ಇನ್‌ಬಾಕ್ಸ್

7

ಇನ್‌ಬಾಕ್ಸ್

Published:
Updated:

`ಕಾಮನಬಿಲ್ಲು~ ಪುರವಣಿಯಲ್ಲಿ ಕಳೆದವಾರ ಪ್ರಕಟವಾದ  ಊರುಕೇರಿಯ ಜನಮನದಾಟ  ಲೇಖನಕ್ಕೊಂದು ನಮ್ಮ ಸಣ್ಣ ಸೇರಿಕೆ. `ಜನಮನದಾಟ~ ತಂಡವನ್ನು ಎಂ. ಗಣೇಶ ನೀನಾಸಮ್ ಹಳೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಟ್ಟಿದ್ದಲ್ಲ. ಬದಲಾಗಿ ನೀನಾಸಮ್‌ನ  ಹಳೆ ವಿದ್ಯಾರ್ಥಿಗಳಾದ ಶ್ರೀಕಾಂತ ಎನ್. ವಿ., ಮಹದೇವು ಹಡಪದ, ಸಂತೋಷ ಗುಡ್ಡಿಯಂಗಡಿ, ಶ್ರೀಕಾಂತ ಕಮ್ಟೋ, ಅರುಣ್ ಕುಮಾರ್, ಕಿರಣ ನಾಯಕ್ ಹೊನ್ನಾವರ ಎಂಬ ನಮ್ಮೆಲ್ಲರ ಜೊತೆಗೆ ಎಂ. ಗಣೇಶ ಒಬ್ಬರಷ್ಟೇ. 2005ರಲ್ಲಿ ಭಾರತಕ್ಕೆ ಬಂದಿದ್ದ `ಫೂಟ್ಸ್ ಬಾರ್ನ್‌ ಥಿಯೇಟರ್~ ತಂಡದ ಪ್ರೇರಣೆಯೇ `ಜನಮನದಾಟ~ ಎಂಬ ನಮ್ಮ ತಂಡ. `ಯಾರೋ ಒಬ್ಬ ನಿರ್ದೇಶಕನಲ್ಲ; ಎಲ್ಲರೂ ನಿರ್ದೇಶಕರು~ ಎಂಬ ತಂಡದ ಧ್ಯೇಯವನ್ನು ಮೂಲೆಗುಂಪು ಮಾಡಿದ ಎಂ.ಗಣೇಶ  `ಜನಮನದಾಟ~ದ ನಿರ್ದೇಶಕರೂ ಒಡೆಯರೂ ಆಗಿದ್ದಾರೆ. `ಜನಮನದಾಟ~ದ ಸರ್ವ ಸದಸ್ಯರ ಯಶಸ್ಸಿಗಾಗಿ ಗಣೇಶರಿಗೆ ರಾಷ್ಟ್ರೀಯ ಪ್ರಶಸ್ತಿಯೂ ಬರುತ್ತದೆ!

ಮೊದಲ ವರ್ಷ ನಾಟಕ ತಯಾರು ಮಾಡಿಕೊಂಡು ನಾಡಿನ ತುಂಬಾ ಬಸ್ಸು, ರೈಲುಗಳಲ್ಲಿ ಪರಿಕರಗಳ ಮೂಟೆ ಹೊತ್ತುಕೊಂಡು ತಿರುಗಾಡಿ ನಾಟಕವಾಡಿ `ಜನಮನದಾಟ~ ಎಂಬ ಹೆಸರನ್ನು ಎಲ್ಲರ ಮನದಲ್ಲಿ  ಉಳಿಯುವಂತೆ ಮಾಡಿದ್ದು ನಮ್ಮ ಮೆಚ್ಚಿನ  `ಶ್ರದ್ಧಾ ಮತ್ತು ಹಣತೆ~  ಆದರೂ ನಮಗೆ ಸಿಕ್ಕಿದ ಹಣ ಮಾತ್ರ ಪುಡಿಗಾಸು. ಎರಡನೇ ವರ್ಷ `ಉಚಲ್ಯಾ~ದೊಂದಿಗೆ ದೆಹಲಿಗೂ ಹೋಗಿ ಬಂದೆವು. ಈ ವರ್ಷ ನಾವು ಎಂಟು ಜನ ಕಲಾವಿದರಿಗೆ ತಕ್ಕಮಟ್ಟಿಗೆ ಹಣವೂ ಬಂತು. ಅದರಲ್ಲಿ ಇಪ್ಪತ್ತು ಸಾವಿರವನ್ನು ತಂಡಕ್ಕೆ ಇಡುಗಂಟಾಗಿ ಉಳಿಸಿದೆವು.

ಎರಡೇ ನಾಟಕಗಳು ನಮ್ಮ ತಂಡಕ್ಕೆ ಖ್ಯಾತಿ ತಂದುಕೊಟ್ಟವು. ಇದಲ್ಲವೇ ಸಾರ್ಥಕತೆ! ಅದಕ್ಕೆ ಕಾರಣ ನಮ್ಮ ತಂಡದ ಎಲ್ಲಾ ಗೆಳೆಯರ ಶ್ರಮ ಮತ್ತು ಪ್ರತಿಭೆ.  `ಜನಮನದಾಟ~ದ ನಾಟಕ ತಯಾರಾಗುತ್ತಿದೆ ಎಂದರೆ ಸಂಘಟಕರೇ ಕರೆದು ಆಡಿಸುವಂತಾಯಿತು. ಪತ್ರಿಕೆಗಳು ನಮ್ಮ ಪ್ರದರ್ಶನಗಳನ್ನು ಮೆಚ್ಚಿ ಬರೆದವು. ತಲೆ ತಿರುಗುವುದಕ್ಕೆ ಇಷ್ಟೇ ಸಾಕಾಯಿತು. ಮೂರನೇ ವರ್ಷಕ್ಕೇ ಸ್ಥಾಪಕ ಸದಸ್ಯರೆಲ್ಲಾ ಮಾಯವಾಗುತ್ತಾ ಹೋದರು. ನಾಲ್ಕನೇ ವರ್ಷ ಎಂ. ಗಣೇಶ ಬಿಟ್ಟರೆ ತಂಡವನ್ನು ಕಟ್ಟಿದ ಉಳಿದವರೆಲ್ಲ ಕಾಣೆಯಾಗಿಬಿಟ್ಟರು. ಒಂದು ಯಶಸ್ಸನ್ನು ಹೈಜಾಕ್ ಮಾಡಿಕೊಳ್ಳುವ ಈ ಕ್ರಿಯೆಯನ್ನೇ ನಾವು ಸಾಂಸ್ಕೃತಿಕ ಮಾಫಿಯಾ ಎಂದು ಕರೆಯುವುದು. ಸಣ್ಣ ಕೃತಜ್ಞತೆಯೂ ಇಲ್ಲದ ಗಣೇಶ ಅವರು ನಮಗೆ ಬೇಡ ನೀನಾಸಮ್‌ನ ಪರಿಕರ, ಲೈಟು, ವಸ್ತ್ರಾಭರಣ ಬಳಸಿಕೊಂಡಿದ್ದನ್ನೂ ನೆನಪಿಸಿಕೊಳ್ಳುವುದಿಲ್ಲವಲ್ಲ! ಈಗಿನ ತಂಡದ ಹೊಸ ಹುಡುಗರು ನಮ್ಮ ಬಳಿ  `ನಾವು ಜನಮನದಾಟ ಎಂಬ ತಂಡ ಕಟ್ಟಿಕೊಂಡಿದ್ದೇವೆ, ನಿಮ್ಮೂರಿಗೂ ನಮ್ಮನ್ನು ಕರೆಯಿಸಿ~  ಎನ್ನುತ್ತಾರೆ ಎಂದರೆ ಜನಮನದಾಟದ ಹುಟ್ಟಿನ ಕಥೆಯೇ ಮಾಯವಾಗಿ ಹೋಗಿದೆ. ಆದರೆ ಅದನ್ನು ತಿಳಿಸುವುದು ನಮ್ಮ ಸಾಂಸ್ಕೃತಿಕ ಜವಾಬ್ದಾರಿ ಎಂದುಕೊಂಡು ಈ ಪತ್ರ ಬರೆಯುತ್ತಿದ್ದೇವೆ.

 - ಸಂತೋಷ ಗುಡ್ಡಿಯಂಗಡಿ,  ಮಹದೇವು ಹಡಪದ, ಸಾಣೆಹಳ್ಳಿ

`ಛೆ ಏನಾದ್ರೂ ಸರಿ ಕ್ರಾಂತಿ ಆಗ್ಬೇಕು~ ಬರೆಹ ನಿಜಕ್ಕೂ ಆಸಕ್ತಿದಾಯಕವಾಗಿತ್ತು. ಬರೆಹಗಾರರು ಹೇಳಿದಂತೆ ವಯಸ್ಸು ಸ್ವಲ್ಪ ಹೆಚ್ಚಿತು ಎಂದರೆ ಸಾಕು ಕೊರೆತ ಶುರುವಾಗುತ್ತದೆ. ನಮಗಿಂತ ನಮ್ಮ ಊರಿನವರಿಗೆ, ನೆರೆಯವರಿಗೇ ನಮ್ಮ ಮದುವೆಯ ವಿಷಯ ಮುಖ್ಯವಾಗಿಬಿಟ್ಟಿರುತ್ತದೆ. ಮನೆಯವರ ಬಾಯನ್ನು ಹೇಗಾದರೂ ಮುಚ್ಚಿಸಬಹುದು. ಆದರೆ ಊರಿನವರ ಬಾಯನ್ನು ಮುಚ್ಚಿಸುವುದು ಹೇಗೆ. ಲೇಖಕರು ನಮ್ಮಂಥ ಅನೇಕರ ಮನದಳಲನ್ನು ಹಾಸ್ಯಾತ್ಮಕವಾಗಿ ಎಲ್ಲರ ಮುಂದಿಟ್ಟಿದ್ದಾರೆ.

- ನಿತ್ಯ ಎಸ್, ಮೂಡಬಿದಿರೆ

ಪ್ಯಾಟಿ ಮಂದಿ ಹಳ್ಳಿಗೆ ಹೋದ ಕತೆ ಚೆನ್ನಾಗಿತ್ತು. `ಕಾಮನಬಿಲ್ಲು~ ನಮಗಿಷ್ಟವಾಗುವುದೇ ಈ ಕಾರಣಕ್ಕೆ. ಅತಿ ವಿಶಿಷ್ಟ ಎನಿಸುವಂಥ ಯುವ ಸಾಹಸಗಳನ್ನು `ಕಾಮನಬಿಲ್ಲು~ ಪ್ರಕಟಿಸುತ್ತಿದೆ. ಇಂಥ ಇನ್ನಷ್ಟು ಪ್ರಯತ್ನಗಳಿಗೆ ಈ ಪ್ಯಾಟೆ ಮಂದಿಯ ಕೆಲಸ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆ.

 - ಕೆ.ಚಂದ್ರಶೇಖರ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry