಹುದಾದ ಗ್ರಹ - ಗ್ರಹವ್ಯೂಹಗಳನ್ನು ಪತ್ತೆ ಮಾಡುವುದು ಕೆಪ್ಲರ್ ಮಿಶನ್‌ನ ಪರಮೋದ್ದೇಶ.ವಿಸ್ಮಯ ಏನೆಂದರೆ ಕೆಪ್ಲರ್ ಈವರೆಗೆ 1235 ಅನ್ಯಗ್ರಹಗಳ ಅಸ್ತಿತ್ವವನ್ನು ಹಾಗೂ ಆ ಪೈಕಿ 54 ಗ್ರಹಗಳು ಭೂಮಿಯಂತೆ `ಜೀವಿ ವಿಹಿತ ಪ್ರದೇಶ~ಗಳಲ್ಲಿರುವುದನ್ನೂ ಸ್ಥೂಲವಾಗಿ ಗುರುತಿಸಿದೆ. ಅವುಗಳನ್ನು ಮತ್ತೆ ಮತ್ತೆ ಗಮನಿಸುತ್ತಿದ್ದು ಸದ್ಯದಲ್ಲೇ ದೃಢೀಕರಿಸಲಿದೆ. ಇನ್ನೊಂದು ಸೌರವ್ಯೂಹವನ್ನೇ ಕೆಪ್ಲರ್ ಪತ್ತೆ ಮಾಡಿರುವುದು ಖಗೋಳ ವಿಜ್ಞಾನ ಕ್ಷೇತ್ರದ ಸದ್ಯದ ವಿಸ್ಮಯದ ರೋಮಾಂಚಕ ಶೋಧ.ಕೆಪ್ಲರ್ ಮಿಶನ್ ಪತ್ತೆ ಮಾಡಿರುವ ಈ ಸೌರವ್ಯೂಹದ ಕೇಂದ್ರ ನಕ್ಷತ್ರಕ್ಕೆ `ಕೆಪ್ಲರ್ - 11~ ಎಂದೇ ಹೆಸರಿಡಲಾಗಿದೆ. ಈ ನಕ್ಷತ್ರ ನಮ್ಮಿಂದ ಎರಡು ಸಾವಿರ ಜ್ಯೋತಿರ್ವರ್ಷ ದೂರದಲ್ಲಿದೆ! (ಸೆಕೆಂಡ್‌ಗೆ ಮೂರು ಲಕ್ಷ ಕಿಮೀ. ವೇಗದಲ್ಲಿ ಬೆಳಕು ಒಂದು ವರ್ಷದಲ್ಲಿ ನಿರಂತರ ಚಲಿಸುವ ಒಟ್ಟು ದೂರ ಒಂದು ಜ್ಯೋತಿರ್ವರ್ಷ). ಈ ಹೊಸ ಸೌರವ್ಯೂಹದ ವೈಶಿಷ್ಟ್ಯಗಳ ಅತಿ ಪ್ರಮುಖ ಅಂಶಗಳು:*  ಕೆಪ್ಲರ್ - 11 ವ್ಯೆಹದಲ್ಲಿ ಒಟ್ಟು ಆರು ಗ್ರಹಗಳಿವೆ. ಈವರೆಗೆ ತಿಳಿದಿರುವ ಸೌರವ್ಯೂಹೇತರ ಅತಿ ದೊಡ್ಡ ಗ್ರಹವ್ಯೆಹ ಇದು.* ಈ ಆರೂ ಗ್ರಹಗಳು ಕೆಪ್ಲರ್ - 11 ನಕ್ಷತ್ರದ ಸುತ್ತ ಒಂದೇ ಸಮತಲದಲ್ಲಿಯೇ (ನಮ್ಮ ಸೌರವ್ಯೂಹದ ಎಂಟು ಗ್ರಹಗಳಂತೆಯೇ) ನೆಲೆಗೊಂಡಿವೆ.* ಈ ಪೈಕಿ ಐದು ಗ್ರಹಗಳು ನಮ್ಮ `ಸೂರ್ಯ - ಬುಧ~ ಅಂತರಕ್ಕಿಂತ ಕಡಿಮೆ ದೂರಗಳ ಪಥಗಳಲ್ಲೇ ಕೆಪ್ಲರ್ - 11 ಅನ್ನು ಪರಿಭ್ರಮಿಸುತ್ತಿವೆ. ಆರನೆಯ ಗ್ರಹ ಉಳಿದವಕ್ಕಿಂತ ಹೆಚ್ಚಿನ, `ಸೂರ್ಯ - ಶುಕ್ರ~ ಅಂತರಕ್ಕಿಂತ ಕಡಿಮೆಯ ದೂರದ ಪಥ ಹೊಂದಿದೆ. ಐದೂ ಒಳಗ್ರಹಗಳ ಪರಿಭ್ರಮಣದ ಅವಧಿ ಐವತ್ತು ದಿನಗಳಿಗಿಂತ ಕಡಿಮೆ.*  ಕೆಪ್ಲರ್ - 11ರ ಐದೂ ಒಳಗ್ರಹಗಳ ಗಾತ್ರ ನಮ್ಮ ಭೂಮಿಗಿಂತ ಅಧಿಕ: ಭೂ ಗಾತ್ರದ 2.3 ರಿಂದ 13.5 ಮಡಿವರೆಗೆ ಭಿನ್ನ ಭಿನ್ನ. ಆರನೆಯ ಗ್ರಹದ ಗಾತ್ರ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.*  ಕೆಪ್ಲರ್ - 11 ವ್ಯೆಹದ ಅತಿ ಒಳಗಿನ ಗ್ರಹ ಭೂಮಿಯ ನಾಲ್ಕೂವರೆ ಪಟ್ಟು ದ್ರವ್ಯರಾಶಿ ಪಡೆದು ಬಹಳ ಸಾಂದ್ರವಾಗಿದೆ. ಬಹುಶಃ ಅದು ಸಾಂದ್ರ ಘನ ಶಿಲಾಗರ್ಭವನ್ನು ಹೊಂದಿದೆ. ಅತಿ ದೊಡ್ಡ ಎರಡು ಗ್ರಹಗಳು ನಮ್ಮ ಯುರೇನಸ್ ಮತ್ತು ನೆಪ್ಚೂನ್‌ಗಳ ದ್ರವ್ಯ ಸಂಯೋಜನೆಯನ್ನೇ ಹೋಲುವಂತಿವೆ. ಉಳಿದ ಮೂರು ಗ್ರಹಗಳು ನಮ್ಮ ಸೌರವ್ಯೂಹದ ಯಾವ ಗ್ರಹವನ್ನೂ ಹೋಲುವುದಿಲ್ಲ.*  ಒಳಗ್ರಹಗಳ ಪೈಕಿ ಎರಡು ಗ್ರಹಗಳು ನೀರಿನ ಭಾರೀ ದಾಸ್ತಾನು ಹೊಂದಿವೆ. ಹೈಡ್ರೋಜನ್ ಮತ್ತು ಹೀಲಿಯಂ ಮಿಶ್ರಿತ ಅನಿಲ ಕವಚದಂಥ ವಾತಾವರಣವನ್ನೇ ಎಲ್ಲ ಗ್ರಹಗಳೂ ಪಡೆದಿವೆ.ಎಂಥ ಗ್ರಹಗಳು! ಎಂಥ ಗ್ರಹವ್ಯೂಹ!

ಇಲ್ಲೊಂದು ಮುಖ್ಯ ವಿಷಯ: ಯಾವುದೇ ನಕ್ಷತ್ರದ ಸುತ್ತಲಿನ ಗ್ರಹಗಳ - ಗ್ರಹವ್ಯೂಹಗಳ ಪತ್ತೆಗೆ ಕೆಪ್ಲರ್ ಮಿಶನ್ `ಟ್ರಾನ್ಸಿಟ್ ತಂತ್ರ~ವನ್ನು ಅನುಸರಿಸುತ್ತದೆ.ಹಾಗೆಂದರೆ ನಕ್ಷತ್ರದ ಸುತ್ತಲಿನ ಪಥದಲ್ಲಿ ಗ್ರಹವು ನಕ್ಷತ್ರಕ್ಕೆ ಅಡ್ಡ ಹಾಯ್ದಾಗ (ಚಿತ್ರ - 9, 12) ಗ್ರಹ ನೇರವಾಗಿ ಕಾಣದಿದ್ದರೂ ನಕ್ಷತ್ರದ ಕಾಂತಿಯಲ್ಲಾಗುವ ಕುಸಿತದ ಪ್ರಮಾಣವನ್ನಳೆದು ಗ್ರಹದ ಅಸ್ತಿತ್ವವನ್ನು, ಅವುಗಳ ಗಾತ್ರವನ್ನು ಮತ್ತು ಪರಿಭ್ರಮಣದ ಅವಧಿಗಳನ್ನು ನಿರ್ಧರಿಸುತ್ತದೆ. ಹೊಸ ಸೌರವ್ಯೂಹದ ಪತ್ತೆಯಾದದ್ದೂ ಈ ತಂತ್ರದಿಂದಲೇ. ಎಂಥ ಸಾಧನ! ಎಂಥ ತಂತ್ರ! ಎಂಥ ಶೋಧ! ಎಂಥ ಸೋಜಿಗ! ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry