ಇನ್ಫೋಸಿಸ್ ಲಾಭ ರೂ 2,369 ಕೋಟಿ

7
ನಿರೀಕ್ಷೆಗೂ ಮೀರಿದ ಫಲಿತಾಂಶ; ರೂ 10,424 ಕೋಟಿ ವರಮಾನ

ಇನ್ಫೋಸಿಸ್ ಲಾಭ ರೂ 2,369 ಕೋಟಿ

Published:
Updated:
ಇನ್ಫೋಸಿಸ್ ಲಾಭ ರೂ 2,369 ಕೋಟಿ

ಬೆಂಗಳೂರು: ದೇಶದ ಪ್ರಮುಖ ಐ.ಟಿ ಸೇವಾ ಸಂಸ್ಥೆ `ಇನ್ಫೋಸಿಸ್' ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ(ಅಕ್ಟೋಬರ್-ಡಿಸೆಂಬರ್) ಷೇರು ಮಾರುಕಟ್ಟೆ ನಿರೀಕ್ಷೆಯನ್ನೂ ಮೀರಿರೂ2,369 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ (ರೂ2,372 ಕೋಟಿ) ನಿವ್ವಳ ಲಾಭ ತುಸು ತಗ್ಗಿದೆ.ಕಂಪೆನಿಯ ಒಟ್ಟು ವರಮಾನ (ಇತ್ತೀಚೆಗೆ ಸ್ವಾಧೀನಪಡಿಸಿಕೊಳ್ಳಲಾದ ಸ್ವಿಸ್ ಕಂಪೆನಿ ಲೋಡ್‌ಸ್ಟೋನ್  ಸೇರಿದಂತೆ) ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 12.1ರಷ್ಟು ಹೆಚ್ಚಿದ್ದು,ರೂ10,424 ಕೋಟಿಯಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿರೂ9,298 ಕೋಟಿ ವರಮಾನವಿತ್ತು.53 ಗ್ರಾಹಕ ಸಂಸ್ಥೆಗಳ ಸೇರ್ಪಡೆ

`ಪ್ರತಿಕೂಲ ಆರ್ಥಿಕ ವಾತಾವರಣದ ನಡುವೆಯೂ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ. ಮೂರನೇ ತ್ರೈಮಾಸಿಕದಲ್ಲಿ ಒಟ್ಟು 53 ಹೊಸ ಗ್ರಾಹಕ ಕಂಪೆನಿಗಳು ಕಂಪೆನಿಗೆ ದೊರಕಿವೆ. ಇತ್ತೀಚಿನ ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಗರಿಷ್ಠ ಮಟ್ಟದ ಗ್ರಾಹಕ ಸೇರ್ಪಡೆ ಇದು. ಜತೆಗೆ 7000 ಲಕ್ಷ ಡಾಲರ್ ಮೌಲ್ಯದ ಎಂಟು ಬೃಹತ್ ಯೋಜನೆಗಳು ಕಂಪೆನಿಗೆ ದೊರಕಿವೆ'  ಎಂದು ಇನ್ಫೋಸಿಸ್ `ಸಿಇಒ' ಎಸ್.ಡಿ.ಶಿಬುಲಾಲ್ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈಗಿನ ನಿವ್ವಳ ಲಾಭ ಹೆಚ್ಚಳದಿಂದ ಉತ್ತೇಜನಗೊಂಡಿರುವ ಕಂಪೆನಿ, 2013ನೇ ಸಾಲಿನ ವರಮಾನ ಮುನ್ನೋಟದಲ್ಲಿಯೂ ಶೇ 6.5ರಷ್ಟು ಏರಿಕೆ ಮಾಡಿದೆ. ಅಂದರೆ, 745 ಕೋಟಿ ಡಾಲರ್ (ರೂ40,746 ಕೋಟಿ) ವರಮಾನ ಬರಲಿದೆ ಎಂದು ಹೊಸದಾಗಿ ಅಂದಾಜು ಮಾಡಿದೆ. ಈ ಮೊದಲು  734 ಕೋಟಿ ಡಾಲರ್ ವರಮಾನದ ಅಂದಾಜು ಮಾಡಿದ್ದಿತು. `ಲೋಡ್‌ಸ್ಟೋನ್'ನಿಂದಲೇ 10.40 ಕೋಟಿ ಡಾಲರ್ ಹೆಚ್ಚುವರಿ ವರಮಾನ ನಿರೀಕ್ಷಿಸಲಾಗಿದೆ.ಷೇರು ಗಳಿಕೆ ಶೇ17 ಏರಿಕೆ

ನಿರೀಕ್ಷೆ ಮೀರಿದ ಫಲಿತಾಂಶದಿಂದ ಕಂಪೆನಿಯ ಷೇರು ಮೌಲ್ಯ ಶುಕ್ರವಾರ ಶೇ 16.90ರಷ್ಟು ಹೆಚ್ಚಳ ಕಂಡುರೂ2,712.60ಕ್ಕೇರಿತು. ಒಂದಏ ದಿನದಲ್ಲಿ ಇನ್ಫೋಸಿಸ್‌ನ ಒಟ್ಟಾರೆ ಷೇರುಗಳ ಮೌಲ್ಯ ರೂ. 22,524 ಕೋಟಿಯಷ್ಟು ಹೆಚ್ಚಿತು. ಇದರಿಂದ ಕಂಪೆನಿಯ ಸಮಗ್ರ ಮಾರುಕಟ್ಟೆ ಮೌಲ್ಯವೂ ಒಟ್ಟುರೂ1,55,766 ಕೋಟಿಗೆ ಮುಟ್ಟಿತು.`ಹಲವು ತ್ರೈಮಾಸಿಕಗಳ ನಂತರ ಇನ್ಫೋಸಿಸ್ ನಿರೀಕ್ಷೆಗೂ ಮೀರಿದ ಫಲಿತಾಂಶ ಪ್ರಕಟಿಸಿದೆ. ಕಂಪೆನಿಯ ಆಡಳಿತ ಮಂಡಳಿ ಕೂಡ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದರಿಂದ ಕಂಪೆನಿಯ ಷೇರು ದರಗಳು ದಿನದ ವಹಿವಾಟಿನಲ್ಲಿ ಗರಿಷ್ಠ ಏರಿಕೆ ಕಂಡಿವೆ' ಎಂದು ಆಶಿಕ್ ಸ್ಟಾಕ್ ಬ್ರೋಕರ್ಸ್‌ ರಿಸರ್ಚ್ ಸಂಸ್ಥೆ ಮುಖ್ಯಸ್ಥ ಪರಾಸ್ ಬೋತ್ರಾ ಅಭಿಪ್ರಾಯಪಟ್ಟಿದ್ದಾರೆ.`ಯೂರೋಪ್ ಮತ್ತು ಅಮೆರಿಕ ಬಿಕ್ಕಟ್ಟು  ಇನ್ನೂ ಸವಾಲಿನದಾಗಿದೆ. ಆದರೂ, ಜನವರಿ-ಮಾರ್ಚ್ ತ್ರೈಮಾಸಿಕ ಕುರಿತು ಆಶಾವಾದಿಗಳಾಗಿದ್ದೇವೆ' ಎಂದು ಶಿಬುಲಾಲ್ ಹೇಳಿದ್ದಾರೆ.7499 ಉದ್ಯೋಗಿ ಸೇರ್ಪಡೆ

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ  ಕಂಪೆನಿ 7,499 ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ(6522 ಸಿಬ್ಬಂದಿ ನಿರ್ಗಮನ). ಸದ್ಯ ಒಟ್ಟು ಉದ್ಯೋಗಿಗಳ ಸಂಖ್ಯೆ 1,55,629ಕ್ಕೇರಿದೆ. ಜತೆಗೆ ವಿದೇಶದಲ್ಲಿರುವ ಸಿಬ್ಬಂದಿ ವೇತನವನ್ನು ಶೇ 6ರಷ್ಟು ಮತ್ತು ದೇಶೀಯ ನೌಕರರ ವೇತನದಲ್ಲಿ ಶೇ 2ರಿಂದ 3ರಷ್ಟು ಹೆಚ್ಚಳ ಮಾಡಲಾಗಿದೆ.   9000 ಮಂದಿಗೆ ಬಡ್ತಿನೀಡಲಾಗಿದೆ. ವೇತನ ಪರಿಷ್ಕರಣೆಯಿಂದ 4ನೇತ್ರೈಮಾಸಿಕದ ನಿವ್ವಳ ಲಾಭ ಶೇ 1ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್ ಹೇಳಿದ್ದಾರೆ.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜ. 14ರಂದು, ಎಚ್‌ಸಿಎಲ್ ಮತ್ತು ವಿಪ್ರೊ  ಜ. 17 ಮತ್ತು 18 ರಂದು ಫಲಿತಾಂಶ ಪ್ರಕಟಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry