ಸೋಮವಾರ, ಮೇ 17, 2021
25 °C

`ಇನ್ಫಿ'ಗೆ ಮತ್ತೆ ಮೂರ್ತಿ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ  ದೇಶದ ಮೂರನೆಯ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆ ಇನ್ಫೊಸಿಸ್  ತನ್ನ ವಿಶ್ರಾಂತ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಅವರನ್ನು  ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಶನಿವಾರ ಮರು ನೇಮಕ ಮಾಡಿಕೊಂಡಿದೆ.ಶನಿವಾರ ಬೆಳಿಗ್ಗೆ ಇಲ್ಲಿ ನಡೆದ ಸಭೆಯಲ್ಲಿ ಇನ್ನೆರಡು ತಿಂಗಳಲ್ಲಿ 67 ವರ್ಷಕ್ಕೆ ಕಾಲಿಡಲಿರುವ ಮೂರ್ತಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಹೆಚ್ಚುವರಿ ನಿರ್ದೇಶಕರನ್ನಾಗಿ ಮರು ನೇಮಕ ಮಾಡಿಕೊಳ್ಳಲು ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿತು.ನಾರಾಯಣ ಮೂರ್ತಿ ಅವರ ಮಗ ರೋಹನ್  ತಮ್ಮ ತಂದೆಯ ಕಾರ್ಯನಿರ್ವಾಹಕ ಸಹಾಯಕರಾಗಿ ನೇಮಕಗೊಂಡಿದ್ದಾರೆ.`ಮೂರ್ತಿ ಅವರ ನೇಮಕವು ಜೂನ್1ರಿಂದ ಜಾರಿಗೆ ಬಂದಿದ್ದು ಮುಂದಿನ ಐದು ವರ್ಷಗಳ ಅವಧಿಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.  ಸದ್ಯದ ಸವಾಲಿನ ಸಂದರ್ಭದಲ್ಲಿ ಸಂಸ್ಥೆಯನ್ನು ಮತ್ತೆ ಅವರು ಗರಿಷ್ಠ ಪ್ರಗತಿ ಪಥದತ್ತ ಮುನ್ನಡೆಸಲಿದ್ದಾರೆ' ಎಂದು ಇನ್ಫೊಸಿಸ್ ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ಫೊಸಿಸ್‌ನ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿದ್ದ  ಕೆ.ವಿ ಕಾಮತ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು, ಜೂನ್ 1ರಿಂದ ಸ್ವತಂತ್ರ ನಿರ್ದೇಶಕರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಾರ್ಯನಿರ್ವಾಹಕ ಸಹ ಅಧ್ಯಕ್ಷ ಹುದ್ದೆಯಲ್ಲಿರುವ ಎಸ್. ಗೋಪಾಲಕೃಷ್ಣನ್ ಅವರ ಹುದ್ದೆ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಬದಲಾಗಲಿದೆ. ಎಸ್.ಡಿ ಶಿಬುಲಾಲ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ (ಸಿಇಒ) ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ.ಹೂಡಿಕೆದಾರರ ಒತ್ತಡ  ಕಾರಣ

ಕಂಪೆನಿಯ ಮಾರುಕಟ್ಟೆ ಮೌಲ್ಯ ಕುಸಿತ, ನಿರಾಶಾದಾಯಕ ತ್ರೈಮಾಸಿಕ ಫಲಿತಾಂಶ, ಕರಗುತ್ತಿರುವ ಷೇರು ಮೌಲ್ಯ ಇತ್ಯಾದಿ ಸಂಗತಿಗಳಿಂದ ಹೂಡಿಕೆದಾರರು ನಾರಾಯಣ ಮೂರ್ತಿ ಅವರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶಕ ಮಂಡಳಿ ಮೇಲೆ ಒತ್ತಡ ಹೇರಿದ್ದರು. ಈ ಅಂಶವೇ ಅವರ ಮರು ನೇಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.ಮುಖ್ಯವಾಗಿ ಕಳೆದ ಎರಡು ವರ್ಷಗಳಲ್ಲಿ ಕಂಪೆನಿಗೆ ಉತ್ತರ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಿಂದ ಬರುವ ವರಮಾನ ಕುಸಿದಿದೆ. ಈ ವಲಯದ ಬೃಹತ್ ಕಂಪೆನಿಗಳು ವೆಚ್ಚ ಕಡಿತದ ಉದ್ದೇಶದಿಂದ ಇನ್ಫೊಸಿಸ್‌ನ ಪ್ರತಿಸ್ಪರ್ಧಿ ಕಂಪೆನಿಗಳಾದ ವಿಪ್ರೊ, ಟಿಸಿಎಸ್ ಮತ್ತು ಎಚ್‌ಸಿಎಲ್‌ಗೆ ಯೋಜನೆ ಗುತ್ತಿಗೆ ನೀಡುತ್ತಿವೆ.  ಜತೆಗೆ ಕೆ.ವಿ ಕಾಮತ್ ಅವಧಿಯಲ್ಲಿ ಇನ್ಫೊಸಿಸ್ ಷೇರು ಮೌಲ್ಯ ಶೇ 15ರಷ್ಟು ಕುಸಿತ ಕಂಡಿರುವುದು ಕೂಡ ಹೂಡಿಕೆದಾರರ ಅಸಮಾಧಾನಕ್ಕೆ ಕಾರಣವಾಗಿವೆ. `ಸದ್ಯದ ಸವಾಲಿನ ಸಂದರ್ಭದಲ್ಲಿ ಕಂಪೆನಿಯನ್ನು ಮುನ್ನಡೆಸಬಲ್ಲ ಸೂಕ್ತ ಸಾರಥಿಯ ಅಗತ್ಯ ಇದೆ. ಸುದೀರ್ಘ ವೃತ್ತಿ ಅನುಭವ ಮತ್ತು ಸಮರ್ಥ ನಾಯಕತ್ವ ಗುಣಗಳಿರುವ ನಾರಾಯಣ ಮೂರ್ತಿ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೂಡಿಕೆದಾರರಿಂದ  ವಿಶೇಷವಾಗಿ, ದೊಡ್ಡ ಮತ್ತು ಸಣ್ಣ ಹೂಡಿಕೆದಾರರಿಂದ ಒತ್ತಡ ಹೆಚ್ಚಿತ್ತು. ಈ  ಹಿನ್ನೆಲೆಯಲ್ಲಿ ನಿರ್ದೇಶಕ ಮಂಡಳಿ ಸೂಕ್ತ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 15ಕ್ಕೆ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ' ಎಂದು ಕೆ.ವಿ ಕಾಮತ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.`ಅನಿರೀಕ್ಷಿತ ಸವಾಲು'

`ಇದು ಅಸಹಜ ಮತ್ತು ಅನಿರೀಕ್ಷಿತ ಕರೆ. ಕನಸಲ್ಲೂ ಇದನ್ನು ಯೋಚಿಸಿರಲಿಲ್ಲ. ಆದರೆ, ಇನ್ಫೊಸಿಸ್ ನನ್ನ ಎರಡನೆಯ ಮಗು. ಹೀಗಾಗಿ ನನ್ನ ಎಲ್ಲ ಯೋಜನೆಗಳನ್ನು ಬದಿಗಿರಿಸಿ ಈ ಸವಾಲನ್ನು ಸ್ವೀಕರಿಸಿದ್ದೇನೆ. ಎರಡನೆಯ ಇನಿಂಗ್ಸ್ ಮೂಲಕ ಸಂಸ್ಥೆಯ ಮೌಲ್ಯವರ್ಧನೆಗೆ ಶ್ರಮಿಸುತ್ತೇನೆ' ಎಂದು ನಾರಾಯಣ ಮೂರ್ತಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

2006ರಿಂದ 2011ರ ವರೆಗೆ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆ ನಿಭಾಯಿಸಿದ ಮೂರ್ತಿ, 2011ರ ಆಗಸ್ಟ್‌ನಲ್ಲಿ ಇನ್ಫೊಸಿಸ್‌ನಿಂದ ನಿವೃತ್ತರಾಗಿದ್ದರು ಮತ್ತು  ವಿಶ್ರಾಂತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.  ಮತ್ತೊಮ್ಮೆ ಸಂಸ್ಥೆಯ ಕಾರ್ಯನಿರ್ವಾಹಕ ಜವಾಬ್ದಾರಿ ನಿರ್ವಹಿಸಬೇಕಾಗಿ ಬರುತ್ತದೆ ಎಂದು ಯೋಚಿಸಿರಲಿಲ್ಲ ಎಂದು ಅವರು ಹೇಳಿದರು.ಮಗನಿಗೆ ನಾಯಕತ್ವ ಇಲ್ಲ

`ನನ್ನ ಮಗ ರೋಹನ್‌ಗೆ ಕಂಪೆನಿಯಲ್ಲಿ ಯಾವುದೇ ನಾಯಕತ್ವ ಪಾತ್ರ ಇಲ್ಲ. ಸದ್ಯ ಆತ ನನ್ನ ಕಾರ್ಯನಿರ್ವಾಹಕ ಸಹಾಯಕ ಮಾತ್ರ' ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ  ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್.ಡಿ ಪಡೆದಿರುವ ರೋಹನ್, ತಮ್ಮ ಹುದ್ದೆಗೆ  ವರ್ಷಕ್ಕೆ ್ಙ1 ಸಾಂಕೇತಿಕ ವೇತನ ನೀಡಿ ಎಂದು ನಿರ್ದೇಶಕ ಮಂಡಳಿಗೆ ಮನವಿ ಮಾಡಿದ್ದಾರೆ. ನಾರಾಯಣ ಮೂರ್ತಿ ಕೂಡ ವಾರ್ಷಿಕ ರೂ1 ಸಾಂಕೇತಿಕ ವೇತನ ಪಡೆಯಲಿದ್ದಾರೆ. ಮೂರ್ತಿ ಮರು ನೇಮಕವನ್ನು  ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಸ್ವಾಗತಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.