ಇನ್ಫಿ: ತಿಂಗಳಾಂತ್ಯಕ್ಕೆ ಉತ್ತರಾಧಿಕಾರಿ ಆಯ್ಕೆ

7

ಇನ್ಫಿ: ತಿಂಗಳಾಂತ್ಯಕ್ಕೆ ಉತ್ತರಾಧಿಕಾರಿ ಆಯ್ಕೆ

Published:
Updated:
ಇನ್ಫಿ: ತಿಂಗಳಾಂತ್ಯಕ್ಕೆ ಉತ್ತರಾಧಿಕಾರಿ ಆಯ್ಕೆ

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ  ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಟೆಕ್ನಾಲಜೀಸ್‌ನ ನಿರ್ದೇಶಕ ಮಂಡಳಿಗೆ ಇಬ್ಬರು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.ಸಂಸ್ಥೆಯು ತನ್ನ ಹೊಸ ನಾಯಕತ್ವದ ಅನ್ಷೇಷಣೆಯಲ್ಲಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ. ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಟಿ. ವಿ. ಮೋಹನ್ ದಾಸ್ ಪೈ ಮತ್ತು ಸಂಸ್ಥೆಯ ಸಹ ಸ್ಥಾಪಕರಾಗಿರುವ  ಕೆ. ದಿನೇಶ್ ಅವರು ಸಂಸ್ಥೆಯಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ.

 

ಈ ವರ್ಷದ ಜೂನ್ 11ರಂದು ನಡೆಯಲಿರುವ ಸಂಸ್ಥೆಯ ಸರ್ವ ಸದಸ್ಯರ ಸಭೆಯ ನಂತರ ತಮ್ಮನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಬೇಕು ಎಂದು ಪೈ, ನಿರ್ದೇಶಕ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.ಈ ತಿಂಗಳ 30ರಂದು ಸಭೆ ಸೇರಲಿರುವ ನಿರ್ದೇಶಕ ಮಂಡಳಿಯು ಸಂಸ್ಥೆಯ ಹೊಸ ಉತ್ತರಾಧಿಕಾರಿಗಳ ನೇಮಕ ಪ್ರಕ್ರಿಯೆ ಅಂತಿಮಗೊಳಿಸಲಿದೆ. ಸಂಸ್ಥೆಯ ಸಹ ಸ್ಥಾಪಕ ಮತ್ತು ಅಧ್ಯಕ್ಷ ಎನ್. ಆರ್. ನಾರಾಯಣಮೂರ್ತಿ ಅವರು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಸೇವಾ ನಿವೃತ್ತರಾಗಲಿದ್ದಾರೆ. ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕ್ರಿಸ್. ಗೋಪಾಲಕೃಷ್ಣನ್, ಅಧ್ಯಕ್ಷರಾಗಲಿದ್ದು, ಸಿಒಒ ಎಸ್. ಡಿ. ಶಿಬುಲಾಲ್ ಅವರು ಹೊಸ ‘ಸಿಇಒ’ಆಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ.

 

ಸಂಸ್ಥೆಯನ್ನು ಕಟ್ಟಿ ಬೆಳೆಸಿದವರಲ್ಲಿ  ಒಬ್ಬರಾಗಿರುವ, ಬದ್ಧತೆ, ಬುದ್ದಿಮತ್ತೆ ಮತ್ತು ಸಂಸ್ಥೆ ಬಗ್ಗೆ ಅಪಾರ  ಅಭಿಮಾನ ಹೊಂದಿರುವ ಮೋಹನ್ ದಾಸ್ ಪೈ ಅವರಿಲ್ಲದ ಸಂಸ್ಥೆ ಬಗ್ಗೆ ಊಹಿಸಿಕೊಳ್ಳುವುದೂ ಕಷ್ಟಕರ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

 

ಆಯ್ಕೆ ಸಮಿತಿ: ಸಂಸ್ಥೆಯ ಹೊಸ ಅಧ್ಯಕ್ಷ, ಸಿಇಒ, ಸಿಒಒ ಮತ್ತು ಸಿಎಫ್‌ಒ ನೇಮಕ ಮಾಡಲು ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ.   ಪ್ರೊಫೆಸರ್ ಜೆಫ್ರಿ ಎಸ್. ಲೀಮನ್, ದೀಪಕ್ ಎಂ. ಸತ್ವಾಲೇಕರ್ ಮತ್ತು ಕೆ. ವಿ. ಕಾಮತ್ ಅವರು ಈ ಸಮಿತಿಯಲ್ಲಿದ್ದಾರೆ.ಈ ಮಧ್ಯೆ ಇನ್ನೊಂದು ಬೆಳವಣಿಗೆಯಲ್ಲಿ ಸಂಸ್ಥೆಯ ಸಹ ಸ್ಥಾಪಕ ಮತ್ತು ನಿರ್ದೇಶಕ ಮಂಡಳಿ ಸದಸ್ಯ ಕೆ. ದಿನೇಶ್ ಅವರೂ ಸಂಸ್ಥೆಯಿಂದ ಹೊರ ನಡೆಯಲು ನಿರ್ಧರಿಸಿದ್ದು, ಮರು ನೇಮಕಗೊಳ್ಳದಿರಲು ಬಯಸಿದ್ದಾರೆ.ಮೈಕ್ರೊಸಾಫ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ರವಿ ವೆಂಕಟೇಶನ್ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲು ಸಂಸ್ಥೆ ನಿರ್ಧರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry